ದೇಶದ ಮಹಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಮುಗಿದಿದೆ. ಹಿಂದಿ ಪ್ರಾಬಲ್ಯದ ಮತ್ತು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ತಂದುಕೊಟ್ಟಿದ್ದ ಉತ್ತರಪ್ರದೇಶ ಸೇರಿದಂತೆ ಒಟ್ಟು ಒಂಭತ್ತು ರಾಜ್ಯಗಳ 72 ಸ್ಥಾನಗಳಿಗೆ ಈ ಹಂತದಲ್ಲಿ ಮತದಾನ ನಡೆದಿದೆ. ಪ್ರಮುಖವಾಗಿ ಕನ್ಹಯ್ಯ ಕುಮಾರ್, ಮಿಲಿಂದ್ ದಿಯೋರಾ, ಊರ್ಮಿಳಾ ಮಾತೊಂಡ್ಕರ್, ಡಿಂಪಲ್ ಯಾದವ್ ಸೇರಿದಂತೆ ಹಲವು ಭರವಸೆಯ ಯುವ ನಾಯಕ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ. ಆದರೆ, ಕಳೆದ ಬಾರಿ ಈ 72 ಕ್ಷೇತ್ರಗಳ ಪೈಕಿ 56ರಲ್ಲಿ ಜಯಭೇರಿ ಭಾರಿಸಿದ್ದ ಬಿಜೆಪಿಯ ಭವಿಷ್ಯವನ್ನೂ ಈ ಹಂತ ನಿರ್ಧರಿಸಲಿದ್ದು, ಈ ಬಾರಿ ಅದು ಎಷ್ಟು ಸ್ಥಾನ ಗಳಿಸಲಿದೆ ಎಂಬ ಕುತೂಹಲ ಇದ್ದೇ ಇದೆ.
ಆದರೆ, ಈವರೆಗಿನ ಮೂರು ಹಂತಗಳ ಬಹುತೇಕ ದಕ್ಷಿಣ ಭಾರತದ ರಾಜ್ಯಗಳ ಮತದಾನದ ಚಿತ್ರಣ ಏನು ಹೇಳುತ್ತಿದೆ? ಎಂಬ ಕುತೂಹಲ ಸಹಜ. ಅದರಲ್ಲೂ ಬಿಜೆಪಿಯ ದೊಡ್ಡ ಬಲವಾಗಿರುವ ಕರ್ನಾಟಕ(ಎಲ್ಲಾ ಕ್ಷೇತ್ರ), ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ (ಕೆಲವು ಕ್ಷೇತ್ರ)ಗಳಲ್ಲಿ ಈ ಬಾರಿಯ ಆರಂಭದ ಮೂರು ಹಂತದ ಚುನಾವಣೆ ಚಿತ್ರಣ ಯಾವ ಸೂಚನೆ ಕೊಡುತ್ತಿದೆ? ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಈಗಾಗಲೇ ಆರಂಭವಾಗಿರುವ ರಾಜಕೀಯ ಚರ್ಚೆಗಳು ಮತ್ತು ಕೆಲವು ಚುನಾವಣೋತ್ತರ ಸಮೀಕ್ಷೆಗಳನ್ನು ಗಮನಿಸಿದರೆ; ಬಿಜೆಪಿ ಪಾಲಿನ ದುರ್ದಿನಗಳು ಯಾರೂ ನಿರೀಕ್ಷಿಸಿರದ ಮಟ್ಟಿಗೆ ಬಹಳ ಬೇಗನೇ ಆರಂಭವಾಗಿರುವಂತಿದೆ.
ಏ.11ರಿಂದ ಆರಂಭವಾಗಿ ಈಗಾಗಲೇ ಕರ್ನಾಟಕವೂ ಸೇರಿದಂತೆ ಉತ್ತರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಒಟ್ಟು 303 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ(ಎಐಎಡಿಎಂಕೆ ಹೊರತುಪಡಿಸಿ), ಆ ಪೈಕಿ 134 ಸ್ಥಾನ ಗಳಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 49 ಸ್ಥಾನ ಗಳಿಸಿತ್ತು. ಎಡಪಕ್ಷಗಳು 12 ಮತ್ತು ಇತರ ಪ್ರಾದೇಶಿಕ ಪಕ್ಷಗಳು ಒಟ್ಟು 108 ಸ್ಥಾನ ಗಳಿಸಿದ್ದವು.
