ಆರ್ಥಿಕ ಚಿಂತಕರ ಆತಂಕಗಳು ಈಗ ನಿಜವಾಗಿಬಿಟ್ಟಿವೆ. ದೇಶದ ಆರ್ಥಿಕತೆ ಹಿಂಜರಿತದ ಬಿಗಿ ಹಿಡಿತಕ್ಕೆ ಸಿಕ್ಕಿದೆ. ಇದುವರೆಗೆ ಆರ್ಥಿಕ ಹಿಂಜರಿತದ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ, ಕಾರ್ಪೊರೆಟ್ ಕಂಪನಿಗಳ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳು ಹಾಗೂ ಏಪ್ರಿಲ್ ತಿಂಗಳ ಆರ್ಥಿಕ ಅಭಿವೃದ್ಧಿ ಸೂಚ್ಯಂಕಗಳ ದಿಕ್ಸೂಚಿ ದೇಶ ಆರ್ಥಿಕ ಹಿಂಜರಿತದತ್ತ ಸಾಗಿರುವುದಕ್ಕೆ ಸಾಕ್ಷಿಯಾಗಿವೆ. ಉತ್ಪಾದಕ ವಲಯವಷ್ಟೇ ಅಲ್ಲದೇ ಸೇವಾ ವಲಯವೂ ಹಿಂಜರಿತದತ್ತ ಸಾಗಿದೆ.
ಚೌಕಿದಾರ್ ನರೇಂದ್ರಮೋದಿ ಜಾರಿಗೆ ತಂದ ತರ್ಕರಹಿತ ಅಪನಗದೀಕರಣದಿಂದ ದೇಶದ ನೂರಾ ಮೂವತ್ತು ಕೋಟಿ ಜನರು ಅನುಭವಿಸಿದ ಸಂಕಷ್ಟಗಳ ಬೇರುಗಳು ಹರಡಿಕೊಳ್ಳುತ್ತಿವೆ. ಅಂದರೆ, ಅಪನಗದೀಕರಣದ ವೇಳೆ ಅನುಭವಿಸಿದ ಸಂಕಷ್ಟಗಳನ್ನು ದೇಶದ ಜನತೆ ಬೇರೆ ಬೇರೆ ರೂಪದಲ್ಲಿ ಅನುಭವಿಸುತ್ತಿದ್ದಾರೆ ಮತ್ತು ಮುಂದೆಯೂ ಅನುಭವಿಸಲಿದ್ದಾರೆ.
ದೇಶದ ಆರ್ಥಿಕತೆ ಹಿಂಜರಿತದತ್ತ ಸಾಗಿರುವುದಕ್ಕೆ ಸಾಕ್ಷಿಯಾಗಿ ದೇಶದ ಜನರ ಖರೀದಿ ಸಾಮರ್ಥ್ಯ ತಗ್ಗಿದೆ. ಖರೀದಿ ಸಾಮರ್ಥ್ಯ ತಗ್ಗಿರುವ ಪರಿಣಾಮ ದೇಶದ ತ್ವರಿತ ಮಾರಾಟವಾಗುವ ಸರಕುಗಳ (ಎಫ್ಎಂಸಿಜಿ) ಉತ್ಪಾದಿಸುವ ಕಂಪನಿಗಳು ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟ ಗುರಿ ಸಾಧಿಸಿಲ್ಲ. ಅದಕ್ಕೆ ಮುಖ್ಯ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶದ ಕೆಳ ಮಧ್ಯಮ ಮತ್ತು ಕೆಳವರ್ಗದ ಜನರ ಖರೀದಿ ಶಕ್ತಿ ಕುಂದಿದೆ.
