ಟೈಮ್ಸ್ ಆಫ್ ಇಂಡಿಯಾದ ಭಾರತಿ ಜೈನ್ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಕುರಿತು ಹೇಳಿದ ಸುಳ್ಳುಗಳೇನು? ಅಮರ್ತ್ಯ ಸೇನ್ ಆ ಕುರಿತು ಹೇಳಿದ್ದೇನು? ಇಲ್ಲಿವೆ ಒಂದು ವಾಟ್ಸಾಪ್ ಸುಳ್ಳುಸುದ್ದಿಯ ನಿಜ ಸಂಗತಿಗಳು
ಯಾವಾಗ ಈ ಪತ್ರಕರ್ತೆ ವಾಟ್ಸಾಪ್ ಮೆಸೇಜನ್ನೇ ಸತ್ಯಾಂಶಗಳು ಎನ್ನುವಂತೆ ಹಂಚಿಕೊಳ್ಳತೊಡಗಿದರೋ ಅದಕ್ಕೆ ಹೆಚ್ಚು ಬೆಲೆ ಬಂದುಬಿಟ್ಟತು. ಅನೇಕರು ಅವುಗಳನ್ನು ನಿಜ ಎಂದು ಭಾವಿಸುವಂತೆಯೂ ಆಯಿತು. ಹಲವು ಬಿಜೆಪಿ ಮುಖಂಡರು ಹಾಗೂ ಬಿಜಪಿ ಬೆಂಬಲಿತ ಫೇಸ್ಬುಕ್ ಪುಟಗಳಲ್ಲಿಯೂ ಈ ಸಂದೇಶ ಹಂಚಿಕೆಯಾಯಿತು.
ದೇಶದ ಹೆಮ್ಮೆಯ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕುರಿತು ಇತ್ತೀಚೆಗೆ ವಾಟ್ಸಾಪ್ ಮೆಸೇಜ್ ಒಂದು ವೈರಲ್ ಆಗಿತ್ತು. ಇಂಗ್ಲಿಷ್ ನಲ್ಲಿ ಬಂದಿದ್ದ ಆ ಸಂದೇಶವನ್ನು ಬಿಜೆಪಿ ಬೆಂಬಲಿಸುವ ಹಾಗೂ ಬಲಪಂಥೀಯ ಚಿಂತನೆಯ ಹಲವರು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು ಗುಮ್ಮನ ಗುಸುಕರಂತೆ ಕುಳಿತಿದ್ದರು. ಇದು ವಾಟ್ಸಾಪ್ನಲ್ಲಿ ಪ್ರತಿದಿನ ಸೃಷ್ಟಿಯಾಗುವ ಸಾವಿರಾರು ಫೇಕ್ ನ್ಯೂಸ್ ಗಳಂತೆ ಇದೂ ಒಂದು ಎಂದು ಹಲವರು ಸುಮ್ಮನೇ ಕುಳಿತಿದ್ದರು.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉನ್ನತ ಹುದ್ದೆಯಲ್ಲಿ ಕುಳಿತ ಪತ್ರಕರ್ತೆ ಭಾರತಿ ಜೈನ್ ಈ ವಾಟ್ಸಾಪ್ ಸುದ್ದಿಯ ಅಂಶಗಳನ್ನು ಟ್ವೀಟ್ ಮಾಡುವವರೆಗೆ.
ಯಾವಾಗ ಈ ಪತ್ರಕರ್ತೆ ವಾಟ್ಸಾಪ್ ಮೆಸೇಜನ್ನೇ ಸತ್ಯಾಂಶಗಳು ಎನ್ನುವಂತೆ ಹಂಚಿಕೊಳ್ಳತೊಡಗಿದರೋ ಅದಕ್ಕೆ ಹೆಚ್ಚು ಬೆಲೆ ಬಂದುಬಿಟ್ಟತು. ಅನೇಕರು ಅವುಗಳನ್ನು ನಿಜ ಎಂದು ಭಾವಿಸುವಂತೆಯೂ ಆಯಿತು. ಹಲವು ಬಿಜೆಪಿ ಮುಖಂಡರು ಹಾಗೂ ಬಿಜಪಿ ಬೆಂಬಲಿತ ಫೇಸ್ಬುಕ್ ಪುಟಗಳಲ್ಲಿಯೂ ಈ ಸಂದೇಶ ಹಂಚಿಕೆಯಾಯಿತು.
ಆ ಸಂದೇಶಗಳ ಸಾರಾಂಶವೇನೆಂದರೆ ಪ್ರತಿಷ್ಠಿತಿ ನಳಂದ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅಮರ್ತ್ಯ ಸೇನ್ ಮೋದಿ ಅಧಿಕಾರಕ್ಕೆ ಬರುವ ಮೊದಲು ಮನಮೋಹನ್ ಸಿಂಗ್ ಸರ್ಕಾರದೊಂದಿಗೆ ಸೇರಿಕೊಂಡು ವಂಚನೆ ಭ್ರಷ್ಟಾಚಾರ ನಡೆಸುತ್ತಿದ್ದರು, ಮೋದಿ ಬಂದ ಮೇಲೆ ಅದನ್ನು ತಡೆದರು, ಇದಕ್ಕಾಗಿ ಅಮರ್ತ್ಯ ಸೇನ್ ಮೋದಿ ಆರ್ಥಿಕ ನೀತಿಗಳನ್ನು ವಿರೋಧಿಸಲು ಆರಂಭಿಸಿದರು ಎಂಬುದಾಗಿತ್ತು.
ವಾಟ್ಸಾಪ್ನಲ್ಲಿ ವೈರಲ್ ಆದ ಸುಳ್ಳು ಸಂದೇಶ
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಭಾರತದ ಹಿರಿಮೆಯನ್ನು ಹೆಚ್ಚಿಸಿರುವ ಅಮರ್ತ್ಯ ಸೇನ್ ಅವರಂತಹ ಗಟ್ಟಿ ವ್ಯಕ್ತಿತ್ವದ ಮಾನವತಾವಾದಿಯನ್ನು ತುಚ್ಛವಾಗಿ ಬಿಂಬಿಸಿ, ಮೋದಿ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ಕುರಿತು ಅವರು ಮಾಡುತ್ತಿದ್ದ ಟೀಕೆಯನ್ನು ನಗಣ್ಯಗೊಳಿಸುವ ಉದ್ದೇಶದಿಂದ “ವಾಟ್ಸಾಪ್ ಯೂನಿವರ್ಸಿಟಿ” ಸೃಷ್ಟಿಸಿ ಹರಡಿದ್ದ ಈ ಡೋಂಗಿ ಸುದ್ದಿಯ ಆರೋಪಗಳೇನಾಗಿದ್ದವು ಮತ್ತು ವಾಸ್ತವ ಏನಾಗಿದೆ ಎಂಬುದನ್ನು ಒಂದೊಂದಾಗಿ ವಿವರವಾಗಿ ಅರ್ಥ ಮಾಡಿಕೊಳ್ಳೋಣ.
