ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಇಂದು ಅಧಿಕೃತವಾಗಿ “ಜಾಗತಿಕ ಉಗ್ರ” (Global Terrorist) ಎಂದು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಭಾರತವು 2009ರಿಂದ 2019ರ ವರೆಗೆ ನಡೆಸುತ್ತಾ ಬಂದಿರುವ ರಾಜತಾಂತ್ರಿಕ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ.
ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ “1267 ದಿಗ್ಬಂಧನ ಸಮಿತಿ”ಯ ಮುಂದೆ ಇಡಲಾಗಿದ್ದ ಮುಂದಿಡಲಾಗಿದ್ದ ಪ್ರಸ್ತಾವಕ್ಕೆ ಚೀನಾ ತಾನು ಇದುವರೆಗೆ ಹೇರಿದ್ದ ತಡೆಯನ್ನು ತೆರವುಗೊಳಿಸುತ್ತಿದ್ದಂತೆ ಜೈಶ್ ಎ ಮೊಹ್ಮದ್ ಮುಖಂಡ ಮಸೂದ್ ಅಜರ್ ಒಬ್ಬ ಜಾಗತಿಕ ಉಗ್ರ ಎಂದು ಅಧಿಕೃತವಾಗಿ ಗುರುತಿಸಲಾಗಿದೆ
ಈ ಕುರಿತು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. “ದೊಡ್ಡವರು, ಸಣ್ಣವರು ಎಲ್ಲಾ ಜೊತೆಗೂಡಿದ್ದೇವೆ. ಮಸೂದ್ ಅಝರ್ ನನ್ನು ವಿಶ್ವಸಂಸ್ಥೆಯ ದಿಗ್ಬಂಧನ ಪಟ್ಟಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲಾಗಿದೆ, ಬೆಂಬಲಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.
Big,small, all join together.
Masood Azhar designated as a terrorist in @UN Sanctions list
Grateful to all for their support. 🙏🏽#Zerotolerance4Terrorism
— Syed Akbaruddin (@AkbaruddinIndia) May 1, 2019
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗ ಮಸೂದ್ ಅಜರ್ ಒಬ್ಬ ಜಾಗತಿಕ ಉಗ್ರ ಎಂದು ಘೋಷಿಸಿರುವುದರಿಂದ ಉಗ್ರನ ಆಸ್ತಿ ಮಟ್ಟುಗೋಲು, ಓಡಾಟ ನಿಷೇಧ ಹಾಗೂ ಶಸ್ತ್ರಾಸ್ತ್ರ ಹೊಂದಲು ನಿರ್ಬಂಧ ಜಾರಿಗೊಳ್ಳಲಿದೆ.
2009ರಲ್ಲಿ ಭಾರತವು ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಎಂದು ಗುರುತಿಸಲು ಮುಂದಿಟ್ಟ ಪ್ರಸ್ತಾವದ ನಂತರ ಇದುವರೆಗೆ ಭದ್ರತಾ ಮಂಡಳಿಯ ದಿಗ್ಬಂಧನ ಸಮಿತಿಯಲ್ಲಿ ಇತರ ದೇಶಗಳೂ ತಮ್ಮ ಪ್ರಸ್ತಾವ ಮುಂದಿಟ್ಟಿದ್ದವು. ಆದರೆ ಇದಕ್ಕೆ ಚೀನಾ ತಡೆ ಒಡ್ಡುತ್ತಾ ಬಂದಿತ್ತು. ಹೀಗಾಗಿ ಒಂದು ದಶಕದ ಕಾಲ ಇದು ಸಾಧ್ಯವಾಗಿರಲಿಲ್ಲ.
ಈಗ ಚೀನಾ ಪ್ರಸ್ತಾವಕ್ಕೆ ತಡೆಹಿಡಿದಿದ್ದನ್ನು “ತೆರವುಗೊಳಿಸಿದೆ” ಎಂದು ಅಕ್ಬರುದ್ದೀನ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಯಶ ಸಾಧಿಸಲು ಕಾರಣವಾದ ಮುಖ್ಯ ಪ್ರಯತ್ನಗಳು ಹೀಗಿವೆ
- 2009ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾರತವು ಮೊದಲ ಬಾರಿಗೆ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಪ್ರಸ್ತಾವ ಮುಂದಿಟ್ಟಿತ್ತು. ಅದಕ್ಕೆ ಚೀನಾ ತಡೆಯೊಡ್ಡಿತು.
- 2016ರಲ್ಲಿ ಮತ್ತೆ ಭಾರತ ಪಿ3 (ಸಹಭಾಗಿ3) ದೇಶಗಳಾದ ಅಮೆರಿಕ, ಯುಕೆ ಮತ್ತು ಫ್ರಾನ್ಸ್ ಬೆಂಬಲದೊಂದಿಗೆ ತನ್ನ ಪ್ರಸ್ತಾವ ಮುಂದಿಟ್ಟವು.
- 2017ರಲ್ಲಿ ಮತ್ತೆ ಪಿ3 ದೇಶಗಳು ಅದೇ ಪ್ರಸ್ತಾವವನ್ನು ಮುಂದಿಟ್ಟವು. ಆಗಲೂ ಚೀನಾ ತಡೆಯೊಡ್ಡಿತು.
