ಅನಂತಪುರ/ ಆಂಧ್ರ ಪ್ರದೇಶ: ಕರ್ನಾಟಕದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ವಲಸೆ ಹೋಗಿದ್ದ ಕುಟುಂಬವೊಂದರ ಇಬ್ಬರು ಪುಟ್ಟ ಮಕ್ಕಳು ಹಸಿವೆ ತಡೆಯಲಾರದೆ ಮಣ್ಣು ತಿಂದು ಅಪೌಷ್ಠಿಕತೆಯಿಂದಾಗಿ ಕಣ್ಮುಚ್ಚಿದ ಹೃದಯವಿದ್ರಾವಕ ಘಟನೆ ಅನಂತಪುರದ ಜಿಲ್ಲೆಯಲ್ಲಿ ನಡೆದಿದೆ.
ವೆನ್ನೆಲ ಎಂಬ ಎರಡು ವರ್ಷದ ಬಾಲಕಿ ಮತ್ತು ಸಂತೋಷ್ ಎಂಬ ಮೂರು ವರ್ಷದ ಬಾಲಕ ಹಸಿವಿನಿಂದ ದುರ್ಮರಣಕ್ಕೀಡಾಗಿರುವ ನತದೃಷ್ಟ ಮಕ್ಕಳಾಗಿದ್ದಾರೆ. ಮಕ್ಕಳು ಹಸಿವು ತಾಳಲಾರದೆ ಮಣ್ಣು ತಿಂದು ವಿವಿಧ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕೆಲಸ ಅರಸಿ ವಲಸೆ ಹೋದ ಬಡ ಕುಟುಂಬ
ವೆನ್ನೆಲ ಮತ್ತು ಸಂತೋಷ್ ಇವರಿಬ್ಬರ ತಾಯಂದಿರು ಒಡಹುಟ್ಟಿದವರಾಗಿದ್ದು, ವೆನ್ನೆಲಳನ್ನು ಸಂತೋಷನ ತಾಯಿ ನಾಗಮಣಿ ಸಾಕಿ ಸಲಹುತ್ತಿದ್ದಳು. ನಾಗಮಣಿ ತನ್ನ ಪತಿ, ತಾಯಿ ಮತ್ತು ಈ ಮಕ್ಕಳೊಂದಿಗೆ ಆಂಧ್ರಪ್ರದೇಶದ ಕದಿರಿ ಮಂಡಲದ (ತಾಲ್ಲೂಕು) ಕುಮ್ಮರವಂದ್ಲಪಲ್ಲಿ ಗ್ರಾಮದಲ್ಲಿ ಹಮಾಲಿಗಳು ನೆಲೆಸಿರುವ ಪ್ರದೇಶದಲ್ಲಿ ವಾಸವಾಗಿದ್ದಳು. ನಾಗಮಣಿ ಮತ್ತವಳ ಪತಿ ದಿನಗೂಲಿ ಕಾರ್ಮಿಕರಾಗಿದ್ದು, ಅವರಿಗೆ ನಿಯಮಿತವಾಗಿ ಕೆಲಸ ಸಿಗುವುದು ಕಷ್ಟವಾಗಿತ್ತು.
