ಅಂದು, 2014ರಲ್ಲಿ ಅಧಿಕಾರ ವಹಿಸಿಕೊಳ್ಳುವಾಗ ಪಾರದರ್ಶಕ ಆಡಳಿತದ ಭರವಸೆ ನೀಡಿದ್ದ ಮೋದಿ ಸರ್ಕಾರದ ಇಂದಿನ ನಡೆ ಮತ್ತೊಮ್ಮೆ ಅದರ ಪಾರದರ್ಶಕತೆಯ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೇಂದ್ರ ಸರ್ಕಾರವು ಲೋಕಪಾಲದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯ ಕುರಿತು ಮಾಹಿತಿ ಹಕ್ಕು ಕಾಯಿದೆ-2005ರ ಅಡಿ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದೆ.
2005ರ ಮಾಹಿತಿ ಹಕ್ಕು ಕಾಯಿದೆಯಡಿ ಪಾರಸನಾಥ ಸಿಂಗ್ ಎಂಬುವವರು ಕೆಳಕಂಡಂತೆ ಕೆಲವೊಂದು ಮಾಹಿತಿಗಳನ್ನು ಕೋರಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
- ಲೋಕಪಾಲದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ನೇಮಕ ಮಾಡಿರುವ ಆದೇಶದ ಸರ್ಟಿಫೈಡ್ ಪ್ರತಿ.
- ಲೋಕಪಾಲಕ್ಕೆ ನ್ಯಾಯಾಂಗದಿಂದ ಮತ್ತು ನ್ಯಾಯಾಂಗದ ಹೊರಗಿನಿಂದ ಸದಸ್ಯರ ನಾಮಕರಣ ಮಾಡಿರುವ ಆದೇಶದ ಸರ್ಟಿಫೈಡ್ ಪ್ರತಿ.
- ಲೋಕಪಾಲದ ಅಧ್ಯಕ್ಷರ ನೇಮಕಾತಿಗಾಗಿ ಆಯ್ಕೆ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಹೆಸರುಗಳು.
- ಲೋಕಪಾಲಕ್ಕೆ ನ್ಯಾಯಾಂಗದ ಮತ್ತು ನ್ಯಾಯಾಂಗೇತರ ಸದಸ್ಯರ ನೇಮಕಾತಿಗಾಗಿ ಆಯ್ಕೆ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಹೆಸರುಗಳು.
- ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ಲೋಕಪಾಲದ ಅಧ್ಯಕ್ಷರನ್ನಾಗಿ ನೇಮಿಸಲು ಶಿಫಾರಸು ಮಾಡಿದ ಆಯ್ಕೆ ಸಮಿತಿಯಲ್ಲಿದ್ದವರ ಹೆಸರುಗಳು.
- ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರನ್ನು ಲೋಕಪಾಲದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದ, ಪ್ರಧಾನಮಂತ್ರಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಭೆಯ ಸಭಾ ನಡಾವಳಿಗಳ ಸರ್ಟಿಫೈಡ್ ಪ್ರತಿಗಳು. ಹಾಗೆಯೇ ಲೋಕಪಾಲಕ್ಕೆ ನ್ಯಾಯಾಂಗದ ಮತ್ತು ನ್ಯಾಯಾಂಗೇತರ ಸದಸ್ಯರ ನೇಮಕಾತಿಗಾಗಿ ಮಾಡಲಾಗಿರುವ ಶಿಫಾರಸುಗಳಿಗೆ ಸಂಬಂಧಪಟ್ಟ ಸಭಾ ನಡಾವಳಿಗಳು.
- ಲೋಕಪಾಲ್ ಕಚೇರಿಯ ವಿಳಾಸ.
- ನಿ.ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ಲೋಕಪಾಲದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಹೊರಡಿಸಲಾಗಿರುವ ಆದೇಶಪತ್ರ(ಗಳ) ಪ್ರತಿಗಳು. ಹಾಗೆಯೇ ಲೋಕಪಾಲಕ್ಕೆ ಇತರ ಸದಸ್ಯರ ನಾಮಕರಣದ ಆದೇಶಪತ್ರಗಳ ಪ್ರತಿಗಳು.
- ಲೋಕಪಾಲದ ಅಧ್ಯಕ್ಷರ ಹುದ್ದೆಗೆ ಹಾಗೂ ಅದರ ನ್ಯಾಯಾಂಗದ ಮತ್ತು ನ್ಯಾಯಾಂಗೇತರ ಸದಸ್ಯರ ಹುದ್ದೆಗಳಿಗೆ ಶೋಧನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ.