ಆದರೆ, ‘ನ್ಯೂಸ್ ಕ್ಲಿಕ್’ ಸುದ್ದಿತಾಣದ ವಿಶ್ಲೇಷಣೆಯ ಪ್ರಕಾರ, ಈ ಬಾರಿ ಈ 303 ಸ್ಥಾನಗಳ ಪೈಕಿ ಬಹುತೇಕ ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದ್ದು, ಅದರ ಸ್ಥಾನ ಗಳಿಕೆ 134ರಿಂದ ಕೇವಲ 66ಕ್ಕೆ ಕುಸಿಯುವ ಸಾಧ್ಯತೆ ಇದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಬಲವನ್ನು ಈ ಕ್ಷೇತ್ರಗಳಲ್ಲಿ ಹಿಂದಿನ 49 ಸ್ಥಾನದಿಂದ 137ಕ್ಕೆ ಹೆಚ್ಚಿಸಿಕೊಳ್ಳಲಿದೆ. ಹಾಗೆಯೇ ಎಡಪಕ್ಷಗಳು ಕೂಡ ತಮ್ಮ ಸ್ಥಾನ ಗಳಿಕೆಯನ್ನು ದ್ವಿಗುಣಗೊಳಿಸಿಕೊಳ್ಳಲಿದ್ದು, 12ರಿಂದ 24ಕ್ಕೆ ಎಡಪಕ್ಷಗಳ ಬಲವೃದ್ಧಿಯಾಗಲಿದೆ. ಇನ್ನು ಬಿಎಸ್ ಪಿ, ಎಸ್ಪಿ, ಟಿಡಿಪಿ, ಬಿಜೆಡಿ ಮತ್ತಿತರ ಪ್ರಾದೇಶಿಕ ಪಕ್ಷಗಳು ಕಳೆದ ಬಾರಿಯ 108 ಸ್ಥಾನದಿಂದ 76 ಸ್ಥಾನಕ್ಕೆ ಕುಸಿಯಲಿವೆ.
ಪ್ರಮುಖವಾಗಿ ತಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದ ಮತ್ತು ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಿಗೆ ಪ್ರತಿಯಾಗಿ ತಮ್ಮ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದ ಬಿಜೆಪಿ ಮತ್ತು ಪ್ರಧಾನಿ ಮೋದಿ ಬಗೆಗಿನ ಮತದಾರನ ತೀವ್ರ ಅಸಮಾಧಾನ, ಪ್ರಮುಖವಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರು ಈ ರಾಜ್ಯಗಳಲ್ಲಿ 2014ಕ್ಕಿಂತ ಭಿನ್ನವಾದ ರಾಜಕೀಯ ಮೈತ್ರಿಗಳು ಅಸ್ತಿತ್ವಕ್ಕೆ ಬಂದಿರುವುದು ಹಾಗೂ ಬಿಜೆಪಿಯೊಂದಿಗಿನ ಹಲವು ಮಿತ್ರಪಕ್ಷಗಳು ಈ ಬಾರಿ ದೂರ ಸರಿದಿರುವುದು ಬಿಜೆಪಿಯ ಈ ಸಂಭಾವ್ಯ ನಷ್ಟಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಮುಖವಾಗಿ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬ್ಯಾಂಕಿಂಗ್ ವಲಯದ ಅವ್ಯವಹಾರಗಳು ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳ ಮತದಾರರಲ್ಲಿ ಆಕ್ರೋಶ ಮೂಡಿಸಿವೆ. ಅದರ ಪರಿಣಾಮ ಮತದಾನದಲ್ಲಿ ವ್ಯಕ್ತವಾಗಿರಬಹುದು ಎನ್ನಲಾಗಿದೆ.
