ಪ್ರಶ್ನೆ: ತಾವು ಹಲವು ಮೇ ದಿನಾಚರಣೆಗಳಿಗೆ ಸಾಕ್ಷಿಯಾಗಿದ್ದೀರಿ. ಈ ವರ್ಷದ ಕಾರ್ಮಿಕ ದಿನಾಚರಣೆಗೆ ದೇಶದ ಕಾರ್ಮಿಕರ ದೃಷ್ಟಿಯಲ್ಲಿ ವಿಶೇಷ ಮಹತ್ವವೇನಾದರೂ ಇದೆಯೇ?
ಎಚ್ ವಿ ಎ: ಒಂದು ರೀತಿಯಲ್ಲಿ ಇದು ಬಹಳ ವಿಶೇಷವಾದ ಮೇ ದಿನಾಚರಣೆಯೇ ಹೌದು. ಮೋದಿ ಸರ್ಕಾರ ಬಂದ ನಂತರ ಕಳೆದ ಐದು ವರ್ಷಗಳಿಂದ ಈ ದೇಶದ ಕಾರ್ಮಿಕ ವರ್ಗ ಮತ್ತು ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಸರ್ಕಾರದ ಕಾರ್ಮಿಕ-ವಿರೋಧಿ, ರೈತ-ವಿರೋಧಿ, ಜನ-ವಿರೋಧಿ ನೀತಿಗಳ ವಿರುದ್ಧ ಬಹಳ ಗಂಭೀರವಾದಂತಹ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿವೆ. ಆ ಹೋರಾಟಗಳಿಂದ ಸರ್ಕಾರದ ವರ್ಗಗುಣ ಬಯಲಾಗಿರುತ್ತದೆ. ಅವು ಈಗ ನಡೆಯುತ್ತಿರುವ 17ನೇ ಲೋಕಸಭಾ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರಲಿವೆ ಎನ್ನುವುದು ಮುಖ್ಯ. ನಮ್ಮ 5 ವರ್ಷಗಳ ಹೋರಾಟಗಳು ಈ ಚುನಾವಣೆಯನ್ನು ನಾವು ನಿರೀಕ್ಷಿಸಿದಷ್ಟು ಪ್ರಭಾವಿಸದಿದ್ದರೂ ಅದರ ಮೇಲೆ ಪರಿಣಾಮ ಬೀರುವುದಂತೂ ನಿಶ್ಚಿತ. ಮೇಲಾಗಿ ಒಂದು ಹೆಮ್ಮೆಯ ವಿಚಾರವೆಂದರೆ ಈ ದಿಕ್ಕಿನಲ್ಲಿ ಎಡೆಬಿಡದೆ ಹೋರಾಟ ನಡೆಸುತ್ತಿರುವುದು ಕಾರ್ಮಿಕ ವರ್ಗ, ಅದರಲ್ಲೂ ವಿಶೇಷವಾಗಿ ಟ್ರೇಡ್ ಯೂನಿಯನ್ಗಳು. ಅವುಗಳ ಬಗ್ಗೆ ಎಷ್ಟೇ ಟೀಕೆ-ಟಿಪ್ಪಣಿಗಳಿದ್ದರೂ ರಾಷ್ಟ್ರಮಟ್ಟದಲ್ಲಿ ಐಕ್ಯರಂಗವನ್ನು ಕಟ್ಟಿ ಸರ್ಕಾರದ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಟದಲ್ಲಿ ನಿರತವಾಗಿವೆ. ಈ ದೃಷ್ಟಿಯಿಂದ ಈ ಮೇ ದಿನ ವಿಶೇಷ ಎಂದುಕೊಂಡಿದ್ದೇನೆ.
ಪ್ರಶ್ನೆ: ಈವರೆಗೂ ಬಹುತೇಕ ಸಂಘಟಿತ ಕ್ಷೇತ್ರದ ಕಾರ್ಮಿಕರು ಒಂದು ರೀತಿಯ Comfort Zoneನಲ್ಲಿದ್ದರು (ಹಾಯಾಗಿದ್ದರು) ಎಂದೇ ಹೇಳಲಾಗುತ್ತಿತ್ತು. ಮೋದಿ ಸರ್ಕಾರದ ನೀತಿಗಳು ಅವರ ಮೇಲೆ ಯಾವ ರೀತಿ ಪರಿಣಾಮ ಬೀರಿವೆ?
ಎಚ್ ವಿ ಎ: ಸಂಘಟಿತ ಕಾರ್ಮಿಕರು Comfort zoneನಲ್ಲಿದ್ದರೆಂದು ಹೇಳಲಾಗದು. ಹಿಂದಿದ್ದ ಕಾಂಗ್ರೆಸ್ ಅಥವಾ ಮೈತ್ರಿಕೂಟದ ಸರ್ಕಾರಗಳು ಕಾರ್ಮಿಕರ ಹೋರಾಟಗಳಿಗೆ ಸ್ವಲ್ಪ ಮನ್ನಣೆ ಕೊಡುತ್ತಿದ್ದವಷ್ಟೇ. ಉದಾಹರಣೆಗೆ 80ರ ದಶಕದ ಕೊನೆಯಲ್ಲಿ ಉದಾರೀಕರಣದ ಗಾಳಿ ಬೀಸಿತು, ಖಾಸಗೀಕರಣದ ಗಾಳಿ ಬ್ರಿಟನ್ನಿಂದ ನೇರವಾಗೇ ಹೊಡೆದಿತ್ತು. ಆಗ ಅಸ್ತಿತ್ವದಲ್ಲಿದ ಪ್ರಭುತ್ವ, ಅದರಲ್ಲೂ ಮನಮೋಹನ್ ಸಿಂಗ್ ಅಥವಾ ಪಿ.ವಿ.ನರಸಿಂಹರಾವ್ ಆಡಳಿತ ಆ ನೀತಿಗಳನ್ನ ಇಲ್ಲಿ ಹೊರಿಸಿತು. GATT ಒಪ್ಪಂದ, ವಿಶ್ವಬ್ಯಾಂಕ್, ಐಎಂಎಫ್ ಅಣತಿಗಳು, ಇವೆಲ್ಲವನ್ನೂ ನಾವು ತೀಕ್ಷ್ಣವಾಗಿಯೇ ವಿರೋಧಿಸಿದ್ದೆವು. ಅದಕ್ಕೆ ಸ್ವಲ್ಪವಾದರೂ ಮನ್ನಣೆ ಕೊಡುತ್ತಿದ್ದರು, ಟ್ರೇಡ್ ಯೂನಿಯನ್ (ಕಾರ್ಮಿಕ ಸಂಘಟನೆ) ಗಳ ಜೊತೆ ಮಾತನಾಡುತ್ತಿದ್ದರು. ಆಗ ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಿತ್ತು. ಆದ್ದರಿಂದಲೇ ಒಂದು Comfort Zone ಅಂತ ಅನ್ನಿಸೋದು. ಆದರೆ ಹೋರಾಟಗಳು ಧಾರಾಳವಾಗಿದ್ದವು. ಮುಷ್ಕರಗಳನ್ನು ಮಾಡಿದ್ದೀವಿ, ಪಾರ್ಲಿಮೆಂಟಿನ ಮುಂದೆ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದ್ದೀವಿ, ಸರ್ಕಾರದ ಮೇಲೆ ಒತ್ತಡ ತಂದಿದ್ದೀವಿ. ಸರ್ಕಾರಗಳು ಅವುಗಳಿಗೆ ಮಣಿಯುತ್ತಿದ್ದವು. ಆದ್ದರಿಂದಲೂ Comfort Zone ಅನ್ನಿಸಬಹುದು. ಆದರೆ ಕಾರ್ಮಿಕರೇನೂ ಹಾಯಾಗಿರಲಿಲ್ಲ.
ಎರಡನೆಯದಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಪಂಡಿತ್ ಜವಾಹರಲಾಲ್ ನೆಹರು ಅವರ ಮುನ್ನೋಟವಿದ್ದಿದ್ದು, ಕೃಷಿ ಮತ್ತು ಕೈಗಾರಿಕೆಗಳು ಅಭಿವೃದ್ಧಿಯಾಗಬೇಕೆಂದು. ಅಂದರೆ, ಒಂದು ಸಮತೋಲನ ಇರಬೇಕಂತ. ನೆಹರೂ ನೀತಿಯ ಸತ್ವವೇ ಅದು. ಕೈಗಾರಿಕೆಗಳು ಸಾರ್ವಜನಿಕ ವಲಯದಲ್ಲಿ ಬೆಳೆಯಬೇಕು ಎಂಬುದಿತ್ತು. ಅದಕ್ಕೆ ಕಾರಣವೂ ಇತ್ತು. ಇನ್ನೂ ಆಗಷ್ಟೇ ಸ್ವಾತಂತ್ರ್ಯ ಗಳಿಸಿದ್ದ ಭಾರತದಲ್ಲಿ ಖಾಸಗಿ ಬಂಡವಾಳವಿರಲಿಲ್ಲ. ಖಾಸಗಿ ಬಂಡವಳಿಗರು ಬಂಡವಾಳ ಹೂಡಿದ ತಕ್ಷಣವೇ ಅಧಿಕ ಲಾಭ ಬಯಸುತ್ತಿದ್ದರು. ಆದರೆ ದೀರ್ಘಾವಧಿಯ ಹೂಡಿಕೆಗೆ ಅವರಾರೂ ಹಣಕಾಸು ನೀಡುತ್ತಿರಲಿಲ್ಲ. ಮೇಲಾಗಿ ನೆಹರು ರಷ್ಯಾ ಕ್ರಾಂತಿಯಿಂದ ಪ್ರಭಾವಿತರಾಗಿದ್ದ ಸಮಾಜವಾದಿಯಾಗಿದ್ದರು. 1920ರಲ್ಲೇ ಸಮಾಜವಾದಿ ರಾಷ್ಟ್ರ ನಿರ್ಮಾಣದ ಗುರಿ ಹೊಂದಿದ್ದ ಎಐಟಿಯುಸಿ ಯ ಅಧ್ಯಕ್ಷರಾಗಿದ್ದ ನೆಹರು ಅವರ ಮನಸ್ಸು ಸಾಮಾಜಿಕ ನ್ಯಾಯದ ಪರವಿತ್ತು. ಆದ್ದರಿಂದಲೇ ಸಾರ್ವಜನಿಕ ವಲಯದ ಉದ್ದಿಮೆಗಳು, ಕೃಷಿಕ್ಷೇತ್ರ ಇವೆಲ್ಲವೂ ಬೆಳೆದು ಉದ್ಯೋಗ ಸೃಷ್ಟಿಯಾಗುತ್ತಿತ್ತು. ತೊಂದರೆಗಳು ಅಷ್ಟಾಗಿ ಕಾಣುತ್ತಿರಲಿಲ್ಲ. ಅದನ್ನು Comfort Zone ಅಂತ ಹೇಳಲಾಗದು. ಹೋರಾಟಗಳಿಗೆ ಬೆಲೆಯಿತ್ತು. 90ರ ನಂತರ ಹೆಚ್ಚೂಕಮ್ಮಿ ಪ್ರತಿವರ್ಷ ಮುಷ್ಕರ ಹೂಡಿದ್ದೇವೆ. ಬಹುಶಃ ಬೇರಾವ ಸಂಘಟನೆಯೂ ನಡೆಸದಷ್ಟು ಹೋರಾಟಗಳನ್ನು ನಾವು ಎಡೆಬಿಡದೆ ಮಾಡಿದ್ದೇವೆ. ಹೊಸ ಆರ್ಥಿಕ/ಕೈಗಾರಿಕಾ ನೀತಿಗಳು ಬಂದ ಹೊಸದರಲ್ಲಿ ನಮ್ಮನ್ನು ಬಹಳ ಹೀಯಾಳಿಸಿದರು. “ಈ ಎಡ ಟ್ರೇಡ್ ಯೂನಿಯನ್ಗಳು, ಕಮ್ಯುನಿಸ್ಟರು, ಏನೇ ಬೆಳವಣಿಗೆ ಸಾಧಿಸಲು ಯತ್ನಿಸಿದರೂ ಸಹಿಸುವುದಿಲ್ಲ; ಡಾಲರ್ ಬಿಕ್ಕಟ್ಟಿನ ಸಲುವಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಬೇಕು; ಇವರಿಗೆ ಹೊಸ ದೃಷ್ಟಿಕೋನವಿಲ್ಲದೆ ಹಳೇ ವಿಧಾನದಲ್ಲೇ ಹೋಗುತ್ತಾರೆ” ಎಂದೆಲ್ಲಾ ಆರೋಪಿಸುತ್ತಿದ್ದರು. ಆದರೆ ನಾವು ರಾಜಿಯಾಗಲಿಲ್ಲ. 1989ರಲ್ಲಿ ಯಾವ ನಿಲುವನ್ನು ತಳೆದಿದ್ದೆವೋ ಅದರ ಆಧಾರದಲ್ಲೇ ಇಂದು ಎಲ್ಲಾ ಟ್ರೇಡ್ ಯೂನಿಯನ್ಗಳೂ ಒಟ್ಟಾಗಿ ಬೀದಿಗಿಳಿದಿದ್ದೇವೆ. ಈಗ ಬಿಎಂಎಸ್ ಕೂಡ ನಮ್ಮ ಜೊತೆ ಹೋರಾಟಕ್ಕೆ ಬರಬೇಕಾಗಿದೆ! ಆದ್ದರಿಂದ ಈ ಹೋರಾಟ ಮುಂದುವರಿಯುವ ವಿಶ್ವಾಸ ನಮಗಿದೆ.
