ಈ ಬಾರಿಯ ಲೋಕಸಭಾ ಚುನಾವಣೆ ಸುಳ್ಳು ಮಾಹಿತಿ, ಸುಳ್ಳು ಪ್ರಚಾರ, ಪೊಳ್ಳು ಮತ್ತು ಹಳಸಲು ಭರವಸೆ, ವೈಯಕ್ತಿಕ ನಿಂದನೆ ಹಾಗೂ ಕೀಳು ಟೀಕೆಗಳ ಕಾರಣದಿಂದ ದೇಶದ ಚುನಾವಣಾ ಇತಿಹಾಸದಲ್ಲೇ ಕೆಟ್ಟ ಚುನಾವಣೆಗಳಲ್ಲಿ ಒಂದಾಯಿತು. ಅದು ಚುನಾವಣೆಯ ಭಾಗಿದಾರರೆಲ್ಲರ ಹೊಣೆಗೇಡಿತನದ ಫಲ. ಅದಷ್ಟೇ ಆಗಿದ್ದರೆ, ಬಹುಶಃ ಮುಂದಾದರೂ ಪ್ರಚಾರದ ಗುಣಮಟ್ಟ ಸುಧಾರಿಸಬಹುದು ಎಂಬ ಸಮಾಧಾನಕ್ಕೆ ಅವಕಾಶವಿತ್ತು. ಆದರೆ, ಈ ಬಾರಿ ಆಗಿದ್ದು ಬೇರೆಯೇ. ಚುನಾವಣೆಗಳು ನಡೆಯುವ ರೀತಿಗೆ ಅಲ್ಲದೆ, ಚುನಾವಣೆಗಳ ಮೇಲಿನ ಜನಸಾಮಾನ್ಯರ ವಿಶ್ವಾಸಕ್ಕೇ ಈಗ ಭಾರೀ ಪೆಟ್ಟು ಬಿದ್ದಿದೆ. ಆ ಹಾನಿ ಮತ್ತೆ ಸರಿಪಡಿಸಲಾಗದ್ದು ಮತ್ತು ಸುಧಾರಿಸಲಾಗದ್ದು ಎಂಬುದೇ ಆ ಹಾನಿಯ ಗಂಭೀರತೆಯನ್ನು ಹೇಳುತ್ತದೆ.
ಹೌದು, ಕಳೆದ ಕೆಲವು ವರ್ಷಗಳಿಂದ; ಅದರಲ್ಲೂ ಮುಖ್ಯವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ವಿಶ್ವದಲ್ಲೇ ಅತ್ಯಂತ ಸದೃಢ ಮತ್ತು ಸ್ವಾಯತ್ತ ಚುನಾವಣಾ ಆಯೋಗ ಎಂಬ ಹೆಗ್ಗಳಿಕೆ ಹೊಂದಿದ್ದ ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಸಾಕಷ್ಟು ವಿವಾದಕ್ಕೀಡಾಗಿದೆ. ಅದು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಿರಬಹುದು, ಕೆಲವು ಉಪಚುನಾವಣೆಗಳಿರಬಹುದು, ಚುನಾವಣಾ ದಿನಾಂಕ ನಿಗದಿಯಿಂದ ಹಿಡಿದು ಘೋಷಣೆವರೆಗೆ, ಅಭ್ಯರ್ಥಿ ಮತ್ತು ಪಕ್ಷದ ನೀತಿ ಸಂಹಿತೆ ಉಲ್ಲಂಘನೆಯಿಂದ ಹಿಡಿದು, ಸ್ವತಃ ಪ್ರಧಾನಿಗಳ ಎಲ್ಲೆ ಮೀರಿದ ಮಾತುಗಳಿರಬಹುದು,.. ಒಟ್ಟಾರೆ ಆಯೋಗದ ಪ್ರತಿಕ್ರಿಯೆ ಮತ್ತು ಪ್ರಕ್ರಿಯೆಗಳೆಲ್ಲವನ್ನೂ ಜನ ಶಂಕೆಯಿಂದ, ಅನುಮಾನದಿಂದ ನೋಡುವಂತಾಗಿದೆ.