ಹಾಗೇ, ಮತ್ತೊಂದು ಸುದ್ದಿ ತಾಣ ‘ದ ಕ್ವಿಂಟ್’ ಕೂಡ ಬಹುತೇಕ ಬಿಜೆಪಿಯ ಪಾಲಿಗೆ ಆಘಾತಕಾರಿಯೆನ್ನಬಹುದಾದ ಇದೇ ಅಭಿಪ್ರಾಯವನ್ನು ನೀಡಿದ್ದು, ಸಿ-ವೋಟರ್ ಸಮೀಕ್ಷೆ ಆಧರಿಸಿದ ತನ್ನ ವರದಿಯಲ್ಲಿ ಅದು, ಪ್ರಧಾನಿ ಮೋದಿ, ಅವರ ಸಂಪುಟ ಸಹೋದ್ಯೋಗಿಗಳು, ಅವರ ಒಟ್ಟಾರೆ ಸರ್ಕಾರದ ಕಾರ್ಯನಿರ್ವಹಣೆ, ಅವರ ಪಕ್ಷ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂ ಮತ್ತು ಸಚಿವರ ಆಡಳಿತ ವೈಖರಿ ಹಾಗೂ ಶಾಸಕರ ಹೊಣೆಗೇಡಿತನದಿಂದಾಗಿ ದೇಶದ ಪ್ರಮುಖ ಮೂರು ರಾಜ್ಯಗಳಾದ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಶೇ.85ರಷ್ಟು (ಕಳೆದ ಬಾರಿಗೆ ಹೋಲಿಸಿದರೆ) ಸ್ಥಾನ ಕಳೆದುಕೊಳ್ಳಲಿದೆ ಎಂದಿದೆ.
ಈ ಮೂರೂ ರಾಜ್ಯಗಳ ಒಟ್ಟು 167 ಸ್ಥಾನಗಳ ಪೈಕಿ ಬಿಜೆಪಿ, ಕಳೆದ ಬಾರಿ 153 ಸ್ಥಾನಗಳನ್ನು(ತಮಿಳುನಾಡಿನಲ್ಲಿ ಎಐಎಡಿಎಂಕೆ) ಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕೇವಲ 69 ಸ್ಥಾನಗಳನ್ನು ಗಳಿಸಬಹುದು ಎಂದು ಸಿ ವೋಟರ್ ಸಮೀಕ್ಷೆ ಅಂದಾಜಿಸಿದೆ ಎನ್ನಲಾಗಿದೆ. ಇದೀಗ, ಕೆಲ ದಿನಗಳ ಹಿಂದಿನ ತನ್ನ ಆ ಸಮೀಕ್ಷೆಯನ್ನು ಮತ್ತೆ ಪುನರ್ ವಿಶ್ಲೇಷಿಸಲಾಗಿದ್ದು, ಬದಲಾದ ಸ್ಥಿತಿಯಲ್ಲಿ(ಮೂರನೇ ಹಂತದ ಮತದಾನದ ಹೊತ್ತಿಗೆ) ಬಾಲಕೋಟ್ ಮೇಲಿನ ವೈಮಾನಿಕ ದಾಳಿಯ ಹವಾ ಸಂಪೂರ್ಣ ಮಾಸಿಹೋಗಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಸ್ಥಾನ ಗಳಿಕೆ ಇನ್ನಷ್ಟು ಕುಸಿದರೂ ಅಚ್ಚರಿಯಿಲ್ಲ ಎಂದೂ ಸಿ-ವೋಟರ್ ಹೇಳಿದೆ.