ಜನರ ಕೊಳ್ಳುವ ಶಕ್ತಿ ಕುಂದಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ದೇಶದ ಆರ್ಥಿಕ ನೀತಿಗಳು. ಎಲ್ಲಿ ಉದ್ಯೋಗ ಸೃಷ್ಟಿ ಆಗುವುದಿಲ್ಲವೋ ಅಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವುದಿಲ್ಲ. ಉದ್ಯೋಗ ಇಲ್ಲದೇ ಜನರ ಖರೀದಿ ಶಕ್ತಿ ಕುಂದುತ್ತದೆ. ಈಗ ಸದ್ಯ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೇ ಇದು. ನಿರುದ್ಯೋಗ ಪ್ರಮಾಣ ಅತಿ ಗರಿಷ್ಠ ಮಟ್ಟಕ್ಕೆ ಅಂದರೆ ಶೇ.8.40ರಷ್ಟು ಮುಟ್ಟಿದೆ. ದುರದೃಷ್ಟವಶಾತ್ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷವೂ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಅಪ್ಪಿ ತಪ್ಪಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೇನು ಗತಿ?
ಪಕೋಡ ಮಾರಾಟ ಮಾಡುವುದೇ ದೊಡ್ಡ ಉದ್ಯೋಗ ಎಂದು ಚೌಕಿದಾರ್ ನರೇಂದ್ರ ಮೋದಿ ಹೇಳುತ್ತಾರೆ. ಮೋದಿ ಸರ್ಕಾರ ಅಪನಗದೀಕರಣದಿಂದ ದೇಶದ ಆರ್ಥಿಕತೆಗೆ ಎಂತಹ ಪೆಟ್ಟುಕೊಟ್ಟಿದೆ ಎಂದರೆ, ಪಕೋಡ ಮಾರಾಟ ಮಾಡುವವರೂ ಈಗ ನಷ್ಟದಲ್ಲಿದ್ದಾರೆ. ಅಂದರೆ, ಜನರ ಖರೀದಿ ಶಕ್ತಿ ಎಷ್ಟು ಕುಂದಿದೆ ಎಂದರೆ ಮೋದಿ ಹೇಳುವಂತೆ ಪಕೋಡ ಮಾರಾಟ ಮಾಡಿ ಉದ್ಯೋಗ ಮಾಡುತ್ತಿರುವವರೂ ಕೊಳ್ಳುವವರಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ದೂರದೃಷ್ಟಿಯೇ ಇಲ್ಲದೇ ಜಾರಿಗೆ ತಂದ ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಯೋಜನೆ ಸೇರಿದಂತೆ ಮೋದಿ ಸರ್ಕಾರ ಸುಧಾರಣೆ ಹೆಸರಲ್ಲಿ ತಂದಿರುವ ವಿವಿಧ ಆರ್ಥಿಕ ನೀತಿಗಳು ಜನರ ಖರೀದಿ ಶಕ್ತಿಯನ್ನೇ ಕಸಿದುಕೊಂಡಿವೆ.
ದೇಶದ ಜನರಿಗೆ ಪಕೋಡ ಖರೀದಿಸುವ ಶಕ್ತಿಯೇ ಇಲ್ಲವಾಗಿದೆ. ಹೀಗಿರುವಾಗ ಪಕೋಡ ಮಾರಾಟ ಮಾಡುವವರ ಗತಿ ಏನು? ಹೀಗಾಗಿ ಮೋದಿ ಪ್ರಣೀತ ಮೇರು ಉದ್ಯೋಗವಾದ ಪಕೋಡ ಮಾರಾಟ ಅವಲಂಬಿತರೂ ಸಂಕಷ್ಟದಲ್ಲಿದ್ದಾರೆ.
