ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ತಾವೇ ಖುದ್ದಾಗಿ ಅಪರೇಶನ್ ಕಮಲ ನಡೆಸುತ್ತಿರುವ ಬಗ್ಗೆ ಸೂಚನೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ 40 ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದು ಚುನಾವಣಾ ಫಲಿತಾಂಶ ಪ್ರಕಟಗೊಂಡ ಕೂಡಲೇ ಪಕ್ಷಾಂತರ ನಡೆಸಲಿದ್ದಾರೆ ಎಂದು ಇಂದು ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತಾದಿಂದ 30 ಕಿಮೀ ದೂರದಲ್ಲಿರುವ ಶ್ರೀರಾಂಪುರ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಮೋದಿ “ದೀದಿ, ಮೇ 23ಕ್ಕೆ, ಫಲಿತಾಂಶದ ದಿನ ಎಲ್ಲಾ ಕಡೆ ಕಮಲ ಅರಳುತ್ತದೆ, ನಿಮ್ಮ ಎಮ್ಮೆಲ್ಲೆಗಳು ನಿಮ್ಮನ್ನು ಬಿಟ್ಟು ಓಡಲಿದ್ದಾರೆ, ದೀದಿ, ನಿಮ್ಮ 40 ಎಮ್ಮೆಲ್ಲೆಗಳು ನನ್ನ ಸಂಪರ್ಕದಲ್ಲಿದ್ದಾರೆ” ಎಂದಿದ್ದಾರೆ.
ಮೋದಿಯ ಈ ಮಾತಿಗೆ ಅಷ್ಟೇ ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಡೆರೆಕ್ ಓ ಬ್ರಿಯೆನ್, ಪ್ರಧಾನಿ ಮೋದಿ “ಕುದುರೆ ವ್ಯಾಪಾರ” ನಡೆಸುತ್ತಿದ್ದಾರೆ, ಈ ಕುರಿತು ಚುನಾವಣಾ ಆಯೋಗಕ್ಕೆ ಪಕ್ಷ ದೂರು ಸಲ್ಲಿಸಲಿದೆ ಎಂದಿದ್ದಾರೆ.
ಅವರು ಈ ಬಗ್ಗೆ ಮಾಡಿರುವ ಟ್ವೀಟ್ ಹೀಗಿದೆ:
“ಎಕ್ಸ್ ಪೈರಿ ಬಾಬು ಪಿಎಂ, ನೇರವಾಗಿ ಮಾತಾಡೋಣ, ನಿಮ್ಮ ಜೊತೆ ಯಾರೂ ಬರುವುದಿಲ್ಲ, ಒಬ್ಬ ಕೌನ್ಸಿಲರ್ ಕೂಡಾ ಬರುವುದಿಲ್ಲ. ನೀವು ಚುನಾವಣಾ ಪ್ರಚಾರ ಮಾಡುತ್ತಿದ್ದೀರೋ ಇಲ್ಲಾ ಕುದುರೆ ವ್ಯಾಪಾರ ಮಾಡುತ್ತಿದ್ದೀರೋ? ನಿಮ್ಮ ಕಡೇ ದಿನಾಂಕ ಸಮೀಪಿಸ್ತಾ ಇದೆ. ಇಂದು ನಾವು ಚುನಾವಣಾ ಆಯೋಗಕ್ಕೆ ನೀವು ಕುದುರೆ ವ್ಯಾಪಾರದಲ್ಲಿ ತೊಡಗಿದ್ದೀರಿ ಎಂದು ದೂರು ಸಲ್ಲಿಸಲಿದ್ದೇವೆ”
Expiry Babu PM , let’s get this straight. Nobody will go with you. Not even one councillor. Are you election campaigning or horse trading! Your expiry date is near. Today, we are complaining to the Election Commission. Charging you with horse trading #LokSabhaElection2019
— Derek O'Brien | ডেরেক ও’ব্রায়েন (@derekobrienmp) April 29, 2019
ಪಶ್ಚಿಮ ಬಂಗಾಳದಲ್ಲಿ ಏಳೂ ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.
2016ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪ.ಬಂಗಾಳದ 294 ವಿಧಾನ ಸಭಾ ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು. ಲೋಕಸಭೆಯಲ್ಲಿ ಟಿಎಂಸಿ 34 ಸದಸ್ಯರನ್ನು ಹೊಂದಿದೆ.
ಕಳೆದ ನವೆಂಬರ್ ನಲ್ಲಿ ಟಿಎಂಸಿಯ ಮುಖಂಡ ಮುಕುಲ್ ರಾಯ್ ಬಿಜೆಪಿ ಸೇರಿದ ನಂತರದಲ್ಲಿ ಬಿಜೆಪಿ ಕೊಂಚ ಮಟ್ಟಿನ ಜನಬೆಂಬಲ ಗಳಿಸಿದೆ. ಇದಕ್ಕೂ ಮೊದಲು ಬಿಜೆಪಿಗೆ ಪ.ಬಂಗಾಳದಲ್ಲಿ ಅಸ್ತಿತ್ವವೇ ಇರಲಿಲ್ಲ. ಮುಕುಲ್ ರಾಯ್ ನಂತರದಲ್ಲಿ ಟಿಎಂಸಿಯ ಆರು ದೊಡ್ಡ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದರಲ್ಲಿ ಲೋಕಸಭಾ ಸದಸ್ಯ ಸೌಮಿತ್ರಾ ಖಾನ್ ಕೂಡಾ ಇದ್ದಾರೆ.
ALSO READ: ನರೇಂದ್ರ ಮೋದಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಇಲ್ಲವೇ? – ಇದೇ ಈ ಸಲದ ಚುನಾವಣಾ ವಿಷಯ: ತೃಣಮೂಲ ಸಂಸದ ಡೆರೆಕ್ ಓ’ಬ್ರಿಯೆನ್ ಸಂದರ್ಶನ