ಅಷ್ಟೇ ಅಲ್ಲದೆ, ಮತ್ತೊಂದು ವಿಶ್ವಾಸಾರ್ಹ ಚುನಾವಣಾ ಸಮೀಕ್ಷಾ ಸಂಸ್ಥೆ ಸಿಎಸ್ ಡಿಎಸ್ ಕೂಡ ತನ್ನ ಇತ್ತೀಚಿನ ಸಮೀಕ್ಷೆಯಲ್ಲಿ ಬಿಜೆಪಿಯ ಪತನದ ಬಗ್ಗೆಯೇ ಹೇಳಿದೆ. ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳ ಮುನ್ನ, ಉತ್ತರಪ್ರದೇಶದ ಬಿಜೆಪಿ ಸ್ಥಾನ ಗಳಿಕೆಯ ಅಂದಾಜು ಸಮೀಕ್ಷೆ ಪ್ರಕಟಿಸಿದ್ದ ಸಿಎಸ್ ಡಿಎಸ್, ಅಲ್ಲಿನ ಒಟ್ಟು 80 ಸ್ಥಾನಗಳ ಪೈಕಿ ಬಿಜೆಪಿ ಕಳೆದ ಬಾರಿ 73 ಸ್ಥಾನ ಗಳಿಸಿತ್ತು. ಆದರೆ, ಈ ಬಾರಿ 32-40 ಸ್ಥಾನ ಗಳಿಸಬಹುದು ಎಂದು ಅಂದಾಜಿಸಿತ್ತು. ಆದರೆ, ಮೊದಲ ಹಂತದ ಮತದಾನ ಮುಗಿಯುತ್ತಲೇ ತನ್ನ ಲೆಕ್ಕಾಚಾರಗಳನ್ನು ಪುನರ್ ವಿಶ್ಲೇಷಿಸಿದ ಸಮೀಕ್ಷಾ ಸಂಸ್ಥೆ, ಬಿಜೆಪಿ ಒಟ್ಟಾರೆ ರಾಜ್ಯದಲ್ಲಿ 20-25 ಸ್ಥಾನಗಳನ್ನಷ್ಟೇ ಗಳಿಸಬಹುದು ಎಂದು ಅಂದಾಜಿಸಿದೆ.
“ಮೊದಲ ಸಮೀಕ್ಷೆಯ ವೇಳೆ ಮತದಾನಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಮತ್ತು ಕೆಲವು ಮತದಾರರ ಉತ್ಸಾಹವನ್ನು ಗಮನಿಸಿ ಅದರ ಆಧಾರದ ಮೇಲೆ ಸ್ಥಾನ ಲೆಕ್ಕಾಚಾರ ಮಾಡಲಾಗಿತ್ತು. ಆದರೆ, ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ವ್ಯಕ್ತವಾದ ನೀರಸ ಪ್ರತಿಕ್ರಿಯೆ ಮತ್ತು ಬಿಜೆಪಿಯೇತರ ಪ್ರತಿಪಕ್ಷಗಳ ಪ್ರಾಬಲ್ಯದ ಪ್ರದೇಶಗಳಲ್ಲಿ ವ್ಯಕ್ತವಾಗಿರುವ ಉತ್ಸಾಹದ ಹಿನ್ನೆಲೆಯಲ್ಲಿ, ನಾವು ನಮ್ಮ ಸಮೀಕ್ಷೆಯನ್ನು ಪುನರ್ ವಿಶ್ಲೇಷಿಸಿ, ಸ್ಥಾನಗಳಿಕೆ ಲೆಕ್ಕಾಚಾರಗಳನ್ನು ಪುನರಾವಲೋಕನ ಮಾಡಿದ್ದೇವೆ” ಎಂದು ಸಿಎಸ್ ಡಿಎಸ್ ನಿರ್ದೇಶಕ ಡಾ ಸಂಜಯ್ ಕುಮಾರ್ ಹೇಳಿರುವುದಾಗಿ ‘ದ ಕ್ವಿಂಟ್’ ವರದಿ ಮಾಡಿದೆ.
