ನ್ಯೂಯಾರ್ಕಿನ ಕೋಪಾಬ್ಲಾಂಕಾ ಕ್ಲಬ್ಬಿನಲ್ಲಿ ಬೌನ್ಸರ್ ಆಗಿ ಕೆಲಸ ಮಾಡುವ ಇಟಲಿ ಮೂಲದ ಟೋನಿ ಲಿಪ್ ವಲಾಲೊಂಗಾನ ಕೈಯಿ ಬಾಯಿ ಎರಡೂ ಮುಂದು. ಕ್ಲಬ್ಬಿನಲ್ಲಿ ಎದುರಾಗುವ ಗಲಾಟೆಯ ಸನ್ನಿವೇಶಗಳನ್ನು ಲೀಲಾಜಾಲವಾಗಿ ತನ್ನದೇ ರೀತಿಯಲ್ಲಿ ಪರಿಹರಿಸುವ ಇವನ ಬಗ್ಗೆ ಎಲ್ಲರಿಗೂ ಮೆಚ್ಚುಗೆ. ನವೀಕರಣಕ್ಕಾಗಿ ಕ್ಲಬ್ಬು ಕೆಲ ತಿಂಗಳುಗಳ ಕಾಲ ಮುಚ್ಚಿದ ಕಾರಣ, ಮಧ್ಯಂತರದ ಜೀವನ ನಿರ್ವಹಣೆಗಾಗಿ ಇನ್ನೊಂದು ಕೆಲಸ ಹುಡುಕುವ ಅನಿವಾರ್ಯತೆಗೆ ಸಿಲುಕುತ್ತಾನೆ. ಈ ನಡುವೆ ಮನೆಯ ಅಡುಗೆ ಕೋಣೆಯಲ್ಲಿ ಇಬ್ಬರು ಕರಿಯರು ಯಾವುದೋ ರಿಪೇರಿ ಕೆಲಸ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಕೆಲಸ ಮುಗಿಸಿದ ಅವರಿಗೆ ಈತನ ಪತ್ನಿ ಡೊಲೋರೆಸ್ ಕೃತಜ್ಞತೆಯಿಂದ ಕೊಟ್ಟ ಜ್ಯೂಸನ್ನು ಕುಡಿದು ಲೋಟಗಳನ್ನು ಸಿಂಕಿನಲ್ಲೇ ಇಡುತ್ತಾರೆ. ಅವರು ಹೊರಟ ನಂತರ ಪತ್ನಿಯು ಊಟದ ಕೆಲಸದಲ್ಲಿ ಮಗ್ನಳಾಗಿದ್ದಾಗ, ಆಕೆಗೆ ತಿಳಿಯದಂತೆ ಆ ಎರಡೂ ಗಾಜಿನ ಲೋಟಗಳನ್ನು ಕಸದ ಬುಟ್ಟಿಗೆ ಹಾಕುತ್ತಾನೆ. ಊಟದ ನಂತರ ಉಳಿದ ತಿಂಡಿಯನ್ನು ಕಸದ ಬುಟ್ಟಿಗೆ ಹಾಕಲು ಬಂದ ಅವಳಿಗೆ ಲೋಟಗಳು ಬುಟ್ಟಿಯಲ್ಲಿದ್ದದ್ದು ನೋಡಿ ಇದು ಟೋನಿಯದ್ದೇ ಕೆಲಸವೆಂದು ಅವನ್ನು ಪುನಃ ಎತ್ತಿಕೊಳ್ಳುತ್ತಾಳೆ. ಈ ಒಂದು ಸಣ್ಣ ದೃಶ್ಯದ ಮೂಲಕ ಟೋನಿಗೆ ಕರಿಯರ ಬಗೆಗಿರುವ ಧೋರಣೆಯನ್ನು ನಿರ್ದೇಶಕ ಪೀಟರ್ ಫಾರ್ರೆಲ್ಲಿ ಅದ್ಭುತವಾಗಿ ಕಟ್ಟಿಕೊಡುತ್ತಾರೆ.
ಡಾಕ್ಟರೊಬ್ಬರು ಚಾಲಕನಿಗಾಗಿ ಹುಡುಕಾಡುತ್ತಿದ್ದು ಆಸಕ್ತಿ ಇದ್ದರೆ ಸಂದರ್ಶನಕ್ಕೆ ಹಾಜರಾಗುವಂತೆ ಟೋನಿಗೆ ಗೆಳಯನಿಂದ ಕರೆ ಬರುತ್ತದೆ. ವಿಳಾಸದ ಪ್ರಕಾರ ನ್ಯೂಯಾರ್ಕಿನ 887, 7ನೇ ಅವೆನ್ಯೂವಿನ ಕಾರ್ನೀಗಿ ಹಾಲ್ ಎಂಬ ಸಭಾಂಗಣಕ್ಕೆ ಹೋಗುತ್ತಾನೆ. ಆಸ್ಪತ್ರೆಯ ಬದಲಿಗೆ ಇಲ್ಲಿ ಬಂದು ದಿಕ್ಕು ತಪ್ಪಿದ್ದೇನೆಂದುಕೊಂಡು ಅಲ್ಲಿಯ ಕೆಲಸದವರನ್ನು ವಿಚಾರಿಸಿದಾಗ ಡಾಕ್ಟರ್ ಶೆರ್ಲಿ ಅಲ್ಲಿಯೇ ಮೇಲಿನ ಕೋಣೆಯಲ್ಲಿ ವಾಸ ಮಾಡುತ್ತಾರೆಂದು ತಿಳಿಯುತ್ತದೆ. ಸಂದರ್ಶನಕ್ಕಾಗಿ ತನ್ನ ಅರ್ಜಿ ಭರ್ತಿ ಮಾಡಿ ಒಳಹೋದವನಿಗೆ ಆ ಕೋಣೆಯನ್ನು ತುಂಬಿರುವ ಆಫ್ರಿಕಾದ ಕಲಾಕೃತಿಗಳು, ಆನೆಯ ದಂತಗಳನ್ನು ನೋಡಿ ಇವರು ಔಷಧಿ ನೀಡುವ ಡಾಕ್ಟರ್ ಅಲ್ಲ ಎಂಬುದು ಖಾತ್ರಿಯಾಗುತ್ತದೆ. ಉದ್ದನೆಯ ನಿಲುವಂಗಿ ತೊಟ್ಟು, ಹಲವಾರು ಚಿನ್ನದ ಸರಗಳನ್ನು ಹಾಕಿಕೊಂಡು ಆಫ್ರಿಕಾದ ರಾಜನಂತೆ ತೋರುವ ವ್ಯಕ್ತಿ ತನ್ನನ್ನು ಡಾ||ಡಾನ್ ಶೆರ್ಲಿ ಎಂದು ಪರಿಚಯಿಸಿಕೊಂಡು ಸಿಂಹಾಸನದಂತಹ ಕುರ್ಚಿಯಲ್ಲಿ ಟೋನಿಗಿಂತ ಎತ್ತರದಲ್ಲಿ ಕೂರುತ್ತಾನೆ.
