ಇನ್ನೊಂದು ಮೇ ದಿನ ಇತಿಹಾಸದ ಕಾಲಗರ್ಭಕ್ಕೆ ಸೇರಿದೆ. ಭಾರತವು ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕಾರ್ಮಿಕರು ವಿವಿಧ ಸಂಘಟನೆಗಳಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ನನ್ನ ಕೆಲವು ಆಲೋಚನೆಗಳು ಮತ್ತು ಪ್ರಶ್ನೆಗಳನ್ನು ’ಟ್ರೂತ್ಇಂಡಿಯಾ’ದ ಓದುಗರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ವಿಶ್ವದ ಕಾರ್ಮಿಕರೇ ಒಂದಾಗಿ… ಎಂದು ಕಾರ್ಲ್ ಮಾರ್ಕ್ಸ್ ಕರೆ ನೀಡಿದ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ? ಭಾರತದಲ್ಲಿ ಕಾರ್ಮಿಕರು, ಧರ್ಮ, ಜಾತಿ, ಉಪಜಾತಿ, ವರ್ಗ, ರಾಜಕೀಯ, ಪ್ರಾಂತ್ಯ, ಭಾಷೆ ಇತ್ಯಾದಿ ವಿಷಯಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಮೇ ದಿನವಾದರೂ ಎಲ್ಲ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಯಡಿ ಸೇರಿ ಸಭೆಗಳನ್ನು ನಡೆಸುವುದಿಲ್ಲ; ಮೆರವಣಿಗೆಗಳನ್ನು ಹೊರಡಿಸುವುದಿಲ್ಲ. ಕಾರ್ಮಿಕರ ನಡುವೆ ಇರುವ ಇಂತಹ ಅನೈಕ್ಯತೆಯನ್ನು ಕಂಡು ಬೇಸರಗೊಂಡು, ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಇಂದ್ರಜಿತ್ ಗುಪ್ತಾ 1990ರ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ಎಲ್ಲ ಕಾರ್ಮಿಕ ಸಂಘಟನೆಗಳು ಒಂದು ಪ್ರಬಲ ಟ್ರೇಡ್ ಯೂನಿಯನ್ ಸೆಂಟರಾಗಿ ರೂಪುಗೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಎಡಪಕ್ಷಗಳ ಕಾರ್ಮಿಕ ಸಂಘಟನೆಗಳೇ ಜೊತೆಗೊತೆಯಾಗಿ ಸಾಗುವುದಿಲ್ಲ. ಇನ್ನೂ ಬೇರೆ ಪಕ್ಷಗಳದ್ದರ ಕುರಿತು ಏನನ್ನು ಹೇಳಲಾದೀತು? ಇಂತಹ ಕಾರಣಗಳಿಂದ ಕಾರ್ಮಿಕ ವರ್ಗ ಒಂದು ರಾಜಕೀಯ ವರ್ಗವಾಗಿ ಹೊರಹೊಮ್ಮಿಲ್ಲ.
ಹಿಂದಿನ ಕಾಲದಲ್ಲಿ ಕಾರ್ಮಿಕ ಸಂಘಗಳು ಸಾಮಾಜಿಕ ಬದಲಾವಣೆಯ ಸಾಧನಗಳು… ಎಂಬ ಹೇಳಿಕೆ ಕೇಳಿ ಬರುತ್ತಿತ್ತು. ಆದರೆ ಈ ಆಶಯ ಸಾಕಾರಗೊಂಡಿದೆಯೇ? ಇದಕ್ಕೆ ಉತ್ತರ ನೇತ್ಯಾತ್ಮಕವಾಗಿಯೇ ಇದೆ. ಒಂದರ್ಥದಲ್ಲಿ ಹೆಚ್ಚಿನ ಕಾರ್ಮಿಕ ಸಂಘಟನೆಗಳು ಮತ್ತು ಸಂಘಗಳು ಸದಸ್ಯರ ಆರ್ಥಿಕ ಬೇಡಿಕೆಗಳಿಗಷ್ಟೇ ಸೀಮಿತಗೊಂಡಿವೆ. ಅಂದರೆ ಎಕನಾಮಿಸಂನಲ್ಲೇ ಮುಳುಗಿದೆ. ಅವುಗಳಿಗಿರುವ ಸಾಮಾಜಿಕ ಆಯಾಮಗಳು ಕ್ಷೀಣಿಸಿವೆ.
