ಸುಭಾಷಿಣಿ ಎಂಬ ಹೆಣ್ಣು ಮಗಳು ನಮ್ಮ ‘ಆದಿವಾಸಿ ರಕ್ಷಣಾ ಪರಿಷತ್ತಿ’ನ ಅದ್ಯಕ್ಷ ಎಂ.ಕೃಷ್ಣಯ್ಯನವರ ಮಗಳು. ಇದೀಗತಾನೆ ಪೋನ್ ಮಾಡಿ “ಅಂಕಲ್.. ಇಲ್ಲಿ ಆದಿವಾಸಿಯೊಬ್ಬನನ್ನು ಕೊಂದು ಹಾಕಿದ್ದಾರೆ.. ಈ ಅನ್ಯಾಯದ ವಿರುದ್ಧ ನಾಳೆ ಬೆಳಿಗ್ಗೆ ಧರಣಿ ಇದೆ.. ನೀವು ಬರಲು ಸಾದ್ಯವೆ..?” ಎಂದಳು. “ಇಲ್ಲ ಮಗಳೇ, ನಾಳೆ ನನಗೆ ಇಲ್ಲೇ ಒಂದಷ್ಟು ಪೂರ್ವನಿಶ್ಚಿತ ಕಾರ್ಯಕ್ರಮಗಳಿವೆ.. ಬರಲು ಆಗಲಾರದು.. ವಿಷಯ ಏನು ಹೇಳು..?” ಎಂದೆ. ಸುಭಾಷಿಣಿ ಹೇಳತೊಡಗಿದಳು…
ಹುಣಸೂರು ತಾಲ್ಲೂಕು, ಹನಗೋಡು ಹೋಬಳಿಯ ಹರಳಹಳ್ಳೀ ಹಾಡಿಯ ಆದಿವಾಸಿ ಜೇನುಕುರುಬರ ಮಹದೇವನನ್ನು ಬಲಿಷ್ಟ ಜಾತಿಯ ಜಮೀನುದಾರರ ಮಗ ಅಭಿಷೇಕ್ ಎಂಬಾತ ಟ್ರಾಕ್ಟರ್ ಹತ್ತಿಸಿ, ಮೈಮೇಲೆ ಆಸಿಡ್ ಸುರಿದು ಕೊಂದಿದ್ದಾನೆ!?
ಸ್ವತಹ ಅಭಿಷೇಕ್ ಮೃತ ಮಹದೇವನ ಮನೆಗೆ ಹೋಗಿ ಮೃತನ ಹೆಂಡತಿಗೆ ” ನಿನ್ನ ಗಂಡ ಹೊಲದಲ್ಲಿ ಸತ್ತು ಬಿದ್ದವನೆ.. ಅವನ ಹೆಣವನ್ನು ಊರಿಗೆ ತರಬೇಡ.. ಹಾಗೇ ಕೊಂಡೊಯ್ದು ದಫನ್ ಮಾಡು..” ಎಂದು ಹೇಳಿ ಓಡಿ ಹೋಗಿದ್ದಾನೆ!
ಇದಕ್ಕೆ ಹಿನ್ನೆಲೆ…?
ಅನೇಕ ವರ್ಷಗಳ ಹೋರಾಟದ ಫಲ ಈಚೆಗೆ ಒಂದಷ್ಟು ಜನ ಆದಿವಾಸಿಗಳಿಗೆ ಸರ್ಕಾರದಿಂದ ಭೂಮಿ ಸಿಕ್ಕಿತ್ತು. ಜೇನುಕುರುಬರು ಆ ಭೂಮಿಯನ್ನು ಉತ್ತುಬಿತ್ತುತಿದ್ದರು. ಅಭಿಷೇಕ್ ಎಂಬ ಜಮೀನುದಾರನ ಮಗ ಅಟ್ಟಹಾಸದಿಂದ ಆದಿವಾಸಿಗಳು ಶ್ರಮವಹಿಸಿ ಬೆಳೆದ ಪೈರಿನ ಮೇಲೆ ಟ್ರಾಕ್ಟರ್ ಓಡಿಸುತ್ತಿದ್ದ! ಜೇನುಕುರುಬರು ಇದನ್ನು ಪ್ರತಿಭಟಿಸುತಿದ್ದರು. ಇವರ ಮುಂಚೂಣಿಯಲ್ಲಿದ್ದವನೇ ಮಹದೇವ. ಅನೇಕ ಸಲ ಇವರಿಬ್ಬರ ನಡುವೆ ಚಕಮಕಿಯಾಗಿ ಮಹದೇವನಿಗೆ ಅಭಿಷೇಕ್ ಕೊಲೆ ಮಾಡುವ ದಮಕಿ ಹಾಕಿದ್ದ. ಈಗ ಮಹದೇವ ಸತ್ತು ಬಿದಿದ್ದಾನೆ. ಆದಿವಾಸಿಗಳು ನ್ಯಾಯ ಕೇಳುತಿದ್ದಾರೆ.