“ನಾನು ನೀನಂದುಕೊಂಡಿರುವ ಡಾಕ್ಟರಲ್ಲ. ಪಿಯಾನೋ ವಾದಕ. ನನ್ನ ತಂಡದೊಂದಿಗೆ ದಕ್ಷಿಣ ಭಾಗದಲ್ಲಿ ಹಲವು ಕಡೆ ಸಂಗೀತ ಕಾರ್ಯಕ್ರಮ ನೀಡಬೇಕಾದ ಕಾರಣಕ್ಕೆ ಚಾಲಕನೊಬ್ಬನ ಅವಶ್ಯಕತೆ ಇದೆ. ನಿನಗೆ ಇದರ ಬಗ್ಗೆ ಅನುಭವವೇನಾದರೂ ಇದೆಯಾ? ಕಪ್ಪು ಬಣ್ಣದವರ ಜೊತೆ ಕೆಲಸ ಮಾಡಲು ಅಭ್ಯಂತರವಿಲ್ಲವೇ?” ಎಂದು ನೇರವಾಗಿ ಪ್ರಶ್ನಿಸುತ್ತಾರೆ ಶೆರ್ಲಿ. ಕೆಲ ದಿನಗಳ ಹಿಂದೆ ಮನೆಗೆ ತನ್ನ ಪತ್ನಿ ಕಪ್ಪುವರ್ಣೀಯರನ್ನು ಡ್ರಿಂಕ್ಸ್ ಗಾಗಿ ಆಹ್ವಾನಿಸಿದ್ದಳು ಎಂದು ಬೂಸಿ ಬಿಡುತ್ತಾ, ಕಸದ ಲಾರಿಯಿಂದ ಹಿಡಿದು ಕಾರಿನವರೆಗೂ ಯಾವುದೇ ಗಾಡಿಯನ್ನು ಓಡಿಸಬಲ್ಲೆನೆಂದು ತನ್ನ ಚಾಲನಾ ಅನುಭವದ ಬಗ್ಗೆ ಟೋನಿ ಹೇಳುತ್ತಾನೆ.
ತನಗೆ ಕೇವಲ ಕಾರುಚಾಲಕ ಮಾತ್ರವಲ್ಲ ಒಬ್ಬ ಆಪ್ತ ಸಹಾಯಕನಾಗಿಯೂ ಕೇಲಸ ಮಾಡಬೇಕು. ಬಟ್ಟೆ ಇಸ್ತ್ರಿ ಮಾಡುವುದು, ಶೂಗಳನ್ನು ಪಾಲಿಶ್ ಮಾಡುವುದೂ ಮಾಡಬೇಕಾಗುತ್ತದೆ. ವಾರಕ್ಕೆ ನೂರು ಡಾಲರ್ ಮತ್ತು ಉಳಿಯುವ ವ್ಯವಸ್ಥೆ ಮಾಡಲಾಗುವುದು ಎಂದಾಗ ತಣ್ಣಗೆ ಅಲ್ಲಿಂದ ಏಳುವ ಟೋನಿ, ಚಾಲಕನಾಗಿ ಬರಬಲ್ಲೆ ಆದರೆ ಚಾಕರಿಗಾಗಿ ಯಾರನ್ನಾದರೂ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾನೆ.
ಮನೆಯಲ್ಲಿ ಈ ಘಟನೆಯ ಬಗ್ಗೆ ಹೆಂಡತಿಗೆ ಹೇಳಿದಾಗ ಕರಿಯರ ಜೊತೆ ಒಂದು ವಾರವೂ ನೀನು ಇರಲಾರೆ ಎಂದು ಮೂಗು ಮುರಿಯುತ್ತಾಳೆ. ಬೆಳಿಗ್ಗೆ ಇವರಿಗೆ ಫೋನ್ ಕರೆ ಮಾಡುವ ಶೆರ್ಲಿ, ಟೋನಿಯ ಹೆಂಡತಿಗೆ ಮಾತನಾಡಲು ಕೊಡುವಂತೆ ಕೋರಿ “ಎರಡು ತಿಂಗಳ ಕಾಲ ತಮ್ಮ ಗಂಡನನ್ನು ನನ್ನೊಟ್ಟಿಗೆ ಚಾಲಕನಾಗಿ ಕಳಿಸಬೇಕೆಂದ”’ ವಿನಮ್ರವಾಗಿ ಕೇಳುತ್ತಾ “ಆತ ಕೇಳಿದಷ್ಟು ಹಣವನ್ನು ಕೊಡುತ್ತೇನೆ” ಎನ್ನುತ್ತಾರೆ. ಆಕೆ ಒಪ್ಪಿ ಹೊರಡುವಾಗ ಶೆರ್ಲಿಗಾಗಿ ಸ್ಯಾಂಡವಿಚ್ಚುಗಳನ್ನು ಕೊಡುತ್ತಾ, ತನಗಾಗಿ ಬಿಡುವು ಮಾಡಿಕೊಂಡು ಪತ್ರಗಳನ್ನು ಬರೆದು ವಿಷಯ ತಿಳಿಸುವಂತೆ ಗಂಡನನ್ನು ಕೋರುತ್ತಾಳೆ. ಒಲ್ಲದ ಮನಸ್ಸಿನಿಂದಲೇ ಆತನೂ ಒಪ್ಪುತ್ತಾನೆ.
ಕೆಲಸಕ್ಕೆ ವರದಿ ಮಾಡಿಕೊಂಡ ಟೋನಿಗೆ ಶೇ50ರ ಮುಂಗಡದ ಜೊತೆಗೆ 1960ರ ದಶಕದಲ್ಲಿನ ಅಮೆರಿಕದ ಕೆಲವು ಜಾಗಗಳಲ್ಲಿ ನೀಗ್ರೋಗಳು ತಂಗಬಹುದಾದ ಕೈಪಿಡಿಯನ್ನು ನೀಡಲಾಗುತ್ತದೆ. ನೀಗ್ರೋ ಮೋಟಾರಿಸ್ಟುಗಳಿಗಾಗಿ ಇರುವ ರೆಸ್ಟೋರೆಂಟುಗಳು, ಹೋಟೆಲುಗಳು, ಸೆಲೂನು, ಗ್ಯಾರೇಜು, ಬ್ಯೂಟಿ ಪಾರ್ಲರು, ವಿಶ್ರಾಂತಿ ತಾಣಗಳ ವಿಳಾಸ ಮತ್ತು ನಕ್ಷೆಯಿರುವ ಈ ಕೈಪಿಡಿಯೇ ’ಗ್ರೀನ್ ಬುಕ್’.
ಸಿನಿಮಾ ಹೆಸರು: ಗ್ರೀನ್ ಬುಕ್ ನಿರ್ದೇಶನ: ಪೀಟರ್ ಫ್ಯಾರೆಲ್ಲಿ ಅವಧಿ: 130 ನಿಮಿಷ ಭಾಷೆ: ಇಂಗ್ಲಿಷ್ ದೇಶ: ಅಮೆರಿಕ
ಮೊದಲಿನಿಂದಲೂ ಶೆರ್ಲಿಯ ಬಗೆಗೆ ಟೋನಿಗೆ ಪೂರ್ವಾಗ್ರಹ ಪೀಡಿತ ಅಪನಂಬುಗೆಯೇ ಇರುತ್ತದೆ. ತನ್ನ ಹೆಂಡತಿ ಶೆರ್ಲಿಗಾಗಿ ಕೊಟ್ಟ ಸ್ಯಾಂಡ್ ವಿಚ್ ಗಳನ್ನು ತಾನೇ ತಿನ್ನುತ್ತಾನೆ. ದಾರಿ ಮಧ್ಯೆ ಮೂತ್ರಕ್ಕೆಂದು ಇಳಿದವನು ಕಾರಿನಲ್ಲಿ ಬಿಟ್ಟಿದ್ದ ತನ್ನ ಪರ್ಸನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಾನೆ. ಕರಿಯರ ಬಗ್ಗೆ ತನಗಿರುವ ಕೀಳರಿಮೆ ಎದ್ದು ಕಾಣುವಂತೆ ಒರಟಾಗಿ ನಡೆದುಕೊಳ್ಳುತ್ತಾನೆ. ಆದರೂ ಶೆರ್ಲಿ ವಿನಮ್ರತೆಯಿಂದಲೇ ಇವನ ಕೆಲವು ಒರಟು ನಡೆ – ನುಡಿಗಳನ್ನು ಬದಲಾಯಿಸಿಕೊಳ್ಳುವಂತೆ ತಿಳಿಸುತ್ತಾರೆ.
