ನರೇಂದ್ರಮೋದಿ ಸರ್ಕಾರದ ಬಹುತೇಕ ಘೋಷಣೆ-ಯೋಜನೆಗಳು ಮಾಧ್ಯಮಗಳ ಕಣ್ಣಿಗೆ ಬಿದ್ದಿವೆಯಾದರೂ ಅವು ಗಮನಿಸದಿರುವ ಅಘೋಷಿತ ಯಶಸ್ವಿ ಯೋಜನೆಯೊಂದಿದೆ. ಅದರ ಹೆಸರು “ಪ್ರಧಾನಮಂತ್ರಿ ಬಿಲಿಯನೇರ್ ಬಚಾವೊ -” ಯೋಜನೆ ಎಂದು!
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ರೈತರು, ಯುವಜನತೆ, ಮಹಿಳೆಯರು ಮತ್ತಿತರರನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಿಸಿತು, ಹಳೆಯ ಯೋಜನೆಗಳಿಗೆ ಮರುನಾಮಕರಣ ಮಾಡಿ ತನ್ನದೆಂದೂ ಹೇಳಿಕೊಳ್ಳಲು ಹಿಂಜರಿಯಲಿಲ್ಲ. ಸರ್ಕಾರದ ಈ ಯೋಜನೆಗಳಿಗೆ ಸಾಕಷ್ಟು ಮಾಧ್ಯಮ ಪ್ರಚಾರವೂ ಗಿಟ್ಟಿತು, ಅವುಗಳ ವೈಫಲ್ಯಕ್ಕೆ ಜನ ಹಿಡಿಶಾಪ ಹಾಕಿದ್ದೂ ಉಂಟು. ಆದರೆ ಒಂದೇ ಒಂದು ಯೋಜನೆ ಅತಿಹೆಚ್ಚು ಯಶಸ್ಸು ಕಂಡರೂ ಮಾಧ್ಯಮಗಳ ಗಮನಕ್ಕೆ ಬಾರದೆ ಹೋಯಿತು. ಅದಾವುದೆಂದು ಹುಬ್ಬೇರಿಸುತ್ತೀರಾ? ಅದರ ಹೆಸರು ‘ಪ್ರಧಾನಮಂತ್ರಿ ಬಿಲಿಯನೇರ್ ಬಡಾವೊ-ಬಿಲಿಯನೇರ್ ಬಚಾವೊ – ಬಿಲಿಯನೇರ್ ಬನಾವೊ’ ಯೋಜನೆ ಎಂದು!
ಪ್ರಧಾನಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಹೊಸ ಉದ್ಯೋಗಗಳನ್ನು ಸೃಷ್ಟಿಸಿಲ್ಲವಾದರೂ ಇದ್ದ ಉದ್ಯೋಗಗಳನ್ನೂ ನಾಶಮಾಡಿತು. ಫಸಲ್ ಬಿಮಾ ಯೋಜನೆ ರೈತರಿಗಿಂತ ಕಾರ್ಪೊರೇಟ್ ಕುಳಗಳಿಗೆ ಹೆಚ್ಚು ಲಾಭ ಮಾಡಿಕೊಟ್ಟಿತು. ಸ್ಕಿಲ್ ಇಂಡಿಯಾ ಕಾರ್ಯಕ್ರಮ ಕೌಶಲ್ಯ ಉಳ್ಳವರಿಗೆ ನೌಕರಿಯನ್ನಂತೂ ಕಲ್ಪಿಸಲಿಲ್ಲ.
ಆದರೆ ಅಘೋಷಿತ ‘ಬಿಲಿಯನೇರ್ ಬಡಾವೊ – ಬಿಲಿಯನೇರ್ ಬಚಾವೊ – ಬಿಲಿಯನೇರ್ ಬನಾವೊ’ ಯೋಜನೆಯ ಯಶಸ್ಸು ಇತರ ಯೋಜನೆಗಳ ವೈಫಲ್ಯಗಳನ್ನು ಮರೆಮಾಚುತ್ತದೆ. ವಿಶೇಷವೇನೆಂದರೆ ಈ ಯೋಜನೆಯನ್ನು ಸರ್ಕಾರ ಸಾರ್ವಜನಿಕವಾಗಿ ಘೋಷಣೆ ಮಾಡಿಲ್ಲವಾದರೂ ಅದರ ಫಲಿತಾಂಶ ಮಾತ್ರ ಕಣ್ಣಿಗೆ ರಾಚುವಂತಿರುವುದರಿಂದ ಈ ಯೋಜನೆ ಬೆಳಕಿಗೆ ಬಂದಿದೆ. ಆದ್ದರಿಂದಲೇ ಈ ಯೋಜನೆ ಏನು, ಎಂತು ಎಂದು ನಾವು ತಿಳಿಯಬೇಕಿದೆ.
ಈಗಾಗಲೇ ಬಿಲಿಯನೇರ್ಗಳಾಗಿದ್ದವರು (ನೂರಾರು ಕೋಟಿಗಳ ಒಡೆಯರು) ಈ ಯೋಜನೆಯಿಂದಾಗಿ ತಮ್ಮ ಆಸ್ತಿಯನ್ನು ಇನ್ನಷ್ಟು ಬಿಲಿಯನ್ಗಳಿಗೆ ವೃದ್ಧಿಸಿಕೊಂಡರು. ತಮ್ಮ ಆಸ್ತಿಪಾಸ್ತಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದ ಶತಕೋಟ್ಯದಿಪತಿಗಳಿಗೆ ಸಹಾಯಹಸ್ತ ನೀಡಲಾಯಿತು. ಬಿಲಿಯನೇರ್ಗಳಲ್ಲದವರನ್ನು ಮೇಲೆತ್ತಿದ ಮೋದಿ ಸರ್ಕಾರ ಬಿಲಿಯನೇರ್ ಪಟ್ಟಿಯಲ್ಲಿ ಸೇರಿಸಿತು. ಯೋಜನೆಯ ಕೆಲವು ಪ್ರಮುಖ ಫಲಾನುಭವಿಗಳ ಬಗ್ಗೆ ತಿಳಿಯೋಣ.
