ರಾಜ್ಯದ ಮಟ್ಟಿಗೆ ಈ ಬಾರಿಯ ಲೋಕಸಭಾ ಚುನಾವಣೆ ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತಾಗಿದೆ. ಬಹುಶಃ ಈ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಂಭವಿಸಬಹುದಾದ ರಾಜಕೀಯ ಬೆಳವಣಿಗೆಗಳು ದೇಶದ ಇನ್ನಾವುದೇ ರಾಜ್ಯದಲ್ಲೂ ನಡೆಯಲಿಕ್ಕಿಲ್ಲ. ಅಷ್ಟರಮಟ್ಟಿಗೆ ಈ ಚುನಾವಣೆ ರಾಜ್ಯ ರಾಜಕಾರಣದ ಚಹರೆಯನ್ನೇ ಬದಲಾಯಿಸುವ ಸಾಧ್ಯತೆಗಳು ಸದ್ಯಕ್ಕಂತೂ ಗೋಚರಿಸುತ್ತಿವೆ.
ಈಗಾಗಲೇ ರಾಜ್ಯದ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಈ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ. ಮತದಾನ ಮುಗಿಯುತ್ತಲೇ ಆರಂಭವಾಗಿರುವ ಮೈತ್ರಿ ಪಕ್ಷಗಳ ನಡುವಿನ ತೆರೆಮರೆಯ ಗುದ್ದಾಟ ಫಲಿತಾಂಶದ ಬಳಿಕ ಬೀದಿ ಕಾಳಗವಾಗಿ ಬದಲಾಗಲಿದೆ. ಹಾಗಾಗಿ “ಈ ಸರ್ಕಾರ ಫಲಿತಾಂಶ ಬಂದ ಮಾರನೇ ದಿನವೇ ಕುಸಿಯಲಿದೆ. ಮುಂದಿನ ಮುಖ್ಯಮಂತ್ರಿ ನಾನೇ” ಎಂದು ಈಗಾಗಲೇ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಸರ್ಕಾರದ ಪತನಕ್ಕೆ ಮತ್ತೊಂದು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಯಡಿಯೂರಪ್ಪ ಅವರು ಈ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕ್ಷಣದಿಂದಲೂ ಹೀಗೆ ಪತನದ ಮುಹೂರ್ತ ನಿಗದಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಅವರ ಡೆಡ್ಲೈನ್ಗಳೆಲ್ಲಾ ಮಕಾಡೆ ಮಲಗುತ್ತಿವೆಯೇ ಹೊರತು, ಆಪರೇಷನ್ ಕಮಲ ಸೇರಿದಂತೆ ಅವರ ಯಾವ ಪ್ರಯತ್ನಗಳೂ ಈವರೆಗೆ ಸಫಲವಾಗಿಲ್ಲ. ಹಾಗಾಗಿ ಯಡಿಯೂರಪ್ಪ ಅವರದ್ದು ‘ತಿರುಕನ ಕನಸು’ ಎಂದು ಆಡಳಿತ ಮೈತ್ರಿ ಹೇಳುತ್ತಲೇ ಇದೆ.
ಆದರೆ, ಈ ಬಾರಿ ಬಹುಶಃ ಯಡಿಯೂರಪ್ಪ ಅವರ ಲೆಕ್ಕಾಚಾರಗಳು ನಿಜವಾಗದಿದ್ದರೂ, ರಾಜ್ಯ ರಾಜಕಾರಣದಲ್ಲಿ ಮತ್ತು ಮೈತ್ರಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆಗಳಂತೂ ಇವೆ ಎಂಬುದು ವಿಧಾನಸೌಧದ ಪಡಸಾಲೆಯಲ್ಲೇ ಕೇಳಿಬರುತ್ತಿರುವ ಮಾತು. ಅದರಲ್ಲೂ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಬದಲಾವಣೆಗಳಾಗಲಿವೆ. ಮೂರೂ ಪಕ್ಷಗಳ ನಾಯಕತ್ವ ಮತ್ತು ಪಕ್ಷದ ಹೊಣೆಗಾರಿಕೆಯ ವಿಷಯದಲ್ಲಿ ಈ ಚುನಾವಣಾ ಫಲಿತಾಂಶ ಸಾಕಷ್ಟು ಬದಲಾವಣೆ ತರುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಬದಲಾವಣೆಗೆ ಚಾಲನೆ ಸಿಕ್ಕಿದೆ. ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದರ ಮೇಲೆ ಮುಂದಿನ ಮೂರು ವರ್ಷಗಳ ಬಿಜೆಪಿ ಬಲಾಬಲ ನಿರ್ಧಾರವಾಗಲಿದೆ. ಅದರಲ್ಲೂ ಮುಖ್ಯವಾಗಿ ಕಟ್ಟಾ ಹಿಂದುತ್ವವಾದಿ ಆರ್ ಎಸ್ ಎಸ್ ನಾಯಕರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆಯೇ? ಅಥವಾ ಜಾತಿ- ಜನಾಂಗದ ಆಧಾರದ ಮೇಲೆ ಪ್ರಮುಖ ಜಾತಿಗಳಿಗೆ ಆ ಅವಕಾಶ ಸಿಗುವುದೇ ಎಂಬುದರ ಮೇಲೆ ಮುಂದಿನ ಪಕ್ಷದ ನಡೆ ನಿಂತಿದೆ.