ಚುನಾವಣಾ ವ್ಯವಸ್ಥೆ ಮತ್ತು ಅದನ್ನು ನಡೆಸುವ ಆಯೋಗದ ಪಾರದರ್ಶಕತೆ, ನ್ಯಾಯಸಮ್ಮತ ರೀತಿ ಮತ್ತು ಮುಕ್ತ ಅವಕಾಶದ ಖಾತ್ರಿಯ ಬಗ್ಗೆಯೇ ಶಂಕೆಗಳು ಎದ್ದಿವೆ. ಹಾಗಾಗಿ ಆಯೋಗ ನಿಜವಾಗಿಯೂ ಸ್ವಾಯತ್ತವಾಗಿ ಉಳಿದಿದೆಯೇ ಎಂಬ ಪ್ರಶ್ನೆ ಈಗ ಕೇವಲ ಪ್ರತಿಪಕ್ಷಗಳು, ಪ್ರಜಾಪ್ರಭುತ್ವವಾದಿ ನಾಗರಿಕ ಗುಂಪುಗಳು ಅಥವಾ ಕೆಲವು ಮಂದಿ ಹಿರಿಯ ವಕೀಲರ ಆತಂಕವಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಇಡೀ ಮತದಾರ ಸಮುದಾಯದ ಅಪನಂಬಿಕೆಯ ಆತಂಕವಾಗಿಯೂ ಬದಲಾಗಿದೆ.
ಈ ಚುನಾವಣೆಯ ದಿನಾಂಕ ಘೋಷಣೆಯ ಕ್ಷಣದಿಂದಲೇ ಆಳುವ ಪಕ್ಷದಿಂದ, ಅದರಲ್ಲೂ ಸ್ವತಃ ಪ್ರಧಾನಿ ಮತ್ತು ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದಲೇ ಸೇನೆ ಮತ್ತು ಸೇನಾ ಕಾರ್ಯಚರಣೆಯನ್ನು ಬಳಸಿ, ಯೋಧರ ಹೆಸರು ಹೇಳಿ ಮತ ಯಾಚಿಸುವ ಮೂಲಕ ಗಂಭೀರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಯಿತು. ಹಾಗೆ ಆರಂಭವಾದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬ ಹೇಳಿಕೆಯನ್ನೇ ಅಣಕವಾಡುವ ಪ್ರಯತ್ನಗಳು ಮತದಾನದ ದಿನಗಳು ಸಮೀಪಿಸುತ್ತಿದ್ದಂತೆ ತಾರಕಕ್ಕೇರಿದವು.
ಮೋದಿ ಕುರಿತ ಚಲನಚಿತ್ರ ಪಿಎಂ ನರೇಂದ್ರ ಮೋದಿ, ನಮೋ ಟಿವಿ, ಮೋದಿ ಕಾಮಿಕ್ಸ್, ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ ಕುರಿತ ಮೋದಿ ಘೋಷಣೆ, ಮಮತಾ ಬ್ಯಾನರ್ಜಿ ಕುರಿತ ಚಲನಚಿತ್ರ, ಪ್ರಧಾನಿ ಹೆಲಿಕಾಪ್ಟರಿನಲ್ಲಿ ರಹಸ್ಯ ಕಪ್ಪು ಪೆಟ್ಟಿಗೆ ಸಾಗಣೆ, ಮಾಯಾವತಿಯರ ವಿವಾದಾತ್ಮಕ ಹೇಳಿಕೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ‘ಮೋದಿ ಸೇನೆ’ ಹೇಳಿಕೆ, ಇದೀಗ ವಾರಣಾಸಿ ನಾಮಪತ್ರ ಸಲ್ಲಿಕೆಗೆ ಮುನ್ನ ಪ್ರಧಾನಿ ಮೋದಿಯವರು ನಡೆಸಿದ ರೋಡ್ ಶೋ, ಉತ್ತರಪ್ರದೇಶದ ಆಜಾಂ ಖಾನ್ ಹೇಳಿಕೆ, ಮೊದಲ ಬಾರಿಯ ಮತದಾರರು ನಿಮ್ಮ ಮತವನ್ನು ಯೋಧರಿಗೆ ಸಮರ್ಪಿಸಿ ಎಂಬ ಪ್ರಧಾನಿ ಹೇಳಿಕೆ, ಮುಂಬೈ ಉಗ್ರರ ದಾಳಿಯ ವೇಳೆ ಹುತಾತ್ಮರಾದ ಹೇಮಂತ್ ಕರ್ಕರೆ ಕುರಿತ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಯಾ ಹೇಳಿಕೆ ಸೇರಿದಂತೆ ನೂರಾರು ಪ್ರಕರಣಗಳಲ್ಲಿ ಆಯೋಗದ ಪ್ರತಿಕ್ರಿಯೆಗಳು ಕೂಡ ಆಯೋಗದ ಮೇಲಿನ ಜನಸಾಮಾನ್ಯರ ವಿಶ್ವಾಸವನ್ನು ಮುಕ್ಕಾಗಿಸಿದವು.