ಪೆನಿಸಿಲ್ವೇನಿಯಾದಲ್ಲಿನ ಮೊದಲ ಕಾರ್ಯಕ್ರಮ. ತನ್ನ ಮೂರನೇ ವಯಸ್ಸಿಗೇ ಮೊದಲ ಪ್ರದರ್ಶನ ನೀಡಿ, 18ನೇ ವಯಸ್ಸಿಗೆ ಬಾಸ್ಟನ್ ಪಾಪ್ಸ್ ನಲ್ಲಿ ಆರ್ಥರ್ ಫಿಡ್ಲರ್ ರ ಕೋರಿಕೆಯ ಮೇರೆಗೆ ಸಂಗೀತ ಪ್ರದರ್ಶನ ನೀಡಿ, ಸಂಗೀತ-ಮನಃಶಾಸ್ತ್ರ – ಲಿಟರ್ಜಿಕಲ್ ಆರ್ಟ್ಸ್ ನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ, ಎರಡು ಬಾರಿ ವೈಟ್ ಹೌಸಿನಲ್ಲಿ ಸಂಗೀತ ಕಛೇರಿ ಡಾ||ಶೆರ್ಲಿಯನ್ನು ಸಭೆಗೆ ಪರಿಚಯಿಸಲಾಗುತ್ತದೆ. ತನ್ನ ಮಾಂತ್ರಿಕ ಕೈಗಳಿಂದ ಸುಶ್ರಾವ್ಯವಾಗಿ ಶೆರ್ಲಿ ನುಡಿಸುವ ಪಿಯಾನೋವನ್ನು ಕೇಳಿದ ಟೋನಿ ಲಿಪ್, ಆತನ ದೈತ್ಯ ಪ್ರತಿಭೆಗೆ ಮಾರುಹೋಗುತ್ತಾನೆ. ಕರಿಯನೊಬ್ಬ ಅದ್ಭುತವಾಗಿ ಪಿಯಾನೋ ನುಡಿಸುವ ಬಗ್ಗೆ ತನ್ನ ಪತ್ನಿಗೆ ಬರೆದ ಕಾಗದದಲ್ಲಿ ತಿಳಿಸುತ್ತಾನೆ. ಅವರ ಸಂಗೀತದ ಪಯಣ ಮುಂದೆ ಸಾಗಿದಂತೆಲ್ಲ ಟೋನಿಗೆ ಶೆರ್ಲಿಯ ಬಗ್ಗೆ, ಆತನ ಪಾಂಡಿತ್ಯದ ಬಗ್ಗೆ ಹೆಮ್ಮೆಯೆನಿಸುತ್ತದೆ.
ಕಾರು ಓಡಿಸುತ್ತಾ ರೇಡಿಯೋದಲ್ಲಿ ಬರುವ ಆಗಿನ ಜನಪ್ರಿಯ ಸಂಗೀತಗಾರರಾದ ಲಿಟಲ್ ರಿಚರ್ಡ್, ಚಬ್ಬಿ ಚೆಕರ್, ಎರೀತಾ ಪ್ರಾಂಕ್ಲಿನ್ ಹಾಡುಗಳನ್ನು ಕೇಳುವಾಗ ಇವರ ಯಾವ ಹಾಡುಗಳನ್ನೂ ಶೆರ್ಲಿ ಕೇಳಿಲ್ಲದಿರುವುದು ಆಶ್ಚರ್ಯ ಉಂಟು ಮಾಡುತ್ತದೆ. ದಾರಿ ಮಧ್ಯೆ ಪೆಟ್ರೋಲ್ ತುಂಬಿಸುವಾಗ, ಯಜಮಾನನಿಲ್ಲದ ಅದೃಷ್ಟದ ಕಲ್ಲುಗಳ ಅಂಗಡಿಯಿಂದ ಒಂದು ಹರಳಿನ ಕಲ್ಲನ್ನು ಕದ್ದು ತರುವ ಟೋನಿಯನ್ನು ಶೆರ್ಲಿ ಮಾತಿನ ಮೂಲಕವೇ ದಂಡಿಸುತ್ತಾನೆ. “ನಾನು ಕೆಳಗೆ ಬಿದ್ದ ಕಲ್ಲನ್ನು ಎತ್ತಿಕೊಂಡೆ” ಎಂದು ಸಮರ್ಥಿಸಿಕೊಳ್ಳುವ ಟೋನಿಗೆ , “ಕಳ್ಳತನ ತಪ್ಪು. ಕದ್ದ ಕಲ್ಲನ್ನು ವಾಪಸ್ಸು ಮಾಡಿ ಬರುವವರೆಗೂ ಕಾರನ್ನು ಮುಂದಕ್ಕೆ ಬಿಡಬೇಡ” ಎಂದು ಆಗ್ರಹಿಸುತ್ತಾನೆ. ಈ ಒತ್ತಡಕ್ಕೆ ಟೋನಿ ಮಣಿಯಲೇಬೇಕಾಗುತ್ತದೆ.
ಶೆರ್ಲಿ ಬಾರಿಸುವುದು ಕೇವಲ ಸ್ಟೈನ್ ವೇ ಕಂಪನಿಯ ಪಿಯಾನೋ ಮಾತ್ರ. ಕಾರ್ಯಕ್ರಮದ ಮೊದಲೇ ಇದರ ಬಗ್ಗೆ ಒಡಂಬಡಿಕೆ ಆಗಿದ್ದು ಎಲ್ಲವೂ ಸರಿಯಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾದ್ದು ಟೋನಿಯ ಕೆಲಸ. ಇಂಡಿಯಾನಾದ ಹೆನೋವರ್ ನಲ್ಲಿ ಯಾವುದೋ ಕಳಪೆ ಪಿಯಾನೋ ಇಟ್ಟಿದ್ದರ ಬಗ್ಗೆ ಟೋನಿ ಆಯೋಜಕನನ್ನು ಆಕ್ಷೇಪಿಸಿದಾಗ ಅವರು ನೀಡುವ ಹಾರಿಕೆ ಉತ್ತರ ಮತ್ತು ಕೆಲವೇ ಘಂಟೆಗಳಲ್ಲಿ ಸ್ಟೈನ್ ವೇ ಪಿಯಾನೋ ಬರುವಂತೆ ಮಾಡುವ ಆತನ ಚತುರತೆಯನ್ನು ತೆರೆಯ ಮೇಲೆಯೇ ನೋಡಿ ಸವಿಯಬೇಕು.
