ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಅವರು ಆಡಿದ ಮಾತು ಮತ್ತು ಅದಕ್ಕಾಗಿ ಅವರು ಬಳಿಸಿದ ಭಾಷೆ ಇದೀಗ ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ಆದರೆ, ಮೋದಿಯವರಿಗೆ ಇದು ಹೊಸತಲ್ಲ. ಅವರು ಯಾವಾಗೆಲ್ಲಾ ಪರಿಸ್ಥಿತಿ ತಮ್ಮ ಕೈಮೀರಿ ಹೋಗುತ್ತಿದೆ ಎನಿಸುತ್ತದೆಯೋ ಆವಾಗೆಲ್ಲಾ ಎದುರಾಳಿಗಳ ವಿರುದ್ಧ ಇಂತಹದ್ದೇ ಕೀಳು ಮಟ್ಟದ ದಾಳಿಗೆ ಇಳಿದುಬಿಡುತ್ತಾರೆ. ಅದಕ್ಕೆ ಸೋನಿಯಾ ಗಾಂಧಿ ವಿರುದ್ಧದ ಅವರ ‘ವಿಧವೆ’ ಹೇಳಿಕೆ ಇರಬಹುದು, ರಾಹುಲ್ ವಿರುದ್ಧದ ಡಿಸ್ಲೆಕ್ಸಿಯಾ ಟೀಕೆ ಇರಬಹುದು, ಮಾಯಾವತಿ, ಮಮತಾ ಬ್ಯಾನರ್ಜಿ ವಿರುದ್ಧದ ಮಾತುಗಳಿರಬಹುದು, ಪ್ರಿಯಾಂಕಾ ಗಾಂಧಿ ವಿರುದ್ಧದ ಹೇಳಿಕೆ ಇರಬಹುದು,.. ಹೀಗೆ ಸಾಲು ಸಾಲು ಉದಾಹರಣೆಗಳಿವೆ.
ಈ ಬಾರಿಯೂ ಅದೇ ಆತಂಕದಲ್ಲಿ ಅವರ ಮಾತುಗಳು ಎಲ್ಲೆ ಮೀರಿವೆ. ರಾಜಕಾರಣ ಎಷ್ಟೇ ಕೆಟ್ಟಿದೆ ಎಂದರೂ, ದೇಶದಲ್ಲಿ ಕನಿಷ್ಠ ಉನ್ನತ ಸ್ಥಾನದಲ್ಲಿರುವ ನಾಯಕರು ತಮ್ಮ ನಡೆ ಮತ್ತು ನುಡಿಯಲ್ಲಿ ಕನಿಷ್ಠ ಸಭ್ಯತೆ ಮತ್ತು ಮಾನವೀಯತೆಯನ್ನು ತೋರುಗಾಣಿಕೆಗಾದರೂ ಪಾಲಿಸುವ ಇತಿಹಾಸ ಈ ದೇಶದ ಪರಂಪರೆ. ಆದರೆ, ಸ್ವತಃ ದೇಶದ ಗೌರವ ಹೆಚ್ಚಿಸಿದ, ಪರಂಪರೆಯನ್ನು ಕಾಯ್ದ, ಸಂಸ್ಕೃತಿಯನ್ನು ಜತನ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿರುವ ನಾಯಕರೊಬ್ಬರ ಬಾಯಲ್ಲಿ, ಭಯೋತ್ಪಾದಕರ ಸಂಚಿಗೆ ಬಲಿಯಾದ ಪ್ರಧಾನಿಯೊಬ್ಬರನ್ನು “ನಂಬರ್ ಒನ್ ಭ್ರಷ್ಟಾಚಾರಿ ಎನಿಸಿಕೊಂಡು ಜೀವ ಬಿಟ್ಟರು” ಎನ್ನುವ ಮಾತು ಬರುವುದು ತೀರಾ ನಾಚಿಕೆಗೇಡಿನ ಪರಮಾವಧಿ.
