ಉಡುಪಿ: “ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳ ಬಳಿಕ ಬೋಟ್ ನ ಅವಶೇಷಗಳು ಮೊನ್ನೆ ಪತ್ತೆಯಾಗಿವೆ. ಮೀನುಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಮೀನುಗಾರರು ಮೃತಪಟ್ಟಿದ್ದಾರೆ ಎಂಬ ದಟ್ಟ ಅನುಮಾನಗಳಿದ್ದು ಈ ಸಂಬಂಧ ಕೇಂದ್ರ ಸರಕಾರವು ಹಲವು ಮಾಹಿತಿಗಳನ್ನು ಮುಚ್ಚಿಟ್ಟಿದೆ. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಮೃತ ಮೀನುಗಾರಿಗೆ ಸೂಕ್ತ ಪರಿಹಾರ ಕಲ್ಪಿಸದೇ ಇದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ” ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ತಿಳಿಸಿರುವ ಪ್ರಮೋದ್ ಮಧ್ವರಾಜ್, “ಬೋಟ್ ನಾಪತ್ತೆಯಾಗಿದ್ದು ಡಿಸೆಂಬರ್ ಹದಿನೈದನೇ ತಾರೀಕಿಗೆ. ಜನವರಿ ಇಪ್ಪತ್ತೊಂದರಂದು ಉಡುಪಿ ಪೊಲೀಸರಿಗೆ ರಿಪ್ಲೈ ನೀಡಿದ್ದ ನೇವಿ ಐಎನ್ ಎಸ್ ಕೊಚ್ಚಿಗೆ ಹಾನಿ ಆಗಿದ್ದ ವಿಷಯವನ್ನು ತಿಳಿಸಿತ್ತು. ಆದರೆ ಮಲ್ಪೆಯ ಬೋಟಿಗೇ ನೇವಿ ಡಿಕ್ಕಿ ಹೊಡೆದಿರಬಹುದು ಎಂಬ ಸಾಮಾನ್ಯಾ ಊಹೆಯ ಆಧಾರದಲ್ಲಿ ಯಾಕೆ ತನಿಖೆ ನಡೆಸಲಿಲ್ಲ?” ಎಂದು ಪ್ರಶ್ನಿಸಿದರಲ್ಲದೇ “ಈ ಕುರಿತು ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಹಾಗೂ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಲಿದ್ದೇನೆ. ಸಮರ್ಪಕ ಉತ್ತರ ದೊರೆಯದೇ ಇದ್ದರೆ ಸುಪ್ರೀಂ ಕೋರ್ಟಿಗೆ ಈ ಪ್ರಕರಣ ತೆಗೆದುಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.
“ಐಎನ್ ಎಸ್ ಕೊಚ್ಚಿನ್ ನೌಕೆ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಢಿಕ್ಕಿ ಹೊಡೆದಿದೆ. ಆದರೆ ಢಿಕ್ಕಿ ಹೊಡೆದ ವಿಷಯವನ್ನು ನೌಕಾಸೇನೆ ನಾಲ್ಕು ತಿಂಗಳ ತನಕ ಮುಚ್ಚಿಟ್ಟಿದೆ. ಮೊನ್ನೆ ಚುನಾವಣೆ ಮುಗಿದ ಬಳಿಕ ಬೋಟ್ ನ ಅವಶೇಷ ಸಿಕ್ಕಿರುವ ಬಗ್ಗೆ ನಾಟಕವಾಡುತ್ತಿದೆ “ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಉಡುಪಿ ಶಾಸಕರು ಐದು ದಿನಗಳ ಹಿಂದೆ ಮೀನುಗಾರ ಕುಟುಂಬದವರ ಜೊತೆ ಸೇರಿ ಬೋಟ್ ಹುಡುಕಾಟ ಮಾಡುವ ನಾಟಕ ಮಾಡಿದ್ದಾರೆ. ಶಾಸಕರು ಹೋದ ಎರಡೇ ದಿನದಲ್ಲಿ ಬೋಟ್ ನ ಅವಶೇಷ ಸಿಕ್ಕಿದೆ. ಇದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿರುವ ಪ್ರಮೋದ್ , “ಉಡುಪಿ ಶಾಸಕರು ,ಸಂಸದೆ ಶೋಭಾ ಕರಂದ್ಲಾಜೆ ಮತ್ತು ರಕ್ಷಣಾ ಸಚಿವೆ ಸೇರಿ ಚುನಾವಣೆ ಲಾಭಕ್ಕಾಗಿ ಮೀನುಗಾರರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಚುನಾವಣೆ ಮುಗಿಯುವ ತನಕ ಕೇಂದ್ರ ಸರಕಾರ ಢಿಕ್ಕಿಯಾದ ವಿಷಯವನ್ನು ಮುಚ್ಚಿಟ್ಟತ್ತು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ” ಎಂದರು.
ಮೀನುಗಾರ ಸಮುದಾಯದವನಾಗಿ ನಾನು ಮೀನುಗಾರರ ಪರವಾಗಿ ದನಿ ಎತ್ತುತ್ತೇನೆ. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಮೃತ ಮೀನುಗಾರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ನೀಡಬೇಕು. ಇದು ತಪ್ಪಿದ್ದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಪ್ರಮೋದ್ ತಿಳಿಸಿದರು.
More Articles
By the same author