ಬೆಂಗಳೂರು: ಕನ್ನಡ ರಂಗಭೂಮಿಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಹಿರಿಯ ರಂಗಕರ್ಮಿ, ಮಾತಿನ ಮಲ್ಲ ಮಾಸ್ಟರ್ ಹಿರಣ್ಣಯ್ಯ (85) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಣ್ಣಯ್ಯ ಅವರು ಇಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾತಿನಲ್ಲೇ ಮೋಡಿ ಮಾಡುವ ಮಾಸ್ಟರ್ ಹಿರಣ್ಣಯ್ಯ ಅವರು ಹಾಸ್ಯ ಕಲಾವಿದ ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ಅವರ ಸುಪುತ್ರನಾಗಿ 1934ರ ಫೆಬ್ರುವರಿ 13ರಂದು ಜನಿಸಿದರು. ತಂದೆ ತಾಯಿಗಳ ಏಕೈಕ ಮಗ ಹಿರಣ್ಣಯ್ಯ ಅವರ ಮೊದಲ ಹೆಸರು ನರಸಿಂಹಮೂರ್ತಿ.
ಮುತ್ತಾತ ಕಣತೂರ್ ಅನಂತರಾಮಯ್ಯ, ಗಮಕವಿದ್ವಾನ್, ಭಾರತ ವಾಚನದಲ್ಲಿ ಪರಿಣಿತರು, ತಾತ ಅನಂತರಾಮಯ್ಯ ನಟರು, ರಂಗ ಕಲಾವಿದರು ನಂತರ ತಂದೆ ಕೆ ಹಿರಣ್ಣಯ್ಯ ದಂತಕತೆಯಾದ ಕಲ್ಚರ್ಡ್ ಕಮೆಡಿಯನ್ ಆಗಿದ್ದರು. ಹೀಗೆ ರಂಗಭೂಮಿ ಹಾಗೂ ಕಲೆಯ ನಂಟನ್ನು ಮೂರು ತಲೆಮಾರುಗಳಿಂದಲೇ ಗಳಿಸಿಕೊಂಡು ಬಂದಿದ್ದವರು ಮಾಸ್ಟರ್ ಹಿರಣ್ಣಯ್ಯ.
ಚಿತ್ರ ನಟರಾಗಿ, ನಿರ್ಮಾಪಕರಾಗಿ, ನಾಟಕಕಾರರಾಗಿ, ನಟರಾಗಿ ಪ್ರಸಿದ್ಧರಾದ ಮಾಸ್ಟರ್ ಹಿರಣ್ಣಯ್ಯ ಅವರು ಕೆ.ಹಿರಣ್ಣಯ್ಯ ಮಿತ್ರಮಂಡಲಿಗೆ ಲೋಕ ಮಾನ್ಯತೆ ಗಳಿಸಿಕೊಟ್ಟಿದ್ದರು.
1959ರಲ್ಲಿ ಕೆ.ಹಿರಣ್ಣಯ್ಯ ಮಂಡಲಿ ಪುನರಾರಂಭಿಸಿದ ಮಾಸ್ಟರ್ ಹಿರಣ್ಣಯ್ಯ ಅವರು ಸಾಮಾಜಿಕ, ಕೌಟುಂಬಿಕ ವಸ್ತುಗಳನ್ನುಳ್ಳ ನಾಟಕಗಳನ್ನು ಹೆಚ್ಚು ಪ್ರದರ್ಶಿಸುತ್ತಿದ್ದರು. ರಾಜಕೀಯವನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವಂಥ ಕಥಾವಸ್ತುವನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸಿದ್ದರು. ಲಂಚಾವತಾರ, ಭ್ರಷ್ಟಾಚಾರ, ಅತ್ಯಾಚಾರ, ಕಪಿಮುಷ್ಠಿ, ನಡುಬೀದಿ ನಾರಾಯಣ ಖಾದಿ ಮೊದಲಾದ ನಾಟಕಗಳ ಮೂಲಕ ಖಾಕಿ, ಖಾದಿ, ಕಾವಿಗಳ ಭ್ರಷ್ಟ ಸಾಮ್ರಾಜ್ಯವನ್ನು ಅನಾವರಣಗೊಳಿಸುವ ನಾಟಕಗಳನ್ನು ಪ್ರದರ್ಶಿಸುತ್ತಾ ನ್ಯೂಯಾರ್ಕ್, ಹೂಸ್ಟನ್, ವಾಷಿಂಗ್ಟೊನ್, ನ್ಯೂಜೆರ್ಸಿ, ಬೆಹರಿನ್, ಸಿಡ್ನಿ, ಲಂಡನ್ ಹೀಗೆ ವಿಶ್ವಾದ್ಯಂತ ಜನಮೆಚ್ಚುಗೆ ಗಳಿಸಿದ್ದರು.