ಹಸಿವೆ ತಡೆಯಲಾರದೆ ಮಕ್ಕಳು ಮಣ್ಣು ತಿಂದರು…
ಕೂಲಿಕಾರ್ಮಿಕರಾದ ನಾಗಮಣಿ ಮತ್ತಾಕೆಯ ಪತಿ ಮಹೇಶ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗುಡಿಬಂಡೆಯಿಂದ ಸುಮಾರು 10 ವರ್ಷಗಳ ಹಿಂದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲ್ಲೂಕಿಗೆ ಉದ್ಯೋಗವನ್ನರಸಿ ವಲಸೆ ಹೋಗಿದ್ದರು. ಈ ದಂಪತಿಗೆ ಸಂತೋಷ್ ಸೇರಿದಂತೆ 5 ಮಕ್ಕಳು. ನಾಗಮಣಿಯ ತಾಯಿ ಮತ್ತು ಸಹೋದರಿಯ ಮಗಳು ವೆನ್ನೆಲ ಕೂಡ ಇವರ ಕುಟುಂಬದ ಭಾಗವಾಗಿದ್ದರು. ಆರು ತಿಂಗಳ ಹಿಂದೆ ನಾಗಮಣಿಯ 3 ವರ್ಷದ ಮಗ ಸಂತೋಷ್ ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದ. ಇದೀಗ ಏಪ್ರಿಲ್ 28ರಂದು 2 ವರ್ಷದ ವೆನ್ನೆಲ ಅದೇ ರೀತಿಯಲ್ಲಿ ಅಸುನೀಗಿದ್ದಾಳೆ. ಇಬ್ಬರೂ ಮಕ್ಕಳು ಹಸಿವೆ ತಡೆಯಲಾರದೆ ಮಣ್ಣು ಸೇವನೆ ಮಾಡಿದ್ದರು ಎಂಬುದು ಅಕ್ಕಪಕ್ಕದವರ ನೋವಿನ ಮಾತುಗಳು.
ಈ ಪ್ರಕರಣವನ್ನು ನೆರೆಹೊರೆಯ ನಿವಾಸಿಗಳೇ ಕದಿರಿ ಗ್ರಾಮೀಣ ಎಸ್ಐ ವೆಂಕಟಸ್ವಾಮಿಯವರ ಗಮನಕ್ಕೆ ತಂದರೆಂದು ಹೇಳಲಾಗಿದೆ.
“ಆ ಕುಟುಂಬಕ್ಕೆ ಒಂದು ಸರಿಯಾದ ಮನೆಯೂ ಇಲ್ಲ. ತಾತ್ಕಾಲಿಕ ಟೆಂಟ್ ನಲ್ಲಿ ಅವರು ವಾಸಿಸುತ್ತಿದ್ದರು. ಮಕ್ಕಳ ಸಾವಿನ ನಂತರ ಪೋಷಕರು ಆ ಟೆಂಟ್ ಪಕ್ಕದಲ್ಲೇ ಹೆಣಗಳನ್ನು ಹೂತುಬಿಟ್ಟಿದ್ದರು. ಪೋಷಕರು ಮಕ್ಕಳ ಬಗ್ಗೆ ಮತ್ತು ಅವರ ಪೌಷ್ಠಿಕತೆಯ ಕಡೆ ಸಾಕಷ್ಟು ಗಮನ ನೀಡಲಿಲ್ಲ. ತಾಯಿ, ತಂದೆ ಮತ್ತು ಅಜ್ಜಿ ಮದ್ಯವ್ಯಸನಿಗಳು. ಅವರು ಅಡುಗೆ ಮಾಡುತ್ತಿರಲಿಲ್ಲ, ಮಕ್ಕಳಿಗೆ ಸರಿಯಾಗಿ ಉಣಿಸುತ್ತಿರಲಿಲ್ಲ. ಅಕ್ಕಪಕ್ಕದವರು ಮಕ್ಕಳಿಗೆ ಆಗಾಗ ಊಟ ಕೊಡುತ್ತಿದ್ದರಾದರೂ ಮಕ್ಕಳಿಗೆ ಅದು ಸಾಲದಾಗಿತ್ತು, ಅವರು ತಮ್ಮ ಹಸಿವೆಯನ್ನು ಹತ್ತಿಕ್ಕಲು ಮಣ್ಣು ತಿನ್ನಲು ಶುರುಮಾಡಿದರು. ನಾವು ಇಲ್ಲೇ ಓಡಾಡುತ್ತಿದ್ದರೂ ಸಹ ಕರುಣಾಜನಕ ಸ್ಥಿತಿಯಲ್ಲಿರುವ ಈ ಕುಟುಂಬವನ್ನು ಗಮನಿಸದೇ ಹೋದದ್ದು ದುರದೃಷ್ಟಕರ”
