ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಕಳೆದ ಹತ್ತು ವರ್ಷಗಳಲ್ಲಿ ತನ್ನನ್ನು 27 ಬಾರಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಕೆಎಎಸ್ ಅಧಿಕಾರಿ ಕೆ. ಮ್ಯಾಥ್ಯೂ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ 9 ಐಎಎಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.
ಮಾನವ ಹಕ್ಕು ಉಲ್ಲಂಘನೆ ಆರೋಪದ ಮೇಲೆ ಸಂವಿಧಾನದ ಅನುಚ್ಛೇದ 14,15 ಮತ್ತು 16 ಅಡಿಯಲ್ಲಿ ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮ್ಯಾಥ್ಯೂ ಅವರು ನೀಡಿರುವ ದೂರಿನಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ 300 ಕೋಟಿ ರುಪಾಯಿ ಭೂ ಹಗರಣವನ್ನು ಬಯಲಿಗೆಳೆದ ಕಾರಣ ತಮ್ಮ 10 ವರ್ಷದ ಸೇವಾ ಅವಧಿಯಲ್ಲಿ 27 ಬಾರಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಸೇವಾ ಇಲಾಖೆ, ಕರ್ನಾಟಕ ಸರ್ಕಾರದ ವಿರುದ್ಧ ದೂರು ದಾಖಲಿಸಿಕೊಂಡು ನಾನು ಅನುಭವಿಸಿರುವ ಮಾನಸಿಕ ಕಿರುಕುಳಕ್ಕೆ ನನಗೆ ನ್ಯಾಯ ದೊರಕಿಸಿಕೊಡಬೇಕು,’’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಐಎಎಸ್ ಅಧಿಕಾರಿಗಳಾದ ಗೌತಮ್ ಬಗಡಿ, ಅನಿಲ್ ಕುಮಾರ್, ಶಿವಕುಮಾರ್, ಇ. ವಿ ರಮಣ ರೆಡ್ಡಿ, ವಿಜಯ ಭಾಸ್ಕರ್, ಹಿರೇಮಠ್, ಶ್ರೀನಿವಾಸ್, ಅಂಜುಮ್ ಪರ್ವೇಜ್, ಎಂ. ಲಕ್ಷ್ಮೀನಾರಾಯಣ ಮತ್ತು ಜಿ, ಕಲ್ಪನಾ ಅವರು ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದಲ್ಲಿ ಅಧಿಕಾರದ ವ್ಯಾಪ್ತಿ ಇಲ್ಲದಿರುವುದರಿಂದ ಮಾನವ ಹಕ್ಕುಗಳ ಆಯೋಗವು ದೂರನ್ನು ಸ್ವೀಕರಿಸಲು ಹಿಂಜರಿದಿತ್ತು. ಆದರೆ, ಸರ್ಕಾರಿ ಅಧಿಕಾರಿಗಳ, ಸಿಬ್ಬಂದಿಯ ಮಾನವ ಹಕ್ಕು ಉಲ್ಲಂಘನೆಯಾದರೂ ದೂರು ನೀಡಲು ಹಕ್ಕಿದೆ ಎಂದು ಅಲ್ಲಿನ ಅಧಿಕಾರಿಗಳಿಗೆ ಮನರಿಕೆ ಮಾಡಿದ ನಂತರ ದೂರು ಸ್ವೀಕರಿಸಿದರು ಎಂದು ಮ್ಯಾಥ್ಯೂ ತಿಳಿಸಿದ್ದಾರೆ.
ಮೂಡಾದಲ್ಲಿ ಅಕ್ರಮ ಭೂ ಹಂಚಿಕೆಯಿಂದಾಗಿ ಯಾವ ರೀತಿ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಲಿಖಿತ ವರದಿ ನೀಡಲಾಗಿತ್ತು. ಇದರ ಪ್ರತೀಕಾರವಾಗಿ ತಾನು ಪಡೆದ ರಜೆಗೆ ತನ್ನ ಬಳಿ ಅಗತ್ಯ ದಾಖಲೆಗಳಿದ್ದರೂ, ಅನುಮತಿ ಇಲ್ಲದೆ ರಜೆ ಪಡೆದಿರುವುದಾಗಿ ನನ್ನ ವಿರುದ್ಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಸೇವಾ ಇಲಾಖೆ ಸುಳ್ಳು ಹೇಳಿಕೆಗಳನ್ನು ನೀಡಿದೆ. ನಂತರ ನನ್ನನ್ನು ಹೂವಿನಹಡಗಲಿಗೆ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದಾರೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಂಡ್ಯ ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ, ಈ ಎಲ್ಲಾ ಗೊಂದಲಗಳಿಂದ ನನ್ನ ವೇತನವನ್ನೂ ತಡೆಹಿಡಿಯಲಾಗಿದೆ ಎಂದು ಮ್ಯಾಥ್ಯೂ ದೂರಿದ್ದಾರೆ.