ಆರೋಪ 1: ಅಮರ್ತ್ಯ ಸೇನ್ ಅವರು ನಳಂದ ವಿಶ್ವವಿದ್ಯಾಲಯದಲ್ಲಿ ಕುಲಪತಿ ಆಗಿ ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು.
ಸತ್ಯ ಸಂಗತಿ: 2015ರ ವರೆಗೆ ಅಮರ್ತ್ಯ ಸೇನ್ ಅವರು ಒಂದು ದಶಕದ ಕಾಲ ನಾಲಂದಾ ವಿಶ್ವವಿದ್ಯಾಲಯದ ಚಾನ್ಸೆನಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ನಯಾಪೈಸೆ ಸಂಬಳ ಪಡೆದಿಲ್ಲ. 2015ರಲ್ಲಿ ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಇದೇ ಆರೋಪವನ್ನು ಅಮಾರ್ತ್ಯ ಸೇನ್ ಮೇಲೆ ಮಾಡಿದಾಗ ನಾಲಂದಾ ವಿಶ್ವವಿದ್ಯಾಲಯವು ನೀಡಿದ್ದ ಉತ್ತರವು ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಮಾರ್ತ್ಯ ಸೇನ್ ಅವರಿಗೆ ಯಾವುದೇ ವೇತನ ನೀಡಿಲ್ಲ ಬದಲಿಗೆ ಅವರು ತಮ್ಮ ಕೆಲಸವನ್ನು “ಗೌರವಾರ್ಥ ಸಾಮರ್ಥ್ಯದಲ್ಲಿ” ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿತ್ತು. ಡಾ.ಅಮರ್ತ್ಯಸೇನ್ ವಿಶ್ವವಿದ್ಯಾಲಯಕ್ಕೆ ಮಾಡಿದ ಯಾವುದೇ ಕೆಲಸಕ್ಕೆ ಯಾವುದೇ ಹಣ ಪಡೆದಿಲ್ಲ ಎಂದು ವಿವಿ ತಿಳಿಸಿತ್ತು.
ಈ ಕುರಿತು ಫೇಕ್ ನ್ಯೂಸ್ ಗಳನ್ನು ಬಯಲು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಆಲ್ಟ್ ನ್ಯೂಸ್ ಸುದ್ದಿಸಂಸ್ಥೆ ನೇರವಾಗಿ ಅಮರ್ತ್ಯಸೇನ್ ಅವರನ್ನು ಇಮೇಲ್ ಮೂಲಕ ಕೇಳಿದಾಗ ಅಮರ್ತ್ಯ ಸೇನ್ ನೀಡಿರುವ ಉತ್ತರ ಹೀಗಿದೆ. “ಮೊದಲನೆಯದಾಗಿ ನಾನು ನಳಂದಾದಿಂದ ಯಾವುದೇ ಸಂಬಳ ಇತ್ಯಾದಿ ಪಡೆದಿಲ್ಲ. ನಾನು ಸೊನ್ನೆ ಗೌರವಧನ ಪಡೆದು ಕೆಲಸ ಮಾಡಿದ್ದೇನೆ. ಎರಡನೆಯದಾಗಿ ನಾನು ತೆರಿಗೆ ರಹಿತ ಲಾಭಗಳನ್ನು ಪಡೆದುಕೊಂಡಿಲ್ಲ. ಲೆಕ್ಕ ನೀಡದ ಯಾವುದೇ ವಿದೇಶಿ ಪ್ರಯಾಣವನ್ನು ನಾನು ನಡೆಸಿಲ್ಲ. ಆಡಳಿತ ಮಂಡಳಿ ಸಭೆಗಳನ್ನು ಎಲ್ಲಿ ನಡೆಸಲಾಗಿತ್ತೊ ಅದೇ ಹೋಟೆಲ್ ಗಳಲ್ಲಿ ಆಡಳಿತ ಮಂಡಳಿ ಸದಸ್ಯರಿಗೆ ವಸತಿ ವ್ಯವಸ್ಥೆ ಮಾಡಿದ ರೀತಿಯಲ್ಲೇ ನನಗೂ ವ್ಯವಸ್ಥೆ ಮಾಡಲಾಗಿದೆ. ನಾನು ಯಾವುದೇ ವಿಶೇಷ ಸೌಲಭ್ಯ ಪಡೆದಿಲ್ಲ” ಎಂದು ಪ್ರೊ ಅಮರ್ತ್ಯಸೇನ್ ತಿಳಿಸಿದ್ದಾರೆ.
ಆರೋಪ 2: ಅಮರ್ತ್ಯ ಸೇನ್ ವಿಶ್ವವಿದ್ಯಾಲಯದ ದುಡ್ಡಿನಲ್ಲಿ ಬಿಟ್ಟಿಯಾಗಿ ವಿದೇಶ ಪ್ರಯಾಣ ನಡೆಸುತ್ತಿದ್ದರು. ಅವರು ಹೆಚ್ಚಾಗಿ ವಿದೇಶದಲ್ಲಿ ಕುಳಿತು ಯೂನಿವರ್ಸಿಟಿ ನಡೆಸುತ್ತಿದ್ದರು. ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಮನಮೋಹನ್ ಸಿಂಗ್ ವಿವಿಯನ್ನು 5ಸ್ಟಾರ್ ಹೋಟೆಲ್ ಆಗಿ ಪರಿವರ್ತಿಸಿದ್ದರು.