ಪ್ರಶ್ನೆ: ಕಾರ್ಮಿಕ ಚಳವಳಿಯಲ್ಲಿ ತಾವು ಸುಮಾರು 6 ದಶಕಗಳ ಸುದೀರ್ಘ ಪಯಣ ನಡೆಸಿದ್ದೀರಿ. ತಾವು ಕಂಡಿರುವಂತಹ ಸರ್ಕಾರಗಳಲ್ಲಿ ಯಾವ ಸರ್ಕಾರ ಅತಿಹೆಚ್ಚು ಕಾರ್ಮಿಕ-ವಿರೋಧಿ ಮತ್ತು ಜನ-ವಿರೋಧಿ ಎಂದು ಗುರುತಿಸುವಿರಿ? ಏಕೆ?
ಎಚ್ ವಿ ಎ: ಆಯಾ ಕಾಲಘಟ್ಟದಲ್ಲಿ ನಾವು ಬೇಡಿಕೆಗಳನ್ನಿಟ್ಟು ಹೋರಾಟ ನಡೆಸಿದಾಗ ಕಾರ್ಮಿಕ-ವಿರೋಧಿ, ಜನ-ವಿರೋಧಿ ಅಂತ ಸರ್ಕಾರಗಳನ್ನ generalize ಮಾಡಿದ್ದೇವೆ, ಹೋರಾಟಗಳಿಗೊಂದು ಚೌಕಟ್ಟು ಕಟ್ಟಿಕೊಂಡಿದ್ದೇವೆ. ಆದರೆ ಮೋದಿ ಸರ್ಕಾರದಂತಹ ಅತಿಕೆಟ್ಟ, ದುಷ್ಟ ಸರ್ಕಾರವನ್ನ ನಾವೆಂದೂ ಕಂಡಿರಲಿಲ್ಲ. ಏಕೆಂದರೆ ರಾಜಕೀಯದಲ್ಲಿ ಮತಧರ್ಮವನ್ನು ಬೆಳೆಸುತ್ತಿದ್ದಾರೆ. ಇಡೀ ಆರ್ಥಿಕ ನೀತಿಯನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದಾರೆ. ಯೋಜನಾ ಆಯೋಗವನ್ನು ತೆಗೆದು ನೀತಿ ಆಯೋಗ ತಂದಿದ್ದಾರೆ. ಭಾರತಕ್ಕೆ ಯೋಜನಾ ಆಯೋಗ ಬೇಕಿತ್ತು, ಅದಿದ್ದದ್ದರಿಂದಲೇ ದೇಶ ಇಷ್ಟೊಂದು ಕೈಗಾರಿಕೆಗಳನ್ನು ಕಟ್ಟಿದೆ, ಕೃಷಿಯಲ್ಲಿ ಪ್ರಗತಿ ಸಾಧಿಸಿದೆ, ಸಾಕಷ್ಟು ಬಂಡವಾಳ ಹೂಡಿಕೆ ಕೂಡ ಬಂದಿದೆ. ಮೋದಿ ಸರ್ಕಾರ ಅದನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿದೆ. ಎಲ್ಲವನ್ನೂ ಕೋಮುವಾದೀಕರಣಗೊಳಿಸಿ ಮತಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸಿಬಿಟ್ಟಿದ್ದಾರೆ. ಆಂತರಿಕ ಯುದ್ಧ ನಡೆದುಬಿಡುತ್ತೇನೋ ಅನ್ನುವಂತಾಗಿದೆ. ಎಂಎಲ್ಎ, ಮಂತ್ರಿಗಳ ಆಯ್ಕೆಯಲ್ಲಾಗಿರಬಹುದು, ಬಿಜೆಪಿಯವರು ನೇರವಾಗಿಯೇ, “ನಮಗೆ ಮುಸಲ್ಮಾನರು ಬೇಕಾಗಿಲ್ಲ; 2025 ಆದ ಮೇಲೆ ನಮಗೆ ಗೊತ್ತಿದೆ ಯಾರುಯಾರು ಎಲ್ಲೆಲ್ಲಿ ಇರುತ್ತಾರಂತ; ಕೆಲವರೆಲ್ಲಾ ಈ ದೇಶದಲ್ಲೇ ಇರಬಾರದು, ಬೇರೆ ದೇಶಕ್ಕೆ ಹೋಗಬೇಕು” ಎಂದು ಬಹಿರಂಗವಾಗಿಯೇ ಹೇಳುತ್ತಿರುವುದು ಅಪಾಯಕಾರಿ.
ಮೋದಿ ಸರ್ಕಾರ ಬಂದ ನಂತರ ಕಾರ್ಮಿಕ ವರ್ಗವು, ಈ ಸರ್ಕಾರ ಈಗಿನ್ನೂ ಬಂದಿದೆ, ಕಾಲಾವಕಾಶ ಕೊಡಿ ಅಂತೇನೂ ಹೇಳದೆ ಸಾಕಷ್ಟು ಹೋರಾಟಗಳನ್ನು ಕೈಗೊಂಡಿದ್ದೇವೆ. ಉದಾಹರಣೆಗೆ ಕಾರ್ಮಿಕ ಕಾನೂನುಗಳನ್ನು ಕಾಂಗ್ರೆಸ್ಸಿನವರು ಕೂಡ ಬದಲಾವಣೆ ಮಾಡಬೇಕೆನ್ನುತ್ತಿದ್ದರು. ಅವರ ಪ್ರಕಾರ, “ವಿದೇಶಿ ಬಂಡವಾಳ ಆಕರ್ಷಿಸಲು ಇಲ್ಲಿ ಬಿಗಿಯಾದ ಕಾರ್ಮಿಕ ಕಾನೂನುಗಳು ತೊಡಕಾಗಿವೆ, ಅವುಗಳನ್ನೆಲ್ಲಾ ಸಡಿಲಗೊಳಿಸಿಬಿಟ್ಟರೆ ಬಂಡವಾಳ ನಲ್ಲಿ ನೀರಿನಿಂತೆ ಹರಿದುಬಂದುಬಿಡುತ್ತದೆ”. ಆದರೆ ಅದನ್ನು ನಾವೆಂದೂ ಒಪ್ಪಿಕೊಂಡಿಲ್ಲ. ಏಕೆಂದರೆ ಬಂಡವಳಿಗರು ಎಲ್ಲಿ ಗರಿಷ್ಟ ಲಾಭ ಸಿಗುತ್ತದೋ ಅಲ್ಲಿ ಹೋಗುತ್ತಾರೆ. ಈಗ ಸುಮಾರು 200 ಕಂಪನಿಗಳು ಚೀನಾದಿಂದ ಇಲ್ಲಿಗೆ ಬಂದು ಬಂಡವಾಳ ಹೂಡಲಿವೆ ಎಂದೂ ಅದರಿಂದ ಉದ್ಯೋಗ ಸೃಷ್ಟಿಯಾಗತ್ತದೆಂದೂ ಹೇಳಿಕೊಳ್ಳುತ್ತಿದ್ದಾರೆ. ಅವರಾರೂ ಪಕೋಡ ಅಥವಾ ಚಹಾ ಮಾರುವ ಕಂಪನಿಗಳಲ್ಲ ಎನ್ನುವುದೇ ಸಂತೋಷ! ಅವರಿಲ್ಲಿ ಬರುವುದು ಉದ್ಯೋಗ ಸೃಷ್ಟಿಸಿ ನಮ್ಮ ನಿರುದ್ಯೋಗ ಬಗೆಹರಿಸುವುದಕ್ಕಲ್ಲ. ಚೀನಾದಲ್ಲಿ ಬಹುಶಃ ಅವರಿಗೆ ಲಾಭ ಸಿಗುತ್ತಿಲ್ಲ, ಬಹುಶಃ ಗರಿಷ್ಟ ಮಿತಿ (Saturation point) ತಲುಪಿರುವುದರಿಂದ ಇಲ್ಲಿಗೆ ಬರುತ್ತಿದ್ದಾರಷ್ಟೇ. ಭಾರೀ ಉದ್ಯೋಗ ಸೃಷ್ಟಿಯಾಗಿಬಿಡುತ್ತದೆಂಬ ಭ್ರಮೆಯನ್ನ ಯಾರೂ ಇಟ್ಟುಕೊಳ್ಳಬೇಕಾಗಿಲ್ಲ. ಈಗ ತಂತ್ರಜ್ಞಾನದ ಪ್ರಗತಿ ಎನ್ನುತ್ತ ಕಾರ್ಮಿಕರೇ ಇಲ್ಲದಂತಹ ಉದ್ಯಮಗಳು ಬರುತ್ತಿವುದನ್ನು ನೋಡಿದಾಗ ದಿಗಿಲಾಗುತ್ತೆ.
