ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಚಾರಣೆ ನಡೆಸುತ್ತಿದ್ದ ತ್ರಿಸದಸ್ಯ ನ್ಯಾಯಾಧೀಶರ ಆಂತರಿಕ ಸಮಿತಿ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ನ್ಯಾ ಎಸ್.ಎ.ಬೋಬ್ಡೆಯವರ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಸಿದ ಮೂವರು ಸದಸ್ಯರ ಆಂತರಿಕ ಸಮಿತಿಯಲ್ಲಿ ನ್ಯಾ.ಇಂದು ಮಲ್ಹೋತ್ರ ಮತ್ತು ನ್ಯಾ.ಇಂದಿರಾ ಬ್ಯಾನರ್ಜಿ ಅವರುಗಳು ಸದಸ್ಯರಾಗಿದ್ದರು. ಈ ವಿಚಾರಣಾ ಸಮಿತಿಯು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಮಾಜಿ ಸುಪ್ರೀಮ್ ಕೋರ್ಟ್ ಉದ್ಯೋಗಿಯ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಮಿತಿ ನೀಡಿರುವ ವರದಿಯನ್ನು “ವರದಿ ಪಡೆಯಲು ಅರ್ಹರಾಗಿರುವ ಸರತಿಯಲ್ಲಿರುವ ಹಿರಿಯ ನ್ಯಾಯಾಧೀಶರಿಗೆ” ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಸೆಕ್ರೇಟರಿ ಜನರಲ್ ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ. ಅಲ್ಲದೆ ಈ ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗಿದೆ.
(ಏಪ್ರಿಲ್ 23 ರಿಂದ ಮೇ 6ರ ವರೆಗೆ ಜರುಗಿರುವ ಘಟನೆಗಳ ಮುಖ್ಯಾಂಶಗಳು):
-
ಏಪ್ರಿಲ್ 23: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಜಿ ಕಿರಿಯ ಕೋರ್ಟ್ ಸಹಾಯಕಿ ಸಲ್ಲಿಸಿದ್ದ ಉದ್ಯೋಗಸ್ಥಳದಲ್ಲಿನ ಲೈಂಗಿಕ ಕಿರುಕುಳದ ದೂರಿನ ವಿಚಾರಣೆಗೆಂದು ನ್ಯಾಯಮೂರ್ತಿಗಳಾದ ಬಾಬ್ಡೆ, ರಮಣ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು
-
ಏಪ್ರಿಲ್ 24: ದೂರುದಾರ ಮಹಿಳೆ ಈ ಸಮಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಳು
-
ಏಪ್ರಿಲ್ 25: ನ್ಯಾ ಎನ್.ವಿ.ರಮಣ ಸಮಿತಿಯಿಂದ ಹಿಂದೆ ಸರಿದರು; ಅವರ ಬದಲಿಗೆ ನ್ಯಾ ಇಂದು ಮಲ್ಹೋತ್ರಾ ಅವರನ್ನು ಸೇರ್ಪಡೆಗೊಳಿಸಲಾಯಿತು
-
ಏಪ್ರಿಲ್ 26: ಆಂತರಿಕ ಸಮಿತಿಯ ಎದುರು ವಿಚಾರಣೆಗೆಂದು ದೂರುದಾರ ಮಹಿಳೆಯ ಹಾಜರು
-
ಏಪ್ರಿಲ್ 30: ಇನ್ನು ಮುಂದೆ ಆಂತರಿಕ ಸಮಿತಿಯ ವಿಚಾರಣೆಯಲ್ಲಿ ಭಾಗವಹಿಸದಿರಲು ದೂರದಾರ ಮಹಿಳೆಯ ತೀರ್ಮಾನ
-
ಮೇ 1: ಕಾನೂನು ಪಂಡಿತರ ಪ್ರತಿರೋಧದ ನಡುವೆಯೂ ದೂರುದಾರರಿಲ್ಲದೆ ಸಮಿತಿಯ ವಿಚಾರಣೆ ಮುಂದುವರಿದು, ಭಾರತದ ಮುಖ್ಯ ನ್ಯಾಯಮೂರ್ತಿ ಗೊಗಯ್ ಸಮಿತಿಯ ಮುಂದೆ ವಿಚಾರಣೆಗೆ ಹಾಜರು
-
ಮೇ 6: ಆಂತರಿಕ ಸಮಿತಿಯಿಂದ ವರದಿ ಸಲ್ಲಿಕೆ
2019ರ ಏಪ್ರಿಲ್ 19ರಂದು ಸುಪ್ರೀಮ್ ಕೋರ್ಟಿನ ಮಾಜಿ ಕಿರಿಯ ಸಹಾಯಕಿಯೊಬ್ಬರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು.
“ಭಾರತದ ಸರ್ವೋಚ್ಛ ನ್ಯಾಯಾಲಯದ ಮಾಜಿ ಉದ್ಯೋಗಿಯೊಬ್ಬರು 19.4.2019ರಂದು ನೀಡಿರುವ ದೂರಿನಲ್ಲಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದಾಗಿ ಆಂತರಿಕ ಸಮಿತಿಗೆ ಕಂಡುಬಂದಿದೆ. Indira Jaisingh v Supreme Court of India Anr. (2003) 5 SCC 494 ಪ್ರಕರಣದಲ್ಲಿ, ಆಂತರಿಕ ಪ್ರಕ್ರಿಯೆಯ ಭಾಗವಾಗಿ ರಚಿಸಲಾದ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದು ನೀಡಲಾಗಿರುವ ತೀರ್ಪನ್ನು ದಯವಿಟ್ಟು ಗಮನಿಸುವುದು.” – ಸೆಕ್ರೇಟರಿ ಜನರಲ್, ಭಾರತದ ಸರ್ವೋಚ್ಛ ನ್ಯಾಯಾಲಯ (2019 ಮೇ 6ರಂದು ನೀಡಲಾಗಿರುವ ಹೇಳಿಕೆ