ಪ್ರಯಾಣದ ನಡುವೆ ಕೆಂಟಕಿಯಲ್ಲಿ ಶೆರ್ಲಿಗೆ ಫ್ರೈಡ್ ಚಿಕನ್ ತಿನ್ನಿಸುವ ದೃಶ್ಯವೇ ಚೆಂದ. ಅಲ್ಲಿನ ಲೂಯಿಸ್ ವಿಲ್ಲೆಯ ಕರಿಯರ ಮೋಟೆಲೊಂದರಲ್ಲಿ ತಂಗಲು ಹೋದಾಗ, ತ್ರೀ ಪೀಸ್ ಸೂಟು ತೊಟ್ಟ ಶೆರ್ಲಿ ತನ್ನ ಜನಾಂಗದವರಿಂದಲೇ ಅವಮಾನಿತನಾಗುತ್ತಾನೆ. ಬೇಸರ ಕಳೆಯಲು ಅಲ್ಲಿನ ಬಾರಿಗೆ ಹೋದಾಗ ಬಿಳಿಯರು ಶೆರ್ಲಿಗೆ ಹಿಗ್ಗಾ ಮುಗ್ಗಾ ಥಳಿಸಿರುತ್ತಾರೆ. ವಿಷಯ ತಿಳಿದ ಟೋನಿ ಬಂದೂಕಿನ ನಳಿಕೆಯಿಂದ ಜೋಪಾನವಾಗಿ ಶೆರ್ಲಿಯನ್ನು ಕಾಪಾಡುತ್ತಾನೆ.
ಹೀಗೆ ತನ್ನ ಹಾದಿ ಸಾಗಿದಂತೆಲ್ಲ ಶೆರ್ಲಿಗೆ ಅವಮಾನಗಳೇ ಕೊಡುಗೆಗಳಾಗಿ ಸಿಗುತ್ತಿರುತ್ತವೆ. ವೇದಿಕೆಯ ಮೇಲೆ ಆತನ ಕಲೆಯನ್ನು ಹೊಗಳಿ ಅಟ್ಟಕ್ಕೇರಿಸಿದವರಿಗೆ ಆತ ಕೆಳಗಿಳಿದ ತಕ್ಷಣವೇ ಕರಿಯನಾಗಿಬಿಡುತ್ತಾನೆ. ಕನಿಷ್ಟ ತಮ್ಮ ಟಾಯ್ಲೆಟ್ಟಿನಲ್ಲಿ ಮೂತ್ರ ಮಾಡಲೂ ಅವಕಾಶ ನೀಡುವುದಿಲ್ಲ. ಹಣವಿದ್ದರೂ ಅಂಗಡಿಯಲ್ಲಿ ತನ್ನಿಷ್ಟದ ಕೋಟು ಕೊಳ್ಳಲಾಗುವುದಿಲ್ಲ.
ಈ ಮಧ್ಯೆ ಟೋನಿ ತನ್ನ ಹೆಂಡತಿಗೆ ಬರೆಯುತ್ತಿದ್ದ ಪತ್ರವನ್ನು ನೋಡುವ ಶೆರ್ಲಿಗೆ ಆತನ ಸ್ಪೆಲ್ಲಿಂಗ್ ಮಿಸ್ಟೇಕು; ಹೇಳಬೇಕಾದದ್ದನ್ನು ಬಿಟ್ಟು ತಿಂದಿದ್ದನ್ನು, ಕುಡಿದಿದ್ದನ್ನು , ಕಾಲುಚೀಲಗಳನ್ನು ಟಿವಿಯ ಮೇಲೆ ಒಣಗಿಸಿದ್ದನ್ನು ಬರೆದದ್ದನ್ನು ನೋಡಿ ನಗು ಬರುತ್ತದೆ. ಪ್ರೇಮ ಪತ್ರವನ್ನು ಹೇಗೆ ಬರೆಯಬೇಕೆಂದು ಸ್ಪೆಲ್ಲಿಂಗ್ ಸಹಿತ ಹೇಳಿ ಬರೆಸುತ್ತಾನೆ. ಅದರ ಕೆಲ ಸಾಲುಗಳು ಹೀಗಿವೆ
“ಪ್ರೀತಿಯ ಡೆಲೋರೆಸ್,
ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲ ನನಗೆ ಅಯೋವಾದ ವಿಶಾಲ ಬಯಲುಗಳ ನೆನಪಾಗುತ್ತದೆ. ನಿನ್ನೊಂದಿಗಿಲ್ಲದ ಕ್ಷಣಗಳು ನನ್ನ ಚೈತನ್ಯವನ್ನು ಕುಂದಿಸುತ್ತಿವೆ. ಜೀವನದಲ್ಲಿ ನಾನು ಮಾಡಿದ ಅತೀ ಸುಲಭವಾದ ಕೆಲಸವೆಂದರೆ ನಿನ್ನ ಪ್ರೀತಿಗೆ ಬಿದ್ದದ್ದು..”
ಹೀಗೆ ಸಾಗುವ ಸಾಲುಗಳು ಈ ಪತ್ರವನ್ನು ಓದಿದ ಡೆಲೋರೆಸ್ ಗೆ ತನ್ನ ಪತಿ ಟೋನಿಯ ಮೇಲಿನ ಪ್ರೀತಿ ಇಮ್ಮಡಿಯಾಗುತ್ತದೆ. ಆದರೆ ಶೆರ್ಲಿ ಮಾತ್ರ ವಿಚ್ಛೇದಿತ! ತನ್ನ ಅವಿಶ್ರಾಂತ ಜೀವನದ ಕಾರಣ ಕುಟುಂಬದಿಂದ ದೂರ ಉಳಿದಾತ.
