ದರ್ಬಂಗ, ಬಿಹಾರ: “ಭಾರತ್ ಮೆ ರಹೆನಾ ಹೈ ತೋ ವಂದೆ ಮಾತರಂ ಕಹನಾ ಹೋಗಾ” (ಭಾರತದಲ್ಲಿ ಇರಬೇಕೆಂದರೆ ವಂದೇ ಮಾತರಂ ಹೇಳಲೇಬೇಕು) ಎನ್ನುವುದು ಬಿಜೆಪಿ, ಆರೆಸ್ಸೆಸ್ ಮತ್ತು ಗೋದಿ ಮೀಡಿಯಾಗಳ ಹಳೆಯ ಘೋಷಣೆ. ವಂದೇ ಮಾತರಂ ಘೋಷಣೆ ಯಾರು ಕೂಗುವುದಿಲ್ಲವೋ ಅವರೆಲ್ಲರೂ ದೇಶದ್ರೋಹಿಗಳು ಎಂದೇ ಇವರೆಲ್ಲರೂ ಬಿಂಬಿಸುತ್ತಾ ಬರುತ್ತಿದ್ದಾರೆ. ಇಂತಹ ಬಿಜೆಪಿ ಪರಿವಾರಕ್ಕೆ ಮುಖಭಂಗವಾಗುವ ಪ್ರಕರಣವೊಂದು ಇತ್ತೀಚೆಗೆ ಬಿಹಾರದಲ್ಲಿ ನಡೆದಿದೆ. ಅದೂ ಪ್ರಧಾನಿ ಮೋದಿಯ ಉಪಸ್ಥಿತಿಯಲ್ಲೇ ಈ ಘಟನೆ ನಡೆದಿದೆ.
ಬಿಹಾರದ ದರ್ಬಂಗ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದರು. ರ್ಯಾಲಿಯ ಕೊನೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವೇದಿಕೆಯ ಮೇಲೆ ಬಿಹಾರದ ಬಿಜೆಪಿ ಮುಖಂಡರೊಂದಿಗೆ ಎನ್ ಡಿ ಎ ಮೈತ್ರಿಕೂಟದ ನೀತೀಶ್ ಕುಮಾರ್, ರಾಮ ವಿಲಾಸ್ ಪಾಸ್ವಾನ್ ರಂತಹ ಮುಖಂಡರೂ ಹಾಜರಿದ್ದರು.
ಈ ಸಭೆಯಲ್ಲಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ವಂದೇ ಮಾತರಂ ಕುರಿತು ಮಾತನಾಡುತ್ತಾ “ವಂದೇ ಮಾತರಂ ಎಂದು ಜಪಿಸುವುದು ಒಂದು ಜೀವಶಕ್ತಿಯಿದ್ದಂತೆ. ಇದರಿಂದ ದೇಶಕ್ಕೆ ಶಾಂತಿ ಸಮೃದ್ಧಿಗಳು ಲಭಿಸುತ್ತವೆ. ಆದರೆ ವಂದೇ ಮಾತರಂ ಎಂದು ಹೇಳಲು ದೇಶದಲ್ಲಿ ಕೆಲವರಿಗೆ ಏನೋ ಸಮಸ್ಯೆಯಿದೆ, ಅಂತವರೆಲ್ಲಾ ತಮ್ಮ ಠೇವಣಿ ಕಳೆದುಕೊಳ್ಳಬೇಕು” ಎಂದು ಛೇಡಿಸಿದ್ದರು.
ವಿಪರ್ಯಾಸವೆಂದರೆ ತಮ್ಮ ಭಾಷಣದ ಕೊನೆಯಲ್ಲಿ ಮೋದಿ ಜೋರಾಗಿ ವಂದೇ ಮಾತರಂ ಘೋಷಣೆಯನ್ನು ಹಲವಾರು ಬಾರಿ ಕೂಗಿದರು. ಇದಕ್ಕೆ ವೇದಿಕೆಯ ಮೇಲಿದ್ದ ಎಲ್ಲರೂ ದನಿಗೂಡಿಸಿದರೂ ವೇದಿಕೆಯ ಕೇಂದ್ರದಲ್ಲಿ ಕುಳಿತಿದ್ದ ನೀತೀಶ್ ಕುಮಾರ್ ಮಾತ್ರ ವಂದೇ ಮಾತರಂ ಎಂದು ಒಂದು ಬಾರಿಯೂ ಕೂಗಲೇ ಇಲ್ಲ. ಕೊನೆಗೆ ಎಲ್ಲರೂ ಎದ್ದು ನಿಂತು ವಂದೇ ಮಾತರಂ ಹೇಳಿದರೂ ನೀತೀಶ್ ಕುಮಾರ್ ಮೌನವಾಗಿಯೇ ಇದ್ದರು.
ವಿಡಿಯೋ ನೋಡಿ
ಇದಕ್ಕೆ ಎರಡು ದಿನಗಳಿಗೆ ಮೊದಲು ಪ್ರತಿಪಕ್ಷದ ಅಭ್ಯರ್ಥಿ ಅಬ್ದುಲ್ ಬರಿ ಸಿದ್ದಿಕ್ ಅವರು ವಂದೇ ಮಾತರಂ ಹೇಳುವದಕ್ಕೆ ತಮ್ಮ ತಕರಾರು ತಿಳಿಸಿ, “ಒಂದೇ ದೇವರಲ್ಲಿ ನಂಬಿಕೆ ಇರುವವರಾರೂ ವಂದೇ ಮಾತರಂ ಹೇಳುವುದಿಲ್ಲ” ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಹಾಗೂ ಬೇಗುಸರಾಯ್ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ಪ್ರತಿಕ್ರಿಯಿಸಿ “ನೀವು ವಂದೇ ಮಾತರಂ ಹೇಳದಿದ್ದರೆ ನೀವು ಮಾತೃಭೂಮಿಯನ್ನು ಪೂಜಿಸಲು ಸಾಧ್ಯವಿಲ್ಲ. ನಿಮ್ಮನ್ನು ದೇಶ ಕ್ಷಮಿಸುವುದಿಲ್ಲ” ಎಂದೆಲ್ಲಾ ಉಗ್ರ ಆಕ್ರೋಶ ತೋರಿದ್ದರು. ಇದೇ ಕಾರಣದಿಂದ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ವಂದೇ ಮಾತರಂ ವಿಷಯ ಪ್ರಸ್ತಾಪಿಸಿ ವೇದಿಕೆ ಮೇಲೆ ಹಾಗೂ ಕೆಳಗಿದ್ದ ಎಲ್ಲರಿಂದ ವಂದೇ ಮಾತರಂ ಜೋರಾಗಿ ಹೇಳುವಂತೆ ಮಾಡಿದ್ದರು.
ಆದರೆ ಅವರ ಎನ್ ಡಿ ಎ ಮೈತ್ರಿಕೂಟದ ನೀತೀಶ್ ಕುಮಾರ್ ಅವರೇ ವಂದೇ ಮಾತರಂ ಹೇಳಲಿಲ್ಲ.
ಈಗ ನಿತೀಶ್ ಕುಮಾರ್ ಅವರನ್ನು ಮೋದಿ ಹಾಗೂ ಬಿಜೆಪಿ ಪಕ್ಷ ದೇಶದ್ರೋಹಿ ಎಂದು ಘೋಷಿಸುತ್ತದೆಯೇ?
ಈ ವಿಡಿಯೋವನ್ನು ತಮ್ಮ ಎನ್ ಡಿ ಟಿವಿ ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಇದನ್ನೇ ಪ್ರಶ್ನಿಸಿದ್ದಾರೆ. ಒಂದು ವೇಳೆ ವೇದಿಕೆಯಲ್ಲಿದ್ದು ವಂದೇ ಮಾತರಂ ಹೇಳದೇ ಮೌನವಹಗಿಸಿದ ವ್ಯಕ್ತಿ ಆಜಂ ಖಾನ್ (ಸಮಾಜವಾದಿ ಪಕ್ಷದ ಮುಖಂಡ) ಆಗಿದ್ದರೆ ಇಷ್ಟೊತ್ತಿಗೆ ದೇಶವೇ ಹೊತ್ತಿ ಉರಿಯುವಂತೆ ಬಿಜೆಪಿ ಮತ್ತು ಬಿಜೆಪಿ ಪರ ಮಾಧ್ಯಮಗಳು ವರ್ತಿಸುತ್ತಿದ್ದವು. ಈಗ ಮೋದಿ ಎದುರಿನಲ್ಲೇ ಅವರೊಂದಿಗೆ ವಂದೇಮಾತರಂ ಘೋಷಣೆಗೆ ದನಿ ಗೂಡಿಸದ ಬಿಜೆಪಿ ಮಿತ್ರ ನೀತೀಶ್ ಕುಮಾರ್ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋ ನೋಡಿ