ಬೆಂಗಳೂರು: ಮಾಜಿ ಸಂಸದೆ, ಕಾಂಗ್ರೆಸ್ ಯುವನಾಯಕಿ ಹಾಗೂ ದಕ್ಷಿಣ ಭಾರತದ ಬಹುಭಾಷಾ ಚಿತ್ರನಟಿ ರಮ್ಯ (ದಿವ್ಯಸ್ಪಂದನ) ಅವರ ಹೆಸರನ್ನು ಏಷ್ಯಾನೆಟ್ ಮತ್ತು ಸುವರ್ಣ ನ್ಯೂಸ್ ಕನ್ನಡ ಚಾನೆಲ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತಪ್ಪಾಗಿ ಸೇರ್ಪಡೆಗೊಳಿಸಿ ಆಕೆಯ ಮಾನಹಾನಿಗೆ ಕಾರಣವಾಗಿವೆ ಎಂದು ಹೇಳಿರುವ ಬೆಂಗಳೂರಿನ ಸಿವಿಲ್ ಕೋರ್ಟು ಇವೆರಡೂ ಟಿವಿ ವಾಹಿನಿಗಳು ರಮ್ಯಾ ಅವರಿಗೆ 50 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೆ ಈ ಟಿವಿ ವಾಹಿನಿಗಳು ತನ್ನನ್ನು ಮ್ಯಾಚ್ ಫಿಕ್ಸಿಂಗ್/ ಸ್ಪಾಟ್ ಫಿಕ್ಸಿಂಗ್ ಹಗರಣಗಳಲ್ಲಿ ಸೇರಿಸುವಂತಹ ಯಾವುದೇ ಕಾರ್ಯಕ್ರಮವನ್ನೂ ಪ್ರಸಾರ ಮಾಡದಂತೆ ನಿಷೇಧ ಹೇರುವ ಶಾಶ್ವತ ನಿರ್ಬಂಧಾಜ್ಞೆಗೆ ಆದೇಶ ನೀಡಬೇಕೆಂದು ಕೋರಿದ್ದ ಮಾಜಿ ಸಂಸದೆಯ ಅಹವಾಲನ್ನು ನ್ಯಾಯಾಲಯ ಪುರಸ್ಕರಿಸಿದೆ.
ಏಷ್ಯಾನೆಟ್ ನಿಯಂತ್ರಣದಲ್ಲಿರುವ ಸುವರ್ಣ ನ್ಯೂಸ್ ಕನ್ನಡ ಚಾನೆಲ್ ಮೇ 2013ರಂದು ಎರಡು ಕಾರ್ಯಕ್ರಮಗಳನ್ನು ಬಿತ್ತರಿಸಿತ್ತು. ಕೆಲವು ಕನ್ನಡ ಸಿನಿಮಾ ತಾರೆಯರು “ಬೆಟ್ಟಿಂಗ್” ಮತ್ತು “ಸ್ಪಾಟ್ ಫಿಕ್ಸಿಂಗ್” ಹಗರಣದಲ್ಲಿ ಭಾಗಿಯಾಗಿರುವುದಾಗಿ ಅದು ಆರೋಪಿಸಿತ್ತು. ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ಬ್ರ್ಯಾಂಡ್ ಅಂಬಾಸಡರ್ ಆಗಿದ್ದ ದಿವ್ಯ ಸ್ಪಂದನಾ ಅಲಿಯಾಸ್ ರಮ್ಯ ಅವರ ಭಾವಚಿತ್ರಗಳನ್ನು ಆ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗಿತ್ತು.
ಈ ಹಗರಣದಲ್ಲಿ ತಮ್ಮ ಕೈವಾಡವಿದೆ ಎಂಬಂತೆ ಸೂಚಿಸಲು ಸುವರ್ಣ ಚಾನೆಲ್ ಈ ಕಿಡಿಗೇಡಿ ಕೃತ್ಯ ಎಸಗಿದೆ ಎಂದು ಆರೋಪಿಸಿ ರಮ್ಯ ಪರಿಹಾರಕ್ಕಾಗಿ ಮತ್ತು ನಿಷೇಧಾತ್ಮಕ ನಿರ್ಬಂಧದ ಆದೇಶ ಕೋರಿ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದರು.