ದಕ್ಷಿಣದಲ್ಲಿದ್ದಾಗ ಸಲಿಂಗಿಯೊಬ್ಬನ ಜೊತೆಗೆ ಸಿಕ್ಕಿಬಿದ್ದ ಶರ್ಲಿಯನ್ನು ಟೋನಿ ಪೋಲೀಸರಿಂದ ಲಂಚ ಕೊಟ್ಟು ಬಚಾವು ಮಾಡುತ್ತಾನೆ. ಲಂಚ ನೀಡಿದ್ದಕ್ಕಾಗಿ ಶೆರ್ಲಿ ಆಕ್ಷೇಪಿಸುತ್ತಾನೆ. ಸೂರ್ಯಾಸ್ತದ ನಂತರ ಕರಿಯರು ಓಡಾಡಬಾರದೆಂಬ ನಿಯಮನ್ನು ಮುಂದಿಟ್ಟುಕೊಂಡು ಪೋಲಿಸಿನವನೊಬ್ಬ ಇವರ ಕಾರನ್ನು ತಡೆದು ಅವಾಚ್ಯವಾಗಿ ನಿಂದಿಸಿದಾಗ ಟೋನಿ ಆತನ ಮೇಲೆ ಕೈ ಮಾಡಿಬಿಡುತ್ತಾನೆ. ಸಿಕ್ಕಿದ್ದೇ ಅವಕಾಶವೆಂದು ಇಬ್ಬರನ್ನೂ ಲಾಕಪ್ಪಿಗೆ ಹಾಕಿದಾಗ ಮುಂದಿನ ಕಾರ್ಯಕ್ರಮಗಳಿಗೆ ತೊಂದರೆ ಆಗಬಹುದು ಎಂದು ಫೋನ್ ಕರೆ ಮಾಡುವ ತನ್ನ ಹಕ್ಕನ್ನು ಪ್ರತಿಪಾದಿಸಿ ಶೆರ್ಲಿ ಕರೆ ಮಾಡುತ್ತಾನೆ. ಕೆಲವೇ ನಿಮಿಷಗಳಲ್ಲಿ ಅಮೆರಿಕದ ಅಧ್ಯಕ್ಷ ಕೆನಡಿಯ ಸಹೋದರ ಅಟಾರ್ನಿ ಜನರಲ್ ರಾಬರ್ಟ್ ಕೆನಡಿ ಪೋಲೀಸರಿಗೆ ಕರೆ ಮಾಡಿ ಅವರನ್ನು ಬಿಡುಗಡೆ ಮಾಡಿ ಸುರಕ್ಷಿತವಾಗಿ ನಗರ ದಾಟಿಸುವಂತೆ ಆಗ್ರಹಿಸುತ್ತಾರೆ. ಅಪರಾತ್ರಿಯಲ್ಲಿ ಅವರಿಗೆ ಅನಾವಶ್ಯಕ ತೊಂದರೆ ನೀಡಿದ್ದಕ್ಕಾಗಿ ಶೆರ್ಲಿಗೆ ಬೇಸರವಾಗುತ್ತದೆ. ಇನ್ನು ಮುಂದೆ ಹೀಗೆ ದುಡುಕದಂತೆ ಟೋನಿಗೆ ಎಚ್ಚರಿಕೆ ನೀಡುತ್ತಾನೆ.
ತಮ್ಮ ಸುತ್ತಾಟದ ಕೊನೆಯ ಕಾರ್ಯಕ್ರಮ ಅಲಬಾಮಾದ ಬರ್ಮಿಂಗ್ ಹ್ಯಾಮಿನಲ್ಲಿ. ಸಂಗೀತ ಕಛೇರಿಗೂ ಮುನ್ನ ಬಟ್ಟೆ ಬದಲಿಸಲು ಹೋಟೆಲಿನ ಅಡುಗೆ ಮನೆಯ ಒಂದು ಮೂಲೆಯಲ್ಲಿ ಜಾಗ ಕೊಡುತ್ತಾರೆ. ಬಿಳಿಯರಿಗಾಗಿ ಇರುವ ಟೇಬಲ್ಲಿನಲ್ಲಿ ಕೂತು ಊಟ ಮಾಡಲು ಬಿಡದಿದ್ದಾಗ ಮತ್ತೆ ಟೋನಿ ಮಧ್ಯಪ್ರವೇಶಿಸಿ ಮ್ಯಾನೇಜರ್ ಮೇಲೆ ಕೈಮಾಡಲು ಮುಂದಾದಾಗ ಶೆರ್ಲಿ ತಡೆಯುತ್ತಾನೆ. ಇಲ್ಲಿಯವರೆಗೂ ಆದ ಅವಮಾನಗಳನ್ನು ಸಹಿಸಿಕೊಂಡು ಸಂಗೀತ ಕಛೇರಿ ನೀಡುತ್ತಿದ್ದವನು ಪ್ರತಿಭಟನಾತ್ಮಕವಾಗಿ ತನ್ನ ಕಾರ್ಯಕ್ರಮ ರದ್ದು ಮಾಡಿ,. ಹತ್ತಿರದ ಕರಿಯರ ರೆಸ್ಟೋರೆಂಟಿನಲ್ಲಿ ಊಟ ಮಾಡುತ್ತಾನೆ. ಅಲ್ಲಿನ ಸ್ಥಳೀಯ ಬ್ಯಾಂಡಿನ ಜೊತೆ ಸೇರಿ ಪಿಯಾನೋ ನುಡಿಸಿ ರಂಜಿಸುತ್ತಾನೆ. ಮೊದಲಿಗೆ ಸೂಟು ಬೂಟಿನ ಶೆರ್ಲಿಯನ್ನು ಕೆಕ್ಕರಿಸಿ ನೋಡಿದವರು ನಂತರ ಮನಸಾರೆ ಅಭಿನಂದಿಸಿ ಬೀಳ್ಕೊಡುತ್ತಾರೆ.