ಅಲ್ಲದೆ, ಪಶ್ಚಿಮಬಂಗಾಳ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕೆಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ ಮತ್ತು ಅದೇ ಹೊತ್ತಿಗೆ ಗಂಭೀರ ಆರೋಪ ಕೇಳಿಬಂದ ತಮಿಳುನಾಡು ಪೊಲೀಸ್ ಡಿಜಿ ವಿಷಯದಲ್ಲಿ ಮಾತ್ರ ಮೌನ ವಹಿಸಿದ್ದು ಕೂಡ ಆಯೋಗದ ನಿಷ್ಪಕ್ಷಪಾತಿ ಧೋರಣೆಯ ಬಗ್ಗೆಯೇ ಅನುಮಾನಗಳನ್ನು ಬಿತ್ತಿದೆ.
ಆ ಹಿನ್ನೆಲೆಯಲ್ಲಿಯೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ತನ್ನದೇ ವಿಶೇಷ ನಿರ್ದೇಶನ(ಸೇನೆಯನ್ನು ಪ್ರಚಾರಕ್ಕೆ ಬಳಸಬಾರದು ಎಂಬಂತಹ)ಗಳನ್ನು ಕೂಡ ಉಲ್ಲಂಘಿಸಿದ ಪ್ರಕರಣಗಳಲ್ಲಿ ಕಾನೂನು ಅವಕಾಶ ಬಳಸಿಕೊಂಡು, ಕಠಿಣ ಕ್ರಮಗಳನ್ನು ಜರುಗಿಸುವಲ್ಲಿ ಆಯೋಗ ವಿಫಲವಾಗಿದೆ. ಹಾಗಾಗಿ ಆಯೋಗಕ್ಕೆ ತನ್ನ ಅಧಿಕಾರದ ಅಗಾಧ ಶಕ್ತಿಯ ಬಗ್ಗೆ ಅರಿವಿಲ್ಲವೇ? ಯಾಕೆ ತತಕ್ಷಣದ ಬಿಗಿ ಕ್ರಮ ಜರುಗಿಸುವಲ್ಲಿ ಆಯೋಗ ಎಡವುತ್ತಿದೆ ಎಂದು ಸ್ವತಃ ಸುಪ್ರೀಂಕೋರ್ಟ್ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಯುವ ಗುರುತರ ಹೊಣೆಗಾರಿಕೆಯ ಮುಂಚೂಣಿ ಸ್ವಾಯತ್ತ ಸಂಸ್ಥೆಯಾದ ಆಯೋಗಕ್ಕೆ ನ್ಯಾಯಾಂಗ ಚಾಟಿ ಬೀಸಿದ್ದು ಇದೇ ಮೊದಲು.
ಆಯೋಗದ ನಿಷ್ಪಕ್ಷಪಾತಿ ಧೋರಣೆ ಎಷ್ಟರಮಟ್ಟಿಗೆ ವಾಸ್ತವದಲ್ಲಿ ಜಾರಿಯಲ್ಲಿದೆ ಎಂಬುದನ್ನು ಗಮನಿಸುವುದಾದರೆ, ಎರಡು ಉದಾಹರಣೆಗಳನ್ನು ನೋಡಬಹುದು. ದ್ವೇಷ ಭಾಷಣದ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಬಿಎಸ್ ಪಿ ಅಧಿನಾಯಕಿ ಮಾಯಾವತಿ ವಿರುದ್ಧ ಆಯೋಗ ಏಪ್ರಿಲ್ 15ರಂದು 48 ಗಂಟೆಗಳ ಕಾಲ ಅವರ ಪ್ರಚಾರ ನಿಷೇಧಿಸಿ ಆದೇಶ ಹೊರಡಿಸಿತ್ತು. ಕೋಮು ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಯಂತೆ ಆಯೋಗ ಆ ಕ್ರಮಕೈಗೊಂಡಿತ್ತು. ಆಗಲೇ ಕೋರ್ಟ್ ಆಯೋಗದ ಕಿವಿ ಹಿಂಡಿದ್ದು.