ಎಂದು ಕದಿರಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಎ.ಇಸ್ಮಾಯಿಲ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೀದಿಯೇ ಮನೆಯಾದ ಕಂದಮ್ಮಗಳಿಗೆ ಮಣ್ಣೇ ಅನ್ನವಾಯ್ತು…
ಕುಟುಂಬವು ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದು ಚಿಂದಿ ಬಟ್ಟೆಯಿಂದ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡಿತ್ತು. ಅಲ್ಲೇ ಪಕ್ಕದಲ್ಲೇ ಇರುವ ಬಯಲೇ ಈ ಕುಟುಂಬದ ಶೌಚಾಲಯವೂ, ಸ್ನಾನಗೃಹವೂ ಆಗಿತ್ತು. ತಮ್ಮ ಬಳಿ ಇರುವ ಒಂದೆರಡು ಪಾತ್ರೆಗಳನ್ನು ಟೆಂಟ್ ಒಳಗಿಟ್ಟು ಇಡೀ ಸಂಸಾರ ಬೀದಿಯಲ್ಲಿ ಮಲಗುತ್ತಿತ್ತೆಂದು ಅಕ್ಕಪಕ್ಕದ ನಿವಾಸಿಗಳು ಹೇಳುತ್ತಾರೆ.
“ತಂದೆಯನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ತಾಯಿ ಸಾಮಾನ್ಯವಾಗಿ ಹೊರಗೆ ಇರುತ್ತಿದ್ದರಿಂದ ಮಕ್ಕಳು ಅಜ್ಜಿಯ ಜೊತೆ ವಾಸವಾಗಿದ್ದರು. ನಮ್ಮ ಎಎನ್ಎಮ್ ಗಳು ಅವರಿಗೆ ಚುಚ್ಚುಮದ್ದುಗಳನ್ನು ಕೊಟ್ಟಿದ್ದಾರೆ, ಆದರೆ ಈ ಸಾವುಗಳನ್ನು ತಡೆಗಟ್ಟಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಿತ್ತು. ಪೋಸ್ಟ್ ಮಾರ್ಟೆಮ್ ಮಾಡಲಾಗಿಲ್ಲ, ಆದರೆ ಇದನ್ನು ಹಸಿವೆಯಿಂದ ಸಂಭವಿಸಿರುವ ಅಪೌಷ್ಠಿಕತೆ ಎಂಬ ತೀರ್ಮಾನಕ್ಕೆ ಬರಬಹುದು”
- ಜಿಲ್ಲಾ ವೈದ್ಯ ಮತ್ತು ಆರೋಗ್ಯ ಅಧಿಕಾರಿ ಅನಿಲ್ ಕುಮಾರ್
ಜಿಲ್ಲಾಡಳಿತ ವರದಿ – ಪೋಷಕರ ಮೇಲೆ ಆರೋಪ
ಅನಂತಪುರದ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕದಿರಿ ವಿಭಾಗೀಯ ಕಂದಾಯ ಅಧಿಕಾರಿ ಟಿ.ಅಜಯ್ ಕುಮಾರ್ ಈ ಪ್ರಕರಣದ ಕುರಿತು ತನಿಖೆ ಕೈಗೊಂಡು ಸಲ್ಲಿಸಿರುವ ವರದಿಯಲ್ಲಿಯೂ ಪೋಷಕರ ಮದ್ಯವ್ಯಸನ ಮತ್ತು ಮಕ್ಕಳ ನಿರ್ಲಕ್ಷ್ಯದ ಬಗ್ಗೆ ಹೇಳಲಾಗಿದೆ. ನಾಗಮಣಿ ದಂಪತಿಗೆ ಕೆಲಸ ಸಿಗುವುದೇ ಅತ್ಯಂತ ದುರ್ಬರವಾಗಿತ್ತೆಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಗುವಿನ ಆರೋಗ್ಯ ಕ್ಷೀಣಿಸಿದಾಗಲೂ ಚಿಕ್ಕಮ್ಮ ನಾಗಮಣಿ ಮತ್ತು ಅಜ್ಜಿ ಈ ವಿಷಯವನ್ನು ಸ್ಥಳೀಯ ಆರೋಗ್ಯ ಕಾರ್ಯಕರ್ತರ ಗಮನಕ್ಕೆ ತರಲಿಲ್ಲವೆಂದು ಇಲ್ಲವೇ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಒಯ್ಯಲಿಲ್ಲವೆಂದು ಆರೋಪಿಸಲಾಗಿದೆ. ಆದರೆ ಪ್ರಕರಣವನ್ನು ಪೊಲೀಸ್ ಮತ್ತು ಸ್ಥಳೀಯ ಮಾಧ್ಯಮಗಳು ಬೆಳಕಿಗೆ ತಂದ ಕಾರಣ, ಈ ಕುಟುಂಬಕ್ಕೆ ಪಡಿತರ ಚೀಟಿ ನೀಡಿ (ಬಿಪಿಎಲ್ ಅಥವಾ ಅನ್ನ ಅಂತ್ಯೋದಯ), ಮಹೇಶ್ ನಾಗಮಣಿ ದಂಪತಿಗೆ ಉದ್ಯೋಗ ಕಾರ್ಡ್ (ಮನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ನೀಡುವ ಚೀಟಿ) ನೀಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.

ಆಧಾರ್ ಕಾರ್ಡ್ ಇಲ್ಲದ ಮಕ್ಕಳಿಗೆ ಅಂಗನವಾಡಿ ಆಹಾರವಿಲ್ಲ!
0-6 ವಯೋಮಾನದ ಮಕ್ಕಳ ಪೌಷ್ಟಿಕತೆ ಮತ್ತು ಸಮಗ್ರ ಬೆಳವಣಿಗೆಗಾಗಿ ನಾಲ್ಕು ದಶಕಗಳ ಹಿಂದೆ ದೇಶದಲ್ಲಿ ಸಮಗ್ರ ಶಿಶು ಅಭಿವೃದ್ಧಿ (ICDS) ಯೋಜನೆಯನ್ನು ಆರಂಭಿಸಲಾಗಿತ್ತು. ಇದರ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳು ಆಧಾರ್ ಕಾರ್ಡ್ ಹೊಂದಿರಬೇಕೆಂದು ಈಗ ಮೋದಿ ಸರ್ಕಾರ ಕಡ್ಡಾಯಗೊಳಿಸಿದೆ. ಅಂಗನವಾಡಿ ಕೇಂದ್ರದ ಮಕ್ಕಳ ತುತ್ತಿನ ಚೀಲಕ್ಕೂ ಇದು ಅನ್ವಯವಾಗುತ್ತದೆ. ಇನ್ಸ್ಪೆಕ್ಟರ್ ಇಸ್ಮಾಯಿಲ್ ಅವರ ಪ್ರಕಾರ, ಈ ಕುಟುಂಬದಲ್ಲಿ ಯಾರೊಬ್ಬರೂ ಆಧಾರ್ ಕಾರ್ಡ್ ಹೊಂದಿರಲಿಲ್ಲವಾದ ಕಾರಣ ಮಕ್ಕಳು ಅಂಗನವಾಡಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಕಂದಾಯ ಅಧಿಕಾರಿ ಹೇಳುವ ಕತೆಯೇ ಬೇರೆ! ನಾಗಮಣಿ ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ಆಧಾರ್ ಕಾರ್ಡ್ ಇರಲಿಲ್ಲವೆಂದೂ, ಹಸಿವಿನಿಂದ ಸಾವನ್ನಪ್ಪಿರುವ ಸಂತೋಷ್ ಮತ್ತು ವೆನ್ನೆಲ ಅವರಿಗೆ ಅಂಗನವಾಡಿ ಕೇಂದ್ರದಲ್ಲಿ ಆಹಾರ ಲಭ್ಯವಾಗಿತ್ತೆಂದು ಸಮಜಾಯಿಷಿ ನೀಡಿದ್ದಾರೆ.
ಪುನರ್ವಸತಿಯೋ ಗಾಯದ ಮೇಲೆ ಬರೆ ಎಳೆಯುವುದೋ …
ಒಂದು ವರ್ಷದ ಕೆಳಗೆ ನಾಗಮಣಿ ದಂಪತಿ ಅನಾರೋಗ್ಯದಿಂದಾಗಿ ಇನ್ನೊಬ್ಬ ಮಗಳನ್ನು ಕಳೆದುಕೊಂಡಿದ್ದರು. ಈಗ ಉಳಿದಿರುವ ನಾಲ್ಕು ಮಕ್ಕಳ ಪೈಕಿ ಸ್ಥಳೀಯ ಅಂಗನವಾಡಿ ಕೇಂದ್ರದ ರಕ್ಷಣೆಯಲ್ಲಿದ್ದ 8, 7 ಮತ್ತು 6 ವರ್ಷದ ಮೂರು ಮಕ್ಕಳನ್ನು ಸಮಗ್ರ ಶಿಶು ರಕ್ಷಣಾ ಯೋಜನೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಇಲಾಖೆಯ ಪರವಾಗಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿ ರಕ್ಷಣಾಲಯದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.
ನಾಗಮಣಿ ಮತ್ತು ಆಕೆಯ ಒಂದು ವರ್ಷದ ಮಗು ರಕ್ತಹೀನತೆಯಿಂದ ಬಳಲುತ್ತಿರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿರುವುದರಿಂದ ತಾಯಿಮಗುವನ್ನು ಪೌಷ್ಟಿಕತೆ ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಆಲೋಚನೆಯನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ. ಇಬ್ಬರ ಆರೋಗ್ಯ ಚೇತರಿಸಿಕೊಂಡ ಕೂಡಲೇ ಮಗುವನ್ನು ಶಿಶು ಸದನ ಕೇಂದ್ರಕ್ಕೂ, ನಾಗಮಣಿ ಮತ್ತವಳ ತಾಯಿಯನ್ನು ವ್ಯಸನ ಮುಕ್ತಿ ಕೇಂದ್ರಕ್ಕೂ ಕಳುಹಿಸುವ ಪ್ರಸ್ತಾಪವಿರುವುದಾಗಿ ತಿಳಿಸಿದ್ದಾರೆ. ವ್ಯಸನಮುಕ್ತಿ ಚಿಕಿತ್ಸೆ ಮುಗಿದ ತಕ್ಷಣವೇ ಅವರನ್ನು ಮಕ್ಕಳ ಸಾವುಗಳಿಗೆ ಹೊಣೆಮಾಡಿ ಮಕ್ಕಳ ಮೇಲಿನ ಹಿಂಸೆ ಮತ್ತು ಮಕ್ಕಳ ದುರ್ಬಳಕೆ ಕಾಯಿದೆಗಳಿದೆ ಪ್ರಕರಣ ದಾಖಲಿಸಲಾಗುವುದೆಂದು ವಿಭಾಗೀಯ ಕಂದಾಯಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾಡಳಿತದ ಈ ಕ್ರಮ ಬಡವರ ಗಾಯಕ್ಕೆ ಚಿಕಿತ್ಸೆ ನೀಡುವ ಬದಲು ಇನ್ನಷ್ಟು ಬರೆ ಎಳೆದಂತೆಯೇ!