ಅಲ್ಲಿಂದ ಕ್ರಿಸ್ಮಸ್ ಹಬ್ಬಕ್ಕೆಂದು ನ್ಯೂಯಾರ್ಕಿಗೆ ಹಿಂದಿರುಗುವಾಗ ಹಿಮಪಾತ ಶುರುವಾಗುತ್ತದೆ. ರಾತ್ರಿಯೆಲ್ಲ ನಿದ್ದೆಗೆಟ್ಟು ಕಾರು ಓಡಿಸಿ ಹೈರಾಣಾಗುವ ಟೋನಿಯನ್ನು ಹಿಂದೆ ಮಲಗಿಸಿ , ಶೆರ್ಲಿಯೇ ಸ್ವತಃ ಕಾರು ಚಲಾಯಿಸಿ ಆತನ ಪತ್ನಿಗೆ ಕೊಟ್ಟ ಮಾತಿನಂತೆ ಹಬ್ಬಕ್ಕೆ ಅವನನ್ನು ಮನೆ ತಲುಪಿಸುತ್ತಾನೆ. ಊಟಕ್ಕೆ ಬರುವಂತೆ ಕೇಳಿಕೊಂಡರೂ ನಿರಾಕರಿಸಿ ಅಲ್ಲಿಂದ ಹೊರಡುವ ಶೆರ್ಲಿ, ಕೊನೆಗೆ ಶಾಂಪೇನ್ ಬಾಟಲಿಯೊಂದಿಗೆ ಟೋನಿ ಲಿಪ್ ನ ಕುಟುಂಬವನ್ನು ಸೇರುವ ಮೂಲಕ ಚಿತ್ರ ಮುಕ್ತಾಯವಾಗುತ್ತದೆ.
ಕಥೆಯಲ್ಲಿನ ಮುಂಗೋಪಿ, ಒರಟ, ಸದಾ ಒಟಗುಡುವ ಪೂರ್ವಗ್ರಹ ಪೀಡಿತ ಟೋನಿ ವೆಲಲೊಂಗಾನ ಪಾತ್ರದಲ್ಲಿ ಅಭಿನಯಿಸಿರುವ ವಿಗ್ಗೋ ಮಾರ್ಟೆನ್ ಸನ್ ಪರಕಾಯ ಪ್ರವೇಶ ಮಾಡಿದ್ದಾರೆ. ಇತ್ತ ಅಗಾಧ ಪ್ರತಿಭೆಯಿಂದ ಬಿಳಿಯರಿಗಿಂತಲೂ ಅತ್ಯುತ್ತಮವಾಗಿ ಪಿಯಾನೋ ನುಡಿಸುವ ಡಾ|| ಡಾನ್ ಶೆರ್ಲಿಯ ಪಾತ್ರಧಾರಿಯಾಗಿ ಮೆಹೆರ್ಶಾಲಾ ಆಲಿ ನಟಿಸಿದ್ದಾರೆ. ಕೇವಲ ಕರಿಯನೆಂಬ ಕಾರಣಕ್ಕೆ ಅಸಂಖ್ಯಾತ ಆಕ್ರಮಣಗಳು, ಅವಮಾನಗಳುನ್ನೂ ಸಹಿಸಿಕೊಳ್ಳುವ, ತನ್ನ ಪೋಷಾಕು ಹಾಗು ವರ್ತನೆಯಿಂದ ಇತರ ಕರಿಯರಂತಿರದೆ ಅಂತರ ಕಾಯ್ದುಕೊಳ್ಳುವ, ಎಷ್ಟೆಲ್ಲಾ ಪ್ರತಿಭೆ ಮತ್ತು ಹಣವಿದ್ದರೂ ಬಿಳಿಯನಾಗಲಾಗದ ತ್ರಿಶಂಕು ಸ್ಥಿತಿಯನ್ನು ಸಹಜ ಎಂಬುವಂತೆ ಲೀಲಾಜಾಲವಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿಯೂ ಸಹ ಅಚ್ಚುಕಟ್ಟಾದ ನಟನೆಯ ನಿರ್ವಹಣೆಯಿದೆ.