ಸತ್ಯ ಸಂಗತಿ: ಅಮಾರ್ತ್ಯಸೇನ್ ವಿದೇಶ ಪ್ರಯಾಣ ನಡೆಸಿದಾಗ ಆ ವೆಚ್ಚವನ್ನು ನಳಂದ ವಿಶ್ವವಿದ್ಯಾಲಯ ಎಂದೂ ಭರಿಸುತ್ತಿರಲಿಲ್ಲ. ವಾಸ್ತವವಾಗಿ ಅಮರ್ತ್ಯ ಸೇನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತಾಗ ಭಾರತ ಸರ್ಕಾರವೇ ಅವರಿಗೆ ಏರ್ ಇಂಡಿಯಾ ಉಚಿತ ಪಾಸ್ ನೀಡಿತ್ತು. ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕ್ಕೆ ನೊಬೆಲ್ ಪ್ರಶಸ್ತಿ ಮೂಲಕ ಅಮಾರ್ತ್ಯ ಸೇನ್ ಅವರ ಕೊಡುಗೆಗೆ ಗೌರವಸೂಚಕವಾಗಿ ಏರ್ ಇಂಡಿಯಾ ಉಚಿತ ಪಾಸ್ ನೀಡಿದ್ದರು. ಇದೇ ಆರೋಪವನ್ನು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಸಹ ಮಾಡಿದ್ದಾಗ ನಳಂದ ವಿವಿಯೇ ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಸ್ಪಷ್ಟನೆ ನೀಡಿತ್ತು.
ವಿದೇಶದಲ್ಲಿ ಕುಳಿತು ಅಮಾರ್ತ್ಯಸೇನ್ ಯೂನಿವರ್ಸಿಟಿ ನಡೆಸುತ್ತಾರೆ ಎಂಬ ಆರೋಪದ ಕುರಿತು ನೋಡುವುದಾದರೆ, ಯಾವುದೇ ವಿಶ್ವವಿದ್ಯಾಲಯದ ಕುಲಪತಿಯಾದವರು ವಿಶ್ವವಿದ್ಯಾಲಯವನ್ನು ನಡೆಸುವುದಿಲ್ಲ. ಉದಾಹರಣೆಗೆ ಬಿಜೆಪಿಯ ವೆಂಕಯ್ಯ ನಾಯ್ಡು ದೆಹಲಿ ವಿಶ್ವವಿದ್ಯಾಲಯದ ಕುಲಪತಿ. ವಿವಿಯನ್ನು ನಡೆಸುವ ಕೆಲಸ ಏನಿದ್ದರೂ ಆ ವಿವಿಯ ಉಪಕುಲಪತಿ ಅಥವಾ ವಿಸಿಯದ್ದಾಗಿರುತ್ತದೆಯೇ ವಿನಃ ಕುಲಪತಿಯದ್ದಲ್ಲ. ನಳಂದ ವಿಶ್ವವಿದ್ಯಾಲಯ ಕಾಯಿದೆ 2010 ಸಹ ಇದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಕಾಯಿದೆಯ 15ನೇ ಸೆಕ್ಷನ್ ಹೇಳುವುದೇನೆಂದರೆ, “ಉಪಕುಲಪತಿ ಆದವರು ಯೂನಿವರ್ಸಿಟಿಯ ಪ್ರಧಾನ ಶೈಕ್ಷಣಿಕ ಮುಖ್ಯಸ್ಥರಾಗಿರುತ್ತಾರೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ. ಆಡಳಿತ ಮಂಡಳಿ ಸಭೆ ನಡೆಯುವಾಗ ಕುಲಪತಿಹಾಜರಿದ್ದ ಪಕ್ಷದಲ್ಲಿ ಆಡಳಿತ ಮಂಡಳಿ ಸಭೆಗಳ ಅಧ್ಯಕ್ಷತೆ ಅವರು ವಹಿಸುತ್ತಾರೆ”
ಇದರ ಅರ್ಥವೇನೆಂದರೆ ವಿವಿಯ ಆಡಳಿತದ ಸಂಪೂರ್ಣ ಆಡಳಿತ ಜವಾಬ್ದಾರಿ ಕುಲಪತಿಯ ಕೈಯಲ್ಲಿರದೇ ಉಪಕುಲಪತಿಗಳಾದವರ ಕೈಯಲ್ಲಿರುತ್ತದೆ. ಕುಲಪತಿ ಯೂನಿವರ್ಸಿಟಿಯ ಮುಖ್ಯಸ್ಥರಾಗಿರುತ್ತಾರೆ.
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅಮರ್ತ್ಯ ಸೇನ್, “ನಾನು ಆಡಳಿತ ಮಂಡಳಿಯ ಎಲ್ಲಾ ಸಭೆಗಳಲ್ಲಿ ಹಾಜರಾಗಿದ್ದೇನೆ, ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ನಿಯಮಿತವಾಗಿ ಭೇಟಿ ಕೊಟ್ಟಿದ್ದೇನೆ. ನವದೆಹಲಿಯ ರಾಜ್ ಗಿರ್ ನಲ್ಲಿರುವ ಕಛೇರಿಗೆ ನಿಯಮಿತವಾಗಿ ಭೇಟಿ ಕೊಟ್ಟಿದ್ದೇನೆ. ವಿವಿಯಲ್ಲಿ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಆಗಾಗ ಸಭೆ ನಡೆಸಿದ್ದೇನೆ. ಇತರ ಎಲ್ಲಾ ವಿವಿಗಳ ಕುಲಪತಿಗಳಂತೆಯೇ ನಳಂದ ವಿವಿಯ ಕುಲಪತಿ ಸಹ ಕ್ಯಾಂಪಸ್ ನಲ್ಲಿ ವಾಸಿಸುತ್ತಿರುವುದಿಲ್ಲ. (ನಳಂದ ಕ್ಯಾಂಪಸ್ ಒಳಗೆ ಕುಲಪತಿಯವರಿಗೆ ಯಾವುದೇ ವಸತಿ ಸೌಲಭ್ಯ ಕೂಡಾ ಇರುವುದಿಲ್ಲ)” ಎಂದು ಅಮರ್ತ್ಯ ಸೇನ್ ಆಲ್ಟ್ ನ್ಯೂಸ್ ತಾಣಕ್ಕೆ ತಿಳಿಸಿದ್ದಾರೆ.