ದೇಶದ ಪ್ರಧಾನಿಯಾಗಿ ಅವರ ಕೊಡುಗೆ ಏನು? ಅವರ ರಾಜಕೀಯದ ಘನತೆ ಯಾವುದು? ದೇಶದ ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಒಟ್ಟಾರೆ ಏಳಿಗೆಗೆ ಅ ಯುವ ನಾಯಕನ ಕಾಣಿಕೆ ಏನು? ಎಂಬುದೆಲ್ಲಾ ಮರೆತರೂ, ಈಗಿನ ತನ್ನ ಟೀಕೆಗಳಿಗೆ ಉತ್ತರ ಕೊಡಲು ಜೀವಂತವಾಗಿರದ, ಮೃತ ನಾಯಕರೊಬ್ಬರಿಗೆ ಇಷ್ಟು ಕೀಳು ಭಾಷೆ ಪ್ರಯೋಗಿಸುವುದು; ಅದರಲ್ಲೂ ಪ್ರಧಾನಿ ಹುದ್ದೆಯಲ್ಲಿ ಕೂತು ಆ ಸ್ಥಾನದ ಪ್ರಬುದ್ಧತೆ, ಘನತೆಯನ್ನೆಲ್ಲಾ ಮಣ್ಣುಪಾಲು ಮಾಡಿ ಮಾತನಾಡುವುದು ತರವೇ ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ.
ಆದರೆ, ಮೋದಿ ಅವರು ಈ ಮಟ್ಟಕ್ಕೆ ಕುಸಿದ ಅಸಹಾಯಕರಂತೆ ಕಂಡಕಂಡವರ ಮೇಲೆಲ್ಲಾ ಗೂಬೆ ಕೂರಿಸುತ್ತಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಯೂ ಜೊತೆಯಲ್ಲೇ ಕೇಳಿಬರುತ್ತದೆ. ಹೌದು, ಪ್ರಧಾನಿ ಮೋದಿಯವರ ಅಂತಹ ಹಾದಿತಪ್ಪಿದ ಮಾತುಗಳಿಗೆ ಬಲವಾದ ಕಾರಣವಿಲ್ಲದಿಲ್ಲ.
ಮೊದಲನೆಯದಾಗಿ, ಲೋಕಸಭಾ ಚುನಾವಣೆಯ ಮತದಾನದ ಮೊದಲ ಹಂತದಿಂದಲೇ ಆರಂಭವಾದ ಬಿಜೆಪಿ ಸ್ಥಾನ ಕುಸಿತ ಪ್ರಮಾಣ, ಹಂತಹಂತವಾಗಿ ಹೆಚ್ಚುತ್ತಲೇ ಸಾಗಿದೆ. ಎರಡು ಮತ್ತು ಮೂರನೇ ಹಂತದ ಮತದಾನದ ಬಳಿಕ ಕೆಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚುನಾವಣಾ ಸಮೀಕ್ಷಾ ಸಂಸ್ಥೆಗಳು ಹಾಗೂ ಮಾಧ್ಯಮ ಸಮೀಕ್ಷೆಗಳು ಬಿಜೆಪಿ ಕಳೆದ ಬಾರಿಯ ಅಭೂತಪೂರ್ವ ಜಯಭೇರಿಯ ಮರುಕಳಿಕೆಯ ಬದಲಾಗಿ ಈ ಬಾರಿ ಭಾರೀ ನಷ್ಟ ಅನುಭವಿಸಲಿದೆ. ಅದರಲ್ಲೂ ಸರ್ಕಾರ ರಚನೆಗೆ ಅಗತ್ಯ ಸರಳ ಬಹುಮತ ಪಡೆಯಲು ಬೇಕಾದ 272 ಸ್ಥಾನ ಗಳಿಸುವುದು ಕೂಡ ಅನುಮಾನಾಸ್ಪದ. ಪಕ್ಷದ ವೈಯಕ್ತಿಕ ಗಳಿಕೆ ಇನ್ನೂ ಕಡಿಮೆಯಾಗಲಿದ್ದು, ಅದರ ಮಿತ್ರಪಕ್ಷಗಳ ನೆರವಿನಿಂದ ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ 272ರ ಸಮೀಪಕ್ಕೆ ಬರಬಹುದು ಎಂದು ಬಹುತೇಕ ಸಮೀಕ್ಷೆಗಳು ಅಂದಾಜಿಸಿವೆ.