ಇಲ್ಲಿ ಕಥೆ ಮತ್ತು ಸಂಭಾಷಣೆಗಳೇ ನಾಯಕರುಗಳು. ಡಾನ್ ಶೆರ್ಲಿ ಮತ್ತು ಟೋನಿ ಲಿಪ್ , ಇಬ್ಬರೂ ವೈರುಧ್ಯವಿರುವ ವ್ಯಕ್ತಿಗಳು. ಒಬ್ಬ ತಾನು ಕರಿಯನಾಗಿದ್ದರೂ ದಾರಿಯಲ್ಲಿ ಬರಬಹುದಾದ ತೊಂದರೆಗಳನ್ನು ತಡೆಯಲು ಸಹಾಯಕರಾಗಿ ಬಿಳಿಯನನ್ನೇ ಕೆಲಸಕ್ಕೆ ನೇಮಿಸಿಕೊಂಡು, ತಾನು ಅವರಿಗಿಂತಲೂ ಹೆಚ್ಚು ಘನತೆಯಿಂದ ಬದುಕಬಲ್ಲೆ ಎಂದು ಪದೇ ಪದೇ ನೈತಿಕತೆಯ ಮೂಲಕ ನಿರೂಪಿಸುವವ. ಇನ್ನೊಬ್ಬ ಅಸೂಯೆ, ಕೋಪ, ಮೋಸ, ಅವಾಚ್ಯಗಳು ಢಾಳಾಗಿ ತುಂಬಿದ್ದರೂ ಬಣ್ಣದ ಕಾರಣಕ್ಕೆ ಆ ಎಲ್ಲಾ ಗುಣಗಳನ್ನು ಕರಿಯರಲ್ಲಿ ಕಾಣುವ ಜನಾಂಗೀಯ ದ್ವೇಷಿ. ಆದರೆ ಇಬ್ಬರೂ ಜೀವನದ ಹಾದಿಯಲ್ಲಿ ಪರಸ್ಪರರನ್ನು ತಿಳಿದುಕೊಳ್ಳುತ್ತಾ, ಸಹಕರಿಸಿಕೊಳ್ಳುತ್ತಾ , ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಕೊನೆಗೆ ಆತ್ಮೀಯ ಸ್ನೇಹಿತರಾಗುವುದು ಸಮಾಜದಲ್ಲಿನ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯೋಗ. 1962ರಲ್ಲಿ ನಡೆದ ಈ ನೈಜ ಕಥೆಯು ಎಲ್ಲಿಯೂ ದಿಕ್ಕು ತಪ್ಪದಂತೆ, ನೈತಿಕತೆಯ ಪಾಠ ಬೋರು ಹೊಡೆಸದಂತೆ ತಿಳಿಹಾಸ್ಯದ ಮೂಲಕ ನವಿರಾದ ಸಂಭಾಷಣೆಯನ್ನು ಪೋಣಿಸಲಾಗಿದೆ. ಅದರ ಸಂಪೂರ್ಣ ಯಶಸ್ಸು ಚಿತ್ರಕಥೆ ಬರೆದ ನಿಕ್ ವೆಲಲ್ಲಾಂಗಾ, ಬ್ರಿಯಾನ್ ಕ್ಯೂರಿ ಹಾಗೂ ಪೀಟರ್ ಫರೆಲ್ಲಿಗೆ ಸೇರಬೇಕು. ಮಾಂತ್ರಿಕನ ಸಂಗೀತವನ್ನು ಕಿಂಚಿತ್ತೂ ಕುಂದು ಬಾರದಂತೆ ಹಾಗೆಯೇ ತೆರೆಯ ಮೇಲೆ ತರುವಲ್ಲಿ ಕ್ರಿಸ್ ಬ್ರೋವೆಸ್ ಬಹಳ ಶ್ರಮವಹಿಸಿದ್ದಾರೆ.
ಕ್ಲೈಮ್ಯಾಕ್ಸ್:
ಇದು ಕೇವಲ ಅಮೆರಿಕದ ಜನಾಂಗೀಯ ದ್ವೇಷದ ಕಥೆಯಾಗಿ ಮಾತ್ರ ನಿಲ್ಲುವುದಿಲ್ಲ. ನಮಲ್ಲೂ ಇಂದಿಗೂ ಇಂತಹ ಅನಿಷ್ಠದ ಆಚರಣೆಗಳಿವೆ ಎಂಬುದನ್ನು ನೆನಪಿಸುತ್ತದೆ. ಜಾತ್ರೆಯಲ್ಲಿ ದೇವರ ಮುಂದೆ ತಮಟೆ ಬಾರಿಸುವ ದಲಿತರನ್ನು ದೇವಸ್ಥಾನದ ಹೊರಗೇ ನಿಲ್ಲಿಸುವ; ತಮಗಿಂತ ಹೆಚ್ಚೇ ಸಾಧನೆಗೈದಿದ್ದರೂ ಜಾತಿಯ ಕಾರಣಕ್ಕೆ ವರಾಂಡಕ್ಕೇ ಪ್ರವೇಶವನ್ನು ಸೀಮಿತಗೊಳಿಸುವ; ದೇವಸ್ಥಾನದ ಊರಿಗೆ ಪ್ರವೇಶಿಸಿದರೆಂದು ಗಂಜಲ ಹಾಕಿ ಶುದ್ಧೀಕರಿಸುವಂತಹ ಹೀನಕೃತ್ಯಗಳಿಗೆ ಕುರುಡಾಗಿರುವ ನಮ್ಮನ್ನು ಎಚ್ಚರಿಸಿ ಕಿವಿಹಿಂಡುತ್ತದೆ. ತೋರಿಕೆಯ ಆಚೆಗಿರಬೇಕಾದ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸುತ್ತದೆ. 2018ರ ಅತ್ಯುತ್ತಮ ಚಿತ್ರ, ಚಿತ್ರ ಕಥೆ ಮತ್ತು ಪೋಷಕ ನಟ ವಿಭಾಗದಲ್ಲಿ ಈ ಚಿತ್ರ ಆಸ್ಕರ್ ಪ್ರಶಸ್ತಿ ಪಡೆಯಿತು. ಆಸ್ಕರ್ ಪ್ರಶಸ್ತಿ ಬರಬೇಕಾದದ್ದು ಅದರ ಘನತೆಯನ್ನು ಹೆಚ್ಚಿಸಬಲ್ಲ ಇಂತಹ ಚಿತ್ರಗಳಿಗೇ ಅಲ್ಲವೇ?
– ಹೇಮಂತ್ ಎಲ್