ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಫೋಕಸ್ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಮ್ಮಾರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ ಕಮ್ಮಾರ್ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೇಮಂತ್ ಅವರಿಗೆ ಸಂಬಂಧಿಸಿದ ಲ್ಯಾಪ್ ಟಾಪ್, ಮೊಬೈಲ್ ಫೋನ್, ಡಿವಿಆರ್ ಮತ್ತಿತರ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೇಮಂತ್ ಅವರ ಮನೆ ಮತ್ತು ಕಚೇರಿ ಎರಡೂ ಕಡೆ ದಾಖಲೆಗಳಿಗಾಗಿ ಶೋಧಿಸಲಾಗುತ್ತಿದೆ.
ಹೇಮಂತ್ ಕಮ್ಮಾರ್, ಅರವಿಂದ ಲಿಂಬಾವಳಿ ಕುರಿತು ನಕಲಿ ಆಡಿಯೋ ಸೃಷ್ಟಿಸಿ ಫೇಸ್ ಬುಕ್ ನಲ್ಲಿ ಸುದ್ದಿ ಹರಿಬಿಟ್ಟಿದ್ದರಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಿ ಶಾಸಕರ ಚುನಾವಣಾ ಏಜೆಂಟ್ ಗಿರೀಶ್ ಸಲ್ಲಿಸಿರುವ ದೂರಿನನ್ವಯ ಈ ಬಂಧನ ನಡೆಸಲಾಗಿದೆ. ಆಡಿಯೋ ಆಧಾರದಲ್ಲಿ 50 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಯಿತ್ತು.
ಹೇಮಂತ್ ಬಂಧನವಾಗುತ್ತಿದ್ದಂತೆ ಇತರ ಹಲವು ರಾಜಕಾರಣಿಗಳು ಈತ ತಮಗೂ ಬ್ಲಾಕ್ ಮೇಲ್ ಮಾಡಿದ್ದ ಬಗ್ಗೆ ಮಾಹಿತಿ ನೀಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೇಮಂತ್ ಕಮ್ಮಾರ್ ಈ ಹಿಂದೆ ಪುನಿತ್ ಮತ್ತು ಶ್ರೀಧರ್ ಎಂಬ ಇಬ್ಬರು ಅರಣ್ಯ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ ಹದಿನೈದು ಲಕ್ಷ ಹಣ ಸುಲಿಗೆ ಮಾಡಿದ್ದ ಎನ್ನಲಾಗಿದೆ. ಇದುವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸ್ಟಿಂಗ್ ವಿಡಿಯೋ ಮಾಡಿಸಿದ್ದು ಅವುಗಳನ್ನು ಅವುಗಳನ್ನು ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ಹೇಳಲಾಗಿದೆ.
ಬಂಧಿತ ಹೇಮಂತ್ ಬ್ಲ್ಯಾಕ್ ಮೇಲ್ನಲ್ಲಿ ಸಿಎಂ ಹಾಗೂ ಜೆಡಿಎಸ್ ಮುಖಂಡರ ಹೆಸರನ್ನು ಸಹ ಪ್ರಸ್ತಾಪ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ”ಸಿಎಂ ಆಪ್ತ ಸತೀಶ್ ಎನ್ನುವವರು ಸಿ.ಡಿ ಯ 25 ಪ್ರತಿ ಕೇಳಿದ್ದಾರೆ. ಸಿಎಂ ಅವರೇ ಸಿ.ಡಿ ಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಕಾರ್ಪೊರೇಟರ್ ಆನಂದ್, ಹೆಬ್ಬಾಳದ ಜೆಡಿಎಸ್ ಮುಖಂಡ ಹನುಮಂತೇಗೌಡ, ಎಸಿಬಿ ಕೇಂದ್ರ ವಲಯದ ವರಿಷ್ಠಾಧಿಕಾರಿ ಬಡಿಗೇರ್ ಅವರು ಸಿ.ಡಿ ಗಾಗಿ ಒತ್ತಾಯ ಮಾಡುತ್ತಿದ್ದಾರೆ. ನಾನು ಸಾಹೇಬರ (ಲಿಂಬಾವಳಿ) ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುವಷ್ಟು ದೊಡ್ಡವನಲ್ಲ. ಒಂದು 50 ಕೊಡಿಸಿ ಬಿಡಿ. ಇನ್ನು ಮುಂದೆ ಇದ್ಯಾವುದೂ ಸಾಹೇಬರ ಬಳಿ ಸುಳಿಯದ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಮಂತ್ ತಿಳಿಸಿದ್ದ” ಎಂದು ಗಿರೀಶ್ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ
ಫೋಕಸ್ ಸುದ್ದಿ ವಾಹಿನಿಯು ಬಂದ್ ಆಗಿದ್ದು, ಮತ್ತೆ ಆರಂಭಿಸುವುದಾಗಿ ಹೇಮಂತ್ ಕುಮಾರ್ ಫೇಸ್ಬುಕ್ ನಲ್ಲಿ ಘೋಷಿಸಿಕೊಂಡಿದ್ದರು. ಇದರ ಹೆಸರಿನಲ್ಲಿಯೇ ಈ ರೀತಿ ಬ್ಲಾಕ್ ಮೇಲೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಕಳೆದ ಮಾರ್ಚ್ 20 ರಂದು ಇಂತದ್ದೇ ಪ್ರಕರಣದಲ್ಲಿ ವೈದ್ಯರೊಬ್ಬರನ್ನು ಬ್ಲಾಕ್ ಮೇಲ್ ಮಾಡಿದ್ದ ಆರೋಪದಲ್ಲಿ ಪಬ್ಲಿಕ್ ಟೀವಿಯ ಇನ್ಪುಟ್ ಮುಖ್ಯಸ್ಥ ಹೇಮಂತ್ ಕಶ್ಯಪ್ ನನ್ನು ಸದಾಶಿವ ನಗರದ ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದು