ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ದೂರು ಸಲ್ಲಿಸಿದ್ದ ಸುಪ್ರೀ ಕೋರ್ಟಿನ ಕಿರಿಯ ಉದ್ಯೋಗಿ ತನ್ನ “ಆರೋಪದಲ್ಲಿ ಯಾವುದೇ ಹುರುಳಿಲ್ಲ” ಎಂದು ಆಂತರಿಕ ತನಿಖಾ ಸಮಿತಿ ಹೇಳಿರುವುದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತನಿಖಾ ಸಮಿತಿ ಸದಸ್ಯರಿಗೆ ಎರಡು ಪುಟಗಳ ಪತ್ರ ಬರೆದಿರುವ ದೂರುದಾರ ಮಹಿಳೆ ಸಮಿತಿ ಸಲ್ಲಿಸಿರುವ ವರದಿಯನ್ನು ತನಗೂ ನೀಡಬೇಕೆಂದು ಆಗ್ರಹಪಡಿಸಿದ್ದಾರೆ.
ನ್ಯಾ.ಎಸ್.ಎ.ಬೋಬ್ಡೆ ಅಧ್ಯಕ್ಷತೆಯಲ್ಲಿ ನ್ಯಾ.ಇಂದೂ ಬ್ಯಾನರ್ಜಿ ಹಾಗೂ ನ್ಯಾ. ಇಂದು ಮಲ್ಹೋತ್ರಾ ಒಳಗೊಂಡ ತ್ರಿಸದಸ್ಯ ಆಂತರಿಕ ಸಮಿತಿಯು ಸೋಮವಾರ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಲೈಂಗಿಕ ಕಿರಕುಳ ಆರೋಪದ ಪ್ರಕರಣದಲ್ಲಿ ತನ್ನ ತನಿಖಾ ವರದಿಯನ್ನು ಸಿಜಎಐ ರಂಜನ್ ಗೊಗೋಯ್ ಅವರ ನಂತರದ ಹಿರಿಯ ನ್ಯಾಯಮೂರ್ತಿಗಳಿಗೆ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ (ರಂಜನ್ ಗೊಗೋಯ್) ಸಲ್ಲಿಸಿತ್ತು. ಉಭಯ ಪಕ್ಷಗಳ ವಿಚಾರಣೆ ನಂತರ ಸಿಜೆಐ ರಂಜನ್ ಗೊಗೋಯ್ ಮೇಲೆ ಸುಪ್ರೀಂ ಕೋರ್ಟಿನ ಕಿರಿಯ ಉದ್ಯೋಗಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಿತಿ ನಂತರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇಂದಿರಾ ಜೈಸಿಂಗ್ ವಿರುದ್ಧ ಭಾರತದ ಸುಪ್ರೀಂ ಕೋರ್ಟ್ (2003)ರ ಪ್ರಕರಣದ ಅನ್ವಯ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಬಹಿರಂಗ ಪಡಿಸುವ ಅಗತ್ಯವಿಲ್ಲ ಎಂದೂ ಅದು ತಿಳಿಸಿತ್ತು.
ಸಮಿತಿಯ ಈ ನಿಲುವಿಗೆ ದೂರುದಾರ ಮಹಿಳೆ ತಕರಾರು ಸಲ್ಲಿಸಿ ಬರೆದಿರುವ ಪತ್ರದಲ್ಲಿ,
“ನಾನು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ನನ್ನ ಅನುಭವವನ್ನು ವಿವರವಾಗಿ ಸ್ಪಷ್ಟವಾಗಿ ದಾಖಲಿಸಿದ್ದೆ, ಸಮಿತಿಯ ಮುಂದೆ ನನ್ನ ಮೇಲೇ ನಡೆದ ಲೈಂಗಿಕ ಕಿರುಕುಳವನ್ನು ಪುನರುಚ್ಛರಿಸಿದ್ದೆ, ಆದರೂ ನನ್ನ ಆರೋಪದಲ್ಲಿ “ಹುರುಳಿಲ್ಲ” ಎಂದು ಸಮಿತಿ ಹೇಳಿರುವುದು ನನಗೆ ಆಘಾತ ತಂದಿದೆ” ಎಂದು ತಿಳಿಸಿದ್ದಾರೆ.
