ನವದೆಹಲಿ: ಮಲೇಗಾಂವ್ ಸ್ಫೋಟದ ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಗ್ಯಾ ಠಾಕೂರ್ ಗೆ 72 ಗಂಟೆಗಳ (ಮೂರು ದಿನ) ಕಾಲ ಚುನಾವಣಾ ಪ್ರಚಾರ ನಿಷೇಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಸಾಧ್ವಿ ಪ್ರಗ್ಯಾ ಠಾಕೂರ್ ಇತ್ತೀಚೆಗೆ ಬಾಬ್ರಿ ಮಸೀದಿ ಧ್ವಂಸದ ಕುರಿತು ನೀಡಿದ್ದ ಹೇಳಿಕೆ ಸಂಬಂಧ ಆಯೋಗ ಈ ಆದೇಶ ಹೊರಡಿಸಿದ್ದು ಗುರುವಾರ (ನಾಳೆ) ಬೆಳಿಗ್ಗೆ 6 ಗಂಟೆಯಿಂದ ಮುಂದಿನ 72 ಗಂಟೆಗಳವರೆಗೆ ಚುನಾವಣಾ ಪ್ರಚಾರಕ್ಕೆ ನಿಷೇಧ ಜಾರಿಯಲ್ಲಿರುತ್ತದೆ.
ಕೆಲ ದಿನಗಳ ಹಿಂದೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ 25 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಒಡೆಯುವಾಗ ತಾನೂ ಅದರಲ್ಲಿ ಭಾಗವಹಿಸಿದ್ದಾಗಿ ಎಂದು ಸಾಧ್ವಿ ಹೇಳಿಕೊಂಡಿದ್ದರು.
“ದೇಶದ ಒಂದು ಕಲೆಯನ್ನು ಅಳಿಸಿ ಹಾಕಿದ್ದೆವು. ಆ ಕಟ್ಟಡವನ್ನು ಧ್ವಂಸಗೊಳಿಸಲು ಹೋಗಿದ್ದೆವು. ಅದರಲ್ಲಿ ಭಾಗವಹಿಸಲು ದೇವರು ನನಗೆ ಅವಕಾಶ ನೀಡಿದ್ದಕ್ಕಾಗಿ ತೀವ್ರ ಹೆಮ್ಮೆ ಎನಿಸುತ್ತದೆ. ಅದೇ ಜಾಗದಲ್ಲಿ ರಾಮ ಮಂದಿರ ಖಂಡಿತಾ ನಿರ್ಮಿಸುತ್ತೇವೆ” ಎಂದು ಆ ಸಂದರ್ಶನದಲ್ಲಿ ಪ್ರಗ್ಯಾ ಠಾಕೂರ್ ಹೇಳಿದ್ದರು.
ಬಿಜೆಪಿ ಅಭ್ಯರ್ಥಿಯಾಗಿ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಸಾಧ್ವಿ ಪ್ರಗ್ಯಾ ಠಾಕೂರ್ ನೀಡಿದ್ದ ಈ ಹೇಳಿಕೆಯ ಕುರಿತು ಚುನಾವಣಾ ಆಯೋಗವು ನೋಟೀಸ್ ನೀಡಿತ್ತು. ತಾನು ಆ ಹೇಳಿಕೆ ನೀಡಿದ್ದು ನಿಜ ಆದರೆ ತನ್ನ ಮಾತನ್ನು ಸಂದರ್ಭದಿಂದ ಹೊರಗಿಟ್ಟು ನೋಡಲಾಗುತ್ತಿದೆ ಎಂದು ಪ್ರಗ್ಯಾ ಉತ್ತರಿಸಿದ್ದರು.
2008ರಲ್ಲಿ ಆರು ಜನ ಅಮಾಯಕರನ್ನು ಬಲಿ ತೆಗೆದುಕೊಂಡು, ನೂರು ಜನರು ಗಾಯಗೊಂಡಿದ್ದ ಮಲೆಗಾಂವ್ ಬಾಂಬ್ ಸ್ಫೋಟದಲ್ಲಿ ಪ್ರಮುಖ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಗ್ಯಾ ಅವರ ಮೇಲೆ ಬಾಬ್ರಿ ಮಸೀದಿ ಕುರಿತ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.