ಆಗಲೇ ಮೋದಿ ಮತ್ತು ಅವರ ಬಿಜೆಪಿ ಪಕ್ಷದ ನಾಯಕರು ಗಲಿಬಿಲಿಗೊಂಡಿದ್ದರು. ಹಾಗಾಗಿ, ಆವರೆಗೆ ಪುಲ್ವಾಮಾ, ಬಾಲಾಕೋಟ್ ದಾಳಿ, ಸೇನಾಪಡೆ, ದೇಶದ ಸುರಕ್ಷತೆ, ಪಾಕಿಸ್ತಾನ, ಬಲಿಷ್ಠ ಭಾರತದಂತಹ ಘೋಷಣೆ ಮತ್ತು ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದ ಪ್ರಧಾನಿ ಮೋದಿ ಮತ್ತು ಇತರ ಬಿಜೆಪಿ ನಾಯಕರು, ಮೂರನೇ ಸುತ್ತಿನ ಮತದಾನದ ಬಳಿಕ ತಮಗೆ ಮತ ತಂದುಕೊಡುತ್ತವೆ ಎಂದುಕೊಂಡಿದ್ದ ಆ ಸಂಗತಿಗಳು ನಿರೀಕ್ಷಿತ ಫಲ ಕೊಡಲಾರವು ಎಂಬುದನ್ನು ಲೆಕ್ಕಹಾಕಿ ಪ್ರಚಾರದ ವರಸೆ ಬದಲಾಯಿಸಿದರು. ಮತ್ತೆ ಧರ್ಮ, ಕೋಮು ವಿಷಯಗಳು ಪ್ರಚಾರದ ಮುಂಚೂಣಿಗೆ ಬಂದಿದ್ದವು. ರಾಹುಲ್ ಗಾಂಧಿ ಕೇರಳದ ವೈಯನಾಡಿನಲ್ಲಿ ಕಣಕ್ಕಿಳಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧದ ತಮ್ಮ ಹಳೆಯ ಅಸ್ತ್ರ ಪ್ರಯೋಗಿಸತೊಡಗಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಂತೂ ಹಿಂದುತ್ವವನ್ನು ಒಪ್ಪಿಕೊಳ್ಳದವರಿಗೆ ಭಾರತದಲ್ಲಿ ಜಾಗವಿಲ್ಲ ಎಂಬ ಮಾತನಾಡಿ, ಜೈನರು, ಬೌದ್ಧರನ್ನು ಹೊರತುಪಡಿಸಿ ಉಳಿದೆಲ್ಲ ವಲಸಿಗರನ್ನು ಹೊರಗಟ್ಟುತ್ತೇವೆ ಎಂದರು.
ಅಷ್ಟರಲ್ಲಿ ನಾಲ್ಕನೇ ಹಂತದ ಮತದಾನವೂ ಮುಗಿದು, ಪ್ರಮುಖವಾಗಿ ಬಿಜೆಪಿ ಪ್ರಾಬಲ್ಯದ ಹಿಂದಿ ಪ್ರಾಬಲ್ಯದ ರಾಜ್ಯಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಮುಂತಾದ ಕಡೆ ಈ ಬಾರಿ ಬಿಜೆಪಿ ಸ್ಥಾನ ಗಳಿಕೆ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಸಮೀಕ್ಷೆಗಳು ಹೇಳಿದವು. ಅದರಿಂದ ಮತ್ತಷ್ಟು ಧೃತಿಗೆಟ್ಟಿರುವ ಮೋದಿ ಮತ್ತು ಟೀಂ, ಇದೀಗ ಕೀಳು ಮಟ್ಟದ ಪ್ರಚಾರದ ವರಸೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಹಾಗಾಗಿಯೇ ಕಳೆದ ವಾರ ಪಶ್ಚಿಮಬಂಗಾಳದ ಪ್ರಚಾರ ಸಭೆಯಲ್ಲಿ, ನಲವತ್ತು ಮಂದಿ ತೃಣಮೂಲ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ, ಮೋದಿಯವರು ಮಮತಾ ಬ್ಯಾನರ್ಜಿ ನೇತೃತ್ವದ ಅಲ್ಲಿನ ರಾಜ್ಯ ಸರ್ಕಾರವನ್ನೇ ಅಸಂವಿಧಾನಿಕ ದಾರಿಯಲ್ಲಿ ಉರುಳಿಸುವ ಸಂಚು ಮಾಡಿರುವ ಸುಳಿವು ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬೆಳವಣಿಗೆ. ಎಲ್ಲ ರಾಜ್ಯ ಮತ್ತು ಪಕ್ಷಗಳನ್ನು ಸಂವಿಧಾನದ ಪರಿಮಿತಿಯಲ್ಲಿ ಸಮಾನವಾಗಿ ಕಾಣಬೇಕಾದ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯೇ ಒಂದು ರಾಜ್ಯದ ಸರ್ಕಾರವನ್ನು ಅಸಂವಿಧಾನಿಕ ರೀತಿಯಲ್ಲಿ ಉರುಳಿಸುವ ಬೆದರಿಕೆ ಒಡ್ಡುವುದು ತೀರಾ ಹೀನಾಯ ರಾಜಕೀಯ ವರಸೆ.
