ಮುಂಬೈ: “ಬುರ್ಖಾ ನಿಷೇಧವಾಗಬೇಕು, ಜೊತೆಜೊತೆಗೇ ಗೂಂಗಟ್ ಸಹ ನಿಷೇಧಗೊಳ್ಳಬೇಕು” ಎಂದು ಖ್ಯಾತ ಗೀತ ರಚನಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.
ಗೂಂಗಟ್ ಎನ್ನುವುದು ಉತ್ತರ ಭಾರದಲ್ಲಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮುಸ್ಲಿಮೇತರ (ರಜಪೂತ್, ಜೈನ, ಸಿಖ್, ಇತ್ಯಾದಿ) ಸಮುದಾಯಗಳ ಮಹಿಳೆಯರು ತಮ್ಮ ಮುಖ ಮುಚ್ಚಿಕೊಳ್ಳಲು ಬಳಸುವ ಮುಸುಕಿನ ರೂಪದ ವಸ್ತ್ರವಾಗಿದೆ.
ಮೇ 1 ರಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ “ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆ ಹಿನ್ನೆಲಯಲ್ಲಿ ಶ್ರೀಲಂಕಾದ ರೀತಿ ಭಾರತದಲ್ಲಿ ಸಹ ಬುರ್ಕಾಕ್ಕೆ ನಿಷೇಧ ಹೇರಬೇಕು” ಎಂದು ಬರೆದಿದ್ದ ಹಿನ್ನೆಲೆಯಲ್ಲಿ ಜಾವೇದ್ ಅಖ್ತರ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
“ಭಾರತದಲ್ಲಿ ಕಾನೂನಿನ ಮೂಲಕ ಬುರ್ಕಾಗೆ ನಿಷೇಧ ಹೇರುವುದಾದರೆ ಮತ್ತು ಇದು ಒಬ್ಬರ ದೃಷ್ಟಿಕೋನವಾದರೆ ನನ್ನ ವಿರೋಧವಿಲ್ಲ. ಆದರೆ, ರಾಜಸ್ತಾನದಲ್ಲಿ ನಡೆಯಲಿರುವ ಕೊನೆಯ ಹಂತದ ಚುನಾವಣೆಗೂ ಮುನ್ನವೇ ಈ ರಾಜ್ಯದಲ್ಲಿ ಸರ್ಕಾರ ಗೂಂಗಟ್ (ಹಿಂದೂ ಮಹಿಳೆಯರು ಮುಖದ ಮೇಲೆ ಹೊದ್ದುಕೊಳ್ಳುವ ಮುಸುಕು) ಮೇಲೂ ನಿಷೇಧ ಘೋಷಿಸಬೇಕು,’’ ಎಂದು ಆಗ್ರಹಿಸಿರುವ ಜಾವೇದ್ ಅಖ್ತರ್. “ಗೂಂಗಟ್ ಮತ್ತು ಬುರ್ಕಾ ಎರಡೂ ನಿಷೇಧವಾಗಬೇಕು. ನಾನೂ ಅದರಿಂದ ಸಂತೋಷಪಡುತ್ತೇನೆ” ಎಂದಿದ್ದಾರೆ.
“ನನ್ನ ಕುಟುಂಬದಲ್ಲಿ ಕೆಲಸ ಮಾಡುವ ಮಹಿಳೆಯರಿದ್ದರು ಮತ್ತು ಅವರಲ್ಲಿ ಯಾರೂ ಬುರ್ಕಾ ಧರಿಸುವುದನ್ನು ನಾನು ನೋಡಿರಲಿಲ್ಲ. ಹೀಗಾಗಿ ನನಗೆ ಬುರ್ಖಾ ಬಗ್ಗೆ ಅಷ್ಟಾಗಿ ತಿಳಿದಿಲ್ಲ” ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
“ಇರಾಕ್ ಬಹಳ ಸಂಪ್ರದಾಯಸ್ಥ ಮುಸ್ಲಿಂ ದೇಶವಾದರೂ ಅಲ್ಲಿನ ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಳ್ಳುವುದಿಲ್ಲ. ಇದರಂತೆ ಶ್ರೀಲಂಕಾದಲ್ಲಿ ಸಹ ಮುಖದ ಮೇಲೆ ಮುಸುಕು ಹಾಕುವುದನ್ನು ನಿಷೇಧಿಸಿದೆ” ಎಂದು ಅಖ್ತರ್ ಹೇಳಿದ್ದಾರೆ.
ಸಾಮ್ನಾ ಸಂಪಾದಕೀಯದ ಮೂಲಕ ಶಿವಸೇನೆ ಪ್ರಧಾನಿ ಮೋದಿ ಅವರಿಗೆ ಶ್ರೀಲಂಕಾದಂತೆ ಭಾರತದಲ್ಲೂ ಬುರ್ಕಾಗೆ ನಿಷೇಧ ಹೇರುವಂತೆ ಸಲಹೆ ನೀಡಿತ್ತು.
ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆಯು ಪ್ರಧಾನಿ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಅನಸರಿಸಿ ಬುರ್ಖಾ ಮತ್ತಿತರ ಮುಸುಕುಗಳನ್ನು ಅವು ದೇಶದ ಭದ್ರತೆಗೆ “ಆತಂಕ” ಒಡ್ಡುವ ಹಿನ್ನೆಲೆಯಲ್ಲಿ ನಿಷೇಧಿಸಬೇಕು, ಎಂದು ಬರೆದುಕೊಂಡಿದ್ದು ವಿವಾದವಾಗಿತ್ತು.
ಈಸ್ಟರ್ ದಿನದಂದು ಕೊಲೋಂಬೋದಲ್ಲಿ ಉಗ್ರರ ಬಾಂಬ್ ದಾಳಿಗೆ 250ಮಂದಿಯನ್ನು ಬಲಿಯಾದ ಹಿನ್ನೆಲೆಯಲ್ಲಿ ಹಾಗೂ ದಾಳಿಯಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ಭಾಗಿಯಾಗಿದ್ದರು ಎಂಬ ಊಹೆಯ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇತ್ತೀಚೆಗೆ ಮುಖದ ಮೇಲೆ ಹಾಕುವ ಎಲ್ಲಾ ಬಗೆಯ ಮುಸುಕುಗಳಿಗೆ ನಿಷೇಧ ಹೇರಿತ್ತು.
ಸಾಮ್ನಾ ಪತ್ರಿಕೆಯ ಸಂಪಾದಕೀಯವು ಹಲವು ಕಡೆಗಳಿಂದ ತೀವ್ರ ಟೀಕೆಗೆ ಗುರಿಯಾದ ಕಾರಣ ಶಿವಸೇನೆಯ ಹಿರಿಯ ಮುಖಂಡರೊಬ್ಬರು ಸಂಪಾದಕೀಯವು ಪಕ್ಷದ ಅಧಿಕೃತ ನಿಲುವು ಅಲ್ಲ ಎಂದು ಹೇಳಿದ್ದರು.