ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ಲೈಂಗಿಕ ಕಿರುಕುಳ ಹಾಗೂ ನ್ಯಾಯಾಲಯದ ತೀರ್ಪುಗಳನ್ನು ಪ್ರಭಾವಿ ಉದ್ಯಮಿ ಅನಿಲ್ ಅಂಬಾನಿ ಪರ ತಿರುಚುತ್ತಿದ್ದ ಪ್ರಕರಣಗಳು ಹೊಸ ತಿರುವು ಪಡೆದುಕೊಂಡಿದ್ದು, ಬಂಧಿತ ಇಬ್ಬರಷ್ಟೇ ಅಲ್ಲದೆ, ಇನ್ನು ಹಲವು ಸುಪ್ರೀಂಕೋರ್ಟ್ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಅದೊಂದು ಬೃಹತ್ ಜಾಲವಾಗಿದೆ ಎಂದು ದೆಹಲಿ ಕ್ರೈಂಬ್ರಾಂಚ್ ಪೊಲೀಸರು ಹೇಳಿದ್ದಾರೆ.
ಅಂಬಾನಿ ಪರ ನ್ಯಾಯಾಲಯದ ಸೂಚನೆ, ತೀರ್ಪುಗಳನ್ನು ತಿರುಚುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಸುಪ್ರೀಂಕೋರ್ಟಿನ ಇಬ್ಬರು ಸಿಬ್ಬಂದಿಯ ನ್ಯಾಯಾಂಗ ಬಂಧನ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಆ ಇಬ್ಬರು ಆರೋಪಿಗಳಷ್ಟೇ ಅಲ್ಲದೆ, ಸುಪ್ರೀಂಕೋರ್ಟಿನ ರಿಜಿಸ್ಟ್ರಿ ಕಚೇರಿಯ ಸೆಕ್ಷನ್ -10ರ ವಿಭಾಗದ ಇತರ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಯೂ ಪ್ರಕರಣದಲ್ಲಿ ಭಾಗಿಯಾಗಿದ್ದು, ‘ಅದೇ ವ್ಯಕ್ತಿ’ಗೆ ಅನುಕೂಲಕರವಾಗಿ ನ್ಯಾಯಾಲಯದ ಸೂಚನೆ, ಆದೇಶ, ತೀರ್ಪುಗಳನ್ನು ತಿದ್ದಿದ್ದಾರೆ. ಇದೊಂದು ಬೃಹತ್ ಜಾಲ ಎಂದು ಪೊಲೀಸರು ತಮ್ಮ ವರದಿಯಲ್ಲಿ ಹೇಳಿರುವುದಾಗಿ ‘ದ ವೈರ್’ ಜಾಲತಾಣ ವರದಿ ಹೇಳಿದೆ.
ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಸುಪ್ರೀಂಕೋರ್ಟಿನ ಸಿಬ್ಬಂದಿಯಾದ ಮಾಜಿ ಕೋರ್ಟ್ ಮಾಸ್ಟರ್ ಮಾನವ್ ಶರ್ಮಾ ಹಾಗೂ ಮಾಜಿ ಸಹಾಯಕ ರಿಜಿಸ್ಟ್ರಾರ್ ತಪನ್ ಚಕ್ರವರ್ತಿ ಅವರ ವಿಚಾರಣೆ ವೇಳೆ, ಈ ಜಾಲದ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಅವರಿಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರು ಕೋರಿದ್ದರು.