ಆ ಬಳಿಕ, ಇದೀಗ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಮತ್ತೆ ಅದೇ ಕೀಳು ವರಸೆ ಪ್ರದರ್ಶಿಸಿದ್ದಾರೆ. ಮಾಜಿ ಪ್ರಧಾನಿಯೊಬ್ಬರಿಗೆ ಹಾಲಿ ಪ್ರಧಾನಿ ಆಡುವ ಮಾತು ಇದಲ್ಲ ಮತ್ತು ಅದರಲ್ಲೂ ಈಗ ಜೀವಂತವಿದ್ದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅವಕಾಶವಿರದ ಮೃತ ನಾಯಕನೊಬ್ಬನ ವಿಷಯದಲ್ಲಿ ನಾಗರಿಕ ಸಮಾಜದ ಕನಿಷ್ಟ ಸಭ್ಯತೆಯನ್ನೂ ಮೀರಿ ಮಾತನಾಡುವುದು ತರವಲ್ಲ ಎಂಬ ಆಕ್ರೋಶಕ್ಕೆ ಮೋದಿಯವರ ಹೇಳಿಕೆ ಇಂಬು ನೀಡಿದೆ.
ಕೇವಲ ಅಧಿಕಾರ ಉಳಿಸಿಕೊಳ್ಳುವ ಏಕೈಕ ಹಪಾಹಪಿಗೆ ಬಿದ್ದು ಈ ಮಟ್ಟದ ಕ್ಷುಲ್ಲಕತನಕ್ಕೆ ಬಿದ್ದುಬಿಟ್ಟರೆ ಉನ್ನತ ಸ್ಥಾನದಲ್ಲಿರುವ ಈ ನಾಯಕರು? ಅದೂ ‘ವಿಶ್ವಗುರು’ ಎಂದು ತಮ್ಮ ಭಕ್ತರಿಂದ ಕರೆಸಿಕೊಳ್ಳುತ್ತಿದ್ದವರ ಆಂತರ್ಯ ಇಷ್ಟೊಂದು ಅಧಃಪತನ ಕಂಡಿದೆಯೇ? ಎಂಬ ಆತಂಕದ ಪ್ರಶ್ನೆಗಳ ಜೊತೆಗೆ, ಕೇವಲ ಸ್ಥಾನ ಗಳಿಕೆ, ಅಧಿಕಾರದ ಲಾಲಸೆಯೇ ಅಂತಹ ಮಾತುಗಳಿಗೆ ಕಾರಣವಾ ? ಅಥವಾ ಇತರ ವಿಷಯಗಳೇನಾದರೂ ಇವೆಯಾ ಎಂಬ ಅನುಮಾಗಳೂ ಹುಟ್ಟಿವೆ.
