ಚೌಕಿದಾರ್ ನರೇಂದ್ರ ಮೋದಿ ಆಡಳಿತದಲ್ಲಿ ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೊಕ್ಸಿ ಇತ್ಯಾದಿ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸಂಖ್ಯೆ ಮಾತ್ರವೇ ಹೆಚ್ಚಳವಾಗಿದೆ ಎಂದುಕೊಂಡರೆ ನಿಮ್ಮ ಲೆಕ್ಕಚಾರ ನಿಜಕ್ಕೂ ತಪ್ಪು!
ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಂಚಕರಾಗಲೀ, ಸಣ್ಣಪುಟ್ಟ ಕಳ್ಳಕಾರರಾಗಲೀ ಯಾರಿಗೂ ತಾರತಮ್ಯವಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದ ವಂಚಕರ ಸಂಖ್ಯೆ ಹೇಗೆ ಹೆಚ್ಚಾಗಿದೆಯೋ ಅದೇ ರೀತಿ ಕಳ್ಳಕಾರರ ಹಾವಳಿಯೂ ಹೆಚ್ಚಾಗಿದೆ.
36 ಮಂದಿ ವಂಚಕರು ಬ್ಯಾಂಕು ಮತ್ತು ವಿವಿಧ ಸಂಸ್ಥೆಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು ನಿಮಗೆ ಗೊತ್ತೆ ಇದೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಳ್ಳಕಾರರ ಹಾವಳಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿ ನಿಮಗೆ ಗೊತ್ತೇ?
ವಿಸ್ತೃತವಾದ ವಿವರ ಇಲ್ಲಿದೆ ನೋಡಿ!
ಭಾರತೀಯ ರೈಲ್ವೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೈಲ್ವೆಯಲ್ಲಿ ನಡೆಯುತ್ತಿರುವ ಕಳ್ಳತನಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ. 2013ರಲ್ಲಿ ನಡೆದಿದ್ದ ಕಳ್ಳತನಗಳಿಗೆ ಹೋಲಿಸಿದರೆ 2018ರಲ್ಲಿ ನಡೆದಿರುವ ಕಳ್ಳತನಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ.
2018ರಲ್ಲಿ ಭಾರತೀಯ ರೈಲುಗಳಲ್ಲಿ, ರೈಲ್ವೆ ನಿಲ್ದಾಣಗಲ್ಲಿ ದಿನಕ್ಕೆ ಸರಾಸರಿ 100 ಕಳ್ಳತನಗಳಂತೆ ಒಟ್ಟು 36584 ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಮೋದಿ ಅಧಿಕಾರಕ್ಕೆ ಬರುವ ಮುನ್ನ ಅಂದರೆ, 2013ರಲ್ಲಿ ಭಾರತೀಯ ರೈಲ್ವೆಯಲ್ಲಿ 12,261 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅಂದರೆ, ದಿನಕ್ಕೆ 33 ಕಳ್ಳತನಗಳು ನಡೆಯುತ್ತಿದ್ದವು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಕಳ್ಳತನ ಪ್ರಕರಣಗಳು ತ್ವರಿತವಾಗಿ ಹೆಚ್ಚಿದ್ದು 2018ರಲ್ಲಿ ಭಾರತೀಯ ರೈಲ್ವೆಯಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳ ಸಂಖ್ಯೆ 36,584 ಅಂದರೆ, ನಿತ್ಯವೂ 100ಕ್ಕಿಂತಲೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಸುದ್ದಿ ಸಂಸ್ಥೆ ಪಿಟಿಐ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಅಂಕಿ ಅಂಶಗಳ ಪ್ರಕಾರ 2009-2018ರ ನಡುವೆ ಒಟ್ಟು 1.71 ಲಕ್ಷ ಕಳ್ಳತನ ಪ್ರಕರಣಗಳು ನಡೆದಿವೆ. ಈ ಪೈಕಿ ಮನಮೋಹನ್ ಸಿಂಗ್ ಅವರ ಆಡಳಿತ ಅವಧಿಯಲ್ಲಿ ಅಂದರೆ 2009ರಿಂದ 2013ರವರೆಗೆ 45,765 ಕಳ್ಳತನ ಪ್ರಕರಣಗಳು ನಡೆದಿವೆ. ಆದರೆ, ನರೇಂದ್ರ ಮೋದಿ ಅವಧಿಯಲ್ಲಿ 1,25,250 ಕಳ್ಳತನ ಪ್ರಕರಣಗಳು ನಡೆದಿವೆ. ಅಂದರೆ, ಮನಮೋಹನ್ ಸಿಂಗ್ ಅವರ ಅವಧಿಗೆ ಹೋಲಿಸಿದರೆ ನರೇಂದ್ರಮೋದಿ ಅವರ ಅವಧಿಯಲ್ಲಿ ಕಳ್ಳತನಗಳ ಪ್ರಮಾಣ ಹೆಚ್ಚು ಕಮ್ಮಿ ಮೂರು ಪಟ್ಟು ಹೆಚ್ಚಳವಾಗಿದೆ.
ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ರೈಲ್ವೆಯಲ್ಲಿ ನಡೆದ ಕಳ್ಳತನ ಪ್ರಕರಣಗಳ ಸಂಖ್ಯೆ ಮೋದಿ ಆಡಳಿತಕ್ಕೆ ಹೋಲಿಸಿದರೆ ತೀರಾ ಅತ್ಯಲ್ಪ. 2009 ರಲ್ಲಿ 7010 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದರೆ ದಿನಕ್ಕೆ ಸರಾಸರಿ 19 ಕಳ್ಳತನ ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ದಿನ ನಿತ್ಯ 100 ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಗಮನಿಸಿದರೆ ಐದು ಪಟ್ಟು ಕಳ್ಳತನ ಪ್ರಕರಣಗಳು ಹೆಚ್ಚಾದಂತಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 2009ರಲ್ಲಿ 7010 ಕಳ್ಳತನ ಪ್ರಕರಣಗಳಿಂದ 2013ರವೇಳೆಗೆ 12261 ಕಳ್ಳತನ ಪ್ರಕರಣಗಳಿಗೆ ಏರಿದ್ದರೆ, ಮೋದಿ ಅವಧಿಯಲ್ಲಿ 2014ರಲ್ಲಿ 14,301 ರಿಂದ 2018ರವೇಳೆಗೆ 36584ಕ್ಕೆ ಏರಿದೆ.
ಮನಮೋಹನ್ ಸಿಂಗ್ ಅವಧಿ ನರೇಂದ್ರ ಮೋದಿ ಅವಧಿ (ಕಂಸದಲ್ಲಿರುವುದು ಸರಾಸರಿ ನಿತ್ಯದ ಕಳ್ಳತನ)
2009- 7010 (19) 2014- 14301 (39)
2010- 7549 (20) 2015-19215 (52)
2011- 9653 (26) 2016- 22106 (60)
2012- 9292 (25) 2017- 33044 (90)
2013- 12261(33) 2018- 36584 (100)