26/11ರ ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ನಿಷ್ಟಾವಂತ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯನ್ನು ಭಯೋತ್ಪಾದಕರು ಕೊಂದಿದ್ದು ತನ್ನ ಶಾಪದಿಂದಲೇ ಎಂದು ಸಾಧ್ವಿ ಹೇಳಿದ್ದು ದೇಶದಾದ್ಯಂತ ತೀವ್ರ ಖಂಡನೆಗೆ ಒಳಗಾಗಿತ್ತಲ್ಲದೇ ಈ ಕುರಿತು ಸಹ ಆಯೋಗದಲ್ಲಿ ದೂರು ದಾಖಲಿಸಲಾಗಿದೆ. ಸಾಧ್ವಿಯ ಈ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಿದ್ದಂತೆ ಸಾಧ್ವಿ ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸುವ ರೀತಿಯಲ್ಲಿ ಮಾತಾಡಿದ್ದರು.
ಬಾಬ್ರಿ ಮಸೀದಿಯ ಧ್ವಂಸ ನಡೆಸಿದ ಪ್ರಕರಣದಲ್ಲಿ ಅನೇಕ ರಾಜಕೀಯ ಧುರೀಣರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ; ಅದು ಭಾರತದ ಸಹಬಾಳ್ವೆ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಿ, ದೇಶದ್ರೋಹದ ಪ್ರಕರಣವಾಗಿರುವಾಗ ತಾನು ಅದರಲ್ಲಿ ಭಾಗವಹಿಸಿದ್ದೆ ಎಂದು ಹೇಳುವುದು ಸಹ ಕ್ರಿಮಿನಲ್ ಅಪರಾಧವೇ ಆಗುತ್ತದೆ. ಸಾಧ್ವಿಯನ್ನು ಬಂಧಿಸಿ, ಜೈಲಿಗೆ ಕಳಿಸಲು ಅವರ ಈ ಹೇಳಿಕೆಯೇ ಸಾಕು. ಆದರೆ ಚುನಾವಣಾ ಆಯೋಗ ಕನಿಷ್ಟ ಪಕ್ಷ ಪ್ರಗ್ಯಾ ಠಾಕೂರ್ ಅವರ ಚುನಾವಣಾ ಉಮೇದುವಾರಿಕೆಯನ್ನಾದರೂ ರದ್ದುಪಡಿಸದೇ ಕೇವಲ 72 ಗಂಟೆಗಳ ಪ್ರಚಾರ ನಿಷೇಧ ಹೇರಿರುವುದು ಚುನಾವಣಾ ಆಯೋಗ ಎಷ್ಟರ ಮಟ್ಟಿಗೆ ಸಂವಿಧಾನಕ್ಕೆ ನಿಷ್ಠವಾಗಿದೆ ಎಂಬುದನ್ನು ಸೂಚಿಸುತ್ತಿದೆ. ಅತ್ತ ವಾರಣಾಸಿಯಲ್ಲಿ ತೀರಾ ಕ್ಷುಲ್ಲಕ ನೆಪ ಹೇಳಿ ಮೋದಿ ವಿರುದ್ಧ ಸ್ಪರ್ಧಿಸಿರುವ ಮಾಜಿ ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರವನ್ನೇ ತಿರಸ್ಕರಿಸುವ ಚುನಾವಣಾ ಆಯೋಗವು ದೇಶದ ಸಂಸ್ಕೃತಿ, ಅನನ್ಯತೆ, ಐಕ್ಯತೆಯ ಬುಡಕ್ಕೇ ತನ್ನ ಮಾತಿನ ಮೂಲಕ ಕೊಡಲಿ ಏಟು ನೀಡುವ ಸಾಧ್ವಿ ಅಂತವರ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ಪ್ರಶ್ನಾರ್ಹವಾಗಿದೆ.