ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ.. ಹೌದು, ದೇಶದ ಲೋಕಸಭಾ ಚುನಾವಣೆಯ ಮಹತ್ವದ ಘಟ್ಟಗಳ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಲ್ಲೆಡೆ ರಾಜ್ಯ, ಭಾಷೆಗಳ ಗಡಿಗಳನ್ನು ಮೀರಿ ರಾಜಕೀಯ ಪಕ್ಷಗಳ ನಡುವೆ ಚುಂಬಕ ಗಾಳಿ ಬೀಸತೊಡಗಿದೆ. ಆದರೆ, ಬೀಸುತ್ತಿರುವ ಗಾಳಿ ದಿಕ್ಕು ಮಾತ್ರ ಬದಲಾಗಿದೆ. ಸಾಮಾನ್ಯವಾಗಿ ಉತ್ತರದಿಂದ ದಕ್ಷಿಣಕ್ಕೆ ಬೀಸುವ ಗಾಳಿ, ಈ ಬಾರಿ ದಕ್ಷಿಣದಿಂದ ಉತ್ತರದ ಕಡೆ ಬೀಸತೊಡಗಿದೆ!
ಒಟ್ಟು ಏಳು ಹಂತಗಳ ಮತದಾನದ ಪೈಕಿ ಈಗಾಗಲೇ ಐದು ಹಂತದ ಮತದಾನ ಪೂರ್ಣಗೊಂಡಿದೆ. ಅದರಲ್ಲೂ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ಮೊದಲ ಮೂರು ಹಂತಗಳಲ್ಲೇ ಮತದಾನ ಮುಗಿದುಹೋಗಿದೆ. ನಾಲ್ಕು ಮತ್ತು ಐದನೇ ಹಂತದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ಬಹುತೇಕ ಕ್ಷೇತ್ರ, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್, ಒಡಿಶಾ, ಪಶ್ಚಿಮಬಂಗಾಳಗಳಲ್ಲೂ ಮತದಾನ ಬಹುತೇಕ ಮುಗಿದಿದೆ. ಮೊದಲ ಮೂರು ಹಂತಗಳಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಹೊರತುಪಡಿಸಿ ಉಳಿದೆಡೆ ಬಿಜೆಪಿಯ ಪ್ರಾಬಲ್ಯವಿಲ್ಲ. ಆದರೆ ಅದಕ್ಕೆ ಹೆಚ್ಚು ಸ್ಥಾನ ತಂದುಕೊಡುವ ನಿರೀಕ್ಷೆ ಇದ್ದ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನಗ ಸೇರಿದಂತೆ ನಾಲ್ಕನೇ ಮತ್ತು ಐದನೇ ಹಂತದ ಮತದಾನವಾದ ಕ್ಷೇತ್ರಗಳಲ್ಲಿ; ಈ ಬಾರಿ ಕಳೆದ ಬಾರಿಯ ಸ್ಥಾನಗಳನ್ನು ಕೂಡ ಬಿಜೆಪಿ ಮತ್ತು ಅದರ ಮಿತ್ರಕೂಟ ಉಳಿಸಿಕೊಳ್ಳಲಾರದು ಎಂದು ಸಮೀಕ್ಷೆಗಳು ಹೇಳಿವೆ.
