ಮಂಗಳೂರು: ನಾಗಾರಾಧನೆಗೆ ಪ್ರಸಿದ್ಧಿಯಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 80 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಚಿನ್ನದ ರಥ ಮಾಡಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಮುಜರಾಯಿ ಇಲಾಖೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ 15 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ತಯಾರಿ ನಡೆದಿದ್ದು ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ಆದರೆ ದರ ನಿಗದಿ ಸಂದರ್ಭದಲ್ಲಿ ಉಂಟಾಗಿದ್ದ ತಾಂತ್ರಿಕ ಕಾರಣಗಳಿಂದ ಕೆಲಸ ನೆರವೇರಿರಲಿಲ್ಲ. ಈಗ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕುಕ್ಕೆ ಕ್ಷೇತ್ರಕ್ಕೆ ಚಿನ್ನದ ರಥ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕುಕ್ಕೆ ಕ್ಷೇತ್ರಕ್ಕೆ ಚಿನ್ನದ ರಥ ನಿರ್ಮಿಸುವುದಾಗಿ 15 ವರ್ಷಗಳ ಹಿಂದೆ ಕಾಂಗ್ರೆಸ್- ಜೆ ಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಧರ್ಮಸಿಂಗ್ ಹರಕೆ ಮಾಡಿಕೊಂಡಿದ್ದು ಇದನ್ನು ಈಡೇರಿಸದೇ ಇರುವುದು ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಗೆ ಕುತ್ತು ತರಲಿದೆ ಎಂದು ಜ್ಯೋತಿಷಿ ಅವರು ಕುಮಾರಸ್ವಾಮಿ ಅವರಿಗೆ ಹೇಳಿರುವುದೇ ಸರ್ಕಾರದ ಈಗಿನ ನಡೆಗೆ ಕಾರಣ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳಿಗೂ ತಿಳಿಸಿರುವ ದ್ವಾರಕಾನಾಥ್ ಅವರು, “2004ರಲ್ಲಿ ಧರ್ಮಸಿಂಗ್ ಅವರು ಸುಬ್ರಹ್ಮಣ್ಯನಿಗೆ ಬಂಗಾರದ ತೇರನ್ನು ಮಾಡಿಸಿಕೊಡುವುದಾಗಿ ಹರಕೆ ಇಟ್ಟುಕೊಂಡಿದ್ದರು. ಆದರೆ ಅಧಿಕಾರಿಗಳ ಅಸಹಕಾರದಿಂದಾಗಿ ಈ ಹರಕೆ ನೆರವೇರಲಿಲ್ಲ. ನಂತರದ ಯಾವ ಸರ್ಕಾರ ಸಹ ಬಗ್ಗೆ ಗಮಹರಿಸಲಿಲ್ಲ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೇರನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ,’’ ಎಂದು ತಿಳಿಸಿದ್ದಾರೆ.
ಸರ್ಕಾರದ ನಡೆಯ ಬಗ್ಗೆ ಟೀಕೆ
ಕುಕ್ಕೆ ಸುಬ್ರಮಣ್ಯನಿಗೆ ಚಿನ್ನದ ತೇರನ್ನು ನಿರ್ಮಿಸಿ ಕೊಡುವ ಕುಮಾರಸ್ವಾಮಿ ಸರ್ಕಾರದ ನಡೆ ಸಾರ್ವಜನಿಕರಿಂದ ಟೀಕೆಗೊಳಗಾಗಿದೆ.
ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ಜ್ಯೋತಿಷ್ಯ ನಂಬಿಕೆಯನ್ನು ಸರ್ಕಾರದ ಮೂಲಕ, ಸಾರ್ವಜನಿಕರ ತೆರಿಗೆ ಹಣದಲ್ಲಿ ಈಡೇರಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ ಎಂಬ ಅಭಿಪ್ರಾಯ ಫೇಸ್ಬುಕ್ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಬೊಕ್ಕಸದ ಹಣವನ್ನು ಮನಬಂದಂತೆ ಖರ್ಚು ಮಾಡಲು ಕುಮಾರ ಸ್ವಾಮಿ ರಾಜಶಾಹಿ ಪ್ರತಿನಿಧಿಯಲ್ಲ, ಭಕ್ತಿ ಇದ್ದರೆ ತಮ್ಮ ಸ್ವಂತ ಹಣದಲ್ಲಿ ಚಿನ್ನದ ರಥ ಮಾಡಿಸಿ ಕೊಡಲಿ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.