ಮಾಹಿತಿ ನಿರಾಕರಿಸಿರುವ DoPT ಮಾಹಿತಿ ಅಧಿಕಾರಿ
ಮಾಹಿತಿ ಹಕ್ಕು ಕಾಯಿದೆ, 2005ರ ಅಡಿ ಅರ್ಜಿದಾರರು ಕೋರಿದ್ದ ಮೇಲ್ಕಂಡ ಮಾಹಿತಿಗಳಿಗೆ 2019 ಏಪ್ರಿಲ್ 22ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರತಿಕ್ರಿಯೆ ನೀಡಿ, ಲೋಕಪಾಲ್ ಮತ್ತು ಅದರ ಸದಸ್ಯರ ನೇಮಕಾತಿಗಳ ಕುರಿತ ಪ್ರತಿಗಳನ್ನು ಮಾತ್ರ ನೀಡಿದ್ದಾರೆಯೇ ಹೊರತು ಶೋಧನಾ ಸಮಿತಿ, ಆಯ್ಕೆ ಸಮಿತಿಗೆ ಶಿಫಾರಸು ಮಾಡಿರುವ ಹೆಸರುಗಳ ಬಗ್ಗೆ, ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಘೋಷ್ ಅವರನ್ನು ಅಧ್ಯಕ್ಷರನ್ನಾಗಿಯೂ, ಮತ್ತಿತರ ಸದಸ್ಯರನ್ನು ನೇಮಕಗೊಳಿಸುವ ತೀರ್ಮಾನ ಕೈಗೊಂಡ ಸಭಾ ನಡಾವಳಿಯ ಕುರಿತು ಮತ್ತು ಸರ್ಚ್ ಕಮಿಟಿಗೆ ಲೋಕಪಾಲ್ ಅಧ್ಯಕ್ಷರ ಮತ್ತು ಸದಸ್ಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರ ಹೆಸರುಗಳ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಈ ಮೇಲಿನ ಮಾಹಿತಿಗಳನ್ನು ನಿರಾಕರಿಸಿರುವ ಸಂಬಂಧಪಟ್ಟ ಮಾಹಿತಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆ 2005ರಲ್ಲಿರುವ ಯಾವುದೇ ವಿನಾಯ್ತಿ ಅಂಶಗಳನ್ನೂ ಉಲ್ಲೇಖಿಸದೆ, ತಾವು ಕೈಗೊಂಡಿರುವ ಕ್ರಮಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶವೊಂದನ್ನು ಆಶ್ರಯಿಸಿದ್ದಾರೆ. 2018ರ ನ್ಯಾಯಾಂಗ ನಿಂದನೆ ಪ್ರಕರಣ (ಸಿ) ನಂ.714ರಲ್ಲಿ ಕಾಮನ್ ಕಾಸ್ ಎಂಬ ಸಂಸ್ಥೆಯ ಪರವಾಗಿ ವಕೀಲಿಕೆ ನಡೆಸಿದ್ದ ಪ್ರಶಾಂತ್ ಭೂಷಣ್, ಶೋಧನಾ ಸಮಿತಿ ಪಟ್ಟಿ ಮಾಡಿದ್ದ ಹೆಸರುಗಳನ್ನು ಸಾರ್ವಜನಿಕಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಸರ್ವೋಚ್ಛ ನ್ಯಾಯಾಲಯವನ್ನು ಕೋರಿದ್ದರು. 2019 ಮಾರ್ಚ್ 7ರಂದು ಆದೇಶ ನೀಡಿದ್ದ ನ್ಯಾಯಾಲಯ ಈ ರೀತಿ ಹೇಳಿತ್ತು: “…ಶೋಧನಾ ಸಮಿತಿ ಶಿಫಾರಸ್ಸು ಮಾಡಿರುವ ಹೆಸರುಗಳನ್ನು ಸಾರ್ವಜನಿಕಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾವು 2013ರ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆಯ ಸೆಕ್ಷನ್ 4(4) ರ ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಮತ್ತು ಈ ವಿಚಾರದಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಬಾರದೆಂದು ನಾವು ಆಲೋಚಿಸಿ ನೀಡಿರುವ ಅಭಿಪ್ರಾಯವಾಗಿರುತ್ತದೆ…. ಇದನ್ನು ಆಯ್ಕೆ ಸಮಿತಿ ಸಭೆ ಸೇರಿದಾಗ ನ್ಯಾಯಸಮ್ಮತವಾಗಿ ತೀರ್ಮಾನಿಸಲು ಸಮಿತಿಗೇ ಅಧಿಕಾರ ನೀಡುವುದು ಉಚಿತವೆನಿಸುತ್ತದೆ…”
ಪಾರದರ್ಶಕತೆ ಕಾಯುವ ಸಂಸ್ಥೆಯ ಸಭಾ ನಡಾವಳಿಯೇ ಗೌಪ್ಯ!