ಹಸಿವುಮುಕ್ತ ಭಾರತದ ಕನಸು – ಮಣ್ಣಾಗುತ್ತಿವೆ ಹಸಿದ ಜೀವಗಳು
NFHS-4 (2015-16) ಸಮೀಕ್ಷಾ ವರದಿಯ ಪ್ರಕಾರ ದೇಶದ ಶೇ.10ರಷ್ಟು ಮಕ್ಕಳಿಗೆ ಮಾತ್ರ ಅಗತ್ಯ ಪೌಷ್ಟಿಕಾಂಶಗಳು ಲಭ್ಯವಾಗುತ್ತಿವೆ. ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆಂದು ಕೇಂದ್ರ ಸರ್ಕಾರ ಮಾರ್ಚ್ 2018ರಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಾರಂಭಿಸಿತು. 2025ರಲ್ಲಿ ಎಲ್ಲಾ ವಿಧಗಳ ಅಪೌಷ್ಟಿಕತೆಯನ್ನೂ ತಗ್ಗಿಸಿ, 2030ರ ಹೊತ್ತಿಗೆ ಹಸಿವುಮುಕ್ತ ಭಾರತದ ಗುರಿಯನ್ನು ದೇಶ ಹೊಂದಿದೆ. ಆದರೆ ಒಂದು ಕಡೆ ಜನ ಉದ್ಯೋಗಕ್ಕಾಗಿ ಅಲೆಯುತ್ತ ಊರಿಂದ ಊರಿಗೆ ವಲಸೆ ಹೋಗುತ್ತಿದ್ದರೆ, ಇನ್ನೊಂದು ಕಡೆ ಕಡುಬಡವರಿಗೂ ರೇಷನ್ ಕಾರ್ಡ್ ನೀಡದೆ ಹಸಿವೆಗೆ ದೂಡಿರುವ ಆಡಳಿತ ಹಾಗೂ ಬಡವರಿಗೆ ನೀಡಲಾಗುವ ತುತ್ತು ಅನ್ನಕ್ಕೂ ಆಧಾರ್ ಕಾರ್ಡ್ ಜೋಡಣೆಯ ಕಿರಿಕಿರಿ ತಂದಿಟ್ಟಿರುವ ಮೋದಿ ಸರ್ಕಾರ!
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವ ಮಕ್ಕಳ ಹಕ್ಕುಗಳ ಸೇವಾ ಸಂಸ್ಥೆ ‘ಬಾಲಲ ಹಕ್ಕುಲ ಸಂಘಮ್’, ಮಕ್ಕಳ ಸಾವುಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದೆ.
“ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಪೋಷಕರಿಗೆ ಮಾಹಿತಿ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲಾ ಪೋಷಕರಿಗೂ ಅದರ ಅರಿವಿರುವುದಿಲ್ಲ. ಮಕ್ಕಳ ಕಲ್ಯಾಣ ಯೋಜನೆಗಳು ಅಸ್ತಿತ್ವದಲ್ಲಿದ್ದರೂ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ.”