ಒಟ್ಟಾರೆ, ದೇಶದ ಎರಡು ಪ್ರಮುಖ ಚುನಾವಣಾ ಸಮೀಕ್ಷಾ ಸಂಸ್ಥೆಗಳಾದ ಸಿ ವೋಟರ್ ಮತ್ತು ಸಿಎಸ್ ಡಿಎಸ್; ಎರಡೂ ಮೊದಲ ಹಂತದ ಮತದಾನ ಮುಗಿಯುತ್ತಲೇ ತಮ್ಮ ಸಮೀಕ್ಷೆಗಳ ಅಂಕಿಅಂಶಗಳ ಅಂದಾಜನ್ನು ಪುನರ್ ರೂಪಿಸಿದ್ದು, ಬಿಜೆಪಿ ಮತ್ತು ಅದರ ಎನ್ ಡಿಎ ಒಕ್ಕೂಟ ಸರಳ ಬಹುಮತಕ್ಕೆ ಅಗತ್ಯ 272 ಸ್ಥಾನಗಳನ್ನು ಕೂಡ ಪಡೆಯುವುದು ಅನುಮಾನಾಸ್ಪದ ಎಂದಿವೆ. ಪ್ರಮುಖವಾಗಿ ಬಿಜೆಪಿ ಈ ಬಾರಿ ತನ್ನ ಐದು ವರ್ಷಗಳ ಆಡಳಿತ ವೈಫಲ್ಯ ಮತ್ತು ಅಸಾಮರ್ಥ್ಯವನ್ನು ಮರೆಮಾಚಲು ಬಳಸಿಕೊಂಡ ಬಾಲಾಕೋಟ್ ದಾಳಿ ವಿಷಯ ಕೆಲವೇ ದಿನಗಳಲ್ಲಿ ಜನಮಾನಸದಿಂದ ಮಾಸಿ ಹೋಗಿದೆ. ಮತದಾರರು ಮೊದಲ ಹಂತದ ಮತದಾನದ ಹೊತ್ತಿಗೇ ಆ ವಿಷಯವನ್ನು ಬದಿಗೆ ಸರಿಸಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬ್ಯಾಂಕಿಂಗ್ ವಂಚನೆ ಮತ್ತು ಭ್ರಷ್ಟಾಚಾರದಂತಹ ವಿಷಯಗಳನ್ನು ಯೋಚಿಸಿತೊಡಗಿದ್ದರು. ಅಲ್ಲದೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ದ್ವೇಷ ಮತ್ತು ಮತೀಯ ಭಾವನೆಯ ಪ್ರಚಾರಾಂದೋಲನ ಮತ್ತು ಭವಿಷ್ಯದಲ್ಲಿ ದೇಶದ ಸಾಮಾಜಿಕ ಬದುಕಿನ ಮೇಲೆ ಅಂತಹ ದ್ವೇಷ ರಾಜಕಾರಣ ಬೀರಬಹುದಾದ ಪರಿಣಾಮವನ್ನು ಊಹಿಸಿದ್ದ ಮತದಾರರ, ತನ್ನ ಮನಸ್ಸಿನಲ್ಲೇ ನಾಳೆಯ ನೆಮ್ಮದಿಯ ಪರ ಮತ ಚಲಾಯಿಸಲು ಯೋಚಿಸಿದ್ದ. ಹಾಗಾಗಿ, ಒಂದು ಪ್ರಬಲ ಒಳಪ್ರವಾಹ(ಅಂಡರ್ ಕರೆಂಟ್) ಈ ಚುನಾವಣೆಯಲ್ಲಿ ಪ್ರಬಲವಾಗಿ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
ಹಾಗಾಗಿ ಇದೀಗ ಮುಖ್ಯವಾಹಿನಿ ಮಾಧ್ಯಮಗಳದ ರಾತ್ರಿ ಎಂಟರ ಪ್ಯಾನಲ್ ಚರ್ಚೆಗಳಲ್ಲಿ ಬಿಜೆಪಿ ಪರ ಘೋಳಿಡುತ್ತಿದ್ದ ಆ್ಯಂಕರುಗಳ ಧ್ವನಿ ಕೂಡ ಉಡುಗಿಹೋಗಿದೆ. ಜೊತೆಗೆ ಬಿಜೆಪಿಯ ಪಾಳೆಯದಲ್ಲಿಯೇ ‘ಜೋಶ್’ ಕಾಣೆಯಾಗಿದೆ. ಅದರಲ್ಲೂ ಅಮಿತ್ ಶಾ ಮತ್ತು ಮೋದಿಯವರ ಪ್ರಚಾರ ಭಾಷಣದಲ್ಲಿ ಕೂಡ ಜೋಶ್ ಮರೆಯಾಗಿದ್ದು, ಮಾತುಗಳು ನಿಧಾನವಾಗಿ ದೇಶದ ಸುರಕ್ಷತೆ, ಬಲಿಷ್ಠ ಭಾರತ, ಪಾಕಿಸ್ತಾನದ ಮೇಲಿನ ದಾಳಿಗಳ ಬದಲಾಗಿ, ಜಾತಿ, ಮತ, ಪಂಥಗಳ ಕಡೆ ವಾಲತೊಡಗಿವೆ. ಐದು ವರ್ಷದಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗಿಲ್ಲ. ಇನ್ನೊಂದು ಅವಕಾಶ ಕೊಡಿ, ಬದಲಾವಣೆಯನ್ನು ತೋರಿಸುತ್ತೇವೆ ಎಂಬ ಹೊಸ ರಾಗ ಶುರುವಾಗಿದೆ.