2019ರ ಮಾರ್ಚ್ 15ರಂದು ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯ ನಡಾವಳಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುವುದರ ಜೊತೆಗೆ “ಸಭಾ ನಡಾವಳಿಗಳನ್ನು ಗೌಪ್ಯ ದಾಖಲೆಗಳೆಂದು ಗುರುತಿಸಲಾಗಿರುವುದರಿಂದ ಕೊಡಲು ಸಾಧ್ಯವಿಲ್ಲ” ಎಂದು ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಾಹಿತಿ ಅಧಿಕಾರಿಗಳು ಉಲ್ಲೇಖಿಸಿರುವ ಸರ್ವೋಚ್ಛ ನ್ಯಾಯಾಲಯದ ಆದೇಶವು ಮಾಹಿತಿ ನಿರಾಕರಣೆಯನ್ನು ಸಮರ್ಥಿಸುವುದಿಲ್ಲ; ಇಲ್ಲವೇ 2005ರ ಮಾಹಿತಿ ಹಕ್ಕು ಕಾಯಿದೆಯ ಅಡಿ ಮಾಹಿತಿ ಬಹಿರಂಗಪಡಿಸಲು ವಿನಾಯಿತಿ ನೀಡುವುದಿಲ್ಲ. 2013ರ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆಯ ಸೆಕ್ಷನ್ 4(4) ಹೇಳುವಂತೆ, “ಆಯ್ಕೆ ಸಮಿತಿಯು ಲೋಕಪಾಲದ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಲು ತನ್ನದೇ ಆದ ವಿಧಾನವನ್ನು ಪಾರದರ್ಶಕ ರೀತಿಯಲ್ಲಿ ರೂಪಿಸಿಕೊಳ್ಳಬೇಕು.”
2005ರ ಮಾಹಿತಿ ಹಕ್ಕು ಕಾಯಿದೆ ಅಡಿ ಸೆಕ್ಷನ್ 8ಕ್ಕೆ ಅನ್ವಯವಾಗುವಂತೆ ಮಾತ್ರ ಮಾಹಿತಿಯನ್ನು ನಿರಾಕರಿಸಬಹುದಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಹಾಗೂ ಉಚ್ಛನ್ಯಾಯಾಲಯಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ಅನೇಕ ತೀರ್ಪುಗಳು ಹೇಳಿವೆ. ಹೀಗಿದ್ದಾಗ್ಯೂ ಸುಪ್ರೀಂ ಕೋರ್ಟಿನ ಸಂಬಂಧವಿರದ ತೀರ್ಪನ್ನು ಮಾಹಿತಿ ಅಧಿಕಾರಿಗಳು ಉಲ್ಲೇಖಿಸಿ ಮಾಹಿತಿಯನ್ನು ನಿರಾಕರಿಸಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಮತ್ತು ಆಯ್ಕೆ ಸಮಿತಿಯು ಲೋಕಪಾಲ್ ಕಾಯಿದೆಯ ಪ್ರಕಾರ ಪಾರದರ್ಶಕ ವಿಧಾನವನ್ನು ಅನುಸರಿಸಿಲ್ಲ ಮತ್ತು ನ್ಯಾಯೋಚಿತವಾದ ತೀರ್ಮಾನವನ್ನು ಆಯ್ಕೆ ಸಮಿತಿ ಕೈಗೊಂಡಿಲ್ಲ ಎಂಬುದು ಮಾಹಿತಿ ನಿರಾಕರಣೆಯಿಂದ ಸ್ಪಷ್ಟವಾಗುತ್ತದೆ.
ಚುನಾವಣೆಗೆ ಮುನ್ನ ದಿಢೀರ್ ಲೋಕಪಾಲ್ ನೇಮಕ?
