ಮುಂಬೈ: ದಲಿತ ಯುವಕನನ್ನು ಪ್ರೀತಿಸಿರುವ ಪುಣೆಯ ವಿದ್ಯಾರ್ಥಿನಿಯೊಬ್ಬಳು ಪೋಷಕರು ಹಿಂಸೆ ತಪ್ಪಿಸಿಕೊಳ್ಳಲು ಬಾಂಬೆ ಹೈಕೋರ್ಟ್ ನಿಂದ ರಕ್ಷಣೆ ಆದೇಶ ಪಡೆದಿರುವ ಮಹತ್ವದ ಘಟನೆ ಇಂದು ನಡೆದಿದೆ.
ಪುಣೆಯ 19 ವರ್ಷದ ಪ್ರಿಯಾಂಕಾ ಶೇಥೆ ಮತ್ತು ದಲಿತ ಸಮುದಾಯದ ಯುವಕ ಇವರಿಬ್ಬರೂ ಪರಸ್ಪರ ಪ್ರೀತಿಸಿದ್ದನ್ನು ಯುವತಿಯ ತಂದೆ ಮತ್ತು ಕುಟುಂಬ ತೀವ್ರವಾಗಿ ವಿರೋಧಿಸಿ ಅವನನ್ನು ಬಿಟ್ಟು ಬರುವಂತೆ ಆಕೆಗೆ ಹಿಂಸೆ ನೀಡಿ ಜೀವ ಬೆದರಿಕೆ ಒಡ್ಡುತ್ತಿದ್ದರೆಂದು ಯುವತಿ ಆರೋಪಿಸಿದ್ದಾಳೆ. ತಮಗೆ ಬೆದರಿಕೆಯೊಡ್ಡಿರುವ ತನ್ನ ತಂದೆ ಮತ್ತು ಕುಟುಂಬದಿಂದ ರಕ್ಷಣೆ ನೀಡುವಂತೆ ಕೋರಿರುವ ಯುವತಿ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ.
ಯುವತಿಯ ಮನವಿಯನ್ನು ಪರಿಶೀಲಿಸಿರುವ ನ್ಯಾಯಮೂರ್ತಿ ಎಂ.ಎಸ್.ಕಾರ್ಣಿಕ್ ಮತ್ತು ನ್ಯಾ. ಆರ್.ಐ.ಚಾಗ್ಲಾ ಅವರನ್ನೊಳಗೊಂಡ ಬಾಂಬೆ ಹೈಕೋರ್ಟಿನ ರಜೆ ಕಾಲದ ಪೀಠವು ಯುವತಿಯ ದೂರಿನ ಕಡೆ ಗಮನ ಹರಿಸುವಂತೆ ಮತ್ತು ಆಕೆಗೆ ಭದ್ರತೆ ಒದಗಿಸುವಂತೆ ತಲೆಗಾಂವ್ MIDC (ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ) ಪೊಲೀಸರಿಗೆ ನಿರ್ದೇಶಿಸಿದೆ.
ಯುವತಿ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ?
ಕಾನೂನು ವಿದ್ಯಾರ್ಥಿನಿಯಾಗಿರುವ ಅರ್ಜಿದಾರಳಾದ ಪ್ರಿಯಾಂಕಾಗೆ 19 ವರ್ಷ ವಯಸ್ಸಾಗಿದ್ದು ಮರಾಠಾ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಅವಳ ಪ್ರಿಯತಮ ವಿರಾಜ್ ಆವಘಾಡೆ ದಲಿತ ಸಮುದಾಯಗಳ ಪೈಕಿ ಒಂದಾದ ಮಾತಂಗ (ಮಾಂಗ್) ಜಾತಿಗೆ ಸೇರಿದ್ದಾನೆ. ದ್ವಿತೀಯ ಕಾನೂನು ವ್ಯಾಸಂಗ ಮಾಡುತ್ತಿರುವ ಪ್ರಿಯಾಂಕಾ ಶೇಥೆ ಹಾಗೂ ವಿರಾಜ್ ಕಾಲೇಜಿನಲ್ಲಿ ಸಹಪಾಠಿಗಳಾಗಿ, ನಂತರ ಪರಸ್ಪರ ಪ್ರೀತಿಸಿ, ಕಾನೂನಾತ್ಮಕವಾಗಿ ಇಬ್ಬರೂ ವಿವಾಹದ ವಯಸ್ಸು ತಲುಪಿದ ಬಳಿಕ ಮದುವೆಯಾಗಬೇಕೆಂದು ತೀರ್ಮಾನಿಸಿದರು. ಆದರೆ ಯುವತಿಯ ಪೋಷಕರು ತಳಜಾತಿಯ ಯುವಕನ ಜೊತೆ ಸಂಬಂಧ ಬೆಳೆಸುವುದನ್ನು ಒಪ್ಪಲಿಲ್ಲ. ಯುವತಿ ತನ್ನ ಪ್ರಿಯತಮನನ್ನು ಇನ್ನೆಂದಾದರೂ ಭೇಟಿಯಾಗಲು ಧೈರ್ಯ ಮಾಡಿದ್ದೇ ಆದಲ್ಲಿ ಇಬ್ಬರನ್ನೂ ಕೊಲೆಗೈಯುವುದಾಗಿ ಬೆದರಿಕೆ ಒಡ್ಡಿರುತ್ತಾರೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿದಾರ ಯುವತಿಯ ಪೋಷಕರು ಆಕೆಯನ್ನು ಮಾನಸಿಕವಾಗಿ ‘ಹಿಂಸಿಸಿದ್ದಾರೆಂದು’, ತನಗೆ ಆ ಹಿಂಸೆ ಸಹಿಸಲಾರದೆ ಜೀವ ಕಳೆದುಕೊಳ್ಳುವ ಹಂತ ತಲುಪಿದ್ದಾಗಿ ಅವಳು ದೂರಿದ್ದಾಳೆ. ಫೆ 19,2019ರಂದು ಅಂತಹ ತೀವ್ರ ಪ್ರಯತ್ನವನ್ನೂ ನಡೆಸಿದ್ದಾಗಿಯೂ, ಪುಣೆಯ ಪಾವ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾಳೆ. ಈ ಮೆಡಿಕೊ-ಲೀಗಲ್ ಪ್ರಕರಣವನ್ನು ಪೋಷಕರು ಮುಚ್ಚಿಹಾಕಿಸಿ ತಾವು ಪಾರಾಗಲು ಯತ್ನಿಸಿದ್ದಾರೆಂದೂ ಹೇಳಲಾಗಿದೆ. ಪೋಷಕರಿಂದ ವಿಷಯವನ್ನು ಅರಿತ, ವೃತ್ತಿಯಿಂದ ವಕೀಲರೂ ಆಗಿರುವ ಅರ್ಜಿದಾರ ಯುವತಿಯ ಸಂಬಂಧಿಕರೊಬ್ಬರು ಯುವತಿಯ ಮೇಲೆ ಕುಪಿತರಾಗಿ ಆಕೆಗೆ ಕೋವಿಯಿಂದ ಹೊಡೆಯುವುದಾಗಿ ಹೆದರಿಸಿದ್ದರು. “ತಳಸಮುದಾಯದ ಮಾಂಗ್ (ಮಾತಂಗ) ಹುಡುಗನ ಜೊತೆ ಅವಳ ಎಲ್ಲಾ ಸಂಬಂಧಗಳನ್ನೂ ಕಡಿತಗೊಳಿಸದಿದ್ದರೆ”, ಕೊಲೆ ಮಾಡಿಬಿಡುವುದಾಗಿ ಬೆದರಿಕೆಯೊಡ್ಡಿದರು.
ಇದಾದ ತಕ್ಷಣವೇ ಯುವತಿಗೆ ಕಾನೂನು ಶಿಕ್ಷಣ ಪಡೆಯಲು ಕುಟುಂಬದಲ್ಲಿ ನಿರ್ಬಂಧ ಹೇರಲಾಯಿತು. ಅಂತಿಮವಾಗಿ ಅವಳನ್ನು ಏಪ್ರಿಲ್ 27ರಂದು ಅವಳ ತಂದೆತಾಯಿ ಒತ್ತಾಯಪೂರ್ವಕವಾಗಿ ತಮಿಳುನಾಡಿಗೆ ಕರೆದೊಯ್ಯಲು ಯತ್ನಿಸಿದಾಗ ಅವಳು ತಪ್ಪಿಸಿಕೊಂಡು ತನ್ನ ಪ್ರಿಯತಮನನ್ನು ಸಂಪರ್ಕಿಸಿದಳೆಂದು ಹೇಳಲಾಗಿದೆ.
ಪೊಲೀಸರ ಮೇಲೆ ಕಳೆದುಹೋಗಿರುವ ಭರವಸೆ
ಅರ್ಜಿದಾರ ಯುವತಿ ತನಗೆ ಪೊಲೀಸ್ ಇಲಾಖೆಯ ಮೇಲೆ ಭರವಸೆ ಉಳಿದಿರಲಿಲ್ಲವೆಂದು ಅರ್ಜಿಯಲ್ಲಿ ತಿಳಿಸಿದ್ದಾಳೆ. ತನ್ನ ತಂದೆ ಮತ್ತು ಸಂಬಂಧಿಕರ ವಿರುದ್ಧ ಕ್ರಮ ಜರುಗಿಸಲು ಅರ್ಜಿದಾರರು ಕೋರಿದ್ದಾರೆ. ತನಗೆ ಸಂವಿಧಾನದ ಆರ್ಟಿಕಲ್ 21 ರ ಅಡಿ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ದೊರಕಿಸಿಕೊಡಬೇಕೆಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದಾಳೆ. ತನ್ನ ಕುಟುಂಬದಿಂದ ತನ್ನ ಪ್ರಿಯತಮ ಹಾಗು ತನಗೆ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿದ್ದಾಳೆ.