ಅಂತಹ ಬೇರೆ ಕಾರಣಗಳೇನಿರಬಹುದು ಎಂಬುದನ್ನು ವಿಶ್ಲೇಷಿಸುವುದಾದರೆ; ಪ್ರಮುಖವಾಗಿ ಈಗಾಗಲೇ ನ್ಯಾಯಾಲಯದ ಕಟಕಟೆಯಲ್ಲಿರುವ ರಾಫೇಲ್ ಒಪ್ಪಂದದ ವಿಷಯದಲ್ಲಿ ನಾಳೆ ಎದುರಾಗಬಹುದಾದ ಸಂಕಷ್ಟಗಳು ಆ ನಾಯಕರನ್ನು ವಿಹ್ವಲಗೊಳಿಸಿರಬಹುದು ಎಂಬ ಅಂಶವನ್ನು ತಳ್ಳಿಹಾಕಲಾಗದು. ನ್ಯಾಯಾಲಯದಲ್ಲಿ ಪ್ರಕರಣದ ದಿನೇ ದಿನೇ ಹೊಸ ಹೊಸ ತಿರುವು ಪಡೆಯುತ್ತಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂಬುದ ಪ್ರತಿಪಕ್ಷಗಳು ಹೇಳುತ್ತಿವೆ. ಅಲ್ಲದೆ, ತನ್ನಿಂದ ತಪ್ಪಾಗಿಲ್ಲ ಎನ್ನುವ ಮೋದಿ ಮತ್ತು ಅವರ ಸರ್ಕಾರ, ತನಿಖೆ ನಡೆಯಲಿ, ಸತ್ಯ ಹೊರಬರಲಿ ಎಂದು ಹೇಳುವ ಬದಲು, ವಿಚಾರಣೆಯನ್ನೇ ನಡೆಸಬಾರದು ಎಂದು ಮೇಲಿಂದ ಮೇಲೆ ನ್ಯಾಯಾಲಯದ ಮುಂದೆ ಅಂಗಾಲಾಚುತ್ತಿದ್ದಾರೆ. ಹಾಗಾಗಿ ಪ್ರಕರಣದ ವಿಚಾರಣೆ ಮುಂದುವರಿದರೆ ನಾಳೆ ಕುಣಿಕೆ ಬಿಗಿಯಾಗಬಹುದು ಎಂಬ ಆತಂಕ ಮತ್ತು ಭೀತಿ ಇಂತಹ ಕೀಳು ಮಾತುಗಳನ್ನು ಹೊರಡಿಸುತ್ತಿರಬಹುದೆ ಎಂಬ ಅನುಮಾನ ಹೆಡೆಎತ್ತಿದೆ.
ಜೊತೆಗೆ, ಮೋದಿ ಮತ್ತು ಶಾ ಜೋಡಿ ಪ್ರತಿಪಕ್ಷಗಳ ಹಾಲಿ ನಾಯಕರ ವಿರುದ್ಧವಷ್ಟೇ ಅಲ್ಲದೆ, ಹಿಂದೆ ಆಗಿಹೋದ ವ್ಯಕ್ತಿಗಳ ವಿರುದ್ಧವೂ ಹೀನಾಯ ವರಸೆಯಲ್ಲಿ ಮಾತನಾಡುವ ಮೂಲಕ ಸತ್ತವರ ಗೋರಿ ಬಗೆಯುತ್ತಿರುವುದರ ಹಿಂದೆ, ತಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಒತ್ತಡ ಕೆಲಸ ಮಾಡುತ್ತಿದೆ. ಪ್ರಮುಖವಾಗಿ ಈ ಬಾರಿ ನಿಚ್ಚಳ ಬಹುಮತ ಬರದೇ ಇದ್ದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಅಮಿತ್ ಶಾ ಹಾಗೂ ಪ್ರಧಾನಿ ಹುದ್ದೆಯಿಂದ ಮೋದಿಯನ್ನು ಕೆಳಗಿಳಿಸಲು ಬಿಜೆಪಿಯ ರಿಮೋಟ್ ಕಂಟ್ರೋಲ್ ಆರ್ ಎಸ್ ಎಸ್ ಆಲೋಚಿಸಿದೆ.