ಲೋಕಪಾಲ ನೇಮಕದ ವಿಚಾರದಲ್ಲಿ 5 ವರ್ಷಗಳ ಕಾಲ ದಿವ್ಯಮೌನಕ್ಕೆ ಶರಣಾಗಿದ್ದ ಮೋದಿ ಸರ್ಕಾರ, ಇದ್ದಕ್ಕಿದ್ದಂತೆ ದಿಢೀರನೇ 2013ರ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆಯಡಿ, 2019 ಮಾರ್ಚ್ 27ರಂದು ಲೋಕಪಾಲ್ ರಚಿಸಲು ಮುಂದಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನಾಮನಿರ್ದೇಶಿತ ಸದಸ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ಖ್ಯಾತ ನ್ಯಾಯವಾದಿ ಮುಖುಲ್ ರೋಹಟಗಿ ಇವರನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಯಿತು. ಈ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಲದ ಮೊದಲ ಅಧ್ಯಕ್ಷರನ್ನಾಗಿ ಭಾರತದ ರಾಷ್ಟ್ರಪತಿಗಳು ನೇಮಕಮಾಡಿದ್ದಾರೆ.
ಇವರೊಡನೆ ರಾಷ್ಟ್ರಪತಿಗಳು ಲೋಕಪಾಲಕ್ಕೆ ಒಟ್ಟು ಎಂಟು ಸದಸ್ಯರನ್ನು, ತಲಾ ನಾಲ್ವರು ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಲೋಕಪಾಲದಲ್ಲೂ ರಾಜಕೀಯದ ವಾಸನೆ?
ಕ್ರಮವಾಗಿ ಅಲಹಾಬಾದ್, ಜಾರ್ಖಂಡ್ ಮತ್ತು ಮಣಿಪುರ ಉಚ್ಛನ್ಯಾಯಾಲಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದ ದಿಲೀಪ್ ಬಿ.ಭೋಸಲೆ, ಪ್ರದೀಪ್ ಕುಮಾರ್ ಮೊಹಂತಿ ಮತ್ತು ಅಭಿಲಾಷಾ ಕುಮಾರಿ ಹಾಗೂ ಛತ್ತೀಸ್ಗಢ ಉಚ್ಛನ್ಯಾಯಾಲಯದಲ್ಲಿ ಹಾಲಿ ಮುಖ್ಯ ನ್ಯಾಯಮೂರ್ತಿಗಳಾಗಿರುವ ಅಜಯ್ ಕುಮಾರ್ ತ್ರಿಪಾಠಿ – ಈ ನಾಲ್ವರು ಲೋಕಪಾಲದ ನ್ಯಾಯಾಂಗ ಸದಸ್ಯರಾಗಿರುತ್ತಾರೆ. ನ್ಯಾ.ಭೋಸಲೆ ಇವರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಬಾಬಾಸಾಹೇಬ್ ಭೋಸಲೆಯವರ ಪುತ್ರನಾದರೆ ನ್ಯಾ.ಅಭಿಲಾಷ ಕುಮಾರಿ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರಸಿಂಗ್ ಅವರ ಪುತ್ರಿಯಾಗಿದ್ದಾರೆ.
ಸಶಸ್ತ್ರ ಸೀಮಾಬಲದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ನಿವೃತ್ತ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ನಿವೃತ್ತ ಐಆರ್ಎಸ್ ಅಧಿಕಾರಿ ಮಹೇಂದ್ರ ಸಿಂಗ್, ಗುಜರಾತ್ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಇಂದ್ರಜಿತ್ ಪ್ರಸಾದ್ ಗೌತಮ್ ಲೋಕಪಾಲದ ನ್ಯಾಯಾಂಗೇತರ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಲೋಕಪಾಲ್ ಕಾಯಿದೆಯ ಪ್ರಕಾರ ಗರಿಷ್ಠ 8 ಸದಸ್ಯರ ಪೈಕಿ ಅರ್ಧದಷ್ಟು ನ್ಯಾಯಾಂಗದಿಂದ ನೇಮಕಗೊಳ್ಳಬೇಕು. ಅಲ್ಲದೆ ಕನಿಷ್ಟ ಶೇ.50ರಷ್ಟು ಎಸ್ಸಿ/ಎಸ್ಟಿ/ಒಬಿಸಿ/ಅಲ್ಪಸಂಖ್ಯಾತರು ಮತ್ತು ಮಹಿಳೆಯರಾಗಬೇಕು. ಲೋಕಪಾಲದ ನ್ಯಾಯಾಂಗ ಸದಸ್ಯರು ಸುಪ್ರೀಂಕೋರ್ಟಿನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಾಗಿರಬೇಕು. ಇಲ್ಲವೇ ಹೈಕೋರ್ಟಿನ ನಿವೃತ್ತ ಅಥವಾ ಹಾಲಿ ಮುಖ್ಯ ನ್ಯಾಯಾಧೀಶರಾಗಿರಬೇಕು. ನ್ಯಾಯಾಂಗೇತರ ಸದಸ್ಯ/ಸ್ಯೆ ಆದವನು/ಳು ಯಾವುದೇ ಕಳಂಕ ಹೊಂದಿರದೆ ಪ್ರಾಮಾಣಿಕವಾಗಿರುವ ಶ್ರೇಷ್ಠ ವ್ಯಕ್ತಿಯಾಗಿದ್ದು, ಭ್ರಷ್ಟಾಚಾರ-ವಿರೋಧಿ ನೀತಿ, ಸಾರ್ವಜನಿಕ ಆಡಳಿತ, ಕಣ್ಗಾವಲು, ವಿಮೆ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಣಕಾಸು, ಕಾನೂನು ಮತ್ತು ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಕನಿಷ್ಠ 25 ವರ್ಷಗಳು ವಿಶೇಷ ಅನುಭವ ಹೊಂದಿರಬೇಕು.