ಇನ್ನು ನಳಂದ ವಿಶ್ವವಿದ್ಯಾಲಯವನ್ನು ಅಮರ್ತ್ಯ ಸೇನ್ ಫೈವ್ ಸ್ಟಾರ್ ಹೊಟೆಲ್ ಆಗಿ ಪರಿವರ್ತಿಸಿದ್ದರು ಎಂಬ ಭಾರತಿ ಜೈನ್ (ವಾಟ್ಸಪ್) ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮರ್ಥ್ಯ ಸೇನ್, “ವಿಶ್ವವಿದ್ಯಾಲಯವನ್ನು ಫೈವ್ ಸ್ಟಾರ್ ಹೊಟೆಲ್ ಆಗಿಸುವುದು ಎಂದರೆ ಏನೆಂದು ಭಾರತಿ ಜೈನ್ ಅವರೇ ಹೇಳಬೇಕು. ಅಂತಹ ಯಾವುದೇ ಸೌಲಭ್ಯ ಅಲ್ಲಿರಲಿಲ್ಲ, ವಿವಿಯ ಯಾವುದೇ ಆಡಳಿತ ಮಂಡಳಿ ಸಭೆ ನಡೆದಾಗ ನಾವು ಹತ್ತಿರ ಹೊಟೆಲ್ ನಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದಿದ್ದಾರೆ.
ಆರೋಪ 3: ಅಮರ್ತ್ಯ ಸೇನ್ ಕುಲಪತಿಯಾಗಿದ್ದಾಗ 2729 ಕೋಟಿ ರೂಪಾಯಿಗ ದುಂದು ವೆಚ್ಚ ಮಾಡಿದ್ದರು.
ಸತ್ಯ ಸಂಗತಿ: ಏಪ್ರಿಲ್ 2015ರಲ್ಲಿ ನಳಂದ ವಿವಿಯ ಬಜೆಟ್ ಮತ್ತು ವೆಚ್ಚದ ಕುರಿತು ಲೋಕಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ವಿದೇಶಾಂಗ ಸಚಿವ ಜನರಲ್ ವಿಕೆ ಸಿಂಗ್ ನೀಡಿದ್ದ ಉತ್ತರದಲ್ಲಿ ಹೀಗೆ ತಿಳಿಸಲಾಗಿತ್ತು. “ನಳಂದ ವಿವಿಯನ್ನು ಸ್ಥಾಪಿಸಲು ಸರ್ಕಾರವು 2727.10 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ನೀಡಿದೆ. ಇದರಲ್ಲಿ ಇದುವರೆಗೆ ಬಿಡುಗಡೆಯಾದ ಹಣ 47.28 ಕೋಟಿ ರೂಪಾಯಿಗಳು”
ಅಮರ್ತ್ಯಸೇನ್ ಅವರ ಪ್ರತಿಕ್ರಿಯೆ ಸಹ ಇದನ್ನೇ ಸೂಚಿಸಿದೆ. ಅವರು, “500 ಎಕರೆ ಖಾಲಿ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ನಳಂದದಲ್ಲಿ ಹೊಸ ಕ್ಯಾಂಪಸ್ ಆರಂಭಿಸಲು ಯೋಜನೆ, ಸಿದ್ಧತೆ ಮತ್ತು ಪ್ರಾರಂಭ ಎಲ್ಲವೂ ನಾನು ಕುಲಪತಿ ಆಗಿದ್ದಾಗಲೇ ಶುರುವಾದದ್ದು. ಇದರಲ್ಲಿ ಈಗಿನ ವೆಚ್ಚ ಎಷ್ಟು ಮತ್ತು ದೀರ್ಘಕಾಲಿಕ ಒಟ್ಟು ವೆಚ್ಚ ಎಷ್ಟು ಎಂಬುದನ್ನು ಭಾರತಿ ಜೈನ್ ಅವರು ಪ್ರತ್ಯೇಕಗೊಳಿಸಿ ನೋಡಬೇಕು” ಎಂದಿದ್ದಾರೆ.
ವಾಟ್ಸಾಪ್ ಸುಳ್ಳುಸುದ್ದಿ ಮತ್ತು ಭಾರತಿ ಜೈನ್ ಟ್ವಿಟರ್ ಹೇಳಿಕೆ ಅಮರ್ತ್ಯ ಸೇನ್ ಅವಧಿಯಲ್ಲಿ 2729 ಕೋಟಿ ರೂಪಾಯಿ ಖರ್ಚಾಗಿದೆ ಎನ್ನುತ್ತದೆ. ಆದರೆ ನಳಂದ ವಿಶ್ವವಿದ್ಯಾಲಯದ ಒಟ್ಟು ಬಜೆಟ್ 2727.10 ಕೋಟಿ ರೂಪಾಯಿಗಳು. ಇದನ್ನು ಯಾವ ಸರ್ಕಾರವೂ ಒಮ್ಮೆಲೇ ಬಿಡುಗಡೆ ಮಾಡುವುದಿಲ್ಲ. ಹಂತಹಂತವಾಗಿ ಬಿಡುಗಡೆ ಮಾಡುತ್ತದೆ. ವಾಸ್ತವದಲ್ಲಿ ಅಮರ್ತ್ಯ ಸೇನ್ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಬಿಡುಗಡೆಯಾದ ಹಣ 50 ಕೋಟಿಯೂ ಇಲ್ಲ ಎಂಬುದನ್ನು ಸರ್ಕಾರವೇ ತಿಳಿಸಿದೆ.
ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಜಾಲತಾಣಗಳು
ಆರೋಪ 4: ಅಮಾರ್ತ್ಯ ಸೇನ್ 4 ಮಹಿಳೆಯರನ್ನು- ಡಾ.ಗೋಪಾ ಸಬರ್ವಾಲ್, ಡಾ.ಅಂಜನಾ ಶರ್ಮಾ, ನಯನಜೋತ್ ಲಾಹಿರಿ ಮತ್ತು ದೆಹಲಿ ವಿವಿಯ ಉಪಿಂದರ್ ಸಿಂಗ್ ಅವರನ್ನು ಸಿಬ್ಬಂದಿಯಾಗಿ ನೇಮಕಗೊಳಿಸಿದ್ದಾರೆ. ಇವರಲ್ಲಿ ಉಪಿಂದರ್ ಸಿಂಗ್ ಮನಮೋಹನ್ ಸಿಂಗ್ ಅವರ ಮಗಳು, ಮಿಕ್ಕವರು ಅವರ ಗೆಳತಿಯರು:
ಸತ್ಯ ಸಂಗತಿ: ನಳಂದ ವಿವಿ ಆರಂಭವಾದಾಗಲೇ ಡಾ.ಗೋಪಾ ಸಬರ್ವಾಲ್ ಅವರನ್ನು ಯೂನಿವರ್ಸಿಟಿಯ ಉಪ-ಕುಲಪತಿಗಳಾಗಿ ನೇಮಕಗೊಳಿಸಲಾಗಿತ್ತು. ವಿಶ್ವವಿದ್ಯಾಲಯದ ಆಯ್ಕೆ ಸಮಿತಿಯು ಸಾಕಷ್ಟು ಚರ್ಚೆ ನಡೆಸಿ ಇವರನ್ನು ಆಯ್ಕೆ ಮಾಡಿತ್ತು ಎಂಬ ಸಂಗತಿಯನ್ನು ಅಮಾರ್ತ್ಯ ಸೇನ್ ಅವರು ಬಹಳ ಹಿಂದೆಯೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಹೀಗಾಗಿ ಇದು ಅಮಾರ್ತ್ಯ ಸೇನ್ ಅವರು ಮಾಡಿದ್ದ ನೇಮಕಾತಿ ಆಗಿರಲಿಲ್ಲ ಹಾಗೂ ಈ ನೇಮಕಾತಿಯಲ್ಲಿ ಯಾವುದೇ ಅವ್ಯವಹಾರ ನಡೆದಿರಲಿಲ್ಲ. ಇನ್ನು ಡಾ.ಅಂಜನಾ ಶರ್ಮ ಎಂಬುವವರು ವಿಶ್ವವಿದ್ಯಾಲಯದ ಸ್ಥಾಪಕ ಡೀನ್ (ಅಕಡೆಮಿಕ್ ಪ್ಲಾನಿಂಗ್) ಆಗಿದ್ದಾರೆ. ಹೀಗಾಗಿ ಇವರೂ ಅಮಾರ್ತ್ಯ ಸೇನ್ ಮೂಲಕ ನೇಮಕಗೊಂಡವರಲ್ಲ. ಇನ್ನು ನಯನ್ಜೋತ್ ಲಾಹಿರಿ ಮತ್ತು ಉಪಿಂದರ್ ಸಿಂಗ್ ಅವರನ್ನು ನಳಂದ ವಿವಿಗೆ ಎಂದೂ ನೇಮಕ ಮಾಡಲಾಗಿಲ್ಲ.
ನಯನ್ಜೋತ್ ಲಾಹಿರಿ ಅವರು ಈ ಕುರಿತು ಆಲ್ಟ್ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿ, “ಪ್ರೊ.ಅಮರ್ತ್ಯಸೇನ್ ನಳಂದದ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ನಾನು ದೆಹಲಿ ವಿವಿಯಲ್ಲಿ ಇತಿಹಾಸ ಪ್ರಾದ್ಯಾಪಕಳಾಗಿದ್ದೆ, ಕೆಲ ವರ್ಷಗಳ ಕಾಲ ಕಾಲೇಜುಗಳ ಡೀನ್ ಆಗಿದ್ದೆ. ಯಾವತ್ತೂ ನಳಂದ ವಿವಿಯ ಸಿಬ್ಬಂದಿಯಾಗಿ ನಾನು ನೇಮಕಗೊಂಡಿಲ್ಲ, ಅಲ್ಲಿಂದ ಒಂದು ರೂಪಾಯಿಯನ್ನೂ ನಾನು ಗಳಿಸಿಕೊಂಡಿಲ್ಲ. ದೆಹಲಿ ವಿವಿ ಬಿಟ್ಟ ನಂತರ ನಾನು 2016ರಲ್ಲಿ ಅಶೋಕ ಯೂನಿವರ್ಸಿಟಿ ಸೇರಿಕೊಂಡೆ” ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಪ್ರೊ.ಉಪಿಂದರ್ ಸಿಂಗ್ ಅವರನ್ನು ಆಲ್ಟ್ ನ್ಯೂಸ್ ತಾಣ ಸಂಪರ್ಕಿಸಿದಾಗ ಅವರು, ತಾವೆಂದೂ ನಳಂದ ಯೂನಿವರ್ಸಿಟಿ ಸೇರಿರಲಿಲ್ಲ, ಹಾಗೂ ಅಲ್ಲಿಂದ ಯಾವುದೇ ಸಂಭಾವನೆಯನ್ನೂ ಪಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯಗಳ ಕುರಿತು ಸ್ಪಷ್ಟಪಡಿಸಿರುವ ಅಮರ್ತ್ಯಸೇನ್, “ಉಪಿಂದರ್ ಸಿಂಗ್ (ಮನಮೋಹನ್ ಸಿಂಗ್ ಅವರ ಹಿರಿಯ ಪುತ್ರಿ) ಆಗಲೀ, ಅವರ ಸ್ನೇಹಿತೆ ನಯನಜೋತ್ ಲಾಹಿರಿ ಅವರಾಗಲೀ ಎಂದೂ ನಳಂದದ ಸಿಬ್ಬಂದಿಗಳಾಗಿರಲಿಲ್ಲ (ದೆಹಲಿ ವಿವಿಯಲ್ಲಿದ್ದ ಅವರು ತಾವು ಹೊಂದಿದ್ದ ಸ್ಥಾನಮಾನದ ಆಧಾರದಲ್ಲಿ ನಳಂದಕ್ಕೆ ಸುಲಭವಾಗಿ ನೇಮಕವಾಗಲು ಸಾಧ್ಯವಿತ್ತು- ಅವರು ನಳಂದದಲ್ಲಿ ನೇಮಕಾತಿ ಮಾಡಲು ಎಂದೂ ಕೋರಿಕೆ ಸಲ್ಲಿಸಿರಲಿಲ್ಲ)
ಆರೋಪ 5: ಮನಮೋಹನ್ ಸಿಂಗ್ ಅವರ ಇನ್ನಿಬ್ಬರು ಹೆಣ್ಣುಮಕ್ಕಳಾದ ದಾಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಅವರನ್ನು ಸಹ ಸಿಬ್ಬಂದಿಯಾಗಿ ನೇಮಕಗೊಳಿಸಲಾಗಿತ್ತು. ಅವರಿಬ್ಬರೂ ಅಮೆರಿಕದಲ್ಲಿದ್ದುಕೊಂಡೇ ಸಂಬಳ ಪಡೆದಿದ್ದರು.
