ದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದಿರುವ ವಿಚಾರವಾದಿಗಳ ಸರಣಿ ಹತ್ಯೆಯ ಹಿಂದೆ ತಲೆಮರೆಸಿಕೊಂಡಿರುವ ಔರಂಗಾಬಾದ್ ಮೂಲದ ಬಲಪಂಥೀಯ ಶಂಕಿತ ಉಗ್ರ ಎಂ. ಡಿ ಮುರಳಿ ಕೈವಾಡವಿರುವುದನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ಖಚಿತಪಡಿಸಿರುವುದಾಗಿ ದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ
ವಿಚಾರವಾದಿ ನರೇಂದ್ರ ದಾಬೋಲ್ಕರ್, ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಗೋವಿಂದ ಪನ್ಸಾರೆ, ಹಿರಿಯ ಸಾಹಿತಿ ಎಂ. ಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ರ ಹತ್ಯೆಗೆ ಸಂಚು ರೂಪಿಸಿದ್ದು ಸನಾತನ ಸಂಸ್ಥೆಯ ಮುರಳಿ ಎಂದು ಎಟಿಎಸ್ ಆರೋಪಿಸಿದೆ.
2018ರ ಆಗಸ್ಟ್ ನಲ್ಲಿ ಸತಾತನ ಸಂಸ್ಥಾ ಬೆಂಬಲಿಗ ವೈಭವ್ ರಾವುತ್ ಅವರ ನಲಸೊಪರ ನಿವಾಸದ ಮೇಲೆ ಎಟಿಎಸ್ ನಡೆಸಿದ ದಾಳಿಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧಸಾಮಗ್ರಿಗಳು ಪತ್ತೆಯಾಗಿದ್ದವಲ್ಲದೇ ದಾಳಿಯ ಹಿಂದೆ ಎಂ ಡಿ ಮುರಳಿಯ ಕೈವಾಡ ಇರುವುದು ತಿಳಿದು ಬಂದಿತ್ತು.
ನಂತರದಲ್ಲಿ ಶಾರದಾ ಕಲಾಸ್ಕರ್, ಸುಧನ್ವಾ ಗೊಂದಲೇಖರ್, ಶ್ರೀಕಾಂತ್ ಪಂಗಾರ್ಕರ್ ಮತ್ತು ಅವಿನಾಶ್ ಪವಾರ್ ಸಹ ಸತಾತನ ಸಂಸ್ಥೆ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಎಲ್ಲರನ್ನೂ ಬಂಧಿಸಲಾಗಿತ್ತು. ಇವರೆಲ್ಲರ ಮನೆಗಳಲ್ಲಿ ಶೋಧಿಸಿದಾಗ ಅಲ್ಲಿ ಸಹ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.
ಬಂಧಿತರ ವಿಚಾರಣೆ ವೇಳೆ ಐವರೂ ಸಹ ಎಂ ಡಿ ಮುರಳಿ ಹೆಸರನ್ನು ಪ್ರಸ್ತಾಪಿಸಿದ್ದರು. ‘ಅವರೆಲ್ಲರೂ ತಾವು ಖುದ್ದಾಗಿ ಮುರಳಿಯನ್ನು ನೇರವಾಗಿ ನೋಡಿಲ್ಲ, ಆದರೆ ಅಮೋಲ್ ಕಾಳೆ ಎಂಬ ವ್ಯಕ್ತಿ ನಮಗೆ ಮುರಳಿ ಕಡೆಯಿಂದ ಬಂದ ಸಂದೇಶಗಳನ್ನು ರವಾನಿಸುತ್ತಿದ್ದರು’ ಎಂದು ಮೊದಲಿಗೆ ತಿಳಿಸಿದ್ದರು. ನಂತರ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್ ಐ ಟಿ ಅಮೋಲ್ ಕಾಳೆಯನ್ನು ಕರ್ನಾಟಕದ ಎಸ್ ಐ ಟಿ ಬಂಧಿಸಿತ್ತು.

“ನಂತರ ಎಟಿಎಸ್ ಐವರನ್ನೂ 20 ದಿನಗಳಿಗೂ ಹೆಚ್ಚು ದಿನ ವಿಚಾರಣೆ ನಡೆಸಿದ ನಂತರ ಮುರಳಿ ನಮಗೆ ಗೊತ್ತು ಎಂದು ಬಹಿರಂಗಪಡಿಸಿದ್ದರು. “ಅವರು ಆಗಾಗ್ಗೆ ನಮ್ಮನ್ನೆಲ್ಲಾ ಸೇರಿಸಿ ಸಭೆ ನಡೆಸುತ್ತಿದ್ದರು. 2008ರಿಂದ ನಡೆದ ಹಲವು ಬಾಂಬ್ ಸ್ಫೋಟಗಳ ಹಿಂದೆಯೂ ಮುರಳಿ ಮೆದುಳಿನಂತೆ ಕೆಲಸ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ,” ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರ ಹಾಗೂ ಹೊರವಲಯಗಳ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಇರುವ ಬಗ್ಗೆ ಜಾಗೃತಿ ವಹಿಸಿದ್ದ ಮುರಳಿ, ದಾಳಿಕೋರರಿಗೆ ಮುಖಗವುಸು ಹಾಗೂ ಕನ್ನಡಕ ಧರಿಸಿ, ತಮ್ಮ ಗುರುತು ಮರೆಮಾಚುವಂತೆ ತಿಳಿಸುತ್ತಿದ್ದರು ಎಂದು ಬಂಧಿತರು ಸಂಚನ್ನು ತಿಳಿಸಿದ್ದಾರೆ.
ಪುಣೆಯಲ್ಲಿ ನಡೆಯುವ ಸನ್ ಬರ್ನ್ ವಾರ್ಷಿಕ ನೃತ್ಯ ಹಾಗೂ ಸಂಗೀತ ಉತ್ಸವ ಹಿಂದೂ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ನಂಬಿದ್ದ ದಾಳಿಕೋರರು, 2017ರಲ್ಲಿ ಇಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದೂ ಸಹ ಬಂಧಿತರು ಬಾಯ್ಬಿಟ್ಟಿದ್ದಾರೆ.
ಮೇಲಿನ ಹೇಳಿಕೆಗಳನ್ನು ಪರಿಗಣಿಸಿ ನಂತರ ನಡೆಸಿದ ತನಿಖೆಯಿಂದ, ಮುರಳಿ ಬಳಸಿರುವ ಮೊಬೈಲ್ ಸಂಖ್ಯೆಗಳ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. “ಆತ ಬಳಸಿರುವ ಎಲ್ಲಾ ಮೊಬೈಲ್ ಸಂಖ್ಯೆಗಳು ಬೇರೆಯವರ ಹೆಸರಿನಲ್ಲಿ ಇದೆ. ಆದ್ದರಿಂದ ಆತನನ್ನು ಪತ್ತೆ ಮಾಡುವುದು ಇನ್ನಷ್ಟು ಕಠಿಣ,” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಮುರಳಿಯ ಭಾವಚಿತ್ರ ಇದ್ದರೂ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಎಟಿಎಸ್ ತಿಳಿಸಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಬಾಂಬೇ ಹೈಕೋರ್ಟು ದಾಬೋಲ್ಕರ್ ಹತ್ಯೆಯನ್ನು ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಪನ್ಸಾರೆ ಹತ್ಯೆ ತನಿಖೆ ನಡೆಸುತ್ತಿರುವ ಎಸ್ ಐಟಿ ಗಳಿಗೆ ಎಚ್ಚರಿಕೆ ನೀಡಿ, ಅವು ತಮ್ಮ ತನಿಖೆ ಪೂರ್ಣಗೊಳಿಸುವ ವಿಷಯದಲ್ಲಿ ಗಂಭೀರತೆ ತೋರಬೇಕು ಎಂದಿತ್ತು.
More Articles
By the same author
ಹತ್ಯೆಗಳ ಹಿಂದಿರುವ ಶಕ್ತಿ ಯಾವುದೆಂದು ಈಗಾಗಲೇ ಜಗಜ್ಜಾಹಿರಾಗಿದೆ. ವ್ಯಕ್ತಿಗಳ ಬಂಧನವಾಗಿ, ಶಿಕ್ಷೆಯಾಗಬೇಕು.