ಸದ್ಯಕ್ಕೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಳಿಬರುತ್ತಿರುವುದು ಆರ್ ಎಸ್ ಎಸ್ ನಾಯಕ ಬಿ ಎಲ್ ಸಂತೋಷ್ ಅವರದ್ದೇ. ಜೊತೆಗೆ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಮತ್ತು ಸಿ ಟಿ ರವಿ ಹೆಸರುಗಳೂ ಚಾಲ್ತಿಯಲ್ಲಿವೆ. ಆ ಇಬ್ಬರೂ ಯಡಿಯೂರಪ್ಪ ಬಣದಿಂದ ಹೊರಗಿರುವವರು. ಹಾಗಾಗಿ, ಯಡಿಯೂರಪ್ಪ ತಮ್ಮದೇ ಬಣದ ಅರವಿಂದ ಲಿಂಬಾವಳಿ ಅವರನ್ನೇ ಅಧ್ಯಕ್ಷ ಗಾದಿಗೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಗೋವಿಂದ ಕಾರಜೋಳ ಅವರ ಹೆಸರೂ ಕೇಳಿಬರುತ್ತಿದೆ. ಆದರೆ, ಈ ಬಾರಿ ಯಡಿಯೂರಪ್ಪಗೆ ಪ್ರತಿಯಾಗಿ ಪಕ್ಷದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಬಹಿರಂಗವಾಗಿಯೇ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಸಂತೋಷ್ ಅವರು, ಅಂತಿಮವಾಗಿ ಸ್ವತಃ ತಮಗೆ ಅವಕಾಶ ಸಿಗದಿದ್ದಲ್ಲೇ ತಮ್ಮ ಆಪ್ತರಲ್ಲೇ ಒಬ್ಬರ ಹೆಸರನ್ನು ಮುಂದೆ ಮಾಡಿ ಪಟ್ಟು ಹಿಡಿಯುವುದು ಎಂಬ ತಂತ್ರ ಹೆಣೆದಿದ್ದಾರೆ. ಈ ನಡುವೆ, ಕೆ ಎಸ್ ಈಶ್ವರಪ್ಪ ಕೂಡ ಮತ್ತೊಂದು ಸುತ್ತಿಗೆ ಪಕ್ಷದ ಅಧ್ಯಕ್ಷ ಪಟ್ಟಕ್ಕೇರಿ, ಚುನಾವಣಾ ಫಲಿತಾಂಶೋತ್ತರ ಬೆಳವಣಿಗೆಗಳ ಸಾರಥ್ಯ ವಹಿಸುವ ಉಮೇದಿನಲ್ಲೂ ಇದ್ದಾರೆ.
ಅದೇನೇ ಇರಲಿ; ಒಟ್ಟಿನಲ್ಲಿ ಈ ಬಾರಿ ಬಿಜೆಪಿಯ ಹಿಡಿತ ಯಡಿಯೂರಪ್ಪ ಕೈಜಾರುವುದು ಶತಸಿದ್ಧ ಎಂಬ ವಾತಾವರಣ ಇದೆ. ಸ್ವತಃ ಅವರಷ್ಟೇ ಅಲ್ಲದೆ, ಅವರ ಆಪ್ತರು ಕೂಡ ಅಧ್ಯಕ್ಷ ಗಾದಿಯ ಹತ್ತಿರಕ್ಕೆ ಸುಳಿಯದಂತೆ ನೋಡಿಕೊಳ್ಳಲು ಬಿ ಎಲ್ ಸಂತೋಷ್ ಮತ್ತವರ ಮಿತ್ರಪಡೆ ಪಟ್ಟು ಹೆಣೆದಿದೆ. ಹಾಗಾಗಿ ಒಂದು ರೀತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಯುಗಾಂತ್ಯವಾದಂತೆಯೇ. ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ ಮುಂದುವರಿದರೂ, ಪಕ್ಷದ ಮೇಲೆ ಅವರ ಪ್ರಭಾವ ಕುಸಿಯಲಿದೆ. ಅದು ಕೇವಲ ಯಡಿಯೂರಪ್ಪ ಅವರ ವೈಯಕ್ತಿಕ ಹಿನ್ನಡೆಯಷ್ಟೇ ಅಲ್ಲ; ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಜೆಪಿಯನ್ನು ಅಪ್ಪಿಕೊಂಡಿದ್ದ ರಾಜ್ಯ ಲಿಂಗಾಯತ ಸಮುದಾಯದ ಪಾಲಿಗೂ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಹಿನ್ನಡೆಯೇ ಎನ್ನಲಾಗುತ್ತಿದೆ. ಅದೇನೇ ಇರಲಿ; ಮೇ 23ರ ಬಳಿಕ ರಾಜ್ಯದ ಮಟ್ಟಿಗಂತೂ ಭಾರತೀಯ ಜನತಾ ಪಕ್ಷದ ಚಹರೆ ಬದಲಾಗಲಿದೆ. ಅದು ಆ ಪಕ್ಷದ ಪಾಲಿಗೆ ಅಪೇಕ್ಷಿತವೂ ಹೌದು, ಅನಿವಾರ್ಯವೂ ಹೌದು.
ಒಂದು ವೇಳೆ ಯಡಿಯೂರಪ್ಪ ನಿರೀಕ್ಷೆಯಂತೆ 22 ಸ್ಥಾನ ಗೆದ್ದರೂ ಅವರಿಗೆ ಪಕ್ಷದ ಮೇಲಿನ ಹಿಡಿತ ಸಿಗಲಾರದು. ಆ ಸಾಧನೆಯ ಪಾಲನ್ನು ಕೇಳಲೂ ಈಗ ತೆರೆಮರೆಯ ಸಂಘದ ಕಾಣದ ಕೈಗಳು ನಾಯಕರನ್ನು ಪ್ರತಿಷ್ಠಾಪಿಸಿವೆ. ಹಾಗಾಗಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಮಾತು ಈ ಬಾರಿ ಯಡಿಯೂರಪ್ಪ ಬಣಕ್ಕೆ ಅನ್ವಯವಾದರೂ ಅಚ್ಚರಿ ಇಲ್ಲ. ಇನ್ನು ಅವರ ದುರಾದೃಷ್ಟಕ್ಕೆ ಈಗಾಗಲೇ ಬಹುತೇಕ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಕಳೆದ ಬಾರಿ ಗೆದ್ದಿದ್ದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಮೈತ್ರಿ ಕೂಟ ಸುಮಾರು 16-18 ಸ್ಥಾನದಲ್ಲಿ ಗೆಲುವು ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ 10-12 ಸ್ಥಾನಕ್ಕೆ ಕುಸಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೋಲು ಸಂಭವಿಸಿದ್ದೇ ಆದರೆ, ಅದಕ್ಕಾಗಿ ಆ ಪಕ್ಷ ತೆರಬೇಕಾದ ಬೆಲೆ ಬಹಳ ದೊಡ್ಡದಿರಲಿದೆ.