ಅಂದರೆ, ಹಿಂದಿ ಭಾಷಿಗರ ಪಕ್ಷವೆಂಬ ಹಣೆಪಟ್ಟಿಯ ಬಿಜೆಪಿಗೆ ಹಿಂದಿ ಭಾಷಿಗರ ಬಾಹುಳ್ಯದ ಕ್ಷೇತ್ರಗಳಲ್ಲಿ ಹಿನ್ನಡೆ ಎಂಬುದು ಸಮೀಕ್ಷೆಗಳ ಸಾರ. ಆ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ರಾಮ್ ಮಾಧವ್ ಮತ್ತು ಅದರ ಮಿತ್ರಪಕ್ಷ ಶಿವಸೇನೆಯ ಸಂಜಯ್ ರಾವತ್ ಅವರು, “ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಈ ಬಾರಿ ಬಿಜೆಪಿ ವಿಫಲವಾಗಬಹುದು, ಎನ್ ಡಿ ಎ ಮಿತ್ರಪಕ್ಷಗಳಷ್ಟೇ ಅಲ್ಲದೆ, ಇತರ ಪಕ್ಷಗಳ ನೆರವು ಕೂಡ ಬೇಕಾಗಬಹುದು” ಎಂದಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಮಾಧವ್ ಅವರೇ ಐದನೇ ಹಂತದ ಮತದಾನದ ದಿನವೇ ಇಂತಹದ್ದೊಂದು ಹೇಳಿಕೆ ನೀಡಿರುವುದು ಬಿಜೆಪಿಯ ಕುಸಿತದ ಸಂಭನೀಯತೆ ಆ ಪಕ್ಷದ ನಾಯಕರನ್ನು ಎಷ್ಟು ವಿಚಲಿತಗೊಳಿಸಿದೆ ಎಂಬುದಕ್ಕೆ ಸಾಕ್ಷಿ.
ಆದರೆ, ಬಿಜೆಪಿಯ ಈ ಇಳಿಜಾರು ಹಾದಿಯ ನಡಿಗೆಯನ್ನು ಬಹಳ ಬೇಗಲೇ ಗ್ರಹಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪ್ರಮುಖ ಪಕ್ಷಗಳ ನಾಯಕರು ಈಗಾಗಲೇ ಪರ್ಯಾಯ ರಂಗದ ಮೂಲಕ ದಿಲ್ಲಿಯ ಗದ್ದುಗೆಯನ್ನು ಹಿಡಿಯಲು ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಅದರಲ್ಲೂ ಪ್ರಮುಖವಾಗಿ ದಕ್ಷಿಣ ರಾಜ್ಯಗಳಲ್ಲಿ ಹೊಸ ರಾಜಕೀಯ ಧ್ರುವೀಕರಣದ ಪ್ರಯತ್ನಗಳು ಬಿರುಸುಗೊಂಡಿವೆ. ದಕ್ಷಿಣ ರಾಜ್ಯಗಳ ಪೈಕಿ, ಕರ್ನಾಟಕದ ಹೊರತುಪಡಿಸಿ ಉಳಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪಥ್ಯ. ಕರ್ನಾಟಕದಲ್ಲಿಯೂ ಈ ಬಾರಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಕೂಡ ತನ್ನ ಮಿತ್ರಪಕ್ಷ ಕಾಂಗ್ರೆಸ್ ಜೊತೆಗೂಡಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದು, ತನ್ನ ಬಲವೃದ್ಧಿಯೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ದಾಳ ಉರುಳಿಸುವ ಮಟ್ಟಿಗೆ ಪ್ರಮುಖ ಪಾತ್ರ ವಹಿಸುವ ಉಮೇದಿನಲ್ಲಿದೆ.
ಆದರೆ, ಈಗಾಗಲೇ ಕೆ ಸಿಆರ್ ಎಂದೇ ಜನಜನಿತರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರು ಚುನಾವಣೆಗೆ ಮುನ್ನ ಚಾಲನೆ ನೀಡಿದ್ದ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಫೆಡರಲ್ ಫ್ರಂಟ್ ಚಟುವಟಿಕೆಗಳಿಗೆ ಮರುಜೀವ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮೇ 6ರಂದು ಕೇರಳದ ಎಡರಂಗ ಸರ್ಕಾರದ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಚುನಾವಣಾ ಫಲಿತಾಂಶದ ಬಳಿಕ ರಾಷ್ಟ್ರ ರಾಜಕಾರಣದ ಗತಿ ಏನು ಮತ್ತು ಯಾವ ಸಂದರ್ಭದಲ್ಲಿ ತಮ್ಮ ಆಯ್ಕೆ ಯಾವುದಿರಿಬೇಕು ಎಂಬ ಬಗ್ಗೆಯೇ ಚರ್ಚೆ ನಡೆಸಿರುವುದಾಗಿ ಪಿಣರಾಯಿ ಅವರ ಟ್ವಿಟರ್ ಹೇಳಿಕೆ ತಿಳಿಸಿದೆ.