ಆದರೆ, ಪ್ರಧಾನಿ ಮೋದಿ ವಿರುದ್ಧವೂ ಕಾಂಗ್ರೆಸ್ ವಿರುದ್ಧ ಕೋಮು ದ್ವೇಷದ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ ದೂರು ಏಪ್ರಿಲ್ ಒಂದರಂದೇ ದಾಖಲಾಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ, ಹಿಂದೂ ಭಯೋತ್ಪಾದನೆ ಎಂದು ಕರೆಯುವ ಮೂಲಕ ಕಾಂಗ್ರೆಸ್ ದೇಶದ ಬಹುಸಂಖ್ಯಾರ ದ್ವೇಷಕ್ಕೆ ಗುರಿಯಾಗಿದೆ. ಹಾಗಾಗಿಯೇ ಅದರ ನಾಯಕ ಅಮೇಥಿಯಿಂದ ಪಲಾಯನ ಮಾಡಿ ‘ಬಹುಸಂಖ್ಯಾತರು’ ‘ಅಲ್ಪಸಂಖ್ಯಾತ’ರಾಗಿರುವ ಕೇರಳದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದಿದ್ದರು. ಅಲ್ಲದೆ, ಏಪ್ರಿಲ್ 9ರಂದು ಅದೇ ಮಹಾರಾಷ್ಟ್ರದ ಲಾತೂರಿನಲ್ಲಿ ಮೊದಲ ಬಾರಿ ಮತ ಚಲಾಯಿಸುತ್ತಿರುವ ಯುವ ಮತದಾರರು ತಮ್ಮ ಮತವನ್ನು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿದ ಭಾರತೀಯ ಸೇನಾಪಡೆಯ ಯೋಧರಿಗೆ ಸಮರ್ಪಿಸಬೇಕು ಎಂದು ಕರೆ ನೀಡಿದ್ದರು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿ ಬರೋಬ್ಬರಿ 20 ದಿನ ಕಳೆದರೂ ಆಯೋಗ ಈವರೆಗೆ ಮೋದಿ ವಿರುದ್ಧ ಯಾವುದೇ ಕ್ರಮಜರುಗಿಸಿಲ್ಲ.
ಹಾಗೇ ಕರ್ನಾಟಕದ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಮೋದಿ ಅವರ ಹೆಲಿಕಾಪ್ಟರಿನಿಂದ ರಹಸ್ಯ ಪೆಟ್ಟಿಗೆಯೊಂದನ್ನು ಗುಪ್ತವಾಗಿ ಸಾಗಣೆ ಮಾಡಿದ ಬಗ್ಗೆ ನೀಡಿರುವ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದ ವಿಷಯದಲ್ಲಿಯೂ ಈವರೆಗೆ ಆಯೋಗದ ಕ್ರಮ ಜಾರಿಯಾಗಿಲ್ಲ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಈ ನಡುವೆ, “ಆಯೋಗದ ಕಾರ್ಯವೈಖರಿ ಇಡೀ ಚುನಾವಣಾ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಬುಡಮೇಲು ಮಾಡುತ್ತಿದೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೊಂದಿಗೆ ಚುನಾವಣಾ ಪ್ರಕ್ರಿಯೆ ಮೇಲಿನ ನಂಬಿಕೆ ಕೂಡ ಕಳಚುತ್ತಿದೆ. ಪಕ್ಷಪಾತಿ ಧೋರಣೆ, ನಿಧಾನಗತಿಯ ಕ್ರಮ ಸೇರಿದಂತೆ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಹ ಕ್ರಮಗಳ ವಿಷಯದಲ್ಲಿ ಆಯೋಗಕ್ಕೆ ಎಚ್ಚರಿಕೆ ನೀಡಬೇಕು” ಎಂದು ಆಗ್ರಹಿಸಿ ರಾಜಸ್ಥಾನದ ಮಾಜಿ ಮುಖ್ಯ ಕಾರ್ಯದರ್ಶಿ, ಪ್ರಸಾರ್ ಭಾರತಿಯ ಮಾಜಿ ಸಿಇಒ, ಪಂಜಾಬ್ ಪೊಲೀಸ್ ಮಾಜಿ ಮಹಾ ನಿರ್ದೇಶಕರು ಸೇರಿದಂತೆ ಒಟ್ಟು 66 ಮಂದಿ ಮಾಜಿ ಉನ್ನತ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಪತ್ರ ಬರೆದಿದ್ದರು. ಆ ಪತ್ರದ ಹಿನ್ನೆಲೆಯಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ಆಯೋಗದ ವಿಶ್ವಾಸಾರ್ಹತೆ ಕುರಿತ ಚರ್ಚೆ ಸಾಕಷ್ಟು ಗರಿಗೆದರಿತ್ತು.