ಸತ್ಯಸಂಗತಿ: ಈ ಆರೋಪವೂ ಸುಳ್ಳು ಆರೋಪವಾಗಿದೆ. ಮನಮೋಹನ್ ಸಿಂಗ್ ಪುತ್ರಿಯರಾದ ದಾಮನ್ ಸಿಂಗ್ ಆಗಲೀ ಅಮೃತ್ ಸಿಂಗ್ ಆಗಲೀ ಎಂದೂ ಯಾವ ರೀತಿಯಲ್ಲೂ ನಳಂದ ವಿವಿಯ ಸಿಬ್ಬಂದಿಯಾಗಿ ನೇಮಕಗೊಂಡಿರಲೇ ಇಲ್ಲ. “ನಾನಾಗಲೀ ನನ್ನ ಸೊದರಿ ಅಮೃತ್ ಆಗಲೀ ನಳಂದದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ” ಎಂದು ದಾಮನ್ ಸಿಂಗ್ ತಿಳಿಸಿದ್ದಾರೆ.
ಅಮರ್ತ್ಯಸೇನ್ ಅವರು, “ಇದೂ ಕೂಡಾ ಸಂಪೂರ್ಣ ಅಸತ್ಯವಾಗಿದೆ. ಹೇಳಲಾಗಿರುವ ಇಬ್ಬರು ಯಾವತ್ತೂ ನಳಂದ ವಿವಿಯ ಸಿಬ್ಬಂದಿಯಾಗಿ ನೇಮಕಗೊಂಡಿಲ್ಲ. (ಅವರು ಎಂದೂ ಅಂತಹ ಕೋರಿಕೆಯನ್ನೂ ಇಟ್ಟಿರಲಿಲ್ಲ). ಹೀಗಾಗಿ ಅವರು ಅಮೆರಿಕದಲ್ಲಿದ್ದುಕೊಂಡು ಸಂಬಳ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದಿದ್ದಾರೆ.
ಈ ಎಲ್ಲಾ ಸಂಗತಿಗಳನ್ನು ಟ್ವೀಟ್ ಮಾಡಿರುವ ಭಾರತಿ ಜೈನ್ ಅವರು ಟೈಮ್ಸ್ ಆಫ್ ಇಂಡಿಯಾದ ಆಂತರಿಕ ಭದ್ರತೆ ವಿಭಾಗದ ಸಂಪಾದಕಿ, ಅವರು ಗೃಹ ಸಚಿವಾಲಯ, ಭದ್ರತೆ ವಿಷಯಗಳು, ಸಿಬ್ಬಂದಿ ಸಚಿವಾಲಯ, ಚುನಾವಣಾ ಆಯೋಗ ಮತ್ತು ಸಂಸತ್ತಿನ ಕುರಿತು ವರದಿ ಮಾಡುತ್ತಾರೆಂದು ತಮ್ಮ ಟ್ವಿಟರ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತೆ ಭಾರತಿ ಜೈನ್
ಪ್ರತಿಷ್ಠಿತ ಪತ್ರಿಕೆಯ ವರದಿಗಾರ್ತಿಯೊಬ್ಬರು ಈ ವಿಷಯ ಹಂಚಿಕೊಂಡಾಗ ಅವುಗಳನ್ನು ನಿಜವೆಂದು ನಂಬುವವರು ಇರುತ್ತಾರೆ.
ಈ ವಿಷಯಗಳ ಸತ್ಯಸಂಗತಿಗಳನ್ನು ಒಬ್ಬೊಬ್ಬರಾಗಿ ಕೆದಕುತ್ತಾ ಹೋದಂತೆ ಭಾರತಿ ಜೈನ್ ಈಗ ತಮ್ಮ ಟ್ವೀಟ್ ಗಳನ್ನು ಒಂದೊಂದಾಗಿ ಡಿಲೀಟ್ ಮಾಡಿದ್ದಾರೆ. ಇವುಗಳನ್ನು ಹಂಚಿಕೊಂಡಿದ್ದ ಅನ್ಶುಲ್ ಸಕ್ಸೇನಾ ಎಂಬ ಯುವಕನೂ ಡಿಲೀಟ್ ಮಾಡಿದ್ದಾನೆ. ನಿಮ್ಮ ಮಾಹಿತಿಗೆ ಮೂಲ ಏನು ಎಂದು ಹಿರಿಯ ಪತ್ರಕರ್ತರೊಬ್ಬರು ಭಾರತಿ ಜೈನ್ ಅವರಿಗೆ ಕೇಳಿದ್ದಕ್ಕೆ “ಸರ್ಕಾರಿ ಮೂಲಗಳು” ಎಂದೂ ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಆದರೆ ಅವರ ಎಲ್ಲಾ ಹೇಳಿಕೆಗಳೂ ಸುಳ್ಳು ಎಂದು ಬಯಲಾಗಿವೆ.
ಸತ್ಯ ಬಯಲಾದ ನಂತರ ಮೇ 2ರಂದು ಭಾರತಿ ಜೈನ್ ಕ್ಷಮಾಪಣೆ
ಅಮಾರ್ತ್ಯ ಸೇನ್ ಅವರನ್ನು ಮೋದಿ ಸರ್ಕಾರ ಕಿತ್ತು ಎಸೆದಿತ್ತೇ?
ಆರೋಪ 6: 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಅಮರ್ತ್ಯಸೇನ್ ಅವರ ವಂಚನೆಗಳನ್ನು ನಿಲ್ಲಿಸಿದರು, ಅವರನ್ನು ನಳಂದ ವಿವಿಯಿಂದ ಎತ್ತಿ ಎಸೆದರು. ಅಂದಿನಿಂದಲೂ ಅಮರ್ತ್ಯ ಸೇನ್ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಉಗ್ರವಾಗಿ ಟೀಕಿಸುತ್ತಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಅವರು ಮೋದಿ ವಿರುದ್ಧ ಯಾವುದೇ ಅರ್ಥಶಾಸ್ತ್ರಜ್ಞರನ್ನು ಪ್ರಭಾವಿಸಲು ಸಾಧ್ಯವಾಗಿಲ್ಲ.