ಯಡಿಯೂರಪ್ಪ ಯುಗಾಂತ್ಯ?
ಈ ನಡುವೆ, ಕರ್ನಾಟಕದ ವಿಷಯದಲ್ಲಿಯೂ ಬಿಜೆಪಿಯ ಲಾಭನಷ್ಟದ ಲೆಕ್ಕಾಚಾರಗಳು ಪಕ್ಷದ ರಾಜ್ಯ ನಾಯಕರ ಮುಖದಲ್ಲಿ ಗಂಟುಗಳನ್ನು ಬಿಗಿಗೊಳಿಸಿವೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ನಾಯಕರ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದ ಶಿವಮೊಗ್ಗ, ಬೆಂಗಳೂರು ದಕ್ಷಿಣ, ಮೈಸೂರು, ಮಂಗಳೂರು, ಉತ್ತರಕನ್ನಡ, ಕಲಬುರಗಿ ಮುಂತಾದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ 50:50 ಎಂಬ ಚುಣಾವಣೋತ್ತರ ಸಮೀಕ್ಷೆಗಳು ಮತ್ತು ಗುಪ್ತಚರ ವಿಭಾಗದ ವರದಿಗಳ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ದಂಗುಬಡಿದಿದ್ದಾರೆ.
ಅದೇ ಹಿನ್ನೆಲೆಯಲ್ಲಿ; ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳು ಹೆಚ್ಚಿದ್ದ ರಾಜ್ಯದ ಎರಡನೇ ಹಂತದ ಮತದಾನದ ಮರುದಿನ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಭಾರೀ ಚರ್ಚೆ ನಡೆದಿದ್ದು, ಪಕ್ಷದ ನಿರೀಕ್ಷೆಯಂತೆ ರಾಜ್ಯದಲ್ಲಿ ಒಟ್ಟಾರೆ 22 ಸ್ಥಾನ ಪಡೆಯುವ ಬದಲಾಗಿ, ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಕಾರಣದಿಂದಾಗಿ ತಮ್ಮ ಭದ್ರಕೋಟೆಗಳೇ ಛಿದ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸ್ವತಃ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಸೋಲುವ ಭೀತಿ ಇದೆ. ಹಾಗೇ ದಾವಣಗೆರೆ, ಹಾವೇರಿಯಲ್ಲೂ ಪಕ್ಷದ ಸತತ ಜಯಶಾಲಿ ಅಭ್ಯರ್ಥಿಗಳೇ ನೀರು ಕುಡಿಯುವ ಸಾಧ್ಯತೆ ಇದೆ. ಜೊತೆಗೆ ಮಂಗಳೂರು, ಮೈಸೂರು ಮತ್ತು ಉತ್ತರಕನ್ನಡದ ಪಕ್ಷದ ಫೈರ್ ಬ್ರಾಂಡ್ ನಾಯಕರು ಈ ಬಾರಿ ಏದುಸಿರು ಬಿಟ್ಟಿದ್ದು, ಆ ಮೂವರೂ ಸೋಲು ಕಂಡರೂ ಅಚ್ಚರಿ ಇಲ್ಲ ಎಂಬ ವರದಿಗಳಿವೆ. ಹಾಗಾಗಿ, ಒಟ್ಟಾರೆ ಸ್ಥಾನ ಗಳಿಕೆಯಲ್ಲಿ ಬಿಜೆಪಿ 10-12 ಸ್ಥಾನಗಳಿಗೆ ಕುಸಿದು, ಮೈತ್ರಿಕೂಟ 16-18 ಸ್ಥಾನಗಳನ್ನು ಬಾಚಿಕೊಂಡರೂ ಅಚ್ಚರಿಯಿಲ್ಲ ಎಂಬ ಬಗ್ಗೆ ಪಕ್ಷದ ವಲಯದಲ್ಲೇ ಚರ್ಚೆಗಳು