ಇಷ್ಟೆಲ್ಲಾ ಸಾಂದರ್ಭಿಕ ಸಾಕ್ಷಾಧಾರಗಳಿದ್ದರೂ ಪೋಲಿಸರು ಇದನ್ನು ಪರಿಗಣಿಸಿಲ್ಲ!? ಪೋಲಿಸರ ಪ್ರಕಾರ ಇದು ಅಸಹಜ ಸಾವಷ್ಟೆ! ಮಹದೇವನ ಮೈಮೇಲೆ ಆಸಿಡ್ ಬಿದ್ದು ಚರ್ಮ ಎದ್ದಿದ್ದರೂ ಪೋಲಿಸರ ಪ್ರಕಾರ “ಅದು ಬಿಸಿಲಿಗೆ ಆಗಿದ್ದು”!! (ಇಲ್ಲಿ ನೀಡಿರುವ ಶವದ ಚಿತ್ರವನ್ನು ವಿಸ್ತರಿಸಿ ನೋಡಿ, ಚರ್ಮ ಎದ್ದಿರುವುದು ಕಾಣುತ್ತೆ)
ಸಾವು ಸಂಭವಿಸಿದ್ದು ಕಳೆದ ಏಪ್ರಿಲ್ 29ರಂದು, ಪೋಸ್ಟ್ ಮಾರ್ಟಂ ಆಗಿದ್ದು 30ರಂದು ಆದರೆ ಈವರೆಗೂ(ಒಂದು ವಾರ) ಪೋಸ್ಟ್ ಮಾರ್ಟಂ ವರದಿ ಬಂದಿಲ್ಲ!?
ಎಸ್.ಪಿ. ಮತ್ತು ಎಸ್.ಐ. ತನಿಖೆ ಯನ್ನು ವಸ್ತುನಿಷ್ಠವಾಗಿ ಮಾಡಬೇಕೆಂದು ಪ್ರಯತ್ನಿಸುತಿದ್ದಾರೆ ಆದರೆ ಡಿ.ವೈ.ಎಸ್.ಪಿ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಕೇಸನ್ನು ದುರ್ಬಲಗೊಳಿಸಲು ಸಿದ್ದತೆ ನಡೆಸಿದ್ದಾರೆ! ಇದಕ್ಕೆ ಕಾರಣಗಳೇನಿರಬಹುದು?
ಈ ಹಿನ್ನೆಲೆಯಲ್ಲಿ ನಾಳೆ ಧರಣಿಯಿದೆ. ಪೋಲಿಸರು ಧರಣಿ ಮಾಡದಿರುವಂತೆ ಆದಿವಾಸಿ ಸಂಘಟನೆಯ ಮೇಲೆ ಒತ್ತಡ ತರುತಿದ್ದಾರೆ. ಈ ಧರಣಿ ಕಾರ್ಯಕ್ರಮದ ನಂತರ ನಾನು ಈ ಆದಿವಾಸಿಗಳೊಂದಿಗೆ ಗೃಹ ಸಚಿವರನ್ನು ಬೆಟ್ಟಿಯಾಗುವ ಕಾರ್ಯಕ್ರಮವಿದೆ.
ನನ್ನ ಪ್ರಶ್ನೆ ಇಷ್ಟೆ…? ಅಪರಾಧವೊಂದಕ್ಕೆ ಇಷ್ಟೆಲ್ಲಾ ಸಾಕ್ಷಾಧಾರಗಳಿದ್ದು, ಇಷ್ಟೆಲ್ಲಾ ಹಿನ್ನೆಲೆಯಿರುವಾಗ ಇಲ್ಲಿನ ಪೋಲಿಸರು ಅಪಾದಿತನನ್ನು ಕನಿಷ್ಟ ವಶಕ್ಕೆ ಪಡೆದು ವಿಚಾರಣೆ ನಡೆಸಲು ಏನು ಕಷ್ಟ….? ಈ ಅಸಂಘಟಿತ ಆದಿವಾಸಿ ಅಲೆಮಾರಿಗಳ ಸಾವಿಗೆ ಕಿಮ್ಮತ್ತೇ ಇಲ್ಲವೆ..?
– ಸಿ.ಎಸ್.ದ್ವಾರಕಾನಾಥ್
ಕೃಪೆ: ಫೇಸ್ಬುಕ್
ಹೇಳಿಕೆ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ನಿಲುವನ್ನು ಪ್ರತಿಫಲಿಸುತ್ತವೆ