ವಾಟ್ಸಾಪ್ ಮೂಲಕ ವೈರಲ್ ಆಗಿರುವ ಸಂದೇಶದ ಪ್ರಕಾರ ಅಮಾರ್ತ್ಯ ಸೇನ್ ಅವರನ್ನು ಮೋದಿ ಸರ್ಕಾರ 2014ರಲ್ಲಿ ಕಿತ್ತೆಸೆದಿತ್ತು. ಆದರೆ ಇದು ಶುದ್ಧ ಸುಳ್ಳು ಎಂಬುದನ್ನು ನೋಡಬಹುದು. 2012ರಲ್ಲಿ ಅಮಾರ್ತ್ಯ ಸೇನ್ ಅವರನ್ನು ಕುಲಪತಿಯಾಗಿ ಸರ್ಕಾರ ನೇಮಕ ಮಾಡಿದಾದ ಮೂರು ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು. ಈ ಅವಧಿಯನ್ನು ಅಮಾರ್ತ್ಯ ಸೇನ್ ಪೂರ್ತಿಗೊಳಿಸಿದ್ದರು. ಅವರನ್ನೇ ಮುಂದುವರೆಸಲು ಯಾವುದೇ ತೊಂದರೆ ಇರಲಿಲ್ಲ.
ಸತ್ಯಸಂಗತಿ: ನಳಂದ ವಿವಿಯ ಸೇವಾವಧಿಯನ್ನು ನಳಂದ ವಿಶ್ವವಿದ್ಯಾಲಯ ಕಾಯಿದೆ 210ರ ಸೆಕ್ಷನ್ 5(ಎಫ್ಓ ತಿಳಿಸುತ್ತದೆ. ಅದರ ಪ್ರಕಾರ ಕುಲಪತಿಗಳ ಆಡಳಿತದ ಅವಧಿ 3 ವರ್ಷಗಳು. 2015ರಲ್ಲಿ ಅಮರ್ತ್ಯಸೇನ್ ನಳಂದ ವಿವಿಯ ಕುಲಪತಿ ಹುದ್ದೆ ತೊರೆದಾಗ ಲೋಕಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ವಿದೇಶಾಂಗ ಸಚಿವ ವಿಕೆ ಸಿಂಗ್ ನೀಡಿದ ಉತ್ತರ ಇದಾಗಿತ್ತು. “18,ಜುಲೈ 201ರಿಂದ ಅನ್ವಯವಾಗುವಂತೆ ಪ್ರೊ.ಅಮರ್ತ್ಯ ಸೇನ್ ಅವರನ್ನು ನಳಂದ ವಿವಿಯ ಪ್ರಥಮ ಕುಲಪತಿಗಳಾಗಿ ನೇಮಕಗೊಳಿಸಲಾಗಿತ್ತು. ಅವರ ಅವಧಿ ಮುಕ್ತಾಯವಾಗುತ್ತಿದ್ದಂತೆ ಪ್ರೊ.ಅಮರ್ತ್ಯ ಸೇನ್ ಸಾರ್ವಜನಿಕವಾಗಿ ತಮ್ಮನ್ನು 2015ರ ನಂತರವೂ ನಳಂದ ವಿವಿಯ ಕುಲಪತಿಯಾಗಿ ಮುಂದುವರಿಯಲು ಬಯಸುವುದಿಲ್ಲ, ತಮ್ಮನ್ನು ಇದಕ್ಕೆ ಪರಿಗಣಿಸಬಾರದು” ಎಂದು ಹೇಳಿದ್ದರು” ಎಂದು ಸದನದಲ್ಲಿ ವಿಕೆ ಸಿಂಗ್ ತಿಳಿಸಿದ್ದರು.
ತಾವು ನಳಂದ ಕುಲಪತಿ ಸ್ಥಾನದಲ್ಲಿ ಮುಂದುವರೆಯಲು ಬಯಸದೇ ಇದ್ದುದಕ್ಕೆ ಕಾರಣ ತಿಳಿಸಿರುವ ಅಮರ್ತ್ಯ ಸೇನ್, “ನಿಜ ಸಂಗತಿ ಏನೆಂದರೆ ನಾನು ನಳಂದ ವಿವಿಯ ಕುಲಪತಿಯಾಗಿ ಮುಂದುವರೆಯಲು ಕೇಳಿಕೊಂಡಿರಲಿಲ್ಲ (ಆದರೂ ಆಡಳಿತ ಮಂಡಳಿ ನನ್ನನ್ನು ಕುಲಪತಿಯಾಗಿ ಉಳಿಸಲು ಮರುಆಯ್ಕೆ ಮಾಡಿತ್ತು). ಮೋದಿ ಸರ್ಕಾರ ನನ್ನ ಬಗ್ಗೆ ತೋರಿದ್ದ ಅನಾದರ ಮಾತ್ರವಲ್ಲದೇ ಮೋದಿ ಸರ್ಕಾರ ಈ ಪುರಾತನ (ಬೌದ್ಧ ಮೂಲದ) ವಿಶ್ವವಿದ್ಯಾಲಯವನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಂಡಿದೆ ಎಂಬ ಸಂಗತಿ ನನ್ನನ್ನು ಬಾಧಿಸಿತ್ತು”
“ನಾನು ಮೋದಿಯ ಆರ್ಥಿಕ ನೀತಿಗಳನ್ನು ಟೀಕಿಸಲು ಆರಂಭಿಸಿದ್ದು ನಾನು ಕುಲಪತಿ ಹುದ್ದೆಯಿಂದ ಇಳಿದ ಮೇಲಲ್ಲ, ನಾನು ಹುದ್ದೆ ತೊರೆಯುವುದಕ್ಕೂ ಮೊದಲೇ ಟೀಕಿಸುತ್ತಿದ್ದೆ. ಇನ್ನೂ ನಿಜ ಹೇಳಬೇಕೆಂದರೆ ನಾನು ನಳಂದ ವಿವಿಯ ಕುಲಪತಿ ಆಗುವುದಕ್ಕೂ ಮೊದಲೇ ನಾನು ಮೋದಿಯ ಆರ್ಥಿಕ ನೀತಿಗಳ ಅನಾಹುತಗಳ ಬಗ್ಗೆ ಮಾತಾಡಿದ್ದೆ” ಎಂದಿದ್ದಾರೆ.