- ಫೆ 14ರ ಪುಲ್ವಾಮಾ ದಾಳಿಯ ನಂತರ ಫೆ.27,2019ರಂದು ಮತ್ತೆ ಅಮೆರಿಕ, ಫ್ರಾನ್ಸ್, ಯುಕೆಗಳು ಮಸೂದ್ ಅಜರ್ ನನ್ನು ಗ್ಲೋಬಲ್ ಟೆರರಿಸ್ಟ್ ಎಂದು ಘೋಷಿಸಲು ಒತ್ತಾಯಿಸಿ ಭದ್ರತಾ ಸಂಸ್ಥೆಯ ಮುಂದೆ ಹೊಸದಾಗಿ ಪ್ರಸ್ತಾವ ಇರಿಸಿದವು.
- ಮಾರ್ಚ್ 13ರಂದು ಇದಕ್ಕೆ ಚೀನಾ ಮತ್ತೆ ತಡೆಯೊಡ್ಡಿತು.
- ಮಾರ್ಚ್ 28ರಂದು ಫ್ರಾನ್ಸ್ ಮತ್ತು ಯುಕೆ ಬೆಂಬಲದೊಂದಿಗೆ ಅಮೆರಿಕವು ನಿರ್ಣಯ ಕರಡೊಂದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಸಲ್ಲಿಸಿತು.
- ಏಪ್ರಿಲ್ 3ರಂದು ಚೀನಾ ಅಮೆರಿಕದ ಮೇಲೆ ತೀವ್ರ ವಾಗ್ದಾಳಿ ನಡೆಸಿ, ಜೈಶ್ ಮುಖಂಡನನ್ನು ಜಾಗತಿಕ ಉಗ್ರ ಎಂದು ಹಣೆಪಟ್ಟಿ ಹಚ್ಚಲು “ಎಲ್ಲಾ ಲಭ್ಯವಿರುವ ಸಂಪನ್ಮೂಲ ಬಳಸುವ” ಬೆದರಿಕೆ ಒಡ್ಡುತ್ತಿದೆ, ವಾಷಿಂಗ್ಟನ್ ನ ಈ ಪ್ರಯತ್ನ ವಿಷಯವನ್ನು ಸಂಕೀರ್ಣಗೊಳಿಸುತ್ತಿದೆ ಅಲ್ಲದೇ ದಕ್ಷಿಣ ಏಷಿಯಾದಲ್ಲಿ ಶಾಂತಿ ಸ್ಥಿರತೆಗೆ ಸೂಕ್ತ ವಾತಾವರಣ ನಿರ್ಮಿಸುತ್ತಿಲ್ಲ ಎಂದು ದೂರಿತ್ತು.
- ಏಪ್ರಿಲ್ 30, 2019ರಂದು ಚೀನಾವು ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಗುರುತಿಸುವ ನಿಟ್ಟಿನಲ್ಲಿ “ಒಂದಷ್ಟು ಪ್ರಗತಿ” ಸಾಧಿಸಲಾಗಿದೆ ಎಂದು ಹೇಳಿತ್ತಲ್ಲದೇ ಈ ವಿಷಯವನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ಭರವಸೆ ಇದೆ ಎಂದಿತ್ತು.
- ಮೇ 1, 20019ರಂದು ಚೀನಾ ಹೇರಿದ್ದ ಅಡೆತಡೆಯನ್ನು ತೆರವುಗೊಳಿಸುತ್ತಿದ್ದಂತೆ 1267 ದಿಗ್ಬಂಧನ ಸಮಿತಿಯು ಮಸೂದ್ ಅಜರ್ ಒಬ್ಬ ಜಾಗತಿಕ ಉಗ್ರ ಎಂದು ಹೆಸರಿಸಿತು.
26/11ರ ಮುಂಬೈ ಉಗ್ರ ದಾಳಿಯಲ್ಲಿ ಜೈಶ್ ಎ ಮೊಹ್ಮದ್ ಕೈವಾಡ ಕಂಡು ಬಂದ ನಂತರ ಭಾರತವು ಜೈಶ್ ಮುಖಂಡ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಬೇಡಿಕೆ ಸಲ್ಲಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ನೇ ನಿರ್ಣಯದ ಪ್ರಕಾರ ಆಲ್ ಖೈದಾ, ತಾಲಿಬಾನ್ ಮುಖಂಡರನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿ ದಿಗ್ಬಂಧನ ವಿಧಿಸುವ ಅವಕಾಶವಿದ್ದು ಭಯೋತ್ಪಾದನೆಯ ವಿರುದ್ಧ ಪ್ರಯತ್ನದಲ್ಲಿ ಇದೂ ಒಂದು ಪ್ರಮುಖ ನಡೆಯಾಗಿದೆ. ಈಗ ಮಸೂದ್ ಅಜರ್ ಮೇಲೆ ಕೂಡಾ ಇಂತಹ ಜಾಗತಿಕ ದಿಗ್ಬಂಧನ ಸಾಧ್ಯವಾಗಲಿದೆ.