ಅದೇ ಹೊತ್ತಿಗೆ, ಒಂದು ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಹೆಚ್ಚು ಸ್ಥಾನ ಪಡೆದು, ರಾಷ್ಟ್ರಮಟ್ಟದಲ್ಲೂ ಯಾವುದೇ ಪಕ್ಷಕ್ಕೆ ನಿಚ್ಛಳ ಬಹುಮತ ಬರದೇ ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಆಗ ಜೆಡಿಎಸ್ ವರಿಷ್ಠ ದೇವೇಗೌಡರ ಆಟ ಶುರುವಾಗಲಿದೆ. ಮತ್ತೆ 1996ರ ಮ್ಯಾಜಿಕ್ ಮರುಕಳಿಸಿ, ಇನ್ನೊಂದು ಅವಧಿಗೆ ಪ್ರಧಾನಿ ಕುರ್ಚಿಯನ್ನೇರಲು ಮಣ್ಣಿನ ಮಗ ದಾಳ ಉರುಳಿಸಬಹುದು. ಈಗಾಗಲೇ ಹೋಮ-ಹವನ ಮಾಡಿಸಿ, ಭವಿಷ್ಯದಲ್ಲಿ ಇನ್ನಷ್ಟು ಚುರುಕಾಗಲು ತಯಾರಿ ನಡೆಸಿರುವ ಗೌಡರು, ಸಂದರ್ಭ ಬಂದರೆ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಅಚಾನಕ್ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ಸಿ ವೋಟರ್, ಸಿಎಸ್ ಡಿಎಸ್ ಸೇರಿದಂತೆ ಹಲವು ಸಮೀಕ್ಷೆಗಳು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ ಎಂದಿವೆ. ಈ ಬಾರಿ ಯಾವ ಪಕ್ಷಕ್ಕೂ ನಿಚ್ಛಳ ಬಹುಮತ(272) ಸಿಗುವ ಸಾಧ್ಯತೆ ಇಲ್ಲ ಎಂದೂ ಹೇಳಿವೆ. ಆ ಹಿನ್ನೆಲೆಯಲ್ಲಿ ಗೌಡರು ಇನ್ನಷ್ಟು ಉತ್ಸಾಹದಲ್ಲಿದ್ದಾರೆ.
ಹಾಗಾಗಿ ಅಂತಹ ಸಂದರ್ಭ ಬಂದಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮ ಏನು? ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ರಾಷ್ಟ್ರ ಮಟ್ಟದ ರಾಜಕೀಯ ನೀಡುವ ತಿರುವು ಏನು ಎಂಬುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ.
ಈ ನಡುವೆ, ಜೆಡಿಎಸ್ ಮತ್ತು ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಡಳಿತ ವೈಖರಿಯ ವಿಷಯದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತೃಪ್ತಿ ಹೊಂದಿಲ್ಲ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಸಿದ್ದರಾಮಯ್ಯ ಕೂಡ ತಮ್ಮದೇ ಆಟ ಶುರು ಮಾಡಬಹುದು. ಪೂರ್ಣಾವಧಿಗೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದರೆ ಅದು ಅಂತಿಮವಾಗಿ ಕಾಂಗ್ರೆಸ್ಸಿಗೆ ಮತ್ತು ವೈಯಕ್ತಿಕವಾಗಿ ತಮಗೆ ಅಪಾಯಕಾರಿ ಎಂಬುದು ಅವರ ಆತಂಕ. ಹಾಗಾಗಿಯೇ ಈಗಾಗಲೇ ಅವರ ಆಪ್ತರಲ್ಲಿ ಕೆಲವರು ಪ್ರತ್ಯೇಕವಾಗಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಆ ಮೂಲಕ ಸಿಎಂ ಕುಮಾರಸ್ವಾಮಿ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಗಳಿಗೆ ಸಿದ್ದರಾಮಯ್ಯ ಮತ್ತೆ ಚಾಲನೆ ನೀಡಿದ್ದಾರೆ. ಆದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವ ಡಿ ಕೆ ಶಿವಕುಮಾರ್, ಈ ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು, ತಮ್ಮ ಪ್ರಭಾವವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ತಮ್ಮದೇ ವರಸೆಯಲ್ಲಿ ಪರೋಕ್ಷ ಸವಾಲು ಒಡ್ಡಿದ್ದಾರೆ.