ಇಲ್ಲಿ ಅರ್ಥವಾಗುವ ಸಂಗತಿ ಏನೆಂದರೆ ಪ್ರೊ.ಅಮರ್ತ್ಯ ಸೇನ್ ಅವರನ್ನು ಮೋದಿ ಸರ್ಕಾರ ಕಿತ್ತು ಹಾಕಿರಲಿಲ್ಲ, ಅವರೇ ಮುಂದಿನ ಅವಧಿಗೆ ತಮ್ಮನ್ನು ಮುಂದುವರಿಸದಂತೆ ಕೇಳಿಕೊಂಡು ಹೊರಗುಳಿದಿದ್ದರು. ಪ್ರೊ ಸೇನ್ ಮನಸ್ಸು ಮಾಡಿದ್ದರೆ ಕುಲಪತಿಯಾಗಿ 2018ರ ವರೆಗೂ ಮುಂದುವರಿಯ ಬಹುದಿತ್ತು. ಇದಕ್ಕೆ ವಿವಿ ಆಡಳಿತಾಂಗವೂ ಸಿದ್ಧವಿತ್ತು, ಬಯಸಿತ್ತು. ಆದರೆ ಸರ್ಕಾರಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ಸ್ವತಃ ಅಮರ್ತ್ಯ ಸೇನ್ ಮುಂದುವರಿಕೆಯನ್ನು ನಿರಾಕರಿಸಿದ್ದರು.
ಪ್ರೊ.ಅಮರ್ತ್ಯ ಸೇನ್ ಕುರಿತು ಈ ಸುಳ್ಳುಸುದ್ದಿ ಯಾಕೆ?
ವಾಸ್ತವದಲ್ಲಿ ಪ್ರೊ ಅಮರ್ತ್ಯಸೇನ್ ದೇಶದ ಅತ್ಯಂತ ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರಲ್ಲಿ ಮುಖ್ಯರಾದವರು. ಮಾನವೀಯ ನೆಲೆಯ ಅರ್ಥಶಾಸ್ತ್ರವನ್ನೇ ಯಾವತ್ತಿಗೂ ಪ್ರತಿಪಾದಿಸುತ್ತಾ ಬಂದಿರುವವರು. ಆದರೆ ಅತ್ಯಂತ ಅಮಾನವೀಯ ನೆಲೆಯಲ್ಲಿ, ಕಾರ್ಪೊರೇಟ್ ಹಿತಾಸಕ್ತಿಗೆ ಆತುಕೊಂಡು ಸರ್ಕಾರ ನಡೆಸುತ್ತಿರುವ ಮೋದಿ ಸರ್ಕಾರವನ್ನು ಸಹಜವಾಗಿಯೇ ಅಮರ್ತ್ಯ ಸೇನ್ ಕಟು ಟೀಕೆಗೆ ಒಳಪಡಿಸಿದ್ದಾರೆ. ಅಮರ್ತ್ಯ ಸೇನ್ ಹೇಳುವ ವಿಷಯಗಳು ಅತ್ಯಂತ ವಿಶ್ವಾಸಾರ್ಹವಾಗಿರುವ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರ ಮಾತುಗಳಿಗೆ ಬೆಲೆ ಬರುತ್ತದೆ. ಬಿಜೆಪಿ ಸರ್ಕಾರ ಆರ್ಥಿಕ ನೀತಿಗಳ ಬೆಂಬಲಿಗರಿಗೆ, ಅದರಲ್ಲೂ ಸುಬ್ರಹ್ಮಣಿಯನ್ ಸ್ವಾಮಿ ಅಂತವರಿಗೆ, ಹಾಗೂ ಮೋದಿ ಭಕ್ತರಿಗೆ ಇದು ನುಂಗಲಾರದ ತುತ್ತು. ಈ ಕಾರಣದಿಂದಾಗಿಯೇ ಪ್ರೊ.ಅಮರ್ತ್ಯ ಸೇನ್ ಅವರನ್ನು ಭ್ರಷ್ಟ, ವಂಚಕ, ದೇಶದ ಹಣವನ್ನು ತಿಂದು ಹಾಕಿದ ವ್ಯಕ್ತಿ ಎಂದು ಬಿಂಬಿಸಿಬಿಟ್ಟರೆ, ಹೀಗೆ ಹೇಳಿ ಜನರನ್ನು ನಂಬಿಸಿಬಿಟ್ಟರೆ ಪ್ರೊ.ಅಮರ್ತ್ಯ ಸೇನ್ ಹೇಳುವ ಮಾತನ್ನು ನಂಬುವವರೂ ಕಡಿಮೆ ಆಗುತ್ತಾರೆ. ಇಷ್ಟೇ ಇವರ ತಂತ್ರ. ಆದರೆ ಅಮರ್ತ್ಯ ಸೇನ್ ವ್ಯಕ್ತಿತ್ವ ತಿಳಿದವರಗೆ ಅವರೆಂತಹ ವ್ಯಕ್ತಿ ಎಂದು ಚೆನ್ನಾಗಿ ಗೊತ್ತು. ತಮಗೆ ನೊಬೆಲ್ ಪ್ರಶಸ್ತಿ ಬಂದಾಗ ದೊರೆತ ಕೋಟ್ಯಂತರ ರೂಪಾಯಿಗಳನ್ನೇ ಸ್ವಂತಕ್ಕೆ ಬಳಸದೇ ಸಮಾಜ ಸೇವೆಗೆ ನೀಡಿದ ಉದಾರಿ ಮತ್ತು ಉದಾತ್ತ ವ್ಯಕ್ತಿತ್ವದ ಅಮರ್ತ್ಯ ಸೇನ್ ಅವರನ್ನು ಎಷ್ಟು ಸುಬ್ರಹ್ಮಣಿಯನ್ ಸ್ವಾಮಿಗಳು ಬಂದರೂ, ಎಷ್ಟು ಮೋದಿ ಭಕ್ತ ಸುಳ್ಳುಗಾರರು, ಎಷ್ಟು ಭಾರತಿ ಜೈನ್ ಗಳು ಬಂದರೂ, ಎಂತಹ ಸುಳ್ಳು ಆರೋಪ ಮಾಡಿದರೂ ಅವರ ಗಟ್ಟಿ ವ್ಯಕ್ತಿತ್ವ, ಮಾನವ ಪ್ರೇಮ ಅಂತಿಮವಾಗಿ ಗೆದ್ದೇ ಗೆಲ್ಲುತ್ತದೆ. ಅಷ್ಟರಲ್ಲಿ ಸುಳ್ಳು ಸಾಕಷ್ಟು ಅನಾಹುತ ಮಾಡಿರುತ್ತದೆಯಾದರೂ ಅಂತಿಮ ಗೆಲುವು ಸತ್ಯಕ್ಕೆ. ಸತ್ಯಕ್ಕೇ ಎಂದಿಗೂ ಜಯವೇ ಹೊರತು ಸುಳ್ಳಿಗಲ್ಲ.
Bharati Jain is unfit to be a journalist. She might have been paid well by Liar Modi team to spread the lies.