– ಅಚ್ಯತ ರಾವ್, ಅಧ್ಯಕ್ಷರು, ಬಾಲಲ ಹಕ್ಕುಲ ಸಂಘಮ್
ಹಸಿವೆಯ ಸಾವು – ಪ್ರಭುತ್ವಕ್ಕಿಲ್ಲ ನೋವು
ಮಕ್ಕಳ ಹಸಿವೆಯ ಸಾವುಗಳ ಪ್ರಕರಣವನ್ನು ಜಿಲ್ಲಾಡಳಿತ ನಿಭಾಯಿಸಿರುವ ರೀತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹಸಿವೆ, ಅಪೌಷ್ಟಿಕತೆಯಿಂದ ಸಾವನ್ನಪ್ಪಿದ ಪುಟ್ಟ ಮಕ್ಕಳ ಸಾವಿಗೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ತಾಯಿ ಮತ್ತು ಅಜ್ಜಿಯನ್ನು ಹೊಣೆಗಾರರನ್ನಾಗಿಸುವುದು ಎಷ್ಟು ಸರಿ? ರಾಷ್ಟ್ರದ ಮತ್ತು ಸಮಾಜದ ಭವಿಷ್ಯ ನಿರ್ಮಿಸುವ ಮಕ್ಕಳ, ಪಾಲನೆ, ಪೋಷಣೆ, ರಕ್ಷಣೆಯಲ್ಲಿ ಸರ್ಕಾರದ ಜವಾಬ್ದಾರಿ ಮಹತ್ತರವಾದುದೆಂಬ ಅಂಶವನ್ನು ಜಿಲ್ಲಾಡಳಿತ ಮರೆತಂತಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳನ್ನು ಇಂತಹ ಮಕ್ಕಳಿಗೆ ತಲುಪಿಸಲಾರದ ಇಲಾಖೆಗಳು ಮತ್ತು ಅಧಿಕಾರಿಗಳು ಹಸಿದ ಮಕ್ಕಳ ಸಾವಿಗೆ ನಿಜ ಕಾರಣರಲ್ಲವೇ? ಮಕ್ಕಳ ಪೋಷಕರಿಗೆ ಉದ್ಯೋಗ ನೀಡದ, ಘನತೆಯ ಬದುಕನ್ನು ಕಟ್ಟಿಕೊಳ್ಳಲು ಆಸ್ಪದ ಕೊಡದ ಸರ್ಕಾರಗಳು ಈ ದುರಂತಕ್ಕೆ ನೇರ ಹೊಣೆಯಾಗುತ್ತಾರಲ್ಲವೆ? ಕನಿಷ್ಟಪಕ್ಷ ಕಡುಬಡವರಿಗೆ ಸಿಗಬೇಕಾದ ಪಡಿತರ ವ್ಯವಸ್ಥೆಯನ್ನೂ ಈ ಕುಟುಂಬಕ್ಕೆ ನೀಡದ ಅಧಿಕಾರಿಗಳು ತಪ್ಪಿತಸ್ಥರಲ್ಲವೇ? 6 ತಿಂಗಳ ಹಿಂದೆ 3 ವರ್ಷದ ಬಾಲಕನ ಅಸಹಜ ಸಾವು ಸಂಭವಿಸಿದರೂ ಅದು ಸ್ಥಳೀಯ ಆಡಳಿತದ ಗಮನಕ್ಕೆ ಬಾರದೆ ಸರ್ಕಾರದ ದಾಖಲೆಗೆ ಸಿಕ್ಕೇ ಇಲ್ಲ ಎಂದರೆ ಬಡವರ ಹುಟ್ಟುಸಾವುಗಳನ್ನು, ಅವರ ಬದುಕನ್ನು ಈ ವ್ಯವಸ್ಥೆ ಹೇಗೆ ಪರಿಗಣಿಸುತ್ತಿದೆ? ತಮ್ಮ ತಪ್ಪುಗಳಿಂದ ನುಣುಚಿಕೊಳ್ಳಲು ಈಗ ‘ಮದ್ಯವ್ಯಸನಿ’ ಪೋಷಕರ ಮೇಲೆ ಆರೋಪ ಹೊರಿಸುವ ಅಧಿಕಾರಿಗಳ ಕುತಂತ್ರ ಹೊಸದಾಗಿ ಕಾಣುತ್ತಿಲ್ಲ.
ಅಂತಿಮವಾಗಿ ಹಸಿವೆಯ ವಿರುದ್ಧ ಸಮರ ಸಾರುವುದೆಂದರೆ ಹಸಿದವರ ವಿರುದ್ಧ ಸಮರ ಸಾರುವುದಲ್ಲ ಎಂಬ ಸೂಕ್ಷ್ಮವನ್ನು ಅಧಿಕಾರಿಗಳು, ಪ್ರಭುತ್ವ ಅರ್ಥಮಾಡಿಕೊಳ್ಳುವುದು ಕ್ಷೇಮ.
(ವಿವಿಧ ಮೂಲಗಳಿಂದ)