ಅಷ್ಟೇ ಅಲ್ಲದೆ, ಮುಂದಿನ ವಾರ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ಕೆಸಿಆರ್ ಹೇಳಿರುವುದಾಗಿ ವರದಿಯಾಗಿತ್ತು. ಆದರೆ, ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡು ತಾವು ಕಾಂಗ್ರೆಸ್ ನೇತೃತ್ವದ ಯುಪಿಎಯೊಂದಿಗೆ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಕೆಸಿಆರ್ ಅವರ ಫೆಡರಲ್ ಫ್ರಂಟ್ ನೊಂದಿಗೆ ಗುರುತಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗಾಗಿ ಕೆಸಿಆರ್ ಜೊತೆ ಮಾತುಕತೆಗೆ ಸಿದ್ಧರಿಲ್ಲ ಎಂದು ಸ್ಟಾಲಿನ್ ಹೇಳಿದ್ದು, ಸದ್ಯಕ್ಕೆ ಕೆಸಿಆರ್ ಮತ್ತು ಸ್ಟಾಲಿನ್ ಭೇಟಿ ಸಾಧ್ಯವಿಲ್ಲ ಎಂದು ಮಂಗಳವಾರ ಡಿಎಂಕೆ ನಾಯಕರು ಸ್ಪಷ್ಟಪಡಿಸಿದ್ದಾರೆ.
ಅದೇ ಹೊತ್ತಿಗೆ, ಕೆಸಿ ಆರ್ ಅವರು ಕರ್ನಾಟಕದ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ಬಂದು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ, ಕರ್ನಾಟಕದಲ್ಲಿಯೂ ಈಗಾಗಲೇ ರಾಹುಲ್ ಅವರೇ ಪ್ರಧಾನಿ ಅಭ್ಯರ್ಥಿಯಾಗಲಿ, ಅವರೊಂದಿಗೆ ನಾನಿದ್ದು ಅವರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ. ಹಾಗಾಗಿ, ಜೆಡಿಎಸ್ ವಿಶ್ವಾಸ ಗಳಿಸುವ ಕೆಸಿಆರ್ ಪ್ರಯತ್ನ ಎಷ್ಟರಮಟ್ಟಿಗೆ ಫಲಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಹಾಗೆ ನೋಡಿದರೆ, ಕೆಸಿಆರ್ ಕಳೆದ ಮಾರ್ಚಿಯಲ್ಲೇ ತಮ್ಮ ಫೆಡರಲ್ ಫ್ರಂಟ್ ರಚನೆಗೆ ನಾಂದಿ ಹಾಡಿದ್ದರು. ಆಗಲೇ ಅವರು, ಜೆಡಿಎಸ್ ಸೇರಿದಂತೆ ಡಿಎಂಕೆ, ವೈಎಸ್ ಆರ್ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಿಜು ಜನತಾದಳ, ತೃಣಮೂಲ ಕಾಂಗ್ರೆಸ್ ಪಕ್ಷಗಳ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ತೆಲಂಗಾಣದ ಲೋಕಸಭಾ ಕ್ಷೇತ್ರಗಳ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೊಮ್ಮೆ ತಮ್ಮ ಯತ್ನಕ್ಕೆ ಚಾಲನೆ ನೀಡಿದ್ದು, ಬಿಜೆಪಿ ಜೊತೆಗಿನ ತಮ್ಮ ಇತ್ತೀಚಿನ ನಂಟಿಗೆ ಎಳ್ಳುನೀರು ಬಿಟ್ಟಿರುವಂತೆ ತೋರುತ್ತಿದೆ.
ಆದರೆ, ತೀರಾ ಇತ್ತೀಚಿನವರೆಗೆ ಪ್ರಧಾನಿ ಮೋದಿಯವರೊಂದಿಗೆ ಆಪ್ತ ನಂಟು ಹೊಂದಿದ್ದ ಅವರು ಎಷ್ಟರಮಟ್ಟಿಗೆ ತಮ್ಮ ಪ್ರಯತ್ನದಲ್ಲಿ ಪ್ರಾಮಾಣಿಕರು ಎಂಬ ಪ್ರಶ್ನೆ ಇದ್ದೇ ಇದೆ. ಏಕೆಂದರೆ, ದಕ್ಷಿಣ ರಾಜ್ಯಗಳಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ತಮಿಳುನಾಡಿನ ಎಂ ಕೆ ಸ್ಟಾಲಿನ್ ಅವರ ಡಿಎಂಕೆ ಪಕ್ಷಗಳೆರಡೂ ಈಗಾಗಲೇ ಕಾಂಗ್ರೆಸ್ ಜೊತೆ ಕೈಜೋಡಿಸಿವೆ. ಕರ್ನಾಟಕದಲ್ಲಿ ಜೆಡಿಎಸ್ ಕೂಡ ಕಾಂಗ್ರೆಸ್ ಜೊತೆ ಇದೆ. ಇನ್ನು ಕೇರಳದಲ್ಲಿ ಕಾಂಗ್ರೆಸ್ ಮೈತ್ರಿ ಯುಡಿಎಫ್ ಮತ್ತು ಎಡಪಕ್ಷಗಳ ಮೈತ್ರಿಯ ಎಲ್ ಡಿಎಫ್ ಸಾಂಪ್ರದಾಯಿಕ ಎದುರಾಳಿಗಳು. ಆದಾಗ್ಯೂ ಸಂದರ್ಭ ಬಂದಲ್ಲಿ ಎಡರಂಗ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬಹುದೇ ಹೊರತು ಬಿಜೆಪಿಗೆ ಅಲ್ಲ. ಆ ಹಿನ್ನೆಲೆಯಲ್ಲಿ ಒಟ್ಟಾರೆ ದಕ್ಷಿಣ ಭಾರತದಲ್ಲಿ ಕರ್ನಾಟಕವೂ ಸೇರಿದಂತೆ(ರಾಜ್ಯದಲ್ಲಿ ಬಿಜೆಪಿ ಸ್ಥಾನಗಳಿಕೆ ಕುಸಿಯುವ ಸಾಧ್ಯತೆಯೇ ಹೆಚ್ಚು!) ಎಲ್ಲಿಯೂ ಬಿಜೆಪಿಗೆ ಬಲವಿಲ್ಲ. ಜೊತೆಗೆ ಈ ಬಾರಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿರೀಕ್ಷೆ ಇರುವ ಪ್ರಮುಖ ಪ್ರಾದೇಶಿಕ ಪಕ್ಷಗಳು ಬಹುತೇಕ ಬಿಜೆಪಿಯಿಂದ ದೂರವೇ ಉಳಿದಿವೆ. ಹಾಗಾಗಿ, ಪರಸ್ಪರರ ನಡುವೆ ಅಪನಂಬಿಕೆ ಬಿತ್ತುವ ಮೂಲಕ ಕಾಂಗ್ರೆಸ್ ಮತ್ತು ದಕ್ಷಿಣದ ಪ್ರಭಾವಿ ಪ್ರಾದೇಶಿಕ ಪಕ್ಷಗಳ ನಡುವೆ ಈಗಿರುವ ಹೊಂದಾಣಿಕೆಯನ್ನು ಒಡೆದುಹಾಕುವ ತಂತ್ರಗಾರಿಕೆಯ ಭಾಗವಾಗಿ ಕೆಸಿಆರ್ ಅವರು ಫೆಡರಲ್ ಫ್ರಂಟ್ ರಚನೆಗೆ ಚಾಲನೆ ನೀಡಿದ್ದಾರೆಯೇ? ಆ ಮೂಲಕ ಕೆಸಿಆರ್ ಅವರು ಮೋದಿಯ ದಾಳವಾಗಿ ಬಳಕೆಯಾಗುತ್ತಿದ್ದಾರೆಯೇ?