ರಿಸರ್ವ್ ಬ್ಯಾಂಕ್ ಅನುಮತಿ ಪಡೆಯದೆಯೇ, ಪಾರ್ಲಿಮೆಂಟಿನಲ್ಲಿ ಚರ್ಚೆ ಮಾಡದೆಯೇ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿದ ಡಿಮಾನಿಟೈಸೇಷನ್ನಿಂದಾಗಿ ಸಾಕಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. GST ಹೇರಿಕೆ ಗೊಂದಲ ಉಂಟುಮಾಡಿದ್ದರಿಂದ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿಹೋದವು. ಉದ್ಯೋಗ ಸೃಷ್ಟಿಯಾಗೋದಲ್ಲ, ಉದ್ಯೋಗ ನಷ್ಟವಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಇಳಿಸುವ ವಿಚಾರದಲ್ಲಿ ಅವರು ಸಂಪೂರ್ಣ ಸೋತಿದ್ದಾರೆ. ಮೊದಲು 400-450 ರೂ.ಗಳಿದ್ದ ಅಡುಗೆ ಅನಿಲದ ಬೆಲೆ ಈಗ 900 ರೂ.ಗಳನ್ನು ಮುಟ್ಟಿದೆ. ಅದಕ್ಕವರು, 6 ಲಕ್ಷ ಮನೆಗಳಿಗೆ ಸಿಲಿಂಡರ್ ಕೊಟ್ಟಿದ್ದೇವಂತ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅದನ್ನು ಕೊಟ್ಟಿದ್ದರೂ ಅದರ ಹೊರೆಯನ್ನು ಮಧ್ಯಮ ವರ್ಗದ ಮೇಲೆ ವರ್ಗಾಯಿಸಿದ್ದಾರೆ. ಮಧ್ಯಮ ವರ್ಗದ ಜನ ಇವೆಲ್ಲದರ ಮಧ್ಯೆ ನಲುಗಿಹೋಗಿದ್ದಾರೆ. ಈ ಸರ್ಕಾರದ ಬಳಿ ಕೋಮುಸೌಹಾರ್ದತೆಯ ಮಾತೇ ಇಲ್ಲ. ಸರ್ವೇ ಜನಾ ಸುಖಿನೊ ಭವಂತು ಅಂತಾರಾದರೂ ಆ ಸುಖ ಬರೀ ಬಿಜೆಪಿ ಜನರಿಗೆ ಮಾತ್ರ! ದಲಿತರ ಮೇಲೆ ದಾಳಿಗಳಾಗುತ್ತಿವೆ, ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ, ಅಲ್ಪಸಂಖ್ಯಾತರನ್ನು ಅವರೇ ಕೊಲೆ ಮಾಡುತ್ತಿದ್ದಾರೆ, ವಿಚಾರವಾದಿಗಳ ಕಗ್ಗೊಲೆ ಮಾಡಲಾಗುತ್ತಿದೆ. ಆದ್ದರಿಂದ ಮೋದಿ ಸರ್ಕಾರ ಅತ್ಯಂತ ಕೆಟ್ಟ, ದುಷ್ಟ ಸರ್ಕಾರವಾಗಿದೆ. ಅದನ್ನು ಕಿತ್ತೊಗೆಯಬೇಕೆಂಬುದೇ ನಮ್ಮೆಲ್ಲರ ಆಶಯ.
ಪ್ರಶ್ನೆ: ಭಾರತದ ಕಾರ್ಮಿಕ ಚಳವಳಿಯ ಮೇಲೆ ಜಾತಿ-ಮತಧರ್ಮಗಳಂತಹ Identity ರಾಜಕಾರಣದ ಛಾಯೆ ಅಂಟಿದೆಯೆ?
ಎಚ್ ವಿ ಎ: ಬಹುಶಃ ಕಾರ್ಮಿಕ ಸಂಘಟನೆಗಳ ಆರಂಭದ ದಿನಗಳಲ್ಲಿ ಈ ಅಂಶ ಹೆಚ್ಚು ಕೆಲಸ ಮಾಡಿರಲಿಲ್ಲ. ಆದರೆ ಈಗ ಕಾರ್ಮಿಕರಲ್ಲಿ ಬೇಕೋಬೇಡವೋ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ತಮ್ಮ ಜಾತಿಯಿಂದ ಗುರುತಿಸಿಕೊಂಡಾಗ ಕೆಲವು ರಿಯಾಯಿತಿಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದೋ ಇಲ್ಲವೇ ಒಮ್ಮೊಮ್ಮೆ ಸಂಘಗಳೊಳಗೆ ಮೀಸಲಾತಿಯ ಸೌಲಭ್ಯ ಪಡೆಯಬಹುದೆಂದೋ ಹಲವು ಕಾರಣಗಳಿಂದಾಗಿ ಈ ರೀತಿ ಆಗುತ್ತಿರಬಹುದು. ಸಮಾಜದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಸಹಜವಾಗಿಯೇ ಇಲ್ಲೂ ಇಣುಕುತ್ತಿದೆ. ಆದರೆ ಕಾರ್ಮಿಕರು ಜಾತಿ-ಮತಧರ್ಮಗಳಿಂದ ಗುರುತಿಸಿಕೊಳ್ಳುವುದು ತಾತ್ಕಾಲಿಕ ಪ್ರಕ್ರಿಯೆ ಎಂಬುದು ನನ್ನ ತಿಳಿವಳಿಕೆ. ಇಂದು ವಿವಿಧ ಜಾತಿಗಳ ಜನರು ಉದ್ಯೋಗದಲ್ಲಿ ಮೀಸಲಾತಿಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಇಲ್ಲಿ ನಿಜವಾದ ಸಮಸ್ಯೆ ಏನೆಂದರೆ ಉದ್ಯೋಗ ಸೃಷ್ಟಿಯಾಗದೆ ಮೀಸಲಾತಿಯ ಪ್ರಶ್ನೆಗೆ ಅರ್ಥವಿರುವುದಿಲ್ಲ. ಈಗ ಆಗುತ್ತಿರುವುದು Jobless growth (ಉದ್ಯೋಗರಹಿತ ಬೆಳವಣಿಗೆ) ಅಲ್ಲ, Jobloss growth (ಉದ್ಯೋಗನಷ್ಟ ಬೆಳವಣಿಗೆ). ಉದ್ಯೋಗಸೃಷ್ಟಿಯಾಗುವ ವಿಶ್ವಾಸವೂ ಇಲ್ಲದಂತಾಗಿದೆ. ಉದ್ಯೋಗದ ವಿಷಯದಲ್ಲಿ ಭ್ರಮನಿರಸನವಾಗಲಿದೆ. ಉದ್ಯೋಗಗಳೇ ಇಲ್ಲದಿದ್ದಾಗ ಜಾತಿಮತಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲಲ್ಲೇ ನಿಂತ ನೀರನ್ನು ಒಂದು ದೊಡ್ಡ ಪ್ರವಾಹ ಕೊಚ್ಚಿಕೊಂಡು ಹೋಗುತ್ತದೆ. ಬಂಡವಾಳಶಾಹಿಯ ಆರ್ಥಿಕ ಧೋರಣೆ ಮತ್ತು ಫ್ಯಾಸಿಸ್ಟ್ ನೀತಿಗಳಿಂದಾಗಿ ಅಂತಹ ಒಂದು ದಿನ ಬರಲಿದೆ. ಬಿಜೆಪಿಯವರಲ್ಲಿ ಅಸಹಿಷ್ಣುತೆ ತುಂಬಿತುಳುಕುತ್ತಿದೆ. ಹಿಂದೂ ನಾವೆಲ್ಲಾ ಒಂದು ಎನ್ನುತ್ತಾರಾದರೂ ಸವರ್ಣೀಯರು, ಅವರ್ಣೀಯರು ಎಂದು ಅವರು ಕರೆಯುವ ಎಲ್ಲರನ್ನೂ ಒಂದೇ ಶ್ರೇಣಿಯೊಳಗೆ ತರಲು ಖಂಡಿತಾ ತಯಾರಿಲ್ಲ. ರೋಹಿತ್ ವೇಮುಲನನ್ನು ವ್ಯವಸ್ಥಿತವಾಗಿ ಕೊಲೆಗೈದರು. ಈ ಸರ್ಕಾರವನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್ ವರ್ಣಾಶ್ರಮವನ್ನು ಬಿಟ್ಟಿಲ್ಲ, ಬಿಟ್ಟುಬಿಡಿ ಅಂತಲೂ ಹೇಳಿಲ್ಲ. ಹಾಗೇನಾದರೂ ವರ್ಣಾಶ್ರಮವನ್ನು ಬಿಟ್ಟರೆ ಆರೆಸ್ಸೆಸ್ ಬಾಗಿಲು ಮುಚ್ಚಿದಂತೆಯೇ
ಈ ಸದ್ಯಕ್ಕಂತೂ ಜಾತಿಮತಗಳ ಛಾಯೆ ಖಂಡಿತಾ ಇದೆ. ಕಾರ್ಮಿಕ ಸಂಘಟನೆಗಳಲ್ಲೂ ಹಲವು ಜಾತಿ ಸಂಘಗಳು ಬಂದಿವೆ. ಆದರೆ ಅವುಗಳು ಹೋರಾಟಗಳನ್ನು ನಿಲ್ಲಿಸಲು ಸಮರ್ಥವಾಗಿಲ್ಲ. ಉದಾಹರಣೆಗೆ, ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮೋದಿ ತರಲು ಹೊರಟ ಕಾನೂನಿನ ವಿರುದ್ಧ ಎಲ್ಲರೂ ಸೇರಿಯೇ ಮುಷ್ಕರ ಮಾಡಿದೆವು. ಆಗ ಜಾತಿಯ ಬಗ್ಗೆ ಯಾರೂ ಚರ್ಚಿಸಲಿಲ್ಲ, ಮೋದಿಯ ವಿರುದ್ಧ ಅವರ ಜಾತಿಯ ಕಾರ್ಮಿಕನೂ ಪ್ರತಿಭಟಿಸಿದ್ದಾನೆ! ಆದ್ದರಿಂದ ಇವೆಲ್ಲಾ ದೀರ್ಘಕಾಲದಲ್ಲಿ ಉಳಿಯುವಂತಹದ್ದಲ್ಲ, ತಾತ್ಕಾಲಿಕ ವಿದ್ಯಮಾನ ಎಂಬುದು ನನ್ನ ಅನಿಸಿಕೆ.