2013ರ ಐಪಿಎಲ್ ಗೂ ತನಗೂ ಯಾವುದೇ ರೀತಿಯ ಸಂಬಂಧವೂ ಇಲ್ಲವೆಂದು ತಿಳಿಸಿದ್ದ ಕಾಂಗ್ರೆಸ್ ಯುವನಾಯಕಿ ರಮ್ಯ, ಆ ಸಂದರ್ಭದಲ್ಲಿ ತಾನು ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದರು. ಸುದ್ದಿ ವಾಹಿನಿಗಳು ಸಾರ್ವಜನಿಕ ಘಟನಾವಳಿಗಳಿಗೂ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೂ ಸಂಬಂಧಪಟ್ಟ ಸುದ್ದಿಗಳನ್ನು ಪ್ರಸಾರ ಮಾಡಲು ಅಧಿಕಾರ ಹೊಂದಿರುತ್ತವೆ ಎಂದು ಏಷ್ಯಾನೆಟ್ ಮತ್ತು ಸುವರ್ಣ ನ್ಯೂಸ್ ಚಾನೆಲ್ ಗಳು ವಾದಿಸಿದ್ದವು. ಅಲ್ಲದೆ ತಾವು ದಿವ್ಯ ಸ್ಪಂದನ ಯಾನೆ ರಮ್ಯ ಅವರನ್ನು ಎಲ್ಲೂ ನೇರ ಉಲ್ಲೇಖ ಮಾಡಿರಲಿಲ್ಲವೆಂದೂ ಹಾಗಾಗಿ ಆಕೆಗೆ ಯಾವುದೇ ಹಾನಿಯಾಗಲೀ ನಷ್ಟವಾಗಲೀ ಸಂಭವಿಸಿಲ್ಲ ಎಂದೂ ಹೇಳಿ, ಐಪಿಎಲ್ ಪ್ರಕರಣದಲ್ಲಿ ಪೊಲೀಸ್ ತನಿಖೆಯು ಕನ್ನಡ ಸಿನಿಮಾರಂಗದ ಇಬ್ಬರ ಕೈವಾಡವನ್ನು ಬಯಲುಗೊಳಿಸಿತ್ತೆಂದು ತಿಳಿಸಿದ್ದವು.
“ದಾಖಲೆಗಳನ್ನು ಗಮನಿಸಿದಾಗ, ಅರ್ಜಿದಾರರು ಕಳಂಕರಹಿತವಾಗಿದ್ದಾರೆಂದೂ, ಕನ್ನಡ ಸಿನಿಮಾ ಉದ್ಯಮದಲ್ಲಿ ಒಳ್ಳೆಯ ನಟಿಯಾಗಿದ್ದು ಸಂಸತ್ ಸದಸ್ಯೆಯಾಗಿಯೂ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ” ಎಂದು ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 8ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪಾಟೀಲ್ ನಾಗಲಿಂಗಗೌಡ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
2013ರ ಐಪಿಎಲ್ ಗೂ ದಿವ್ಯ ಸ್ಪಂದನ ಅವರಿಗೂ ಸಂಬಂಧವಿಲ್ಲವೆಂದು ಹಾಗೂ ಈ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬಯಿ ಪೊಲೀಸರು ಸೆರೆ ಹಿಡಿದಿದ್ದ ವ್ಯಕ್ತಿಗಳು ದಿವ್ಯ ಸ್ಪಂದನ ಅವರನ್ನು ಹೆಸರಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.
“ಪತ್ರಿಕೋದ್ಯಮದ ನೈತಿಕತೆಯ ಸಂಪೂರ್ಣ ಉಲ್ಲಂಘನೆ”
ದಿವ್ಯ ಸ್ಪಂದನ ಅವರನ್ನು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸೇರಿಸಿ ಕಾರ್ಯಕ್ರಮ ಪ್ರಸಾರ ಮಾಡಿದ ಸುವರ್ಣ ನ್ಯೂಸ್ ವಾಹಿನಿಯ ಕೃತ್ಯವು ನಿಸ್ಸಂದೇಹವಾಗಿ ಸಮಾಜದಲ್ಲಿ ಆಕೆಯ ಘನತೆಗೆ ಕುಂದು ತರುತ್ತದೆ ಎಂದು ನ್ಯಾಯಾಲಯ ಹೇಳಿದೆ. “ಅಲ್ಲದೆ ಒಮ್ಮೆ ಪ್ರಕಟಣೆಗಳು ಮತ್ತು ಪ್ರಸಾರಗಳು ಮಾನಹಾನಿಕರ ಎಂದು ಅರ್ಜಿದಾರರು ಸಾಬೀತುಪಡಿಸಿಬಿಟ್ಟರೆ, ಆಗ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಪ್ರತಿವಾದಿಯ (ಸುದ್ದಿ ಸಂಸ್ಥೆ) ಮೇಲೆ ಬೀಳಲಿದೆ.” “…ಸುವರ್ಣ ನ್ಯೂಸ್ ವಾಹಿನಿ ಪ್ರಸಾರ ಮಾಡಿರುವಂತೆ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಬ್ರ್ಯಾಂಡ್ ಅಂಬಾಸಡರ್ ಆಗಿ ದಿವ್ಯ ಸ್ಪಂದನ ಅವರು ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗಿದ್ದರೆಂದು ಹೇಳಲು ಅವರು ಯಾವುದೇ ದಾಖಲೆಗಳನ್ನೂ ಒದಗಿಸಿಲ್ಲ. ಆದ್ದರಿಂದ ಸುವರ್ಣ ನ್ಯೂಸ್ ಚಾನೆಲ್ ನ ಕೃತ್ಯವು ಪತ್ರಿಕೋದ್ಯಮದ ನೈತಿಕತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ, ಇದು ಉದ್ದೇಶಪೂರ್ವಕವಾಗಿ ಅರ್ಜಿದಾರರ ಜನಪ್ರಿಯತೆಯನ್ನು ನಾಶಮಾಡುವುದಾಗಿದೆ ಹಾಗೂ ಆಕೆಯ ಘನತೆಗೆ ಕುಂದು ಉಂಟುಮಾಡುವ ದುರುದ್ದೇಶದಿಂದ ಎಸಗಿರುವ ಕೃತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಘನತೆ ಎಂಬುದು ಯಾವುದೇ ವ್ಯಕ್ತಿಯ ಅತ್ಯಂತ ಬೆಲೆ ಬಾಳುವ ಸ್ವತ್ತಾಗಿರುತ್ತದೆ ಎಂಬುದು ಕಾನೂನಿನ ತತ್ವ. ಅದು ಎಷ್ಟೇ ಮೊತ್ತದ ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತಹದ್ದು. ಈ ಟಿವಿ ವಾಹಿನಿಯ ಕಾರ್ಯಕ್ರಮ/ಭಾವಚಿತ್ರಗಳು ಅಂತಹ ಘನತೆಯನ್ನು ಹಾಳುಗೆಡಹುವ ಸಾಧ್ಯತೆ ಇದ್ದಾಗ ಅರ್ಜಿದಾರರಿಗೆ ಉಂಟಾಗಿದೆ ಎಂದು ಆರೋಪಿಸಲಾಗಿರುವ ಹಾನಿ ಸರಿಪಡಿಸಲಾರದಂತಹದ್ದು” ಎಂದೂ ಅಭಿಪ್ರಾಯಪಟ್ಟಿರುವ ನ್ಯಾಯಾಲಯ ನಿಷೇಧಾತ್ಮಕ ನಿರ್ಬಂಧಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
ನ್ಯಾಯಾಲಯದ ತೀರ್ಪಿಗೆ ಟ್ವೀಟ್ ಮಾಡಿ ನೀಡಿರುವ ರಮ್ಯ, “ನ್ಯಾಯ ಸಿಕ್ಕಿದೆ. ನನಗೆ ಸಮಾಧಾನವಾಗಿದೆ. ನಾನು ಕೃತಜ್ಞಳಾಗಿದ್ದೇನೆ” ಎಂದಿದ್ದಾರೆ. ತಮ್ಮ ವಕೀಲರಿಗೆ ಧನ್ಯವಾದ ಅರ್ಪಿಸಿದ್ದಾರೆ.
Justice has been delivered and I’m relieved and grateful.
Thank you @Promodnair1 for the support and motivation through the years! https://t.co/jmZyVrYyli— Divya Spandana/Ramya (@divyaspandana) May 8, 2019
ಕಾಂಗ್ರೆಸ್ ನಾಯಕಿ ದಿವ್ಯ ಸ್ಪಂದನ ಅಲಿಯಾಸ್ ನಟಿ ರಮ್ಯ ಅವರನ್ನು ಅರಿಸ್ಟಾ ಚೇಂಬರ್ಸ್ ಸಂಸ್ಥೆಯ ವಕೀಲರಾದ ಪ್ರಮೋದ್ ನಾಯರ್ ಪ್ರತಿನಿಧಿಸಿದ್ದರೆ ಸುವರ್ಣ ನ್ಯೂಸ್ ಟಿವಿ ವಾಹಿನಿಯ ಪರವಾಗಿ ಪೂವಯ್ಯ & ಕಂ. ವಕಾಲತ್ತು ನಡೆಸಿತ್ತು.
ಪತ್ರಿಕೋದ್ಯಮದ ನೈತಿಕತೆಯನ್ನು ಮರೆತು ತಮ್ಮ ರಾಜಕೀಯ ಧೋರಣೆಯ ವಿರೋಧಿಗಳ ಕುರಿತು ಸುಳ್ಳುಸುದ್ದಿ ಪ್ರಸಾರ ಮಾಡಿ ಅವರ ಮಾನಹಾನಿ ಮಾಡುವ ಸುದ್ದಿ ಸಂಸ್ಥೆಗಳಿಗೆ ನ್ಯಾಯಾಲಯದ ಈ ಆದೇಶವು ಒಂದು ಪಾಠವೆಂದೇ ಹೇಳಲಾಗುತ್ತಿದೆ. ಇನ್ನಾದರೂ ಸುದ್ದಿವಾಹಿನಿಗಳ ಇಂತಹ ಕಿಡಿಗೇಡಿ ಕೃತ್ಯಗಳಿಗೆ ಬ್ರೇಕ್ ಬೀಳಲಿದೆಯೇ? ಕಾದು ನೋಡಬೇಕು.