ಕಾರ್ಮಿಕ ಸಂಘಟನೆಗಳು ತಮ್ಮ ಸದಸ್ಯರಿಗೆ ದುಡಿಯುವ ವರ್ಗದ ರಾಜಕಾರಣವನ್ನು (ಪಕ್ಷಗಳದ್ದಲ್ಲ) ದಾಟಿಸುವುದರಲ್ಲಿ ವಿಫಲವಾಗಿವೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಆದುದರಿಂದ ಅವುಗಳ ಹೆಚ್ಚಿನ ಸದಸ್ಯರು, ಅದರಲ್ಲೂ ಸಂಘಟಿತ ವಲಯದಲ್ಲಿರುವ ಸರ್ಕಾರಿ ನೌಕರರು, ಬ್ಯಾಂಕ್-ವಿಮಾ ಕ್ಷೇತ್ರಗಳ ಉದ್ಯೋಗಿಗಳು, ಸಾರ್ವಜನಿಕ ವಲಯದ ಕಾರ್ಖಾನೆಗಳ ಕಾರ್ಮಿಕರು ಇತ್ಯಾದಿ ಮಂದಿ ದ್ವೀಪವಾಸಿಗಳಂತಿದ್ದಾರೆ.
ನಮ್ಮ ದೇಶದಲ್ಲಿ ಸಂಘಟಿತ ವಲಯದಲ್ಲಿ ಒಟ್ಟು ದುಡಿಯುವ ಮಂದಿಯ ಪೈಕಿ ಶೇ 7ರಷ್ಟು ಮಾತ್ರ ಕೆಲಸವನ್ನು ಮಾಡುತ್ತಿದ್ದಾರೆ. ಉಳಿದ ಶೇ93ರಷ್ಟು ಮಂದಿ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಕನಿಷ್ಟ ಕೂಲಿಯೂ ದೊರಕುತ್ತಿಲ್ಲ: ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಂಘಟಿತ ವಲಯದ ಎಷ್ಟು ನೌಕರರು/ಉದ್ಯೋಗಿಗಳು ಅವಕಾಶವಂಚಿತ ತಮ್ಮ ಸಂಗಾತಿಗಳ ಬಗೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ? ಕಾರ್ಮಿಕ ಸಂಘಟನೆಗಳು ಸಂಘಟಿತ ವಲಯದ ನೌಕರರಲ್ಲಿ ಎಷ್ಟು ಮಟ್ಟದ ಅರಿವನ್ನು ಮೂಡಿಸಿವೆ?
ಕಾರ್ಮಿಕರು/ನೌಕರರು, ಅದರಲ್ಲೂ ಹೆಚ್ಚಾಗಿ ಸಂಘಟಿತ ವಲಯದವರು ವಿಸ್ತೃತ ನೆಲೆಯಲ್ಲಿ ತಮ್ಮ ವರ್ಗದ ಹಿತಾಸಕ್ತಿಗಳ ಬಗೆಗೆ ಏಕೆ ಯೋಚಿಸುವುದಿಲ್ಲ ಎಂಬುದು ಒಂದು ಪ್ರಮುಖ ಪ್ರಶ್ನೆ. ಇದರ ಹಿಂದೆ ಇರುವುದು ಸೂಕ್ತ ಶಿಕ್ಷಣದ ಕೊರತೆ. ವರ್ಗಪ್ರಜ್ಞೆಯನ್ನು ವಿಸ್ತರಿಸುವುದರಲ್ಲಿ ಶಿಕ್ಷಣದ್ದು ಮಹತ್ವದ ಪಾತ್ರ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ವಿಷಯದಲ್ಲಿ ಕಾರ್ಮಿಕ ಸಂಘಟನೆಗಳು/ಸಂಘಗಳು ಹೆಚ್ಚು ಸಫಲವಾಗಿಲ್ಲ ಎಂದರೆ ತಪ್ಪಾಗುವುದಿಲ್ಲ.