ಸಮಿತಿಯು ತನಿಖೆ ನಡೆಸುವ ವಿಚಾರಲ್ಲಿ ಮೂಲಭೂತ ತತ್ವಗಳನ್ನೂ ಪಾಲಿಸದೇ ಇದ್ದುದರಿಂದ ತಾನು ತನಿಖಾ ಪ್ರಕ್ರಿಯೆಯನ್ನು ಬಹಿಷ್ಕರಿಸಿದ್ದು, ಇಷ್ಟಾಗಿಯೂ ನನ್ನ ವಿರುದ್ಧವೇ ಸಮಿತಿ ತೀರ್ಮಾನ ಮಾಡಿರುವುದು ತನಗೆ ಆಘಾತ ತಂದಿದೆ ಎಂದೂ ಮಹಿಳೆ ಪತ್ರದಲ್ಲಿ ಹೇಳಿದ್ದಾರೆ.


“ತನಿಖಾ ಸಮಿತಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಸ್ವತಃ ದೂರುದಾಳಾದ ನನಗೂ ಸಮಿತಿಯ ವರದಿಯನ್ನು ನೀಡಲಾಗುವುದಿಲ್ಲ ಎಂದು ತೋರುತ್ತಿದೆ. ಮುಖ್ಯ ನ್ಯಾಯಮೂರ್ತಿಗಳಿಗೆ ವರದಿಯ ಪ್ರತಿಯನ್ನು ನೀಡಲಾಗಿದೆ ಎಂದ ಮೇಲೆ ನಾನೂ ಸಹ ವರದಿಯ ಪ್ರತಿಯನ್ನು ಪಡೆಯಲು ಹಕ್ಕು ಹೊಂದಿದ್ದೇನೆ” ಎಂದಿರುವ ದೂರುದಾರ ಮಹಿಳೆ ಸ್ವತಃ ದೂರುದಾರಳಿಗೇ ತನಿಖಾ ಸಮಿತಿ ವರದಿ ನೀಡುವುದಿಲ್ಲ ಎನ್ನುವುದು ವಿಚಿತ್ರವೆನಿಸುತ್ತಿದೆ” ಎಂದಿದ್ದಾರೆ.
“ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ಪರಿಹಾರ) ಕಾಯ್ದೆ 2013ರ ಸೆಕ್ಷನ್ 13ರ ಪ್ರಕಾರ ತನಿಖಾ ವರದಿಯ ಪ್ರತಿಯನ್ನು ಆರೋಪಿ ಮತ್ತು ದೂರುದಾರರಿಬ್ಬರೂ ಪಡೆದುಕೊಳ್ಳುವ ಹಕ್ಕನ್ನು ನೀಡಲಾಗಿದೆ, ವರದಿಯನ್ನು ನೀಡದೇ ಇರುವುದು ನ್ಯಾಯತತ್ವಕ್ಕೆ ವಿರುದ್ಧವಾದದ್ದು” ಎಂದು ಹೇಳಿರುವ ಮಹಿಳೆ “ನನ್ನ ದೂರಿನಲ್ಲಿ “ಯಾವುದೇ ಹುರುಳಿಲ್ಲ” ಎಂದು ಸಮಿತಿ ಹೇಗೆ, ಯಾಕೆ ಮತ್ತು ಯಾವ ಆಧಾರದಲ್ಲಿ ವರದಿ ನೀಡಿದೆ ಎಂದು ತಿಳಿದುಕೊಳ್ಳುವ ಹಕ್ಕಿರುವುದರಿಂದ ನನಗೆ ವರದಿಯ ಒಂದು ಪತ್ರವನ್ನು ನೀಡಲು ಕೋರುತ್ತೇನೆ” ಎಂದು ಮಹಿಳೆ ನ್ಯಾಯಾಧೀಶರ ಸಮಿತಿಯನ್ನು ಕೋರಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಂದು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ 50ಕ್ಕೂ ಹೆಚ್ಚು ಮಹಿಳಾ ಹಕ್ಕು ಕಾರ್ಯಕರ್ತೆಯ್ನ್ನು ಪೊಲೀಸರು ಬಂಧಿಸಿ ಮೂರೂವರೆ ತಾಸಿನ ನಂತರ ಬಿಡುಗಡೆ ಮಾಡಿದ್ದಾರೆ.