ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರಿಗೆ ನ್ಯಾಯಾಧೀಶರ ಆಂತರಿಕ ತನಿಖಾ ಸಮಿತಿ ಕ್ಲೀನ್ ಚಿಟ್ ನೀಡಿರುವುದನ್ನು ಖಂಡಿಸಿ ಸುಪ್ರೀಂ ಕೋರ್ಟ್ ಮುಂದೆ ಭಾರೀ ಪ್ರತಿಭಟನೆ ನಡೆದಿದ್ದು, ಪೊಲೀಸರನ್ನು ಪ್ರತಿಭಟನಾಕಾರನ್ನು ಬಂಧಿಸಿದ್ದಾರೆ.
ಸಿಜೆಐ ವಿರುದ್ಧ ನ್ಯಾಯಾಲಯದ ಮಾಜಿ ಸಿಬ್ಬಂದಿ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹುರುಳಿಲ್ಲ ಎಂದು ಆಂತರಿಕ ವಿಚಾರಣಾ ಸಮಿತಿ ನೀಡಿದ್ದ ಕ್ಲೀನ್ ಚಿಟ್ ಗೆ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್ ಆವರಣದ ಸುತ್ತ ಐಪಿಸಿ ಸೆಕ್ಷನ್ 144 ಜಾರಿಗೊಳಿಸಿದ್ದು ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಕೋರ್ಟ್ ಆವರಣದಿಂದ ಹೊರಹಾಕುತ್ತಿದ್ದಾರೆ. ಹಲವರನ್ನು ಪೊಲೀಸ್ ವಾಹನದ ಮೂಲಕ ಮಂದಿರ್ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸುಪ್ರೀಂ ಕೋರ್ಟ್ ಆವರಣ ಅತಿ ಸೂಕ್ಷ್ಮ ಪ್ರದೇಶವಾದ್ದರಿಂದ ಸುತ್ತಮುತ್ತ ಯಾವಾಗಲೂ 144 ಜಾರಿಯಿರುತ್ತದೆ. ಆದ್ದರಿಂದ ಇಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಬಂಧಿಸಲಾಗಿದೆ. ಮಹಿಳಾ ಪ್ರತಿಭಟನಕಾರರಿಗೆ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಮೊದಲೇ ಸೂಚನೆ ಕೊಟ್ಟಿದ್ದರೂ ಇಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ಮಧುರ್ ವರ್ಮಾ ತಿಳಿಸಿದ್ದಾರೆ.