ಅಷ್ಟೆ ಅಲ್ಲದೆ, 2012ರಿಂದ ತನ್ನ ಮುಂಬಡ್ತಿಯನ್ನೂ ತಡೆಹಿಡಿದಿದ್ದಾರೆ. ಇಲಾಖೆಯೊಂದರ ಜಾಹೀರಾತು ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವ ವೇಳೆ ಬಿಬಿಎಂಪಿಯ 2 ಸಾವಿರ ಕೋಟಿ ಹಗರಣವನ್ನು ಬಯಲಿಗೆಳೆದಿದ್ದೆ., ಇದಕ್ಕಾಗಿ ಬಿಬಿಎಂಪಿ ಮಾಜಿ ಆಯುಕ್ತ ಲಕ್ಷ್ಮೀನಾರಾಯಣ ಅವರು ತನ್ನನ್ನು ವಿಶ್ವಾಸಾರ್ಹ ಅಧಿಕಾರಿಯಲ್ಲ ಎಂದೂ ದೂರಿದ್ದರು. ತಾನು ಸಕಾಲ ಸೇವೆಯನ್ನು ದುರ್ಬಲಗೊಳಿಸುತ್ತಿದ್ದೇನೆ ಎಂದು ಅನಗತ್ಯವಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಸೇವಾ ಇಲಾಖೆ ಆರೋಪಿಸಿತ್ತು.
ಯಾದಗಿರಿಯ ತಹಶಿಲ್ದಾರ್ ಆಗಿ 4 ತಿಂಗಳು ಕಾರ್ಯನಿರ್ವಹಿಸಿದ ನಂತರ ಮೂಡಾಗೆ ವರ್ಗಾವಣೆ ಮಾಡಿದರು. ಭ್ರಷ್ಟಾಚಾರ ಆರೋಪದ ಮೇಲೆ ತನ್ನ ವಿರುದ್ಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಸೇವಾ ಇಲಾಖೆ ತನಿಖೆ ನಡೆಸಲು ಅನುಮತಿ ನೀಡಿತ್ತು. ಇದಕ್ಕೆಲ್ಲಾ ಕಾರಣ ನನಗೆ ರಾಜಕೀಯ ಹಿನ್ನೆಲೆ ಇಲ್ಲದಿರುವುದು ಹಾಗೂ ರಾಜಕೀಯ ಬೆಂಬಲ ಇಲ್ಲದಿರುವುದು ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಭೇಟಿಗಾಗಿ ಹಲವು ಬಾರಿ ಮನವಿ ಮಾಡಿದ್ದರೂ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳು ಅನುಮತಿ ನೀಡುತ್ತಿಲ್ಲ. ಆದ್ದರಿಂದ ವರ್ಗಾವಣೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ನೇರ ಪತ್ರ ಬರೆಯಲಾಗಿದ್ದು ಅವರು ಅನುಮತಿ ಕೊಟ್ಟರೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮ್ಯಾಥ್ಯು ತಿಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ನಾನು ನಡೆಸಿದ ಹೋರಾಟದಿಂದಾಗಿ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಮೂಡಾ ಭ್ರಷ್ಟಾಚಾರದ ವಿರುದ್ಧ ನಾನು ನೀಡಿದ ವರದಿಯ ಪ್ರತೀಕಾರವಾಗಿ 10 ವರ್ಷದಲ್ಲಿ 27 ಬಾರಿ ವರ್ಗಾವಣೆ ಮಾಡಿದ್ದಾರೆ- ಮ್ಯಾಥ್ಯು ಆರೋಪ