ನವದೆಹಲಿ: ಕಳೆದ 20 ವರ್ಷಗಳ ನಂತರ ಒಡಿಶಾದಲ್ಲಿ ಅಪ್ಪಳಿಸಿರುವ ಭೀಕರ ಫನಿ ಚಂಡಮಾರುತದ ಪರಿಣಾಮ ಮೊದಲ ದಿನವೇ ಐವರು ಮೃತಪಟ್ಟಿದ್ದಾರೆ. ಒಡಿಸಾ ರಾಜ್ಯದ ಕರಾವಳಿ ತೀರದಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸುತ್ತಿದ್ದು, ಸರ್ಕಾರ ತುರ್ತು ರಕ್ಷಣಾ ಕಾರ್ಯವನ್ನು ಆರಂಭಿಸಿದೆ.
ಗಂಟೆಗೆ 200 ರಿಂದ 250 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಭೂಕುಸಿತ ಸೇರಿದಂತೆ ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ, ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದೆ. ಮಳೆಯ ರೌದ್ರ ನರ್ತನಕ್ಕೆ ಹಲವು ಹಳ್ಳಿಗಳು ಮುಳುಗಡೆಯಾಗಿದೆ.
ಇತ್ತೀಚೆಗೆ ಬಂದ ವರದಿಯಂತೆ 11.30ರ ವೇಳೆಗೆ ಫನಿ ಚಂಡಮಾರುತದ ಅಬ್ಬರ ಇಳಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಳಗ್ಗೆ 8 ಗಂಟೆಯಿಂದಲೇ ಒಡಿಶಾದ ಪುರಿ, ಭುವನೇಶ್ವರ್ ಮತ್ತು ಜಗತ್ಸಿಗಪುರ್ ಜಿಲ್ಲೆಗಳಲ್ಲಿ ಆರಂಭವಾದ ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಒಡಿಶಾದ ಭುವನೇಶ್ವರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಸಂಜೆ 6 ಗಂಟೆವರೆಗೆ ವಿಮಾನ ಹಾರಾಟ ನಿಷೇಧಿಸಲಾಗಿದ್ದು, ಇಲ್ಲಿಗೆ ಬರಬೇಕಿದ್ದ ಎಲ್ಲಾ ವಿಮಾನಗಳನ್ನು ಬೇರೆ ಮಾರ್ಗದಲ್ಲಿ ಸಂಚರಿಸಲು ಮುನ್ಸೂಚನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಫನಿ ಚಂಡಮಾರುತದ ಪರಿಣಾಮ 83 ಪ್ರಯಾಣಿಕರ ರೈಲು ಸೇರಿದಂತೆ ಒಟ್ಟು 140 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಒಡಿಶಾ ಸರ್ಕಾರ ಕಳೆದ 24 ಗಂಟೆಯಲ್ಲಿ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದು, ಒಡಿಶಾದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭುವನೇಶ್ವರ್ ನ ಎಐಐಎಂಎಸ್ ಕಟ್ಟಡಕ್ಕೆ ಹಾನಿ ಸಂಭವಿಸಿದ್ದು, ರೋಗಿಗಳು, ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಸ್ಥಳಾಂತರಗೊಂಡವರ ಆಶ್ರಯಕ್ಕಾಗಿ 900 ನಿರಾಶ್ರಿತರ ತಾಣಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಫನಿ ಪರಿಣಾಮ ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲೂ ಬಿರುಗಾಳಿ ಎದ್ದಿದೆ. ಸುಮಾರು ಇಂದು ರಾತ್ರಿ 11 ಗಂಟೆವರೆಗೂ ಚಂಡಮಾರುತದ ಅಬ್ಬರ ಒಡಿಶಾದಲ್ಲಿ ಮುಂದುವರೆಯಲಿದ್ದು, ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ವಿಸ್ತರಣೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೇನೆ, ನೌಕಾಸೇನೆ, ವಾಯುಸೇನೆ, ಕರಾವಳಿ ರಕ್ಷಣಾ ಪಡೆ ಮತ್ತು ವಿಪತ್ತು ನಿರ್ವಹಣಾ ಪಡೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿದೆ. ಹಡಗು, ಹೆಲಿಕಾಪ್ಟರ್ ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸಲಾಗುತ್ತಿದೆ. ರಕ್ಷಣಾ ಪಡೆಗಳು ಮನೆ-ಮನೆಗೆ ತೆರಳಿ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ 1999ರಲ್ಲಿ ಫನಿ ಚಂಡಮಾರುತ ಅಪ್ಪಳಿಸಿ ಸಂದರ್ಭದಲ್ಲಿ ಕನಿಷ್ಠ 10 ಸಾವಿರ ಮಂದಿ ಮೃತಪಟ್ಟು ದೊಡ್ಡ ದುರಂತವೇ ಸಂಭವಿಸಿತ್ತು. ಇದಾದ 20 ವರ್ಷಗಳ ನಂತರ ಮತ್ತೆ ತನ್ನ ಭೀಕರತೆಯನ್ನು ಪ್ರದರ್ಶಿಸುತ್ತಿದೆ. ಆದರೆ ಈ ಬಾರಿ ಕೆಲವು ದಿನಗಳ ಮೊದಲೇ ಸೂಚನೆ ದೊರೆತು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲು ಸಾಧ್ಯವಾಗಿರುವುದರಿಂದ ನಷ್ಟ ಪ್ರಮಾಣ ತಗ್ಗಲಿದೆ ಎನ್ನಲಾಗಿದೆ.