ಈ ನಡುವೆ, ಕರ್ನಾಟಕ ಕೇಡರ್ ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಮೌಸಿನ್ ಅವರ ವಿಷಯದಲ್ಲಿ ಆಯೋಗ ಮತ್ತೊಮ್ಮೆ ಟೀಕೆ ಮತ್ತು ಶಂಕೆಗೆ ಗುರಿಯಾಗಿದೆ. ಕಳೆದ ಏಪ್ರಿಲ್ 16ರಂದು ಒಡಿಶಾದ ಸಂಬಾಲ್ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೌಸಿಮ್ ಅವರನ್ನು ಅಲ್ಲಿನ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಕಾರಣಕ್ಕೆ ಚುನಾವಣಾ ಆಯೋಗ ಅಮಾನತು ಮಾಡಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ನಾಯಕರ ವಾಹನ ತಪಾಸಣೆ ಮಾಡುವುದು ಸಾಮಾನ್ಯ. ಅದರಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಅಧಿಕಾರಿಯನ್ನು ಆಯೋಗ ಅಮಾನತು ಮಾಡಿರುವುದು ಯಾವ ಕಾರಣಕ್ಕೆ? ಇದು ಪಕ್ಷಪಾತಿ ಧೋರಣೆಯಲ್ಲವೇ? ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ, ಆಯೋಗ, ಪ್ರಧಾನಿಯವರಿಗೆ ವಿಶೇಷ ಭದ್ರತೆ ಇರುವ ಹಿನ್ನೆಲೆಯಲ್ಲಿ ಅವರಿಗೆ ತಪಾಸಣೆಯಿಂದ ವಿನಾಯ್ತಿ ನೀಡಲಾಗಿತ್ತು. ಆ ಬಗ್ಗೆ ಆಯೋಗದ ನೀತಿ ಸಂಹಿತೆ ನಿಯಮಾವಳಿಯಲ್ಲೂ ಉಲ್ಲೇಖಿಸಲಾಗಿದೆ. ಆದರೂ ಮೌಸಿನ್ ಅವರು ಮಾರ್ಗಸೂಚಿ ಉಲ್ಲಂಘಿಸಿ ಪ್ರಧಾನಿಯವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಸಿಎಟಿ ನ್ಯಾಯಾಲಯದಲ್ಲಿ ಸ್ಪಷ್ಟನೆ ನೀಡಿತ್ತು.
ಆದರೆ, ಇದೀಗ ಮೌಸಿಮ್ ಅವರು, “ತಮ್ಮನ್ನು ಅಮಾನತುಗೊಳಿಸಿ ಸುಮಾರು ಎರಡು ವಾರ ಕಳೆದರೂ ಈವರೆಗೆ ಒಡಿಶಾ ಮುಖ್ಯ ಚುನಾವಣಾಧಿಕಾರಿಯಾಗಲೀ, ಕೇಂದ್ರ ಚುನಾವಣಾ ಆಯೋಗವಾಗಲೀ ತಮಗೆ ಯಾವ ಕಾರಣಕ್ಕಾಗಿ ಮತ್ತು ಯಾವ ನಿರ್ದಿಷ್ಟ ದೂರಿನ ಮೇಲೆ. ಯಾವ ವರದಿಯನ್ನು ಆಧರಿಸಿ ತಮ್ಮ ವಿರುದ್ಧ ಆ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಿಲ್ಲ. ಸ್ವತಃ ಪತ್ರ ಬರೆದು ಆ ಬಗ್ಗೆ ಮಾಹಿತಿ ಕೋರಿದ್ದರೂ ಸಿಇಒ ಅವರಾಗಲೀ, ಸಿಇಸಿಯಾಗಲೀ ಪ್ರತಿಕ್ರಿಯಿಸಿಲ್ಲ” ಎಂದು ಹೇಳಿದ್ದಾರೆ.