ಅದರಲ್ಲೂ ರಾಜಕೀಯ ವಿಡಂಬನೆಯುಳ್ಳ ಲಂಚಾವತಾರ ನಾಟಕ 11 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣುವ ಮೂಲಕ ಇಂದಿಗೂ ಕನ್ನಡ ರಂಗಭೂಮಿಯ ಸಾರ್ವಕಾಲಿಕ ದಾಖಲೆಯಾಗಿದೆ.
2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅವಾಚ್ಯ ನಿಂದನೆ ಮಾಡಿದ್ದ ಹಿರಣ್ಣಯ್ಯ ಈ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷಮಾಪಣೆ ಕೋರಿದ್ದರು. ಸಿದ್ದರಾಮಯ್ಯ ಸಹ ಅದನ್ನು ಅಲ್ಲಿಗೇ ಕೊನೆಗೊಳಿಸಿದ್ದನ್ನು ಸ್ಮರಿಸಬಹುದು.
ಆರನೇ ವರ್ಷದಲ್ಲೇ ವಾಣಿ ಎಂಬ ಕನ್ನಡ ಚಿತ್ರ ದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಹಾಸ್ಯ ತಿವಿಕ್ರಮ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಕರ್ನಾಟಕ ಸರ್ಕಾರ ನೀಡುವ ಕರ್ನಾಟಕ ರಾಜ್ಯ ಪ್ರಶಸ್ತಿ, ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ.
ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿರುವ ಹಿರಣ್ಣಯ್ಯ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ.
ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/ga1ok0A7rR— Siddaramaiah (@siddaramaiah) May 2, 2019
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಥಾವಸ್ತುವೇ ಪ್ರಮುಖವಾಗಿರುವ ಅವರ ನಾಟಕಗಳು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿವೆ.ಹಿರಣ್ಣಯ್ಯ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
— H D Devegowda (@H_D_Devegowda) May 2, 2019
#SirMasterHiranaaiah Wil always be very close to my heart. Every frame I worked wth him during #73Shantinivasa is fresh n memorable. Anythn said Wil be very Lil about this bundle of talent who's contribution to field of art knew no boundaries. Rest in peace Sir.
— Kichcha Sudeepa (@KicchaSudeep) May 2, 2019
ಹಿರಿಯ ರಂಗಕರ್ಮಿ, ಅಭಿನಯ ಚತುರ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. #RIP #MasterHirannaiah pic.twitter.com/W9zmCps8VJ
— KJ George (@thekjgeorge) May 2, 2019
ಖ್ಯಾತ ಹಾಸ್ಯ ನಾಟಕಕಾರ,ಚತುರ ರಂಗಭೂಮಿ ಕಲಾವಿದ,ಸ್ಪಷ್ಟವಾದಿ ಮಾಸ್ಟರ್ ಹಿರಣ್ಣಯ್ಯ ಇಂದು ವಿಧಿವಶರಾಗಿದ್ದಾರೆ.
84 ವರ್ಷದ ಮಾಸ್ಟರ್ ಹಿರಣ್ಣಯ್ಯ
ಲಂಚಾವತಾರ ದ ಮೂಲಕ ಮನೆಮಾತಾಗಿದ್ದರು.
ನೇರ ದಿಟ್ಟ ನುಡಿಗೆ ಹೆಸರುವಾಸಿಯಾಗಿದ್ದ ಅವರ ಅಗಲುವಿಕೆ ಕನ್ನಡನಾಡಿಗೆ ತುಂಬಲಾರದ ನಷ್ಟ. ಶ್ರೀ ಅನಂತ ಕುಮಾರ್ ರ ಜೊತೆಗೆ ಆತ್ಮೀಯ ಒಡನಾಟ ಇತ್ತು.— Chowkidar Tejaswini AnanthKumar (@Tej_AnanthKumar) May 2, 2019