ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಬಳಿ ಇಂದು ಮಧ್ಯಾಹ್ನ ನಕ್ಸಲರು ಐಇಡಿ ನೆಲಬಾಂಬ್ ಸ್ಫೋಟಿಸಿದ ಪರಿಣಾಮ ಕನಿಷ್ಠ 15 ಭದ್ರತಾ ಸಿಬ್ಬಂದಿ ಹಾಗೂ ಚಾಲಕ ಹುತಾತ್ಮರಾಗಿದ್ದಾರೆ.
ಇದೇ ಪ್ರದೇಶದಲ್ಲಿ ನಕ್ಸಲರು ಡೀಸೇಲ್, ಸೀಮೆಎಣ್ಣೆ ಬಳಸಿ 30 ವಾಹನಗಳಿಗೆ ಬೆಂಕಿ ಹಾಕಿ ಭಸ್ಮ ಮಾಡಿದ್ದು, ಇದಾದ ಕೆಲವು ಗಂಟೆಯ ನಂತರ ಬಾಂಬ್ ಸ್ಫೋಟಿಸಿದ್ದಾರೆ.
“ಅಂದಾಜು 12.30ರ ವೇಳೆಗೆ ಮುಲ್ಲಾ ಪ್ರಾಂತ್ಯದಲ್ಲಿ ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿ ಸ್ಫೋಟಿಸಿದ್ದಾರೆ, ಪರಿಣಾಮ ಕನಿಷ್ಠ 15 ಯೋಧರು ಒಬ್ಬ ಚಾಲಕ ಅಸುನೀಗಿದ್ದಾರೆ. ಕುರ್ಕೇಡಾ ಪೊಲೀಸ್ ಠಾಣೆಯಿಂದ ತುರ್ತು ಪ್ರತಿಕ್ರಿಯಾ ತಂಡ ಸ್ಥಳಕ್ಕೆ ಧಾವಿಸಿದೆ,” ಎಂದು ಗಡ್ಚಿರೋಲಿ ಡಿಐಜಿ ಅಂಕುಶ್ ಶಿಂಧೆ ತಿಳಿಸಿದ್ದಾರೆ.
ಬಾಂಬ್ ಸ್ಫೋಟದ ವೇಳೆ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸುದ್ದಿ ಮೂಲಗಳು ತಿಳಿಸಿದೆ.
ಬಹಳ ಹಿಂದೆಯೇ ನಕ್ಸಲರ ಹಾವಳಿಯಿಂದ ಮುಕ್ತಿಗೊಂಡಿತ್ತು ಎನ್ನಲಾಗಿದ್ದ ಕುರ್ಕೆಡಾ ಪ್ರಾಂತ್ಯದಲ್ಲಿ ರಸ್ತೆ ಕಾಮಗಾರಿಗಾಗಿ ನಿಯೋಜಿಸಿದ್ದ ವಾಹನಗಳ ಮೇಲೆ ನಕ್ಸಲರು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಘಟನೆಯಲ್ಲಿ ಭಾಗಿಯಾದ ನಕ್ಸಲರ ಸಂಖ್ಯೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, 40ರಿಂದ 100 ಮಂದಿ ಇದ್ದ ನಕ್ಸಲರ ಗುಂಪು ದದಾಪುರ ಗ್ರಾಮಕ್ಕೆ ಬಂದು ಬೆಂಕಿ ಹಚ್ಚಿದ್ದಾರೆ, ಅಲ್ಲದೇ 29 ವಾಹನಗಳಿಗೆ ಸುಟ್ಟು ಭಸ್ಮ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿ ಬಾಲಾಜಿ ತಿಳಿಸಿದ್ದಾರೆ. ‘
ಘಟನೆಯನ್ನು ಹೇಯ ಕೃತ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, “ಇಂತಹ ಕುಕೃತ್ಯವೆಗಿದ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ,” ಎಂದಿದ್ದಾರೆ.
ಮಹಾರಾಷ್ಟ್ರ ತನ್ನ ಪುನರುತ್ಥಾನ ದಿನ ಆಚರಿಸುವ ದಿನವೇ ನಕ್ಸಲರು ಈ ದಾಳಿ ನಡೆಸಿದ್ದಾರೆ. ಕಳೆದ ವರ್ಷ ಏಪ್ರಿಲ್ 22ರಂದು 40 ನಕ್ಸಲರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಒಂದು ವರ್ಷದ ನಂತರ ಪ್ರತೀಕಾರವಾಗಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.