ಆಂಧ್ರ, ಪಶ್ಚಿಮ ಬಂಗಾಳದಲ್ಲೂ ಸ್ಥಳಾಂತರ
ಒಡಿಶಾ ನಂತರ ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶಕ್ಕೆ ಫನಿ ಬೀಸಲಿರುವ ಹಿನ್ನೆಲೆಯಲ್ಲಿ, ಎರಡೂ ರಾಜ್ಯಗಳಲ್ಲೂ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ. ಇಲ್ಲಿನ ಕಾರವಳಿ ತೀರದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಸಾವಿರ ಕೋಟಿ ನೆರವು; ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಹಿರಿಯ ಅಧಿಕಾರಿಗಳಿಂದ ಫನಿ ಚಂಡಮಾರುತದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ ಪ್ರಧಾನಿ, ಫನಿ ಚಂಡಮಾರುತ ಅಪ್ಪಳಿಸಿರುವ ರಾಜ್ಯಗಳಿಗೆ 1 ಸಾವಿರ ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.“ಫನಿ ಸಂತ್ರಸ್ತ ರಾಜ್ಯಗಳಿಗೆ ಅಗತ್ಯ ಸಹಕಾರವನ್ನು ಕೇಂದ್ರ ಸರ್ಕಾರ ನೀಡಲಿದೆ. ಎಲ್ಲಾ ನಾಗರಿಕರು ಸುರಕ್ಷಿತವಾಗಿರುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದೂ ಮೋದಿ ತಿಳಿಸಿದ್ದಾರೆ.
ರಾಜಸ್ತಾನದಲ್ಲಿ ಮೋದಿ ರಾಜಕೀಯ ಭಾಷಣ
ಇತ್ತ ಒಡಿಶಾ ಫನಿ ಚಂಡಮಾರುತದ ಭೀಕರತೆಗೆ ಸಿಲುಕಿದ್ದರೆ, ಪ್ರಧಾನಿ ಮೋದಿ ರಾಜಸ್ತಾನದ ಸಿಕಾರ್ ನಲ್ಲಿ ರಾಜಕೀಯ ಭಾಷಣಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಜನತೆ ಆಕ್ರೋಶ ಹೊರಹಾಕಿದ್ದಾರೆ.
ಮಮತಾ, ಅಮಿತ್ ಶಾ ಚುನಾವಣಾ ಪ್ರಚಾರ ರದ್ದು
ಫನಿ ಚಂಡಮಾರುತದ ಪರಿಣಾಮ ಜಾರ್ಖಂಡ್ ನಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರದ್ದುಗೊಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪ್ರಚಾರ ಸಭೆಗಳನ್ನು ಮುಂದಿನ 48ಗಂಟೆಗಳ ಕಾಲ ನೆನ್ನೆಯೇ ರದ್ದುಪಡಿಸಿದ್ದಾರೆ.
आज झारखंड में खराब मौसम और हवाई यात्रा में कठिनाई के कारण मेरी झारखंड की तीनों जनसभाएँ रद्द करनी पड़ी हैं।
मैं इस खराब मौसम में सभी की कुशलता की कामना करता हूँ।
— Chowkidar Amit Shah (@AmitShah) May 3, 2019
ಇಂದು ಹಾಗೂ ನಾಳೆ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ತಾವು ಕರಾವಳಿ ಪ್ರದೇಶದ ಸಮೀಪವಿರುವ ಖರಗ್ ಪುರದಲ್ಲಿರುವುದಾಗಿಯೂ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
Have cancelled my rallies for the next 48 hours because of what could be an impending disaster #CyclonicStormFANI We are monitoring the situation 24×7 and doing all it takes. I appeal to all people to cooperate. Be alert, take care and stay safe for the next two days
— Mamata Banerjee (@MamataOfficial) May 3, 2019