ಈಗಾಗಲೇ ಆರ್ ಎಸ್ ಎಸ್ ವಲಯದಲ್ಲಿ ಆ ಬಗ್ಗೆ ಚರ್ಚೆಗಳು ನಡೆದು ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ, ಬಿಜೆಪಿಯ ವೈಯಕ್ತಿಕ ಸ್ಥಾನ ಗಳಿಕೆ ಕುಸಿದಲ್ಲಿ ಈಗಿರುವ ಎನ್ ಡಿಎ ಮೈತ್ರಿ ಪಕ್ಷಗಳಲ್ಲೂ ಕೆಲವು ಹಗ್ಗ ಹರಿದುಕೊಂಡು ಹೊರ ಹೋಗಬಹುದು. ಅಂತಹ ಸಂದರ್ಭ ಉದ್ಭವಿಸಿದಲ್ಲಿ ಮೋದಿಯವರ ಬಗ್ಗೆ ಒಳಗೊಳಗೆ ಅಸಮಾಧಾನ, ಅತೃಪ್ತಿ ಹೊಂದಿರುವ ಅಂತಹ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಲು ಮೋದಿ ಬದಲಾಗಿ ಬೇರೊಬ್ಬರನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಪ್ರಮುಖವಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳುವ ಮತ್ತು ಆ ಮೂಲಕ ತಮ್ಮ ವಿರುದ್ಧದ ನ್ಯಾಯಾಲಯದಲ್ಲಿರುವ ರಾಫೇಲ್ ಪ್ರಕರಣದ ಉರುಳಿನಿಂದ ಪಾರಾಗುವ ಜರೂರು ಈಗ ಮೋದಿ ಮತ್ತು ಶಾ ಜೋಡಿಯ ಆದ್ಯತೆಯಾಗಿದ್ದು, ಆ ಹಿನ್ನೆಲೆಯಲ್ಲಿ ಇದೀಗ ಧೃತಿಗೆಟ್ಟು ತೀರಾ ಎಲ್ಲೆ ಮೀರಿದ ಪ್ರಚಾರ ವರಸೆಗೆ ಜಾರಿದ್ದಾರೆ. ಇದು ಅವರ ಪಾಲಿಗೆ ಅಳಿವು- ಉಳಿವಿನ ಪ್ರಶ್ನೆಯಾಗಿದೆ. ಪಕ್ಷ, ಹಿಂದುತ್ವ, ಹಿಂದೂ ರಾಷ್ಟ್ರ ಎಂಬೆಲ್ಲಾ ಸಂಗತಿಗಳು ಸದ್ಯಕ್ಕೆ ಬದಿಗೆ ಸರಿಸಿ, ತಮ್ಮ ಅಸ್ತಿತ್ವಕ್ಕೇ ಕುತ್ತು ತಂದಿರುವ ಪ್ರತಿಪಕ್ಷ ನಾಯಕರ ವಿರುದ್ಧ ವೈಯಕ್ತಿಕ ಪ್ರಹಾರಕ್ಕೆ ಮುಂದಾಗಿದ್ದಾರೆ. ಅಂತಹ ಆತಂಕದ ಹಿನ್ನೆಲೆಯಲ್ಲೇ ಈ ಎಲ್ಲಾ ಹತಾಶ ಹೇಳಿಕೆಗಳು ಹೊರಬರುತ್ತಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಅದು ನಿಜವೇ ಆದಲ್ಲಿ, ಇನ್ನುಳಿದ ಎರಡು ಹಂತದ ಮತದಾನ ಮುಗಿಯುವ ಹೊತ್ತಿಗೆ ಇನ್ನಷ್ಟು ಹೇಯ ಟೀಕೆಗಳಿಗೆ ದೇಶದ ಜನ ಕಿವಿಯಾಗಬೇಕಾಗಬಹುದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣಾ ಘನತೆ ಕಾಯುವ ಸಂಸ್ಥೆಗಳು ಕೂಡ ಬಾಯಿಗೆ ಬೀಗ ಹಾಕಿಕೊಂಡು ಕೂತಿರುವ ಹೊತ್ತಲ್ಲಿ, ಅಸಹಾಯಕ ಪ್ರಜೆಗಳಿಗೆ ಬೇರೆ ಆಯ್ಕೆ ಕೂಡ ಉಳಿದಿಲ್ಲ.