ಮೇಲೆ ಪ್ರಸ್ತಾಪಿಸಿರುವ ಅಂಶಗಳು ನಾಣ್ಯದ ಒಂದು ಮುಖವನ್ನಷ್ಟೇ ಅನಾವರಣಗೊಳಿಸುತ್ತವೆ. ಅದರ ಇನ್ನೊಂದು ಮುಖವನ್ನು ಗಮನಿಸುವುದು ಅವಶ್ಯ. ಈ ಕಾಲಘಟ್ಟದ ಜಾಗತೀಕರಣ ನೀತಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳನ್ನು ಜಾರಿ ಮಾಡಿತು. ಕಾರ್ಮಿಕ ಕಾನೂನುಗಳು ವಿದೇಶಿ/ಸ್ವದೇಶಿ ಬಂಡವಾಳದ ಹರವಿಗೆ ಮುಳುವಾಗಿವೆ ಎಂಬಿತ್ಯಾದಿ ನೆಪಗಳನ್ನು ಒಡ್ಡಿ ಅವುಗಳನ್ನು ಸುಧಾರಣಾ ಪ್ರಕ್ರಿಯೆಗೆ ಒಳಪಡಿಸಬೇಕೆಂಬ ತನ್ನ ಇರಾದೆಯನ್ನು ವ್ಯಕ್ತಪಡಿಸಿತು; ಈ ನಿಟ್ಟಿನಲ್ಲಿ ಕ್ರಮಗಳನ್ನು ಜಾರಿ ಮಾಡಲು ಮುಂದಾಯಿತು. ಪ್ರಸ್ತುತ ಕೇಂದ್ರದಲ್ಲಿರುವ ಸರ್ಕಾರ ಇನ್ನೂ ಉಗ್ರ ರೀತಿಯಲ್ಲಿ ಈ ಕಾರ್ಯಕ್ಕೆ ಚಾಲನೆಯನ್ನು ನೀಡಿದೆ. ಕೆಲವು ಸುಧಾರಣಾ ಅಂಶಗಳತ್ತ ಗಮನವನ್ನು ಹರಿಸೋಣ..

ಹೊರಗಿನವರು ಒಂದು ಕಾರ್ಖಾನೆ/ಉತ್ಪಾದನಾ ಘಟಕದ ಕಾರ್ಮಿಕ ಸಂಘದ ನೇತೃತ್ವವನ್ನು ವಹಿಸುವ ವಿಚಾರದಲ್ಲಿ ತೀರ ನಿರ್ಬಂಧಗಳನ್ನು ಹೇರುವ ಉತ್ಸುಕತೆಯನ್ನು ಕೇಂದ್ರ ಸರ್ಕಾರ ತೋರಿಸುತ್ತಿದೆ. ಇದು ಕಾರ್ಮಿಕರ ಪರವಾಗಿಲ್ಲ. ಎಲ್ಲ ಕಾರ್ಮಿಕರು ಸುಶಿಕ್ಷಿತರೇನೂ ಆಗಿರುವುದಿಲ್ಲ. ಆದುದರಿಂದ ಅವರು ಸ್ವಂತವಾಗಿ ಸಂಘವನ್ನು ಸ್ಥಾಪಿಸಲು, ಮುನ್ನಡೆಸಲು ಕಷ್ಟವಾಗುತ್ತದೆ. ಅಲ್ಲದೆ ಒಂದು ಸಂಘವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇರಬೇಕಾದ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವನ್ನು ಮಾಡಲು ಕೇಂದ್ರ ಸರ್ಕಾರ ತರಾತುರಿಯಲ್ಲಿದೆ. ಪ್ರಸ್ತುತ ಕೈಗಾರಿಕ ವಿವಾದಗಳ ಕಾಯಿದೆಯ ಅನ್ವಯ 100 ಕಾರ್ಮಿಕರನ್ನು ವಜಾ ಮಾಡಬೇಕಿದ್ದರೇ ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಈ ಸಂಖ್ಯೆಯನ್ನು ೩೦೦ಕ್ಕೆ ಏರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಮ್ಯಾಕಿನ್ಸೆ ಪ್ರಕಟಿಸಿದ ವರದಿಯ ಪ್ರಕಾರ ನಮ್ಮ ದೇಶದಲ್ಲಿ ೫೦ಕ್ಕೂ ಕಡಿಮೆ ಕಾರ್ಮಿಕರನ್ನು ಹೊಂದಿರುವ ಘಟಕಗಳು ಶೇ ೮೪ರಷ್ಟಿದ್ದವು! ಹೀಗಿರುವಾಗ ಈ ಸುಧಾರಣಾ ಕ್ರಮ ಜಾರಿಯಾದರೇ ಅಸಂಖ್ಯಾತ ಕಾರ್ಮಿಕರು ಬೀದಿಪಾಲಾಗುತ್ತಾರೆ.
ಪ್ರಸ್ತುತ ಒಂದು ಕಾರ್ಮಿಕ ಸಾಘವನ್ನು ಸ್ಥಾಪಿಸುವದೇ ದುಸ್ತರವಾದ ಸಂಗತಿಯಾಗಿ ಪರಿಣಮಿಸಿದೆ. ಅನೇಕ ಅಡ್ಡಿ, ಆತಂಕಗಳನ್ನು ಹಾಕಲಾಗುತ್ತದೆ. ಇಂತಹ ಅನೇಕ ಅಡೆತಡೆಗಳನ್ನು ಮೀರಿ ಕಾರ್ಮಿಕ ಸಂಘಟನೆಗಳು, ಸಂಘಗಳು ದಾಪುಗಾಲು ಹಾಕುತ್ತ ಮುಂದೆ ಸಾಗುತ್ತಿವೆ.
ಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಕೆ ಹೆಚ್ಚಾದಾಗ ಸ್ವಾಭಾವಿಕವಾಗಿ ಉದ್ಯೋಗಾವಕಾಶಗಳು ಕಡಿಮೆಯಾಗಲಿವೆ. ಆಗ ಮಾಲೀಕರ-ನೌಕರರ ನಡುವಿನ ಸಂಬಂಧಗಳು ಕೂಡ ತೀವ್ರಸ್ವರೂಪದ ಪಲ್ಲಟಗಳಿಗೆ ತುತ್ತಾಗುತ್ತವೆ. ಕಾರ್ಮಿಕ ಸಂಘಟನೆಗಳು ಮತ್ತು ಸಂಘಗಳಿಗೆ ಇಂತಹ ಬೆಳವಣಿಗೆಗಳು ಮಾರಕವಾಗಿ ಪರಣಮಿಸುವ ಸಂಭವಗಳೇ ಜಾಸ್ತಿ. ಇಂತಹ ಹತ್ತು ಹಲವಾರು ಸಮಸ್ಯೆಗಳು, ಸವಾಲುಗಳನ್ನು ಮಧ್ಯೆ ಅವು ಮುಂದೆ ಸಾಗಬೇಕಿವೆ.
ಒಂದು ದೇಶದ ಪ್ರಗತಿಯಲ್ಲಿ ದುಡಿಯುವ ಮಂದಿಯ ಬೆವರಿನ ಪಾಲು ಹಿರಿದಾಗಿರುತ್ತದೆ. ಹೀಗಾಗಿ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದರಲ್ಲಿ ಸರ್ಕಾರಗಳು ಸೂಕ್ತವಾದ ರೀತಿಯಲ್ಲಿ ಮುನ್ನಡೆಯಬೇಕು.
ಮ ಶ್ರೀ ಮುರಳಿ ಕೃಷ್ಣ
More Articles
By the same author