“ಮೂರು ವರ್ಷಗಳಿಂದ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು, ಅದನ್ನು ತಿಳಿದ ನನ್ನ ಕುಟುಂಬ ಹಿಂಸೆ ನೀಡಲಾರಂಭಿಸಿತು. ನನ್ನನ್ನು ಮತ್ತು ನನ್ನ ಪ್ರಿಯತಮನನ್ನು ಕೊಲೆ ಮಾಡುವ ಬೆದರಿಕೆ ಒಡ್ಡಿದರು. ನಾನು ಮನೆ ಬಿಟ್ಟು ಓಡಿಹೋದೆ” ಎಂದು ಅರ್ಜಿದಾರ ಯುವತಿ ಪ್ರಿಯಾಂಕಾ ಶೆಟೆ ಎಎನ್ಐ ಗೆ ತಿಳಿಸಿದ್ದಾಳೆ.
“… ಪೊಲೀಸರಿಂದಲೂ ನನಗೆ ನೆರವು ದೊರೆಯದ ಕಾರಣ ನಾನು ನ್ಯಾಯಾಲಯದ ಮೆಟ್ಟಿಲೇರಿ ಸಹಾಯ ಪಡೆಯಲು ತೀರ್ಮಾನಿಸಿದೆ” ಎಂದು ಅವಳು ಹೇಳಿದ್ದಾಳೆ.
ಪ್ರಿಯಾಂಕಾಳ ಪರವಾಗಿ ವಕೀಲ ನಿತಿನ್ ಸಾತ್ಪುತೆ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಭಾರತದಲ್ಲಿ ಶೇ.5.8 ವಿವಾಹಗಳು ಮಾತ್ರ ಅಂತರ್ಜಾತಿ ವಿವಾಹಗಳೆಂದು 2011 ಜನಗಣತಿ ಹೇಳುತ್ತದೆ. ಈ ಪ್ರಮಾಣವು ಕಳೆದ 40 ವರ್ಷಗಳಿಂದಲೂ ಬದಲಾಗಿಲ್ಲ ಎಂದೂ ಹೇಳಲಾಗಿದೆ. ಇತ್ತೀಚೆಗೆ ಅಂತರ್ಜಾತಿ ವಿವಾಹಿತ ಯುವಕ-ಯುವತಿಯರ ಮೇಲೆ ಆಯಾ ಕುಟುಂಬಗಳು ಅತ್ಯಂತ ಬರ್ಬರವಾಗಿ, ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದು, ತಮ್ಮ ಕುಟುಂಬದ “ಮರ್ಯಾದೆ” ಉಳಿಸಲು ಇಂತಹ ಅಮಾನವೀಯ ಕೃತ್ಯಗಳಿಗೂ ಹೇಸುತ್ತಿಲ್ಲ. ಇತ್ತೀಚೆಗಷ್ಟೇ ಅಂತರ್ಜಾತಿ ವಿವಾಹಿತ ಯುವ ದಂಪತಿಯನ್ನು ಜೀವಂತ ಸುಟ್ಟುಹಾಕಿದ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ಜರುಗಿತ್ತು. ಸಂವಿಧಾನದ ಅಡಿ ಕಾರ್ಯ ನಿರ್ವಹಿಸಬೇಕಾದ ಪೊಲೀಸರೂ ಇಂತಹ ಪ್ರಕರಣಗಳಲ್ಲಿ ಬಹುತೇಕ ಶಾಮೀಲಾಗಿ ಯುವಕ-ಯುವತಿಯರಿಗೆ ರಕ್ಷಣೆ ಒದಗಿಸುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಈ ಸನ್ನಿವೇಶದಲ್ಲಿ ಯುವಕ ಯುವತಿಯರು ನ್ಯಾಯಾಲಯಗಳಿಂದ ನ್ಯಾಯ ಮತ್ತು ರಕ್ಷಣೆಗಾಗಿ ಹಂಬಲಿಸುತ್ತಿದ್ದಾರೆ, ಸಂವಿಧಾನದ ಆಶಯಗಳ ಜಾರಿಗಾಗಿ ತವಕಿಸುತ್ತಿದ್ದಾರೆ.
(ಮೂಲ: Live Law)