ಮುಜರಾಯಿ ಇಲಾಖೆಯ ಅಡಿ ಬರುವ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವುದು, ಸೂಕ್ತ ಏರ್ಪಾಡುಗಳನ್ನು ಮಾಡಿಕೊಡುವುದು ಮುಜರಾಯಿ ಇಲಾಖೆಯ ಕರ್ತವ್ಯವೇ ಹೊರತು ರಾಜಕಾರಣಿಗಳ ಆಸ್ಥಾನ ಜ್ಯೋತಿಷಿಯಂತೆ ವರ್ತಿಸುವ ವ್ಯಕ್ತಿಯೊಬ್ಬನ ಮಾತು ಕೇಳಿ ಚಿನ್ನದ ರಥದಂತಹ ಸೌಕರ್ಯ ನಿರ್ಮಿವುದು ಸಂವಿಧಾನ ವಿರೋಧಿ. ನಾಳೆ ಇನ್ನೊಬ್ಬ ಜ್ಯೋತಿಷಿ ಹೇಳಿದ ಎಂದು ರಾಜ್ಯದ ಎಲ್ಲಾ ದೇವರುಗಳಿಗೆ ಚಿನ್ನದ ರಥಗಳನ್ನು ಮಾಡಿಸುತ್ತಾ ಕುಳಿತರೆ ಸರ್ಕಾರಗಳು ಎಲ್ಲಿಗೆ ತಲುಪಬಹುದು ಎಂದೂ ಜನ ಕೇಳುತ್ತಿದ್ದಾರೆ.

ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳು, ಕೃಷಿ, ರೈತರ ಆತ್ಮಹತ್ಯೆಗಳಂಥ ಜ್ವಲಂತ ಸಮಸ್ಯೆಗಳತ್ತ ಗಮನಹರಿಸದೇ ಚಿನ್ನದ ತೇರನ್ನು ನೀಡುವಲ್ಲಿ ಕುಮಾರಸ್ವಾಮಿ ಅವರಿಗಿರುವ ಸ್ವಹಿತಾಸಕ್ತಿ ನೋಡಿ ಆಕ್ರೋಶ ವ್ಯಕ್ತವಾಗಿದೆ. ರೈತರ ಸಾಲ ತೀರಿಸಲು ಸರ್ಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿಲ್ಲಎಂದು ಸರ್ಕಾರಿ ಉದ್ಯೋಗಿಗಳ ಒಂದು ದಿನದ ವೇತನ ಪಡೆದ ಸಿಎಂಗೆ 80 ಕೋಟಿ ವೆಚ್ಚದಲ್ಲಿ ಚಿನ್ನದ ತೇರನ್ನು ಕೊಡಲು ಹಣವೆಲ್ಲಿಂದ ಬರುತ್ತದೆ ಎಂದೂ ಜನತೆ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಮಂಡಿಸಿದ ಬಜೆಟ್ ನಲ್ಲಿ ಬಹುತೇಕ ಪಾಲು ಧಾರ್ಮಿಕ ಸ್ಥಳ, ಮಠಗಳಿಗೆ ಮೀಸಲಿಟ್ಟ ಬಗ್ಗೆ ಹಾಗೂ ದೇವಾಲಯಗಳಿಗೆ 110 ಕೋಟಿ ರುಪಾಯಿ ನೀಡಿರುವ ಬಗ್ಗೆ ಸಾಕಷ್ಟು ಟೀಕಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಿ ಬೊಕ್ಕಸದ 80 ಕೋಟಿಯನ್ನು ಚಿನ್ನದ ತೇರಿಗೆ ನೀಡಲು ಹೊರಟಿರುವುದು ಪ್ರಶ್ನೆ ಹುಟ್ಟಿಸಿದೆ.
More Articles
By the same author
Related Articles
From the same category
2 Comments
Baragala bandu jana thatharisiddare male ILLA thuuuuu nim mudanambikege
It is foolishness to spend such a huge amount for this purpose.It is better to spend this amount for welfare activities of Karnataka citizens.