ಪ್ರಶ್ನೆ: ಮೇ ದಿನಾಚರಣೆಯ ಅಂತರರಾಷ್ಟ್ರೀಯ ಹೋರಾಟದ ಮಹತ್ವವನ್ನು ಹಿಂದೆ ಸರಿಸಿ ಅದನ್ನು ವಿಶ್ವ ಕರ್ಮ ದಿನಾಚರಣೆ ಎಂದು ಆಚರಿಸಬೇಕೆನ್ನುವುದು ಆರೆಸ್ಸೆಸ್ ಹುನ್ನಾರ ಅಲ್ಲವೇ?
ಎಚ್ ವಿ ಎ: ಹೌದು, ಇವತ್ತೂ ಕೂಡ ಆರೆಸ್ಸೆಸ್ಸಿನ ಕಾರ್ಮಿಕ ಸಂಘಟನೆ ಬಿಎಂಎಸ್ ಮೇ ದಿನಾಚರಣೆಯನ್ನು ಒಪ್ಪಿಕೊಂಡಿಲ್ಲ. ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೆಲವೆಡೆ ಮೇ ದಿನಕ್ಕೆ ರಜೆ ಘೋಷಿಸಿಲ್ಲ. ನಮ್ಮ ರಾಜ್ಯದಲ್ಲೂ ಈ ದಿನ ಅಧಿಕೃತ ರಜೆಯಿರಲಿಲ್ಲ. ವಿಚಿತ್ರ ರಾಜಕೀಯ ಸನ್ನಿವೇಶವೊಂದರಲ್ಲಿ 1983ರ ಮೊದಲು ಸಣ್ಣ ಅವಧಿಗೆ ರಾಮಕೃಷ್ಣ ಹೆಗಡೆಯವರು ಬಿಜೆಪಿ ಮತ್ತು ಕಮ್ಯುನಿಸ್ಟರಿಬ್ಬರನ್ನೂ ಅವಲಂಬಿಸಿ ಸರ್ಕಾರ ರಚಿಸಿದ್ದರು. ಆಗ ಕಾಮ್ರೇಡ್ ಎಂ.ಎಸ್.ಕೃಷ್ಣನ್ ಮತ್ತು ಕಾಮ್ರೇಡ್ ಸೂರ್ಯನಾರಾಯಣರಾವ್ ಸೇರಿದಂತೆ 6 ಮಂದಿ ಕಮ್ಯುನಿಸ್ಟ್ ಶಾಸಕರಿದ್ದರು. ನಾವು ಎಐಟಿಯುಸಿಯಿಂದ ಒತ್ತಡ ಹಾಕಿದ ನಂತರ ರಾಜಕೀಯ ಅನಿವಾರ್ಯತೆಯಿಂದಾಗಿ ಸರ್ಕಾರ ಅಂದು ಮೇ ದಿನಾಚರಣೆಗೆ ಅಧಿಕೃತ ರಜೆ ಘೋಷಿಸಿತು. ಕಾರ್ಮಿಕರು ಮೇ ದಿನವನ್ನಾಚರಿಸಲಿ ಎಂದೇನು ಹೆಗಡೆಯವರು ರಜೆ ಕೊಡಲಿಲ್ಲ. ಬಿಎಂಎಸ್ ಮೇ ದಿನಾಚರಣೆಯನ್ನು ಒಪ್ಪಿಕೊಂಡಿಲ್ಲ, ಅವರು ಅದನ್ನು ವಿಶ್ವಕರ್ಮ ದಿನಾಚರಣೆ ಎಂದೇ ಹೇಳುವುದು.
ಪ್ರಶ್ನೆ: ಸ್ವಾತಂತ್ರ್ಯಾನಂತರ 80ರ ದಶಕದ ವರೆಗೂ ಸಾಧ್ಯವಾದಂತೆ ಕಾರ್ಮಿಕರು ಕಮ್ಯುನಿಸ್ಟ್ ಮುಖಂಡರನ್ನು ತಮ್ಮ ರಾಜಕೀಯ ಪ್ರತಿನಿಧಿಗಳಾಗಿ ಪಾರ್ಲಿಮೆಂಟ್, ವಿಧಾನಸಭೆಗಳಿಗೆ ಕಳುಹಿಸಲು ಈಗ ಏಕೆ ಸಾಧ್ಯವಾಗುತ್ತಿಲ್ಲ?
ಎಚ್ ವಿ ಎ: ಆಗ ಕಾರ್ಮಿಕ ವರ್ಗದಲ್ಲಿ ಅಷ್ಟೊಂದು ವಿಭಜನೆ ಕಾಣಿಸುತ್ತಿರಲಿಲ್ಲ. ಎಐಟಿಯುಸಿ 1920ರಲ್ಲೇ ಹುಟ್ಟಿಕೊಂಡು, ಸಿಐಟಿಯು 1970ರ ದಶಕದಲ್ಲಿ ಪ್ರಾರಂಭವಾಗಿದ್ದು. ಪ್ರಧಾನಮಂತ್ರಿಯಾದ ಜವಾಹರಲಾಲ್ ನೆಹರು ಅವರೂ ಸೇರಿದಂತೆ ಹಲವಾರು ನಾಯಕರು ಎಐಟಿಯುಸಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿ.ವಿ.ಗಿರಿಯವರು ರಾಷ್ಟ್ರಪತಿಗಳಾದರು, ಸುಭಾಷ್ಚಂದ್ರ ಬೋಸ್ ಐಎನ್ಎ ರಚಿಸಿದರು. ಹಾಗಾಗಿ ಎಐಟಿಯುಸಿಗೆ ಅಂತಹ ಒಂದು ಗುಣವಿತ್ತು. ಆದರೆ ಸ್ವಾತಂತ್ರ್ಯಾನಂತರ ಐಎನ್ಟಿಯುಸಿ ಬೇರೆಯಾಯಿತು. ಪ್ರತಿಯೊಂದು ರಾಜಕೀಯ ಪಕ್ಷವೂ ತನಗೊಂದು ಕಾರ್ಮಿಕ ಸಂಘಟನೆ ಬೇಕೆಂದು ಕಾರ್ಮಿಕ ವರ್ಗವನ್ನು ಒಡೆದಿದೆ. ಆದ್ದರಿಂದ ಕಾರ್ಮಿಕ ವರ್ಗ ಗೊಂದಲದಲ್ಲಿದೆ, ಯಾರನ್ನಂತ ಗುರುತಿಸುತ್ತದೆ? ಈಗ ನಮ್ಮ ನಮ್ಮಲೇ ಒಡಕು. ಉದಾಹರಣೆಗೆ ಇಷ್ಟೆಲ್ಲಾ ಐಕ್ಯ ಹೋರಾಟಗಳೆಂದು ಮಾಡಿದರೂ ಕಾರ್ಮಿಕ ಸಂಘದ ಚುನಾವಣೆಗಳು ಬಂದಾಗ ನಾವುಗಳೇ ನಾಯಿಬೆಕ್ಕುಗಳಂತೆ ಕಚ್ಚಾಡುತ್ತೇವೆ. ಇನ್ನೂ ಆ ಜಾಗೃತಿ ಬಂದಿಲ್ಲ. ಆದ್ದರಿಂದ ಕಾರ್ಮಿಕರಲ್ಲಿ ವರ್ಗಜಾಗೃತಿ ತರಬೇಕು, ನಮ್ಮ ರಾಜಕೀಯದ ಬಗ್ಗೆ ಕಾರ್ಮಿಕ ವರ್ಗದಲ್ಲಿ ವಿಶ್ವಾಸ ಮೂಡಿಸಬೇಕು ಎಂಬ ಭಾವನೆ, ಬಿಎಂಎಸ್ ಹೊರತಾದ ಕೇಂದ್ರೀಯ ಕಾರ್ಮಿಕ ಸಂಘಟನೆಗಳೂ ಸೇರಿದಂತೆ ಅವುಗಳ ನಾಯಕತ್ವದಲ್ಲಿ ಮೊದಲು ಬಾರದಿದ್ದರೆ ನಿಜವಾದ ಐಕ್ಯತೆ ಸಾಧ್ಯವಾಗುವುದಿಲ್ಲ.
