ಪ್ರಧಾನಿ ನರೇಂದ್ರ ಮೋದಿ ಎದುರು ಸ್ಪರ್ಧಿಸಲು ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದ ನಂತರದಲ್ಲಿ ಇಂದು ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತನ್ನ ನಾಮಪತ್ರವನ್ನು ಮೇ 1 ರಂದು ಚುನಾವಣಾ ಆಯೋಗ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೆಸರಾಂತ ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಯಾದವ್ ಸುಪ್ರೀಂ ಕೋರ್ಟಿನಲ್ಲಿ ಮಾಜಿ ಯೋಧನ ಪರ ವಕಾಲತ್ತು ವಹಿಸಿದ್ದಾರೆ.
ಭ್ರಷ್ಟಾಚಾರ ಅಥವಾ ಪ್ರಭುತ್ವಕ್ಕೆ ಅವಿಧೇಯವಾಗಿ ವರ್ತಿಸಿದ ಆಧಾರದಲ್ಲಿ ಸರ್ಕಾರದಿಂದ ವಜಾಗೊಂಡ ಉದ್ಯೋಗಿಗಳು ಐದು ವರ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ಚುನಾವಣಾ ಆಯೋಗವು ತೇಜ್ ಬಹದ್ದೂರ್ ಅವರಿಗೆ ನೀಡಿದ್ದ ನಾಮಪತ್ರ ವಜಾ ನೋಟೀಸಿನಲ್ಲಿ ತಿಳಿಸಿತ್ತು.
ತಾವು ಸಲ್ಲಿಸಿದ್ದ ನಾಮತ್ರದಲ್ಲಿ ಯಾದವ್ ತಾವು ಸೇನೆಯಿಂದ ವಜಾಗೊಂಡಿದ್ದನ್ನು ಉಲ್ಲೇಖಿಸಿದ್ದರು. ಈ ಕುರಿತು ಬಿಎಸ್ಎಫ್ನಿಂದ ನೊ-ಆಬ್ಜೆಕ್ಷನ್ ಪ್ರಮಾಣ ಪತ್ರ ತರಲು ಯಾದವ್ ಗೆ ಆಯೋಗ ಸೂಚಿಸಿತ್ತು.
ಸೂಕ್ತ ದಾಖಲಾತಿಗಳನ್ನು ನೀಡಲಿಲ್ಲ ಎಂದು ಆರೋಪಿಸಿ ಆಯೋಗವು ತೇಜ್ ಬಹದ್ದೂರ್ ಉಮೇದುವಾರಿಕೆಯನ್ನು ರದ್ದುಪಡಿಸಿತ್ತು.
ಸಕಾರಣವಿಲ್ಲದೇ ತನ್ನ ನಾಮಪತ್ರ ರದ್ದುಪಡಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದ ಯಾದವ್, ”ನೆನ್ನೆ (ಮಂಗಳವಾರ) ಸಂಜೆ 6.15ಕ್ಕೆ ನನಗೆ ನೋಟೀಸ್ ನೀಡಲಾಗಿತ್ತು, ಅದಕ್ಕೆ ಬೇಕಾದ ಸಾಕ್ಷಾಧಾರವನ್ನು ನಾನು ಸಲ್ಲಿಸಿದ್ದೆ. ಆದರೂ ನನ್ನ ನಾಮಪತ್ರ ರದ್ದುಪಡಿಸಲಾಗಿದೆ” ಎಂದು ಮೇ 1 ರಂದು ತಿಳಿಸಿದ್ದರು. ಈ ಕುರಿತು ಆಯೋಗದ ತೀರ್ಮಾನದ ವಿರುದ್ಧ ಸುಪ್ರೀ ಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದರು.
ವಾರಣಾಸಿ ಕ್ಷೇತ್ರದಲ್ಲಿ ಮೇ 19ಕ್ಕೆ ಮತದಾನ ನಡೆಯಲಿದೆ.