ಹಾಗಾಗಿ ಮೇ 23ರ ನಂತರ ಕಾಂಗ್ರೆಸ್ಸಿನಲ್ಲೂ ಪ್ರತಿಷ್ಠೆ ಮತ್ತು ಪ್ರಭಾವದ ಬಲಪ್ರದರ್ಶನ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆ ಪ್ರತಿಷ್ಠೆಯ ಹಗ್ಗಜಗ್ಗಾಟ ಕೂಡ ಕಾಂಗ್ರೆಸ್ ಚಹರೆಯನ್ನು ಬದಲಾಯಿಸಲಿದೆ. ಈಗಾಗಲೇ ಸಿದ್ದರಾಮಯ್ಯ ತಮ್ಮ ನಾಯಕತ್ವ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಹೂಡಿರುವ ತಂತ್ರಗಾರಿಕೆಗಳು ಮತ್ತು ಡಿಕೆಶಿ ಲೆಕ್ಕಾಚಾರಗಳು ಯಾವ ತಿರುವು ಪಡೆದುಕೊಳ್ಳಬಹುದು ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಜೆಡಿಎಸ್ ಕೂಡ ಈ ಚುನಾವಣೆಯ ಫಲಿತಾಂಶದ ಮೇಲೆ ತನ್ನ ಭವಿಷ್ಯದ ಕಾರ್ಯಸೂಚಿಯನ್ನು ಕಟ್ಟಲಿದೆ. ಒಂದು ವೇಳೆ ನಿರೀಕ್ಷಿತ ಸ್ಥಾನ ಗಳಿಸಿ ಕೇಂದ್ರದಲ್ಲಿ ನಿರ್ಣಾಯಕ ಮೈತ್ರಿಯ ಭಾಗವಾದರೆ, ಆಗ ದೇವೇಗೌಡರು ಮತ್ತು ಕುಮಾರಸ್ವಾಮಿ ರಾಜ್ಯದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಮತ್ತು ಪಕ್ಷವನ್ನು ಭದ್ರಪಡಿಸಲು ಹೊಸ ತಂತ್ರಗಾರಿಕೆಯನ್ನು ಜಾರಿಗೆ ತರಲಿದ್ದಾರೆ. ಪ್ರಮುಖವಾಗಿ ಕುಮಾರಸ್ವಾಮಿ ಪಕ್ಷದ ನೆಲೆ ವಿಸ್ತರಣೆಯ ಯಂತ್ರವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಬರಲಿರುವ ಜಿಲ್ಲಾ ಪಂಚಾಯ್ತಿ- ತಾಲೂಕು ಪಂಚಾಯ್ತಿ ಚುನಾವಣೆಗಳಿಗೆ ಹೊಸ ತಂತ್ರ ಹೆಣೆಯಲಿದ್ದಾರೆ. ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಸಡಿಲಗೊಳ್ಳುತ್ತಿರುವ ಪಕ್ಷದ ಬುನಾದಿಯನ್ನು ಇನ್ನಷ್ಟು ಸುಸ್ಥಿರಗೊಳಿಸಲು ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ತಂತ್ರಗಾರಿಕೆ ಹೂಡಲಿದ್ದಾರೆ. ಹಾಗಾಗಿ ಜೆಡಿಎಸ್ ಕೂಡ ಮೇ 23ರ ಬಳಿಕ ಈಗಿನಂತೆ ಇರಲಾರದು. ಅದರಲ್ಲೂ ಕೇಂದ್ರದಲ್ಲಿ ಅಧಿಕಾರದ ಪಾಲುದಾರಿಕೆ ಅಥವಾ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ಕರಂತೂ ಜೆಡಿಎಸ್ ಸಂಪೂರ್ಣ ಚಹರೆಯೇ ಬದಲಾಗಿಹೋಗಲಿದೆ.
ಒಟ್ಟಾರೆ ಮೈತ್ರಿ ಸರ್ಕಾರದ ಭವಿಷ್ಯದ ಕಾರಣಕ್ಕಷ್ಟೇ ಅಲ್ಲದೆ, ಮಿತ್ರ ಪಕ್ಷಗಳ ಭವಿಷ್ಯ ಮತ್ತು ‘ಲಡ್ಡು ಬಂದು ಬಾಯಿಗೆ ಬೀಳುತ್ತೆ’ ಎಂದು ಕಾದಿರುವ ಯಡಿಯೂರಪ್ಪ ಹಾಗೂ ಬಿಜೆಪಿ ಪಾಲಿಗೂ ಈ ಮೇ 23ರ ಫಲಿತಾಂಶ ನಿರ್ಣಾಯಕ. ಆ ಫಲಿತಾಂಶ ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಎಂಬುದನ್ನು ಅಂದಿನ ಸ್ಥಾನ ಗಳಿಕೆಯ ಲೆಕ್ಕವಷ್ಟೇ ಅಲ್ಲದೆ, ಆ ಬಳಿಕದ ಒಂದೆರಡು ವಾರಗಳ ರಾಜಕೀಯ ಬೆಳವಣಿಗೆಗಳೂ ನಿರ್ಧರಿಸಲಿವೆ ಎಂಬುದು ವಿಶೇಷ. ಸಿಹಿ ಇರಲಿ, ಕಹಿ ಇರಲಿ ಮೂರೂ ಪ್ರಮುಖ ಪಕ್ಷಗಳ ಚಹರೆ ಬದಲಾಗುವುದಂತೂ ನಿಶ್ಚಿತ.