ಚುನಾವಣೆಗಳು ಬಗ್ಗೆ ಹೇಳುವುದಾದರೆ ಆಗೆಲ್ಲಾ ಇಷ್ಟೊಂದು ಮುಖಂಡರು, ಯೂನಿಯನ್ಗಳು ಇರಲಿಲ್ಲ. ಕೆಲವರು ನಾಯಕರನ್ನು ಗುರುತಿಸುತ್ತಿದ್ದ ಕಾರ್ಮಿಕ ವರ್ಗ ಅವರಿಗೆ ಮತ ಚಲಾಯಿಸುತ್ತಿತ್ತು. ಕಮ್ಯುನಿಸ್ಟ್ ಪಕ್ಷಕ್ಕೆ ಮತ ಹಾಕುತ್ತಿತ್ತೆಂದು ಹೇಳಲಾರೆ. “ಅವ ನಮ್ಮ ಲೀಡರ್” ಎಂಬ ಭಾವನೆಯಿತ್ತು. ಆದರೀಗ ಎಲ್ಲವನ್ನೂ ಜಾತಿ ಕಂಗಳಲ್ಲೇ ನೋಡುತ್ತಿರುವ ಕಾಲದಲ್ಲಿ, ಆ “ನಮ್ಮತನ” ಎಂಬುದು ಕಾಣುತ್ತಿಲ್ಲ. ಚುನಾವಣೆಗಳಲ್ಲಿ ಹಣ ಮತ್ತು ಜಾತಿ ತೀವ್ರ ಪರಿಣಾಮ ಬೀರುತ್ತಿವೆ. ಅವತ್ತು ಚುನಾವಣೆಗಳಲ್ಲಿ ಜಾತಿ ಮತ್ತು ಹಣಗಳ ಪ್ರಾಬಲ್ಯ ಇರಲಿಲ್ವೇ ಎಂದರೆ ಖಂಡಿತವಾಗಿ ಈ ಪ್ರಮಾಣದಲ್ಲಿರಲಿಲ್ಲ ಎಂದೇ ಹೇಳಬಹುದು. ಯಾರೋ ಕೆಲವರು ಖರ್ಚು ಮಾಡುತ್ತಿದ್ದುದು ನಿಜ. ಕಾರ್ಮಿಕರಂಗದ ಮುಖಂಡರನ್ನು ಸಮಾಜ ಗುರುತಿಸುತ್ತಿತ್ತು. ಉದಾಹರಣೆಗೆ, ನಮ್ಮ ಹಿರಿಯ ಸಂಗಾತಿಗಳು ಎಂ.ಸಿ.ನರಸಿಂಹನ್, ಗೋವಿಂದನ್, ವಾಸನ್ ಇವರೆಲ್ಲಾ ಕೆಜಿಎಫ್ ನಲ್ಲಿ ಗಣಿ ಕಾರ್ಮಿಕರನ್ನು ಸಂಘಟಿಸಿದ್ದರು. ಕಾಮ್ರೇಡ್ ನರಸಿಂಹನ್ ಅವರ ಬದುಕು ಹೇಗಿತ್ತೆಂದರೆ, ಕಮ್ಯುನಿಸ್ಟ್ ಪಕ್ಷ ಐದು ರೂಪಾಯಿ ಗೌರವಧನ ನೀಡುತ್ತಿತ್ತು. ಅವರಿಗೆ ಯಾವ ದುರಭ್ಯಾಸವೂ ಇರಲಿಲ್ಲವಾದ್ದರಿಂದ ಅವರು ಆ ಹಣವನ್ನೂ ಯಾರಿಗಾದರೂ ಕೊಟ್ಟುಬಿಡುತ್ತಿದ್ದರು. ಅವರ ಊಟ ಅಲ್ಲೇ ಇದ್ದ ಕಾರ್ಮಿಕರ ಮನೆಗಳಲ್ಲಾಗುತ್ತಿತ್ತು. ಈ ಕಾರ್ಮಿಕರು ದಲಿತ ಸಮುದಾಯದವರಾಗಿರುತ್ತಿದ್ದರು. ಒಂದು ಕಮ್ಯೂನ್ನಲ್ಲಿ ಜೀವನ ಸಾಗಿಸುತ್ತಿದ್ದರು. ಕಾರ್ಮಿಕ ನಾಯಕರು ಕಾರ್ಮಿಕರ ಬದುಕಿನ ಜೊತೆ ಬೆಸದುಹೋಗಿದ್ದರು. ಹಾಗಾಗಿ ಅವರಲ್ಲಿ ತಮ್ಮ ರಾಜಕೀಯ ಪ್ರಜ್ಞೆ ತುಂಬಲು ಸಾಧ್ಯವಾಗಿತ್ತು. ಆದ್ದರಿಂದಲೇ ಈತ ನಮ್ಮ ನಾಯಕ ಎಂದು ಅವರಿಗೆ ಓಟ್ ಹಾಕುತ್ತಿದ್ದರು. ಜಾತಿಯಿಂದ ಬ್ರಾಹ್ಮಣನಾಗಿದ್ದ ಕಾ||ಎಂಸಿಎನ್ ದಲಿತರ ಮತಗಳಿಂದ ಗೆದ್ದು ಬಂದ ಇತಿಹಾಸವಿದೆ. ಕಮ್ಯುನಿಸ್ಟ್ ಪಕ್ಷ ಅಂತಹದ್ದೇನೂ ಬೆಳೆದಿಲ್ಲದ ಸಂದರ್ಭದಲ್ಲೂ ಅವರು ಪಾರ್ಲಿಮೆಂಟಿಗೆ ಸ್ಪರ್ಧಿಸಿದಾಗ 1 ಲಕ್ಷ ಮತ ಚಲಾವಣೆಯಾಗಿತ್ತು. ಆದರೆ ಇವತ್ತು ಹಾಗಾಗುತ್ತಿಲ್ಲ. ಅಷ್ಟೇಕೆ, ನಾವು ನೀರು ಚೆಲ್ಲಲಾರದಷ್ಟು ಅವರು ಹಣ ಚೆಲ್ಲುತ್ತಿದ್ದಾರೆ. ಅದೇನೇ ಇರಲಿ, ಇವೆಲ್ಲವೂ ಒಂದು ಸ್ಥಿತ್ಯಂತರದ ಕಾಲಘಟ್ಟ. ಬಹುಕಾಲ ಹೀಗೇ ಇರಲು ಸಾಧ್ಯವಿಲ್ಲ. ನಾವು ತಾಳ್ಮೆಯಿಂದ ಕಾಯಬೇಕು. ಆದ್ದರಿಂದ ಎಡಚಿಂತನೆಯ ಟ್ರೇಡ್ ಯೂನಿಯನ್ ನಾಯಕರೆಲ್ಲಾ ಒಂದಾಗಿ ನಾವು ರಾಜಕೀಯವಾಗಿ ಬೆಳೆಯುವಂತಹ ಆಲೋಚನೆ ಮಾಡಿದರೆ, ಆಗ ನಿಜವಾಗಿ ಕಾರ್ಮಿಕರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ, ಗತವೈಭವ ಮರುಕಳಿಸುತ್ತದೆ. 1952ರ ಮೊದಲನೇ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷವೇ ಪ್ರತಿಪಕ್ಷವಾಗಿತ್ತು. ಏಕೆಂದರೆ ಕಮ್ಯುನಿಸ್ಟರು ಜನಪರವಾಗಿ ಅಷ್ಟೊಂದು ಹೋರಾಟ ನಡೆಸಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಆರೆಸ್ಸೆಸ್ -ಬಿಜೆಪಿಗಳಲ್ಲ, ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಮುಸ್ಲಿಮ್ ಲೀಗ್. ಆದ್ದರಿಂದ ಜನ ಕಮ್ಯುನಿಸ್ಟ್ ಪಕ್ಷವನ್ನು ವಿರೋಧಪಕ್ಷವಾಗಿ ಒಪ್ಪಿದರು. ಸಂಸದೀಯ ಪ್ರಜಾತಂತ್ರಕ್ಕೂ ನಮ್ಮ ಕೊಡುಗೆ ಸಾಕಷ್ಟಿದೆ. ಆ ದಿನಗಳು ಮತ್ತೆ ಬರಲಿವೆ ಎಂಬ ಆಶಾಭಾವನೆ ನನಗಿದೆ.
ಪ್ರಶ್ನೆ: ಶ್ರಮಿಕ ವರ್ಗ ಕ್ರಾಂತಿಯನ್ನು ಮುನ್ನಡೆಸುತ್ತದೆ, ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ ಎಂಬುದು ಮಾರ್ಕ್ಸ್, ಲೆನಿನ್ ಆದಿಯಾಗಿ ಎಲ್ಲಾ ಕಮ್ಯುನಿಸ್ಟರ ನಂಬುಗೆ. ಆ ವರ್ಗಪ್ರಜ್ಞೆ ಇಂದಿನ ಕಾರ್ಮಿಕವರ್ಗದಲ್ಲಿ ಜಾಗೃತವಾಗಿದೆಯೇ ಮತ್ತು ಜಾಗೃತಗೊಳಿಸುವಂತಹ ಯತ್ನ ನಡೆದಿದೆಯೇ?
ಎಚ್ ವಿ ಎ: ಕಾರ್ಮಿಕ ವರ್ಗ ಕ್ರಾಂತಿಯ ಮುಂಚೂಣಿಯಲ್ಲಿರುತ್ತದೆ ಎಂದು ಲೆನಿನ್ ಕೂಡ ಹೇಳಿದ್ದರು. ಪ್ರತಿ ದೇಶವೂ ತನ್ನದೇ ಆದ ಅಭಿವೃದ್ಧಿ ಪಥವನ್ನು ಹೊಂದಿರುತ್ತದೆ. ಈ ಸಮಾಜ ಅದರದ್ದೇ ಆದ ಪ್ರಜ್ಞೆ ಪಡೆದಿದೆ. ಆದ್ದರಿಂದ ರಷ್ಯಾದಲ್ಲಾದ ಕ್ರಾಂತಿ ಚೀನಾದಲ್ಲಾಗಲಿಲ್ಲ, ಚೀನಾದಲ್ಲಾಗಿದ್ದು ಕ್ಯೂಬಾದಲ್ಲಾಗಲಿಲ್ಲ. ಹಾಗಾಗಿ ಕಾಪಿ ಪುಸ್ತಕದಂತೆ ಎಲ್ಲಿಯೂ ನಡೆಯುವುದಿಲ್ಲ. ಇಲ್ಲಿ ನಮ್ಮದೇ ಆದ ಪರಿಸ್ಥಿತಿಗಳಿವೆ. ನಮ್ಮ ದೇಶದಲ್ಲಿ ಕಾರ್ಮಿಕ ಚಳವಳಿ ಇವತ್ತಿಗೂ ಕೂಡ ಪ್ರಬಲವಾಗಿಯೇ ಇದೆ ಎಂಬುದಂತೂ ನಿಜ. ಅದು ದುರ್ಬಲವಾಗಿದ್ದರೆ ಇಷ್ಟೊತ್ತಿಗಾಗಲೇ ನಮ್ಮನ್ನು ಸರ್ಕಾರ ಎಲ್ಲೋ ಎಳೆದುಕೊಂಡು ಹೊರಟುಹೋಗಿರುತ್ತಿತ್ತು. ಇವತ್ತಿಗೂ ದೇಶದಲ್ಲಿ ಸಂಪೂರ್ಣ ಮುಷ್ಕರ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಇದೇ ಜನವರಿ 8-9ರಂದು 20 ಕೋಟಿ ಕಾರ್ಮಿಕರು ದೇಶಾದ್ಯಂತ ಮುಷ್ಕರ ಹೂಡಿದ್ದರು. ಈ ಸಾಮರ್ಥ್ಯ ಬೇರೆ ಯಾರಿಗಿದೆ? ಆದರೆ ಎಲ್ಲೋ ನಾವು ಹಳಿ ತಪ್ಪಿದ್ದೇವೆನ್ನುವುದು ನಿಜ. ಮುಖ್ಯವಾಗಿ ಯುರೋಪಿಯನ್ ಅಥವಾ ರಷ್ಯನ್ ಸಮಾಜದಂತೆ ಭಾರತೀಯ ಸಮಾಜವನ್ನು ನೋಡಲಾಗದು. ವರ್ಣಾಶ್ರಮವನ್ನು ಆಧರಿಸಿರುವ ನಮ್ಮ ಸಮಾಜದಲ್ಲಿ ಜಾತಿ, ದೇವರು, ಮೂಢನಂಬಿಕೆಗಳು ಅತಿಯಾಗಿದ್ದು ಇಲ್ಲಿ ವರ್ಗಪ್ರಜ್ಞೆ ಮೂಡಿಸುವುದು ಸುಲಭದ ಮಾತಲ್ಲ. ಅತಿಹೆಚ್ಚೆಂದರೆ ಒಬ್ಬ ಕಾರ್ಮಿಕ 8 ಗಂಟೆಗಳ ಕಾಲ ಕಾರ್ಖಾನೆಯಲ್ಲಿ ಯೂನಿಫಾರ್ಮ್ ಹಾಕಬಹುದು, ಅದಾದ ನಂತರ ಅವನು ತನ್ನ ವರ್ಗಪ್ರಜ್ಞೆಯನ್ನು ಅಲ್ಲೇ ಕಟ್ಟಿಟ್ಟು ಮನೆಗೆ ಹೋಗುತ್ತಾನೆ. ಆದ್ದರಿಂದ ನಾವುಗಳು ಹೆಚ್ಚು ಆಳವಾಗಿ ಕೆಲಸ ಮಾಡಬೇಕಿದೆ. ಮೌಢ್ಯ ನಿರ್ಮೂಲನೆಗಾಗಿ ನಾವು ಎಡಪಂಥೀಯ ಕಾರ್ಮಿಕ ಸಂಘಟನೆಗಳು ತೀಕ್ಷ್ಣವಾಗಿ ಹೋರಾಡಬೇಕಿದೆ. ಆದರೆ ಅದಾಗುತ್ತಿಲ್ಲ. ನಮ್ಮಲ್ಲಿ ಅಂತಹ ನಂಬಿಕೆ ಇಲ್ಲದಿದ್ದರೂ ಜನರಲ್ಲಿ ಆ ನಂಬಿಕೆಗಳಿವೆ. ಚುನಾವಣೆಗಳೆಂದರೆ ಜನರ ಮನಸ್ಸಿನ ವಿರುದ್ಧ ಹೋಗಲು ಸಾಧ್ಯವಿಲ್ಲ. ಇಂತಹ ಅಡೆತಡೆಗಳಿಂದಾಗಿ ನಾವು ವರ್ಗಪ್ರಜ್ಞೆ ಮೂಡಿಸಲು ಸಾಧ್ಯವಾಗಿಲ್ಲ. ಈ ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿಯೇ ಇಂದಲ್ಲ ನಾಳೆ ಸತ್ಯದ ಅರಿವಾಗುತ್ತದೆ.