ದೇಶದ ಆರ್ಥಿಕ ಅಭಿವೃದ್ಧಿ ಆಗಬೇಕಾದರೆ ಜನರ ಖರೀದಿ ಶಕ್ತಿ ಹೆಚ್ಚಬೇಕು. ಕೊಳ್ಳುವ ಶಕ್ತಿ ಹೆಚ್ಚಬೇಕಾದರೆ ಜನರ ಆದಾಯ ಹೆಚ್ಚಬೇಕು. ಆದಾಯ ಹೆಚ್ಚಳವಾಗಲು ಉತ್ತಮ ವೇತನ ನೀಡುವ ಉದ್ಯೋಗ ಇರಬೇಕು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಖರೀದಿ ಶಕ್ತಿ ಕುಂದಿದೆ. ಯಾಕೆಂದರೆ ಜನರ ಆದಾಯ ಕುಂದಿದೆ. ಮೋದಿ ಸರ್ಕಾರ ಎಂದೂ ಉತ್ತಮ ವೇತನ ನೀಡುವ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಲಿಲ್ಲ. ಇಡೀ ದೇಶದ ನಿರುದ್ಯೋಗಿಗಳೆಲ್ಲರೂ ಪಕೋಡ ಮಾರಾಟ ಮಾಡುತ್ತಾ ನಿಂತರೆ ಖರೀದಿಸುವವರು ಯಾರು? ಅಷ್ಟಕ್ಕೂ ಖರೀದಿ ಶಕ್ತಿ ಎಲ್ಲಿದೆ?
ದೇಶದ ಆರ್ಥಿಕತೆಯ ಅರಿವು ಮತ್ತು ದೂರದೃಷ್ಟಿ ಇಲ್ಲದೇ ಇದ್ದಾಗ ಪಕೋಡ ಮಾರಾಟ ಮಾಡುವುದೇ ದೊಡ್ಡ ಉದ್ಯೋಗ ಎಂಬ ಹುಸಿ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಪ್ರಧಾನಿಯೇ ಪಕೋಡ ಮಾರಾಟವೇ ದೊಡ್ಡ ಉದ್ಯೋಗ ಎಂಬಂತೆ ಪ್ರತಿ ಬಿಂಬಿಸಿದರೆ, ದನಿಯೇ ಇಲ್ಲದ ಅವರ ಸಂಪುಟ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು ಅದನ್ನು ಪ್ರಶ್ನಿಸುವ ಶಕ್ತಿ ಪ್ರದರ್ಶಿಸುತ್ತಾರೆಯೇ?
ಇದುವರೆಗೆ ಕಾರು, ಬೈಕುಗಳು ಮತ್ತು ವಿಮಾನ ಹಾರಾಟ ಮಾಡುವವರ ಸಂಖ್ಯೆ ತಗ್ಗಿರುವ ಬಗ್ಗೆ ಚರ್ಚೆಯಾಗುತ್ತಿತ್ತು. ಈಗ ನಿತ್ಯ ಬಳಕೆ ವಸ್ತುಗಳಾದ ಸೋಪು, ಪೇಸ್ಟು, ಶಾಂಪೂ, ಹಾಲು, ಬಿಸ್ಕತ್ತು, ದಿನಸಿಗಳ ಮಾರಾಟವೇ ತಗ್ಗಿದೆ. ಅಂದರೆ, ಆರ್ಥಿಕ ಹಿಂಜರಿತದ ಬಿಗಿ ಹಿಡಿತ ಬೇರುಮಟ್ಟದತ್ತ ಸಾಗಿದೆ. ಇದು ಹೀಗೆ ಮುಂದುವರೆದರೆ ಆರ್ಥಿಕ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದ ದೇಶವು ಹಿಮ್ಮುಖವಾಗಿ ದಾಪುಗಾಲು ಹಾಕಲಿದೆ.
ಮೋದಿ ಸರ್ಕಾರದ ತರ್ಕರಹಿತ ಆರ್ಥಿಕ ನೀತಿಗಳಿಂದಾಗಿ ದೇಶವು ಉದಾರೀಕರಣಪೂರ್ವದಲ್ಲಿದ್ದ ಸ್ಥಿತಿಯತ್ತ ಸಾಗುವ ಅಪಾಯ ಎದುರಾಗಿದೆ. ಅಂತಹ ಪರಿಸ್ಥಿತಿಯತ್ತ ದೇಶ ಹೊರಳಿದರೆ ಚೇತರಿಸಿಕೊಳ್ಳಲು ದಶಕಗಳೇ ಬೇಕಾಗುತ್ತದೆ!