ಮೋದಿ ಸರ್ಕಾರದ “ಪಾರದರ್ಶಕ ಆಡಳಿತ”ದ ಬೂಟಾಟಿಕೆ
ಸಾರ್ವಜನಿಕ ಕ್ಷೇತ್ರದಲ್ಲಿನ ಭ್ರಷ್ಟಾಚಾರ ನಿಗ್ರಹದಲ್ಲಿ ಲೋಕಪಾಲ ಸಂಸ್ಥೆ ಪ್ರಮುಖ ಪಾತ್ರ ವಹಿಸಲಿದೆ. 2013ರಲ್ಲಿ ರೂಪುಗೊಂಡ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆಯ ಅನ್ವಯ ಈವರೆಗೂ ಲೋಕಪಾಲರ ಹುದ್ದೆ ಖಾಲಿಯೇ ಇತ್ತು. ಪಾರದರ್ಶಕ ಆಡಳಿತದ ಬಗ್ಗೆ ಭಾರೀ ಮಾತುಗಳನ್ನಾಡಿದ್ದ ನರೇಂದ್ರ ಮೋದಿಯವರು, ಐದು ವರ್ಷಗಳಾದರೂ ಲೋಕಪಾಲರ ಕಚೇರಿಯನ್ನು ತೆರೆಯಲಿಲ್ಲ. ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳ ಮುನ್ನ ತರಾತುರಿಯಲ್ಲಿ ಆಯ್ಕೆ ಸಮಿತಿಯ ಸಭೆ ನಡೆಸಿ ತರಾತುರಿಯಲ್ಲಿ ಲೋಕಪಾಲರ ನೇಮಕ ಮಾಡಿದ ಕ್ರಮವನ್ನು ಈಗ ಎಲ್ಲರೂ ಪ್ರಶ್ನಿಸುವಂತಾಗಿದೆ.
ಅಲ್ಲದೆ ಲೋಕಪಾಲರ ಕಚೇರಿ ಪಂಚತಾರಾ ಹೊಟೇಲಿನಿಂದ ಕಾರ್ಯನಿರ್ವಹಿಸಲಿದೆ ಎಂದೂ ಅಧಿಕೃತವಾಗಿ ಘೋಷಿಸಲಾಗಿದ್ದು, ಲೋಕಪಾಲ್ ಸದಸ್ಯರ ಕುಟುಂಬದ ರಾಜಕೀಯ ಹಿನ್ನೆಲೆ ಇವೆಲ್ಲವೂ ಲೋಕಪಾಲ ಸಂಸ್ಥೆಯ ಉದ್ದೇಶಕ್ಕೇ ಕೊಡಲಿಪೆಟ್ಟು ನೀಡುವಂತಿದೆ. ಯಾವ ಸಂಸ್ಥೆ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಬೇಕೋ ಅಂತಹ ಸಂಸ್ಥೆಯನ್ನು ಕುರಿತ ಮಾಹಿತಿಗಳನ್ನೇ “ಗೌಪ್ಯ”ವಾಗಿಟ್ಟಿರುವುದು, ಮೋದಿ ಸರ್ಕಾರದ ಪಾರದರ್ಶಕತೆಯ ಮಾತುಗಳು ಪದೇಪದೇ ಬೂಟಾಟಿಕೆ ಎನಿಸಲು ಸಾಕ್ಷ್ಯ ಒದಗಿಸುತ್ತಿವೆ.
(ಕೃಪೆ: ಲೀಫ್ ಲೆಟ್ )