ಇಷ್ಟೊಂದು ಐಕ್ಯ ಹೋರಾಟಗಳು ನಡೆಯುತ್ತಿರುವುದು ಸಮಾಧಾನದ ವಿಚಾರವೇ.. ಕಮ್ಯುನಿಸ್ಟ್ ಚಳವಳಿಯ ಏಕೀಕರಣ ಎಂದೊಡನೆ ಕೆಲವು ಕಮ್ಯುನಿಸ್ಟರೇ ಹೆದರಿಬಿಡುತ್ತಾರೆ, ಆ ಹೆದರಿಕೆ ಹೋಗಬೇಕು. ಸಮಾಜವಾದಿ ಕ್ರಾಂತಿಯ ಬಗ್ಗೆ ಹೇಳುತ್ತಿಲ್ಲವಾದರೂ, ಕನಿಷ್ಟ ಏನಾದರೂ ಅರ್ಥಪೂರ್ಣ ಬದಲಾವಣೆ ತರಬೇಕಿದೆ ಎಂದಾದರೆ ಮೊದಲು ಎಡಪಂಥೀಯರು ಒಂದಾಗಬೇಕು. ನಾವೇ ನಿಜವಾದ ಕಮ್ಯುನಿಸ್ಟರು, ಬೇರೆಯವರಲ್ಲ; ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ಸಮಾನದೂರದಲ್ಲಿರಬೇಕು ಎಂದೆಲ್ಲಾ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ವಾಸ್ತವ ಪರಿಸ್ಥಿತಿಗೆ ಉತ್ತರವಾಗಲಾರದು.
ಪ್ರಶ್ನೆ: ಒಟ್ಟಾರೆ ಕಾರ್ಮಿಕ ಚಳವಳಿ ಮತ್ತದರ ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೇಗಿದೆ?
ಎಚ್ ವಿ ಎ: ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಟ್ರೇಡ್ ಯೂನಿಯನ್ಗಳಲ್ಲಿ ಸಂಘಟಿತರಾಗುತ್ತಿದ್ದಾರೆ. ಅಂಗನವಾಡಿ, ಬಿಸಿಯೂಟ, ಆಶಾ, ಇತ್ಯಾದಿಗಳಂತಹ ಮಹಿಳೆಯರ ದುಡಿಮೆಯನ್ನೇ ಅವಲಂಬಿಸಿರುವ ಕೆಲವು ಕ್ಷೇತ್ರಗಳಿವೆ. ಅದರಲ್ಲೂ ಎಐಟಿಯುಸಿಯಿಂದ ನಾವು ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸಲು ವಿಶೇಷವಾಗಿ ಗಮನ ಹರಿಸಿದ್ದೆವು. ಲಕ್ಷಗಟ್ಟಲೆ ಮಹಿಳೆಯರು ಇವತ್ತು ಸಂಘಟಿತರಾಗುತ್ತಿದ್ದಾರೆ. ಖಂಡಿತವಾಗಿ ಅವರಲ್ಲಿ ಒಂದು ಕಾರ್ಮಿಕ ಪ್ರಜ್ಞೆ ಮೂಡುತ್ತಿದೆ. ಆದರೆ ಮಹಿಳಾ ಕಾರ್ಮಿಕರ ಸಂಘಟನೆ ಬೆಳೆದಿರುವ ಪ್ರಮಾಣಕ್ಕೆ ಅನುಗುಣವಾಗಿ ಮಹಿಳೆಯರ ನಾಯಕತ್ವ ಬೆಳೆದಿಲ್ಲ. ನಮ್ಮ ಪುರುಷಪ್ರಧಾನ ಸಮಾಜ ಅವರಲ್ಲಿ ಪ್ರಜ್ಞಾಪೂರ್ವಕವಾಗಿ ಧೈರ್ಯತುಂಬಿ, ತರಬೇತುಗೊಳಿಸಿ ನಾಯಕತ್ವ ನೀಡಲು ತಯಾರಿಲ್ಲ. ಅವಳಿಗೆ ಆಗುತ್ತದೆಯೆ ಎಂದು ಕಾಲೆಳೆಯುತ್ತಾರೆ. ಪುರುಷನೊಬ್ಬ ನಾಯಕತ್ವ ನೀಡಲು ಸಾಧ್ಯವಾದರೆ ಅವಳಿಗೇಕೆ ಸಾಧ್ಯವಾಗದು? ಎಐಟಿಯುಸಿಯಲ್ಲಿ ಒಂದು ಪ್ರಯೋಗ ಮಾಡಿದ್ದಕ್ಕಾಗಿ ಕೇಂದ್ರದಲ್ಲಿ ಈಗ ಏಳೆಂಟು ಮಂದಿ ನಾಯಕಿಯರು ತಯಾರಾಗಿದ್ದಾರೆ. ಈ ಬಾರಿ ನಮ್ಮ ಕೆಎಸ್ಆರ್ಟಿಸಿ ಫೆಡರೇಷನ್ನ ಸಮ್ಮೇಳನದಲ್ಲಿ ನಮ್ಮ ಸಂಘಟನಾ ಸಂವಿಧಾನಕ್ಕೆ ತಿದ್ದುಪಡಿ ತಂದು ಪದಾಧಿಕಾರಿಗಳ 34 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದೇವೆ. ಪ್ರಜ್ಞಾಪೂರ್ವಕವಾಗಿ ನಾವು ಮಹಿಳೆಯರನ್ನು ಹೋರಾಟದ ಮುಂಚೂಣಿಗೆ ತಂದರೆ ಬರುತ್ತಾರೆ. ಅವರನ್ನು ಪ್ರಜ್ಞಾಪೂರ್ವಕವಾಗಿ ನಾಯಕತ್ವಕ್ಕೆ ತರದ ಹೊರತು ಅವರು ಭಾಗವಹಿಸುವುದು ಕಡಿಮೆ. ಇವತ್ತು ಆ ಪ್ರಯತ್ನವಾಗಬೇಕಿದೆ. ಅದರಲ್ಲೂ ಮೇ ದಿನದ ಸಂದರ್ಭದಲ್ಲಿ ನಾನು ಹೇಳುವುದಿಷ್ಟು, ಮಹಿಳೆಯರ ದುಡಿಮೆಯ ಕ್ಷೇತ್ರಗಳಲ್ಲಿರುವ ಕಾರ್ಮಿಕ ಸಂಘಟನೆಗಳ ನಾಯಕತ್ವವನ್ನು ಮಹಿಳೆಯರೇ ವಹಿಸಿಕೊಂಡು ಮುನ್ನಡೆಸಬೇಕು. ಇನ್ನೂ ಅವುಗಳು ಪುರುಷರ ಹಿಡಿತದಲ್ಲಿವೆ ಎಂದರೆ ನಾವು ಎಲ್ಲೋ ತಪ್ಪುತ್ತಿದ್ದೇವೆ ಎಂದೋ ಅಥವಾ ನಾವು ನಮ್ಮ ಪಾಳೇಗಾರಿಕೆ ಸಂಸ್ಕೃತಿಯಿಂದ ಹೊರಬಂದಿಲ್ಲ ಎಂದೋ ಅರ್ಥ.
ಒಟ್ಟಾರೆ ಸಮಾಜದ ಮನಸ್ಥಿತಿ ಬದಲಾಗಬೇಕು.ಸುಪ್ರೀಂಕೋರ್ಟ್ ಹೇಳಿದರೂ ಸಮಾನ ಕೆಲಸಕ್ಕೆ ಸಮಾನ ವೇತನ ಖಂಡಿತಾ ಸಿಗುತ್ತಿಲ್ಲ. ಮಹಿಳೆಯರು ಕೆಲಸಕ್ಕೆ ಬಂದರೆ ಅವರಿಗೆ ಹೆರಿಗೆ ಸೌಲಭ್ಯ ನೀಡಬೇಕಾಗುತ್ತದೆ, ಉದ್ಯಮದ ಉತ್ಪಾದಕತೆಗೆ ಕುಂದುಬರುತ್ತದೆ ಎಂದೆಲ್ಲಾ ಹೇಳಿ ಮಹಿಳೆಯರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದು ನಡೆಯುತ್ತಿದೆ! ಸಾರಿಗೆ ಸಂಸ್ಥೆಗಳಲ್ಲಿ ನಾವು ಕಾಣುತ್ತಿದ್ದೇವೆ… ಮಹಿಳಾ ಕಂಡಕ್ಟರ್, ಮೆಕ್ಯಾನಿಕ್ ನೇಮಕಗೊಂಡರು. ಹೆರಿಗೆ, ಮನೆ ಮಕ್ಕಳು ಜವಾಬ್ದಾರಿ, ಇತ್ಯಾದಿ ಅಂತ ಮಹಿಳಾ ಕಂಡಕ್ಟರ್ ರಜೆ ಮೇಲೆ ತೆರಳುತ್ತಾಳೆಂದು ಚಾಲಕ-ಕಮ್-ನಿರ್ವಾಹಕ ಅಂತ ನೇಮಕಾತಿ ಶುರುಮಾಡಿಬಿಟ್ಟರು. ಅವಳು ಡ್ರೈವರ್ ಆಗುವುದಿಲ್ಲ. ಹೀಗೆ ಬುದ್ಧಿವಂತಿಕೆಯಿಂದ ಪರೋಕ್ಷವಾಗಿ ಮಹಿಳೆಯರ ಉದ್ಯೋಗವನ್ನು ಕಸಿದುಕೊಳ್ಳಲು ಸಮಾಜ ಪ್ರಯತ್ನಿಸುತ್ತಲೇ ಇರುತ್ತದೆ. ಮಹಿಳೆಯರೂ ಸಹ ಈ ಮೋಸವನ್ನು ಅರ್ಥಮಾಡಿಕೊಳ್ಳಬೇಕು.
ಬಹಳಷ್ಟು ಸಲ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಬರುವ ಮಹಿಳೆಯರು ಯಾರಿಗೋಸ್ಕರವೋ ಬಂದಂತೆ ತೋರುತ್ತದೆ. “ಈ ಸಮಾಜದಲ್ಲಿ ನಾವೂ ಅರ್ಧದಷ್ಟಿದ್ದೇವೆ, ಟ್ರೇಡ್ ಯೂನಿಯನ್ ನಲ್ಲಿ ನಮ್ಮ ಭಾಗವಹಿಸುವಿಕೆಯೂ ಮಹತ್ವದ್ದು, ನಾವೂ ಪ್ರಜ್ಞಾವಂತರಾಗಿ ನಾಯಕತ್ವ ನೀಡದಿದ್ದರೆ ಸಮಾಜ ಒಂದು ಕಡೆಗೆ ಜೋತುಬೀಳುತ್ತದೆ” ಎಂದು ಅವರಿಗೂ ಅರ್ಥವಾಗಬೇಕಿದೆ. ಕನಿಷ್ಟ ಪಕ್ಷ ಎಡಪಂಥೀಯ ಸಂಘಟನೆಗಳಾದರೂ ಈ ಕೆಲಸ ಮಾಡಬೇಕು. ಎಐಟಿಯುಸಿಯಲ್ಲಿ ಕಾ||ಗುರುದಾಸ್ ದಾಸ್ ಗುಪ್ತಾ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಈ ಕಾರ್ಯ ಕೈಗೊಂಡಿದ್ದರಿಂದ ಹಲವಾರು ಕಡೆ ಅದು ಫಲ ನೀಡುತ್ತಿದೆ.
ಮಹಿಳೆಯರು ಮೌಢ್ಯತೊರೆದು ಸಂಘಟನೆಯಲ್ಲಿ ತೊಡಗಬೇಕಿದೆ. ವಾಸ್ತವದಲ್ಲಿ ತಕ್ಷಣಕ್ಕಿದು ಸುಲಭದ ಕೆಲಸವೆನಿಸುತ್ತಿಲ್ಲ. ಈ ಎಲ್ಲಾ ವಿಷಯಗಳಲ್ಲೂ ನಾವು ಆಳವಾಗಿ ಕ್ರಿಯೆಗಿಳಿಯಬೇಕಿದೆ. ನಾವೀಗ ತೀರಾ ಮೇಲ್ಮೈ ತೇಪೆ ಹಚ್ಚುತ್ತಿದ್ದೇವೆ ಎನಿಸುತ್ತಿದೆ.
ಪ್ರಶ್ನೆ: ಇಂದು ದೇಶದ ಕಾರ್ಮಿಕರ ಮತ್ತು ಕಾರ್ಮಿಕ ಚಳವಳಿಯ ಮುಂದಿರುವ ಗಂಭೀರ ಸವಾಲುಗಳೇನು?
ಎಚ್ ವಿ ಎ: 130 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ಈಗ ಉದ್ಯೋಗಾವಕಾಶಗಳು ಸ್ಥಗಿತಗೊಂಡಿವೆ. ಉದ್ಯೋಗಾವಕಾಶಗಳು ಇಲ್ಲವೆಂದರೆ ಹಾಲಿ ನೌಕರರಿಗೂ ತೊಂದರೆಯಾಗುತ್ತದೆ. ಏಕೆಂದರೆ ಒಂದು ಹಂತದಲ್ಲಿ ನಿರುದ್ಯೋಗಿಗಳು ಹೆಚ್ಚಾದಾಗ, ಅವರು ಮಾಲೀಕರ (ಬಂಡವಾಳಶಾಹಿಯ) ಬಳಿ ಅತಿ ಕಡಿಮೆ ಕೂಲಿಗೂ ದುಡಿಯಲು ತಯಾರಾಗುತ್ತಾರೆ. ಇದೇ ಇವತ್ತಿನ ದಿನಗೂಲಿ ಕಾರ್ಮಿಕರು ಮತ್ತು ಖಾಯಂ ನೌಕರರ ಮಧ್ಯೆ ಏರ್ಪಡುತ್ತಿರುವ ಸಂಘರ್ಷ. ಈಗ ಅರ್ಧದಷ್ಟು ಚುನಾವಣೆ ಮುಗಿದಿದೆ, ಮೇ 23ಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಹಾಗೆ ಮೇ ದಿನಾಚರಣೆ ಮಹತ್ವದ್ದೆಂದೇ ಹೇಳಬಹುದು! ಅಕಸ್ಮಾತ್ ಮೋದಿ ಸರ್ಕಾರ ವಾಪಸ್ ಬಂದರೆ ಏನಾಗತ್ತೆ? ಕಾರ್ಮಿಕರ ಹಿತರಕ್ಷಣೆಗಾಗಿ 100 ವರ್ಷಗಳ ಹೋರಾಟದಿಂದ ನಾವು ಗಳಿಸಿದ ಕಾನೂನುಗಳನ್ನೆಲ್ಲಾ ಇಲ್ಲದಂತಾಗುತ್ತವೆ. ಅದೊಂದು ಲಜ್ಜೆಗೆಟ್ಟ ಕಾರ್ಪೊರೇಟ್ ಸರ್ಕಾರ. ನಾವು ಶ್ರಮದಿಂದ ಕಟ್ಟಿದ್ದ ಸಾರ್ವಜನಿಕ ವಲಯದ ಉದ್ದಿಮೆಗಳನ್ನೆಲ್ಲಾ ಕಾರ್ಪೊರೇಟ್ ಕಂಪನಿಗಳಿಗೆ ಕೊಟ್ಟು ಕಿಕ್ ಬ್ಯಾಕ್ ನುಂಗುತ್ತಿದೆ. ಆದ್ದರಿಂದ ಇವರ ಆರ್ಥಿಕ ನೀತಿಗಳ ವಿರುದ್ಧ ಹೋರಾಡುವುದು ಮತ್ತು ಸಾರ್ವಜನಿಕ ವಲಯವನ್ನು ಉಳಿಸುವಂತಹದ್ದು ನಮ್ಮೆದುರುಗಿರುವ ಪ್ರಮುಖ ಸವಾಲು. ನಾವು ಹೋರಾಡಿ ನಮ್ಮ ರಕ್ಷಣೆಗಾಗಿ ಗಳಿಸಿದ್ದ ಕಾನೂನುಗಳನ್ನು ಉಳಿಸಿಕೊಳ್ಳಬೇಕು.
ಇನ್ನೊಂದು ಬಹಳ ಮುಖ್ಯ ಆತಂಕವಿರುವುದು ಅಂಬೇಡ್ಕರ್ ಪ್ರತಿಮೆಗಳನ್ನು ನಾಶಮಾಡಿ, ಅವರು ರಚಿಸಿಕೊಟ್ಟಿರುವ ಸಂವಿಧಾನವನ್ನು ಸುಡುವ ಬಿಜೆಪಿ ನಾಯಕರಿಂದ. ಬಿಜೆಪಿ ಸಚಿವರು ತಾವು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದೇ ಹೇಳಿಕೊಂಡಿದ್ದಾರೆ. ಭಾರತದ ಸಂವಿಧಾನವನ್ನು ವಿಶ್ವದಲ್ಲೇ ಅತ್ಯುತ್ತಮ ಎಂದು ವಿಶ್ಲೇಷಿಸಲಾಗಿದ್ದು ಅದಕ್ಕೆ ನಮ್ಮ ಸಹಮತವೂ ಇದೆ. ಸಾಮಾಜಿಕ ನ್ಯಾಯದತ್ತ ಅಂಬೆಗಾಲಿಡಲು ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ನಾಳೆ ಅದರ ಬದಲಿಗೆ ಮನುಸ್ಮೃತಿಯನ್ನ ತಂದುಬಿಟ್ಟರೆ ಏನಾಗಬಹುದು? 60ರ ದಶಕದಲ್ಲೇ ಆರೆಸ್ಸೆಸ್ ಸಂಸ್ಥಾಪಕ ಗೋಳ್ವಾಳ್ಕರ್ “ಸಮಾಜವಾದವಲ್ಲ, ಹಿಂದೂರಾಷ್ಟ್ರ” ಎಂಬ ತನ್ನ ಕೃತಿಯಲ್ಲಿ ಹೇಳಿಬಿಟ್ಟಿದ್ದ! ಈಗ ಅವರ ಹಿಂದೂತ್ವದ ಕ್ರೂರ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ತೀಕ್ಷ್ಣವಾಗಿ ಜಾರಿಗೊಳಿಸಲು ಹೊರಟಿದ್ದಾರೆ. ಇದು ಬಹಳ ದೊಡ್ಡ ಅಪಾಯ.