ಆ ಮೂಲಕ ಮೌಸಿಮ್ ಅವರನ್ನು ಅಮಾನತು ಮಾಡಿದ ಆಯೋಗ, ತನ್ನ ಆ ಕ್ರಮವನ್ನು ಅಮಾನತುಗೊಂಡ ಅಧಿಕಾರಿಗಳಿಗೆ ವಿವರಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಮೌಸಿಮ್ ಅವರ ಅಮಾನತು ಕ್ರಮವನ್ನು ಪ್ರಶ್ನಿಸಿ ಹಲವು ರಾಜಕೀಯೇತರ ಸಂಘಸಂಸ್ಥೆಗಳು ಮತ್ತು ನಾಗರಿಕರು ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಪರಿಶೀಲಿಸಿದ್ದಕ್ಕೇ ಒಬ್ಬ ಪ್ರಾಮಾಣಿಕ ಅಧಿಕಾರಿ, ಪ್ರಾಮಾಣಿಕವಾಗಿ ತನ್ನ ಕರ್ತವ್ಯ ನಿಭಾಯಿಸಿದ್ದಕ್ಕೆ ಆಯೋಗ ನೀಡಿದ ಕೊಡುಗೆ ಇದೆ ಏನು ಎಂಬ ಪ್ರಶ್ನೆಗಳು ಎದ್ದಿವೆ. ಜೊತೆಗೆ, ಪ್ರಧಾನಿ ಮೋದಿ ದೇಶದ ಚುನಾವಣಾ ನೀತಿ ಸಂಹಿತೆ ಸೇರಿದಂತೆ ಉಳಿದವರಿಗೆ ಅನ್ವಯವಾಗುವ ಕಾನೂನುಗಳಿಗಿಂತ ದೊಡ್ಡವರೇ? ಎಂಬ ಮಾತುಗಳೂ ಕೇಳಿಬಂದಿವೆ. ಈ ನಡುವೆ ಕೇಂದ್ರ ಆಡಳಿತ ನ್ಯಾಯಮಂಡಳಿ ಕೂಡ ಅಧಿಕಾರಿಯ ಅಮಾನತಿಗೆ ತಡೆ ನೀಡಿ, ಆಯೋಗದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕ್ಷುಲ್ಲಕ ಮಾತು ಮತ್ತು ನಡವಳಿಕೆಯಿಂದ ಮತದಾರನ ಕಣ್ಣಲ್ಲಿ ಸಣ್ಣವರಾಗುತ್ತಿರುವುದು ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವಲ್ಲ; ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಿ ಮತದಾರನ ಮನಸ್ಸಿನಲ್ಲಿ ಆತ ಒತ್ತಿದ ಮತದ ಪಾವಿತ್ರ್ಯತೆಯ ಬಗ್ಗೆ ವಿಶ್ವಾಸ ಮೂಡಿಸಬೇಕಿದ್ದ ಆಯೋಗದ ಘನತೆ ಕೂಡ ಕುಸಿದಿದೆ. ದಿಟ್ಟ ಮತ್ತು ನಿಷ್ಪಕ್ಷಪಾತದ ನಡವಳಿಕೆಗೆ ಹೆಸರಾಗಿದ್ದ ದೇಶದ ಉನ್ನತ ಸಂಸ್ಥೆಯೊಂದಕ್ಕೆ ರಾಜಕಾರಣದ ಮಸಿ ಮೆತ್ತಗೊಡಗಿದೆ. ಮತದಾರನ ಬೆರಳ ತುದಿಯ ಮಸಿ ಅಳಿಸಲು ತುಂಬಾ ದಿನ ಬೇಕಾಗಿಲ್ಲ; ಆದರೆ, ಆತನ ಮತದ ಘನತೆ ಕಾಯುವ ವ್ಯವಸ್ಥೆಗೆ ಮೆತ್ತುವ ಮಸಿಯನ್ನು ಅಷ್ಟು ಸುಲಭವಾಗಿ ತೊಡೆಯಲಾಗದು ಎಂಬುದು ದುರಂತ!