ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ 2019ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಟೆಂಪೋ ಚಾಲಕನ ಪುತ್ರಿ ನಾಗಾಂಜಲಿ ಪರಮೇಶ್ವರ ನಾಯಕ್ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇವರೊಂದಿಗೆ ಬೆಂಗಳೂರಿನ ಆನೇಕಲ್ ಸೃಜನಾ ಡಿ ಸಹ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ತೃತೀಯ, ಉತ್ತರ ಕನ್ನಡ ನಾಲ್ಕನೇ ಸ್ಥಾನ ಹಾಗೂ ಉಡುಪಿ 5ನೇ ಸ್ಥಾನ ಪಡೆದು ಮುಂಚೂಣಿಯಲ್ಲಿದ್ದರೆ, ಯಾದಗಿರಿ ಕೊನೆ ಸ್ಥಾನ ಪಡೆದಿದೆ.
ಈ ಬಾರಿ ರಾಜ್ಯಕ್ಕೆ ಶೇಕಡಾ 73.70ರಷ್ಟು ಫಲಿತಾಂಶ ಲಭಿಸಿದ್ದು, ಕಳೆದ ಬಾರಿಗಿಂತ ಈ ಸಾಲಿನಲ್ಲಿ 7.7ರಷ್ಟು ಫಲಿತಾಂಶ ವೃದ್ಧಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಟ್ಟು 8 ಲಕ್ಷದ 41 ಸಾವಿರದ 666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 8 ಲಕ್ಷದ 25 ಸಾವಿರದ 468 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 79.5 ರಷ್ಟು ಹೆಣ್ಣು ಮಕ್ಕಳು, ಶೇ. 68.46ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಶಾಲಾವಾರು ಫಲಿತಾಂಶದಲ್ಲಿ ಸರ್ಕಾರಿ ಶಾಲೆ ಶೇ. 77.84, ಅನುದಾನಿತ ಶಾಲೆ ಶೇ. 77.21, ಅನುದಾನ ರಹಿತ ಶಾಲೆ ರಹಿತ ಶೇ. 82.72 ರಷ್ಟು ಫಲಿತಾಂಶ ಲಭಿಸಿದೆ.
ನಗರ ಪ್ರದೇಶದ ವಿದ್ಯಾರ್ಥಿಗಳು ಶೇಕಡಾ 70.05ರಷ್ಟು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು 76.67ರಷ್ಟು ಉತ್ತೀರ್ಣರಾಗಿದ್ದು ಮೈಲುಗೈ ಸಾಧಿಸಿದ್ದಾರೆ.
46 ಖಾಸಗಿ ಶಾಲೆಗಳು, 32 ಅನುದಾನ ರಹಿತ ಶಾಲೆಗಳು ಹಾಗೂ 9 ಅನುದಾನಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದೆ. ಯಾವುದೇ ಸರ್ಕಾರಿ ಶಾಲೆಗಳು ಶೂನ್ಯ ಫಲಿತಾಂಶ ಪಡೆಯದೇ ಇರುವುದು ಗಮನಾರ್ಹ ವಿಷಯವಾಗಿದೆ.
ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಗಳಿಸಿದ್ದರೆ, 11 ವಿದ್ಯಾರ್ಥಿಗಳು 624, 19 ವಿದ್ಯಾರ್ಥಿಗಳು 623, 39 ವಿದ್ಯಾರ್ಥಿಗಳು 622, 43 ವಿದ್ಯಾರ್ಥಿಗಳು 621 ಹಾಗೂ 56 ವಿದ್ಯಾರ್ಥಿಗಳು 620 ಅಂಕಗಳನ್ನು ಗಳಿಸಿದ್ದಾರೆ
ವಿದ್ಯಾರ್ಥಿಗಳು www.karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.