ಉಡುಪಿ: “ನೌಕಾಪಡೆಯ ನೌಕೆಯೇ ಮಲ್ಪೆಯ ಮೀನುಗಾರರ ಸುವರ್ಣ ತ್ರಿಭಜ ಬೋಟಿಗೆ ಡಿಕ್ಕಿ ಹೊಡೆದು ಮೀನುಗಾರರ ಸಾವಿಗೆ ಕಾರಣವಾಗಿದೆ, ಈ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆಯಾಗಬೇಕು” ಎಂದು ಕರಾವಳಿಯ ಮೀನುಗಾರ ಮೊಗವೀರ ಸಮುದಾಯದ ಮುಖಂಡ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಸಿಂಧುದುರ್ಗದ ಜಿಲ್ಲೆಯ ಮಲ್ವಾನ್ ಕರಾವಳಿ ಬಳಿ ಸಮುದ್ರದಲ್ಲಿ 60 ಮೀಟರ್ ಆಳದಲ್ಲಿ ಹುದುಗಿರುವ ಸ್ಥಿತಿಯಲ್ಲಿ ಮಲ್ಪೆಯ ಮೀನುಗಾರರ ದೋಣಿಯ ಅವಶೇಷ ಪತ್ತೆಯಾಗಿದ್ದನ್ನು ನೌಕಾಪಡೆಯ ಗುರುವಾರ ಬಹಿರಂಗಪಡಿಸಿತ್ತು.
ಡಿಸೆಂಬರ್ 15ರಂದು ಏಳು ಮಂದಿ ಮೀನುಗಾರರ ಸಮೇತ ದೋಣಿ ನಾಪತ್ತೆಯಾಗಿತ್ತು. ನಾಲ್ಕು ತಿಂಗಳವರೆಗೆ ದೋಣಿಯ ಕುರಿತಾಗಲೀ, ಮೀನುಗಾರರ ಕುರಿತಾಗಲೀ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತಾಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ “ಐಎನ್ ಎಸ್ ಕೊಚ್ಚಿನ್ ಹೆಸರಿನ ನೌಕಾಪಡೆಯ ನೌಕೆ ನಮ್ಮ ದೋಣಿಯನ್ನು ಹೊಡೆದಿದೆ ಎಂದು ಈ ಹಿಂದೆಯೇ ನಾನು ಮಾಡಿದ್ದ ಆರೋಪ ಸತ್ಯ ಎಂದು ಈಗ ಸಾಬೀತಾಗಿದೆ. ಏಕೆಂದರೆ ಯಾವುದೇ ತೂಫಾನಿಲ್ಲದೇ ಏಕಾಏಕಿ ಒಂದು ದೋಣಿ ಮುಳುಗಲು ಸಾಧ್ಯವಿಲ್ಲ. ಒಂದೊಮ್ಮೆ ಇಂಜಿನ್ ಸಮಸ್ಯೆಯಾಗಿದ್ದರೆ, ಅಥವಾ ಬೇರೆ ಯಾವುದೇ ಸಮಸ್ಯೆ ಆಗಿದ್ದರೂ ಅದನ್ನು ತಿಳಿಸುವಷ್ಟು ಸಮಯಾವಕಾಶ ಇರುತ್ತದೆ” ಎಂದಿರುವ ಪ್ರಮೋದ್ ಮಧ್ವರಾಜ್ “ಮೀನುಗಾರಿಕಾ ದೋಣಿ ಸಮುದ್ರದಲ್ಲಿ ದಿಢೀರ್ ಮುಳುಗಿದೆ ಎಂದಾದರೆ ನೇವಿ ಶಿಪ್ ಡಿಕ್ಕಿ ಹೊಡೆದದ್ದರಿಂದಲೇ ಆಗಿರುವುದು” ಎಂದು ಹೇಳಿದ್ದಾರೆ.
ನೌಕಾಪಡೆ ಪ್ರಕಟಿಸಿರುವ ಸುವರ್ಣ ತ್ರಿಭುಜ ದೋಣಿಯ ಚಿತ್ರ
“ಬಿಜೆಪಿ ಸರ್ಕಾರ ಇಲ್ಲಿಯವರೆಗೆ ಮುಚ್ಚಿಡುವ ಅಗತ್ಯವಿರಲಿಲ್ಲ. ವಿಷಯ ತಿಳಿದೂ ಹುಡುಕುವ ನಾಟಕವಾಡಿ ಚುನಾವಣೆ ಮುಗಿದ ಕೂಡಲೇ ವಿಷಯ ಬಹಿರಂಗಪಡಿಸುವ ಅಗತ್ಯವಿರಲಿಲ್ಲ. ಈಗ ಒಬ್ಬ ಶಾಸಕ ಹುಡುಕಿದ ಎಂಬ ರೀತಿ ಬಿಂಬಿಸಿ ಮೀನುಗಾರರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ” ಎಂದು ಮಾಜಿ ಸಚಿವ ಹರಿಹಾಯ್ದಿದ್ದಾರೆ.
“ಈ ಸಂಬಂಧ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಕೂಡಲೇ ಆದೇಶ ನೀಡಬೇಕು, ನೌಕಾಪಡೆಯೇ ಮೀನುಗಾರರನ್ನು ಕೊಂದಿದ್ದು ನಿಜವೆಂದಾದರೆ ಇದಕ್ಕೆ ಕಾರಣರಾದ ನೌಕಾಪಡೆಯ ಸಿಬ್ಬಂದಿಗಳಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ಪ್ರತಿಯೊಂದು ಮೀನುಗಾರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೂಡಲೇ ಒದಗಿಸಬೇಕು” ಎಂದು ಮಧ್ವರಾಜ್ ಆಗ್ರಹಿಸಿದ್ದಾರೆ.