ನ್ಯಾಯಾಲಯದ ಕಾರ್ಯವಿಧಾನ ಮತ್ತು ಅದರಲ್ಲಿನ ದೋಷಗಳನ್ನು ಚೆನ್ನಾಗಿ ಮನಗಂಡಿದ್ದ ಈ ಇಬ್ಬರು ಅನುಭವಿ ಸಿಬ್ಬಂದಿ, ಇತರ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ತೀರ್ಪು, ಸೂಚನೆ ಮತ್ತು ಆದೇಶಗಳ ಕುರಿತ ದಾಖಲೆ ಅಪ್ ಲೋಡ್ ಮಾಡುವಾಗ ಕೈಚಳಕ ತೋರುತ್ತಿದ್ದರು. ಆ ಮೂಲಕ ಉದ್ಯಮಿ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಪ್ರಮುಖವಾಗಿ ಸೋನಿ ಎರಿಕ್ಸನ್ ಕಂಪನಿಗೆ ಬಾಕಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆಗಳನ್ನು ಅಪ್ ಲೋಡ್ ಮಾಡುವಾಗ ಈ ಕೃತ್ಯ ನಡೆಸಿರುವುದನ್ನು ಆರೋಪಿಗಳೇ ತಮ್ಮ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ನ್ಯಾಯಾಧೀಶರ ಹೇಳಿಕೆಯನ್ನು ಶೀಘ್ರಲಿಪಿಯಿಂದ ಸಾಮಾನ್ಯ ಬರಹಕ್ಕೆ ಪರಿವರ್ತಿಸುವ ಹಂತದಲ್ಲೇ ಅವರು ತಿರುಚುತ್ತಿದ್ದರು ಎಂದು ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅನಿಲ್ ಅಂಬಾನಿ ಪರ ನ್ಯಾಯಾಲಯದ ಸೂಚನೆಯನ್ನು ತಿರುಚಿದ ವಿಷಯ ತಿಳಿದ ಬಳಿಕ ಕಳೆದ ಜನವರಿಯಲ್ಲಿ ಆ ಇಬ್ಬರೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಅವರ ವಿರುದ್ಧ ವಂಚನೆ, ಫೋರ್ಜರಿ ಮತ್ತು ಅಪರಾಧ ಸಂಚು ಪ್ರಕರಣ ದಾಖಲಿಸಲಾಗಿತ್ತು.
ಈ ನಡುವೆ, ಕಳೆದ ವಾರ ಭಾರೀ ಸುದ್ದಿ ಮಾಡಿದ ಸುಪ್ರೀಂಕೋರ್ಟ್ ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲೂ ಈ ಇಬ್ಬರು ಸುಪ್ರೀಂಕೋರ್ಟ್ ಸಿಬ್ಬಂದಿಯ ಕೈವಾಡ ಇದೆ ಎಂದು ವಕೀಲ ಉತ್ಸವ್ ಬೇನ್ಸ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂಕೋರ್ಟ್ ಮಾಜಿ ಉದ್ಯೋಗಿ ಮಹಿಳೆಯೊಬ್ಬರು ಮಾಡಿದ ಲೈಂಗಿಕ ಕಿರುಕುಳ ಆರೋಪದ ಹಿಂದೆ ಸಿಜೆಐ ರಂಜನ್ ಗೋಗಾಯ್ ಅವರನ್ನು ಆ ಹುದ್ದೆಯಿಂದ ಕೆಳಗಿಸುವ ದೊಡ್ಡ ಹುನ್ನಾರ ಇದೆ. ಆ ಸಂಚಿನಲ್ಲಿ ದೇಶದ ಕೆಲವು ಉದ್ಯಮಿಗಳು, ಕೆಲವು ಅತೃಪ್ತ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ಬೇನ್ಸ್ ತಮ್ಮ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆ ಪ್ರಮಾಣ ಪತ್ರದಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ, ಜೆಟ್ ಏರ್ ವೇಸ್ ಮಾಲೀಕ ನರೇಶ್ ಗೋಯಲ್ ಮತ್ತು ಮಧ್ಯವರ್ತಿ(ಫಿಕ್ಸರ್) ರೊಮೇಶ್ ಗೋಯಲ್ ಅವರನ್ನು ಹೆಸರಿಸಿದ್ದು, ಅವರೊಂದಿಗೆ ಮೂವರು ಕೋರ್ಟ್ ಸಿಬ್ಬಂದಿಯನ್ನೂ ಹೆಸರಿಸಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಹೊರ ಬಿದ್ದ ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ದೇಶದ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನೇ ಅನುಮಾನಿಸುವಂತೆ ಮಾಡಿದ ಬೆನ್ನಲ್ಲೇ ಸ್ವತಃ ಸಿಜೆಐ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠ ಆ ಆರೋಪಗಳ ಕುರಿತ ಸಮಾಲೋಚನೆ ನಡೆಸಿತ್ತು. ಬಳಿಕ ನ್ಯಾ. ಎಸ್ ಎ ಬೋಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠಕ್ಕೆ ಪ್ರಕರಣದ ಕುರಿತು ಆಂತರಿಕ ವಿಚಾರಣೆ ಹೊಣೆ ವಹಿಸಲಾಗಿತ್ತು. ಆ ನಡುವೆ, ವಕೀಲ ಬೇನ್ ಕೂಡ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ, ಆ ಬಗ್ಗೆ ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಾಧೀಶ ಎ ಕೆ ಪಟ್ನಾಯಕ್ ನೇತೃತ್ವದ ಏಕವ್ಯಕ್ತಿ ನ್ಯಾಯಾಂಗ ತನಿಖೆ ಸಮಿತಿ ರಚಿಸಲಾಗಿದೆ.
ಇಡೀ ಪ್ರಕರಣದಲ್ಲಿ ಸ್ವತಃ ಸಿಜೆಐ ಅವರು ತಮ್ಮ ಮೇಲಿನ ಆರೋಪದ ಕುರಿತು ಯಾರು ವಿಚಾರಣೆ ನಡೆಸಬೇಕು ಎಂಬುದನ್ನು ತಾವೇ ನಿರ್ಧರಿಸಿ ನ್ಯಾಯಪೀಠ ರಚಿಸಿದ್ದು ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಂದ ದೂರ ಸರಿಯದೇ ಮುಂದುವರಿದಿರುದು ಕೂಡ ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ವಲಯದ ಆಕ್ಷೇಪಕ್ಕೆ ಕಾರಣವಾಗಿತ್ತು. ಈ ನಡುವೆ, ಆರೋಪದಕ್ಕೆ ಕಾರ್ಪೊರೇಟ್ ಸಂಚಿನ ಆಯಾಮ ಬರುತ್ತಲೇ ಆಕ್ಷೇಪಗಳು ತಣ್ಣಗಾಗಿದ್ದವು. ಆದರೆ, ಸ್ವತಃ ಸಂಚಿನ ಆರೋಪ ಮಾಡಿರುವ ವಕೀಲ ಬೇನ್ ಕುರಿತೂ ಇದೀಗ ಹಲವು ಅನುಮಾನಗಳು ಎದ್ದಿದ್ದು, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವರು ವಕೀಲರ ಉದ್ದೇಶ ಮತ್ತು ಪ್ರಾಮಾಣಿಕತೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ದೆಹಲಿ ಪೊಲೀಸರು ಕಾರ್ಪೊರೇಟ್ ಉದ್ಯಮಿ ಹಾಗೂ ಪ್ರಧಾನಿ ಮೋದಿ ಅವರ ಆಪ್ತ ಅನಿಲ್ ಅಂಬಾನಿ ಅವರಿಗೆ ಅನುಕೂಲಕರವಾಗಿ ನ್ಯಾಯಾಲಯದ ತೀರ್ಪುಗಳನ್ನೇ ತಿರುಚುತ್ತಿದ್ದ ಆರೋಪದ ಮೇಲೆ ಬಂಧಿತ ಇಬ್ಬರು ಸೇರಿದಂತೆ ಸುಪ್ರೀಂಕೋರ್ಟಿನ ಒಳಗೇ ಇರುವ ಒಂದು ವ್ಯವಸ್ಥಿತ ಜಾಲದ ಕೈವಾಡ ಈ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲೂ ಇದೆ ಎಂದು ಹೇಳಿದ್ದಾರೆ. ಹಾಗಾಗಿ, ಇದೀಗ ಇಡೀ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.