ಇವತ್ತು ಕಾರ್ಮಿಕ ವರ್ಗ ತನ್ನ ಬದುಕನ್ನು ಸುಧಾರಿಸಿಕೊಳ್ಳಬೇಕಾದರೆ, ಉತ್ತಮಪಡಿಸಿಕೊಳ್ಳಬೇಕಾದರೆ ಒಳ್ಳೆಯ ವಾತಾವರಣವಿರಬೇಕು. ಈ ಸರ್ಕಾರ ಬರೀ ಭಾವನಾತ್ಮಕ ವಿಷಯಗಳಿಂದ ಜನರನ್ನು ಕೆರಳಿಸುತ್ತಿದೆ. ನಿರುದ್ಯೋಗಕ್ಕೆ, ಎಲ್ಲಾ ಸಮಸ್ಯೆಗಳಿಗೂ ಮುಸ್ಲಿಮರ ಕಡೆ ಬೆರಳು ತೋರಿಸಿ ಅವರನ್ನು ಪಾಕಿಸ್ತಾನಕ್ಕೆ ಓಡಿಸಿದರೆ ಎಲ್ಲಾ ಸರಿಯಾಗತ್ತೆ ಎಂದು ಸರಾಗವಾಗಿ ಸಂಘ ಪರಿವಾರ ಹೇಳುತ್ತಿದೆ. ಹಿಂದೆ ಮುಂಬಯಿಯಲ್ಲಿ ಹೀಗೇ ಮಾಡಿದ್ದ ಶಿವಸೇನೆ ಈಗ ಎಡಪಂಥೀಯ ಕಾರ್ಮಿಕ ಸಂಘಟನೆಗಳ ಜೊತೆ ಸೇರಿ ಮುಷ್ಕರ ಮಾಡಬೇಕಾಗಿಬಂದಿದೆ! ಕಮ್ಯುನಿಸ್ಟ್ ವಿರೋಧಿಯಾಗಿದ್ದವರು ಈಗ ಅದೇ ನಿಲುವನ್ನು ತಳೆಯಲು ಸಾಧ್ಯವಿಲ್ಲ. ಹಲವು ಬಾರಿ ಅದು ಬಿಜೆಪಿಯನ್ನೂ ವಿರೋಧಿಸಿದ್ದಿದೆ.
ಆದ್ದರಿಂದ ಸಂವಿಧಾನ ರಕ್ಷಿಸುವುದು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸುವುದು ಕಾರ್ಮಿಕ ವರ್ಗದ ಮುಂದಿರುವ ಅತ್ಯಂತ ಪ್ರಮುಖ ರಾಜಕೀಯ ಸವಾಲಾಗಿದೆ.
ಎಐಟಿಯುಸಿ ಸ್ಥಾಪನೆಯಾಗಿದ್ದಾಗಲೀ ತದನಂತರ ಕಾರ್ಮಿಕ ಸಂಘಟನೆಗಳು ಹುಟ್ಟಿರುವುದಾಗಲೀ ಕೂಲಿ ಜೀತವನ್ನು ಶಾಶ್ವತವಾಗಿಸುವುದಕ್ಕಲ್ಲ. ಕಾರ್ಮಿಕರು ಸಂಪತ್ತನ್ನು ಸೃಷ್ಟಿಸುತ್ತೇವಾದರೂ ನಮಗೇ ಗೂಡಿಲ್ಲದಂತಾಗಿದೆ. ಆದ್ದರಿಂದ ಮೇ ದಿನಾಚರಣೆಯಂದು ಮತ್ತು ತದನಂತರದಲ್ಲೂ ಇವೆಲ್ಲದರ ಬಗ್ಗೆ ಚಿಂತಿಸಿ, ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಸಂವಿಧಾನವನ್ನು ಉಳಿಸಬೇಕು ಹಾಗೂ ಹೊಸ ರಾಜಕೀಯ ಪ್ರಜ್ಞೆ ಮೂಡಬೇಕು. ಪ್ರತಿ ವರ್ಷ ಅದೇ ಘೋಷಣೆ ಕೊಡುತ್ತೇವೆ. ಈಗ ಎಲ್ಲಾ ರಾಜಕೀಯ ಪಕ್ಷಗಳಿಗೂ ನಮ್ಮ ಹಕ್ಕೊತ್ತಾಯಗಳನ್ನು ನೀಡಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇವು ಈಡೇರುವುದಿಲ್ಲ. ಕಾರ್ಮಿಕರಲ್ಲಿ ಈ ಪ್ರಜ್ಞೆ ಮೂಡಬೇಕು. ಒಂದು ದಿವಸ ಮುಷ್ಕರ ಮಾಡಿ ಮರುದಿನ ಮೋದಿ ಭಜನೆ ಮಾಡುವುದಲ್ಲ… ನಮ್ಮ ಹಿತಾಸಕ್ತಿ ಯಾರು ಕಾಪಾಡುತ್ತಾರೆ ಎಂಬುದು ಕಾರ್ಮಿಕ ವರ್ಗಕ್ಕೆ ಅರಿವಾಗಬೇಕು. ಉದಾಹರಣೆಗೆ, ಕೇಂದ್ರದಲ್ಲಿ ದೇವೇಗೌಡರ ನೇತೃತ್ವದಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಮ್ರೇಡ್ ಇಂದ್ರಜಿತ್ ಗುಪ್ತಾ ಗೃಹ ಸಚಿವರಾಗಿದ್ದರು. ಕೇಂದ್ರ ವೇತನ ಆಯೋಗ ಸರ್ಕಾರದ ಎದುರಾದಾಗ ಕೇವಲ ಚರ್ಚೆ ಮಾಡಿ 28 ಸಾವಿರ ಕೋಟಿ ರೂಪಾಯಿಗಳನ್ನು ನೌಕರರಿಗೆ ನೀಡಿದರು. ಯಾವ ಧರಣಿ ಮತ್ತೊಂದು ಮಾಡಬೇಕಾಗಲಿಲ್ಲ. ಕಾರ್ಮಿಕ-ಸ್ನೇಹಿ ಸರ್ಕಾರವಿದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆಯಷ್ಟೆ. ಆದರೆ ಇದು ಕೇಂದ್ರ ಸರ್ಕಾರಿ ನೌಕರರ ಮೇಲೆ ರಾಜಕೀಯವಾಗಿ ಯಾವುದೇ ಪ್ರಭಾವ ಬೀರಲಿಲ್ಲ. ಅದರಲ್ಲಿ ನಾವು ಸೋತಿದ್ದೇವೆ. ಒಬ್ಬ ಟ್ರೇಡ್ ಯೂನಿಯನ್ ನಾಯಕ ಇಂದ್ರಜಿತ್ ಗುಪ್ತಾ ಸರ್ಕಾರದ ಒಳಗಿದ್ದರೆ ಎಚ್ಎಂಎಸ್ ಸಂಘಟನೆಯ ಉಮ್ರಾಲ್ ಪುರೋಹಿತ್ ಕಾರ್ಮಿಕರ ಪರವಾಗಿ ಹೊರಗಿನಿಂದ ಮಾತಾಡಿ ಸಮಸ್ಯೆ ಬಗೆಹರಿಸಿದ್ದರು! ಆ ನೌಕರರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಅಲ್ಲಿನ ಸಂಘಗಳು ವಿಫಲವಾದವು.
ಆದ್ದರಿಂದ ಇವೆಲ್ಲವುದರ ಹಿನ್ನೆಲೆಯಲ್ಲಿ ಭಾರತದ ಕಾರ್ಮಿಕ ವರ್ಗ ಮೇ ದಿನವನ್ನು ನೋಡಬೇಕಿದೆ. “ವಿಶ್ವ ಕಾರ್ಮಿಕರೆ ಒಂದಾಗಿ” ಅಂತ ಮಾರ್ಕ್ಸ್ ಹೇಳಿದ. ಆತ ಇನ್ನೂ ಸ್ವಲ್ಪ ತಿದ್ದುಪಡಿಮಾಡಿ “ಭಾರತದ ಕಾರ್ಮಿಕರೂ ಒಂದಾಗಿ” ಎಂದು ಹೇಳಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೊ! ಕೆಲವು Text book Marxistಗಳಿದ್ದಾರೆ. ಅವರಿಗೆ ಮಾರ್ಕ್ಸೇ ಹೀಗೆ ಹೇಳಿದ್ದಾನೆ ಎಂದುಬಿಟ್ಟಿದ್ದರೆ ಒಂದಾಗುತ್ತಿದ್ದರೋ ಏನೋ… ಈಗ ಹಲವು ವಿಭಜನೆಗಳಾಗಿಬಿಟ್ಟಿವೆ. ಇನ್ನಾದರೂ ವಿಶೇಷವಾಗಿ ಕಾರ್ಮಿಕ ಸಂಘಟನೆಗಳ ನಾಯಕರಿಗೆ ಸ್ವ-ವಿಮರ್ಶೆ ಮಾಡಿಕೊಳ್ಳುವ ಕಾಲವಿದು. ಇಷ್ಟು ವರ್ಷಗಳು ಸಂಘಟನೆ ನಡೆಸಿದ್ದೇವೆ, ಅದು ಯಾವ ದಿಕ್ಕಿನಲ್ಲಿ ಹೋಗಿದೆ, ಎಂತಹ ಸರ್ಕಾರ ಅಧಿಕಾರಕ್ಕೆ ಬರಬೇಕು, ಕಾರ್ಮಿಕರಲ್ಲಿ ರಾಜಕೀಯ ಮತ್ತು ವರ್ಗ ಪ್ರಜ್ಞೆ ವೃದ್ಧಿಸುವುದು ಹೇಗೆ, ಇವುಗಳ ಕಡೆ ಹೆಚ್ಚು ಗಮನ ಕೊಡಬೇಕೇ ವಿನಾ ಸದಸ್ಯತ್ವಕ್ಕೋಸ್ಕರ ಪೈಪೋಟಿ ನಡೆಸುತ್ತಾ, ಒಬ್ಬರಿರುವಲ್ಲಿ ಇನ್ನೊಬ್ಬರು ಯೂನಿಯನ್ ಮಾಡಿ ಐಕ್ಯತೆ ಒಡೆಯುವುದು ಸರಿಯಲ್ಲ. ಯಾವುದೇ ಸರ್ಕಾರ ಬರಲಿ, ನಮ್ಮ ಹಕ್ಕೊತ್ತಾಯಗಳು ಇದ್ದೇ ಇರುತ್ತವೆ. ನಿಜವಾದ ಐಕ್ಯ ಹೋರಾಟವಾಗಬೇಕು. ಈ ಹೋರಾಟದ ಮೂಲಕ ಕಾರ್ಮಿಕ ವರ್ಗದಲ್ಲಿ ಹೊಸ ಪ್ರಜ್ಞೆ ಮೂಡಿಸುವಂತಾಗಬೇಕು. ಇದು ಈ ಮೇ ದಿವಸ ನಾವು ಮಾಡಬೇಕಾದಂತಹ ಪ್ರತಿಜ್ಞೆ ಅಂತ ನನಗನಿಸುತ್ತದೆ.