ಆರಂಭವಾಗಿವೆ. ಪರಿಣಾಮವಾಗಿ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರ ಆರ್ಭಟಗಳು ಹೊರಗಷ್ಟೇ ಅಲ್ಲ; ಸಾಮಾಜಿಕ ಜಾಲತಾಣಗಳಲ್ಲೂ ಸದ್ದಡಗಿವೆ. ಮೈ ಭೀ ಚೌಕಿದಾರ್ ಎಂದು ಹಣೆಪಟ್ಟಿ ಹಚ್ಚಿಕೊಂಡವರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ಎಸ್ ಯಡಿಯೂರಪ್ಪ ಅವರ ಅವಧಿ ಮೇ ಎರಡನೇ ವಾರದ ಹೊತ್ತಿಗೆ ಮುಕ್ತಾಯವಾಗಲಿದ್ದು, ಬಳಿಕ ಒಂದೇ ವಾರದಲ್ಲಿ ಮೇ 23ರಂದು ಲೋಕಸಭಾ ಫಲಿತಾಂಶ ಹೊರಬೀಳಲಿದೆ. ಹಾಗಾಗಿ, ಯಡಿಯೂರಪ್ಪ ಮತ್ತೆ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಅಷ್ಟೇ ಅಲ್ಲದೆ, ಅವರ ಆಪ್ತರು ಕೂಡ ಅಧ್ಯಕ್ಷ ಗಾದಿಗೇರುವ ಸಾಧ್ಯತೆಯನ್ನು ಈ ಫಲಿತಾಂಶ ತಳ್ಳಿಹಾಕಲಿದೆ ಎಂಬ ಮಾತುಗಳಿವೆ.
ಯಡಿಯೂರಪ್ಪ ಹೇಳಿದಂತೆ 22 ಸ್ಥಾನಗಳಿಸುವುದು ಇರಲಿ, ಹಾಲಿ ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಹಾಗಾಗಿ ತಮಗೆ ಅಧ್ಯಕ್ಷ ಪಟ್ಟ ಕೈಜಾರುವುದಷ್ಟೇ ಅಲ್ಲದೆ, ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆ ಅಥವಾ ಇನ್ನಾವುದೇ ನಾಯಕರಿಗೆ ಪಟ್ಟ ಕಟ್ಟುವ ಅವಕಾಶ ಕೂಡ ಕೈತಪ್ಪಲಿದೆ ಎಂಬ ಹಿನ್ನೆಲೆಯಲ್ಲಿ ಎರಡನೇ ಹಂತದ ಮತದಾನದ ಶೇಕಡವಾರು ಅಂಕಿಅಂಶಗಳು ಹೊರಬಿದ್ದ ಕ್ಷಣದಿಂದ ಯಡಿಯೂರಪ್ಪ ದಿಗ್ಭ್ರಾಂತರಾಗಿದ್ದು, ಬಹುತೇಕ ಮೌನಕ್ಕೆ ಜಾರಿದ್ದಾರೆ ಎಂಬುದು ಅವರ ಆಪ್ತ ವಲಯದಲ್ಲೇ ಕೇಳಿಬರುತ್ತಿರುವ ಮಾತು!
ಆ ಹಿನ್ನೆಲೆಯಲ್ಲಿ ಬಿಜೆಪಿಯ ಸಾರಥ್ಯ ವಹಿಸಲು ಈಗಾಗಲೇ ಪಕ್ಷದಲ್ಲಿ ಪೈಪೋಟಿ ತೀವ್ರಗೊಂಡಿದ್ದು, ಎಲ್ ಸಂತೋಷ್, ಆರ್ ಅಶೋಕ್, ಸಿ ಟಿ ರವಿ, ಜಗದೀಶ್ ಶೆಟ್ಟರ್ ಮತ್ತು ಕೆ ಎಸ್ ಈಶ್ವರಪ್ಪ ಈಗಾಗಲೇ ಲಾಬಿ ಶುರುಮಾಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ, ಮುಂದಿನ ರಾಜ್ಯಾಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗುವ ಮುನ್ನವೇ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಯುಗ ಅಂತ್ಯವಾಗುವ ಲಕ್ಷಣಗಳು ನಿಚ್ಛಳವಾಗಿವೆ.