ಈ ನಡುವೆ, ಕೆಸಿಆರ್ ಮತ್ತು ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೂ ಫೆಡರಲ್ ಫ್ರಂಟ್ ರಚನೆಯ ಈ ನಡೆ ಮೇ 23ರ ನಂತರ ದಕ್ಷಿಣ ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ಇನ್ನಷ್ಟು ಗೊಂದಲ ಹುಟ್ಟುಹಾಕಬಹುದು. ಆಗ ಅಂತಹ ಗೊಂದಲ, ಅನುಮಾನ ಮತ್ತು ಶಂಕೆಗಳ ಲಾಭ ಪಡೆಯುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಸರಳ. ಸಹಜವಾಗೇ ಅದು ಬಿಜೆಪಿಗೆ ಲಾಭ ತರಲಿದೆ. ಅಂತಹ ದೂರಗಾಮಿ ತಂತ್ರಗಾರಿಕೆಗೆ ಕೆಸಿಆರ್ ಚಾಲನೆ ನೀಡಿದ್ದಾರೆಯೇ? ಎಂಬ ಶಂಕೆಯೂ ಇದೆ.
ಸ್ವತಃ ಚಂದ್ರಬಾಬು ನಾಯ್ಡು ಮತ್ತು ಎಚ್ ಡಿ ದೇವೇಗೌಡರು ಚುನಾವಣೆಯ ಮತದಾನ ಆರಂಭಕ್ಕೆ ಮುನ್ನ ತಾವು ಪ್ರಧಾನಿ ಅಭ್ಯರ್ಥಿಗಳಲ್ಲ ಎಂದಿದ್ದರು. ಆದರೆ, ಮೂರನೇ ಹಂತದ ಮತದಾನದ ಬಳಿಕ ಬಿಜೆಪಿಯ ಪತನದ ಸೂಚನೆ ಸಿಗುತ್ತಿದ್ದಂತೆ ಅವರೂ ಮೌನಕ್ಕೆ ಜಾರಿದ್ದಾರೆ ಮತ್ತು ತೆರೆಮರೆಯಲ್ಲಿ ದಿಲ್ಲಿ ಗದ್ದುಗೆಯ ಕನಸು ಕಾಣತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿ ಕೆಸಿಆರ್ ಆರಂಭಿಸಿರುವ ಈ ಪ್ರಯತ್ನ ಒಂದು ರೀತಿಯ ಲಿಟ್ಮಸ್ ಟೆಸ್ಟ್ ಎಂಬುದಂತೂ ದಿಟ. ಫೆಡರಲ್ ಫ್ರಂಟ್ ಪ್ರಸ್ತಾವನೆಯ ಮೂಲಕ ಈಗ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಪ್ರಭಾವಿ ಪಕ್ಷಗಳ ಒಲವು-ನಿಲುವುಗಳು ನಿಧಾನಕ್ಕೆ ನಿಚ್ಛಳವಾಗತೊಡಗಿವೆ. ಇನ್ನು ಫಲಿತಾಂಶಕ್ಕೆ ಉಳಿದಿರುವ 15 ದಿನದಲ್ಲಿ ಮತ್ತೇನೇನು ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ, ಉತ್ತರದಲ್ಲಿ ಮಾಯಾವತಿಯವರನ್ನು ಮುಂದಿಟ್ಟುಕೊಂಡು ಮತ್ತೊಂದು ಪರ್ಯಾಯ ರಂಗದ ಪ್ರಯತ್ನಗಳು ಬಿರುಸುಗೊಂಡಿವೆ. ಬಿಎಸ್ಪಿ-ಎಸ್ಪಿ ಘಟಬಂಧನದ ನಾಯಕರು ಮಾಯಾವತಿಯವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದ ತಮ್ಮದೇ ಒಂದು ಪರ್ಯಾಯ ರಂಗದ ಮೂಲಕ, ಅತಂತ್ರ ಜನಾದೇಶದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ಈಗಾಲಗೇ ತಮ್ಮ ಹಕ್ಕು ಮಂಡಿಸಿದ್ದಾರೆ.
ಸದ್ಯಕ್ಕಂತೂ ಕೆಸಿಆರ್ ಅವರ ಈ ಪ್ರಯತ್ನ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ; ಉತ್ತರದಲ್ಲೂ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಚಾಲನೆ ನೀಡಿದೆ. ಇದು ಸದ್ಯಕ್ಕೆ ದಕ್ಷಿಣ ಧ್ರುವದಿಂದ ಉತ್ತರ ಧ್ರುವಕೂ ಬೀಸುತ್ತಿರುವ ಗಾಳಿ..