ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಭಾರತಿ ಘೋಶ್ ಟಿಎಂಸಿಯ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದ್ದು, ‘ಉತ್ತರ ಪ್ರದೇಶದಿಂದ 1000 ಜನರನ್ನು ಕರೆಸಿ ನಿಮ್ಮನ್ನೆಲ್ಲಾ ಮನೆಗಳಿಂದ ಹೊರಗೆಳೆದು ನಾಯಿಗೆ ಹೊಡೆಯುವಂತೆ ಹೊಡೆಯುತ್ತೇನೆ” ಎಂದು ಧಮಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಘಟಾಲ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಆಗಿರುವ ಭಾರತಿ ಘೋಶ್ 2017ಕ್ಕೂ ಮೊದಲು ಐಪಿಎಸ್ ಅಧಿಕಾರಿಯಾಗಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹತ್ತಿರವಿದ್ದರು ಎನ್ನಲಾಗಿತ್ತು. ಆದರೆ 2017ರ ಡಿಸೆಂಬರ್ 26ರಂದು ಅವರನ್ನು ತಾವಿದ್ದ ಜಿಲ್ಲೆಯಿಂದ ಹೊರಕ್ಕೆ ವರ್ಗಾವಣೆ ಮಾಡಿದ ಎರಡು ದಿನಗಳಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಕಣ್ಮರೆಯಾಗಿದ್ದರು. ಅವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಬಿಜೆಪಿ ಸೇರಿದ ನಂತರ ಎಂದು ಎನ್ ಡಿ ಟೀವಿ ವರದಿ ಮಾಡಿದೆ.
ಘಾಟಾಲ್ ಕ್ಷೇತ್ರದ ಆನಂದಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಇಬ್ಬರು ಟಿಎಂಸಿ ಕಾರ್ಯಕರ್ತರಿಬ್ಬರು ಕುಳಿತಿದ್ದ ಕಡೆಯಲ್ಲಿ ಬಂದು ಅವರಿಗೆ “ನನಗೆ ಓಟು ಕೊಡಬೇಡಿ ಎನ್ನುತ್ತಿದ್ದೀರಾ? ನೋಡ್ತಾ ಇರಿ, 1000 ಜನರನ್ನು ಉತ್ತರ ಪ್ರದೇಶದಿಂದ ಕರೆಸಿ ನಿಮ್ಮನ್ನೆಲ್ಲಾ ಮನೆಯಿಂದ ದರದರ ಎಳೆದು ನಾಯಿಗೆ ಹೊಡೆಯುವಂತೆ ಹೊಡೆಸಿ ಹಾಕುತ್ತೇನೆ, ಇಲ್ಲಿಂದ ಹೋಗಿ” ಎಂದು ಧಮಕಿ ಹಾಕಿ ಬೆದರಿಸಿ ಕಳಿಸಿದ್ದಾರೆ” ಅವರು ಹೀಗೆ ಹೇಳಿದ ನಂತರ ಆ ಇಬ್ಬರು ಯುವಕರು ಹೆದರಿಕೊಂಡು ಎದ್ದು ಹೋಗಿರುವ ವಿಡಿಯೋವನ್ನು ಎಎನ್ಐ ಪೋಸ್ಟ್ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗಳೂ ಇರುವುದನ್ನು ಕಾಣಬಹುದು.
#WATCH:BJP candidate from Ghatal, WB & ex IPS officer Bharati Ghosh threatens TMC workers,says,"You are threatening people to not cast their votes. I will drag you out of your houses and thrash you like dogs. I will call a thousand people from Uttar Pradesh to beat you up." (4/5) pic.twitter.com/GvX650F6n9
— ANI (@ANI) May 5, 2019
ಭಾರತಿ ಘೋಶ್ ಅವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, “ನನಗೆ ನನ್ನ ಬಾಯಿ ತೆರೆಯುವಂತೆ ದಯವಿಟ್ಟು ಮಾಡಬೇಡಿ. ನಿಮಗೆ ಸ್ಪರ್ಧಿಸಲು ಬಿಟ್ಟಿದ್ದೇವೆ, ನೀವು ಜನರ ವಿರುದ್ಧ ಕೆಟ್ಟದಾಗಿ ಮಾತಾಡುತ್ತಿದ್ದೀರಿ.. ಮಿತಿ ಮೀರಿ ಹೋಗಬೇಡಿ” ಎಂದು ಹೇಳಿದ್ದಾರೆ.
ಭಾರತಿ ಘೋಶ್ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. “ಭಾರತಿ ಘೋಶ್ ಅವರು ಜನರಿಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ. ಆಕೆ ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆಸುವುದಾಗಿ ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ. ಆಕೆ ಒಬ್ಬ ಲೋಕಸಭಾ ಅಭ್ಯರ್ತಿಯೇ? ಆಕೆ ಮಾಜಿ ಐಪಿಎಸ್ ಅಧಿಕಾರಿ. ಅವರ ಬೆದರಿಕೆ ಕುರಿತು ಸೂಕ್ತ ಸಾಕ್ಷ್ಯಾಧಾರ ತೆಗೆದುಕೊಂಡು ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.
“ಇಂತಹ ಭಾಷೆ ಮೊದಲು ಬಳಸಿದ್ದು ಟಿಎಂಸಿಯವರೇ, ನಮ್ಮ ಅಭ್ಯರ್ಥಿ ಏನು ಹೇಳಿದ್ದಾರೆಂದು ನಾನು ಕೇಳಿಸಿಕೊಂಡಿಲ್ಲ. ಆದರೆ ಗೂಂಡಾಗಳಿಗೆ ಗೂಂಡಾಗಳ ಭಾಷೆಯನ್ನೇ ಬಳಸಬೇಕು” ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಾಯಂತನ್ ಬಸು ಭಾರತಿ ಘೋಶ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಪಿಐಎಂ ಪಕ್ಷದ ಸುಜನ್ ಚಕ್ರವರ್ತಿ ಭಾರತಿ ಘೋಶ್ ಅವರ ಹೇಳಿಕೆಯನ್ನು ಖಂಡಿಸಿದ್ದು “ಘೋಶ್ ಟಿಎಂಸಿಗೆ ಬಹಳ ಹತ್ತಿರದಲ್ಲಿದ್ದರು, ನಂತರ ಬಿಜೆಪಿ ಸೇರಿಕೊಂಡಿದ್ದಾರೆ” ಎಂದಿದ್ದಾರೆ. “ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಎರಡರ ಭಾಷೆಯೂ ಇದೇ ಆಗಿದೆ, ಬಂಗಾಳದ ಜನ ಇದನ್ನೆಲ್ಲಾ ವೀಕ್ಷಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.