ಆಸ್ತಿ ಇಮ್ಮಡಿಗೊಳಿಸಿಕೊಂಡ ಮುಖೇಶ್ ಅಂಬಾನಿ
ಮೋದಿ ಸರ್ಕಾರದ ಮೊದಲು ನಾಲ್ಕು ವರ್ಷಗಳಲ್ಲೇ ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಸಂಪತ್ತು ಇಮ್ಮಡಿಗೊಂಡಿದೆ. 2014-2019 ಅವಧಿಯಲ್ಲಿ ಆತನ ಆಸ್ತಿಯ ಮೌಲ್ಯ 23 ಬಿಲಿಯನ್ ಡಾಲರುಗಳಿಂದ 55 ಬಿಲಿಯನ್ ಡಾಲರುಗಗಳಿಗೆ ಏರಿದೆ. (ಒಂದು ಬಿಲಿಯನ್ ಡಾಲರ್ ಅಂದರೆ ಸು. 70 ಸಾವಿರ ಕೋಟಿ ರೂಪಾಯಿ) ಮೋದಿ ಪ್ರಧಾನಮಂತ್ರಿಯಾಗುವ ಮುನ್ನ ತನ್ನ ಇಡೀ 58 ವರ್ಷಗಳ ಜೀವನದಲ್ಲಿ ವಂಶಪಾರಂಪರ್ಯವಾಗಿ ಮತ್ತು ತಾನೇ ಸಂಪಾದಿಸಿದ ಆಸ್ತಿಗಿಂತ ಮುಖೇಶ್ ಅಂಬಾನಿ ಈ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಗಳಿಸಿದ ಸಂಪತ್ತು ಹೆಚ್ಚು ಎಂಬುದೇ ಇದರ ತಾತ್ಪರ್ಯ. ಕಳೆದ ಐದು ವರ್ಷಗಳಲ್ಲಿ ದಿನಂಪ್ರತಿ 122 ಕೋಟಿ ರೂಪಾಯಿಗಳನ್ನು ಸಂಪಾದಿಸಲು ಪಾಪ, ಅಂಬಾನಿ ಬಹಳ ದಣಿದಿರಬಹುದು! ಅನುಮಾನವೇ ಇಲ್ಲ… ಆದರೆ ಬಿಜೆಪಿ ಸರ್ಕಾರದ ನೀತಿಗಳಿರಲಿಲ್ಲವೆಂದರೆ ಆತನ ಆಸ್ತಿ ಸಾಕಷ್ಟು ಕಡಿಮೆಯಾಗಿಬಿಡುತ್ತಿತ್ತು ಎಂಬುದನ್ನು ಯಾರಾದರೂ ಒಪ್ಪಿಕೊಳ್ಳಲೇಬೇಕು.
ಜಿಯೊ ಬ್ರ್ಯಾಂಡ್ ಅಂಬಾಸಡರ್ ಆದ ಪ್ರಧಾನಿ!
ಸೆಪ್ಟೆಂಬರ್ 2016ರಲ್ಲಿ ರಿಲೈಯನ್ಸ್ ಜಿಯೊ ಪ್ರಾರಂಭವಾಗುವುದರ ಜೊತೆಗೇ ಅಂಬಾನಿ ಕಥನವೂ ಶುರುವಾಯಿತು. ಪೂರ್ಣಪುಟದ ಪತ್ರಿಕಾ ಜಾಹೀರಾತುಗಳೊಡನೆ ಜಿಯೊ ಪ್ರಾರಂಭವಾಗಿದ್ದು ನಮಗೆಲ್ಲಾ ನೆನಪಿದೆ. ಜಿಯೊ ಬ್ರ್ಯಾಂಡನ್ನು ಅನುಮೋದಿಸಿದ್ದು ಬೇರಾರೂ ಅಲ್ಲ, ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿಯವರು. ಜಾಹೀರಾತಿನಲ್ಲಿ ಪ್ರಧಾನಿಯು ಜಿಯೊ ಲೋಗೊಗೆ ಸರಿಹೊಂದುವ ಬಣ್ಣದ ಬಟ್ಟೆ ತೊಟ್ಟಿದ್ದರು. ಮೋದಿಯವರೊಂದಿಗೆ ಮೌನ ಒಳ ಒಪ್ಪಂದವಿಲ್ಲದೆ ಅವರ ಭಾವಚಿತ್ರವನ್ನು ಬಳಸಲು ರಿಲೈಯನ್ಸ್ ಕಂಪನಿ ಧೈರ್ಯ ಮಾಡುತ್ತಿರಲಿಲ್ಲ ಎಂಬುದು ಅರ್ಥವಾಗುವಂತಹದ್ದೇ.
ಜಿಯೊ ಗೆ ಜೀತೇ ರಹೊ ಎಂದು ಆಶಿರ್ವದಿಸಿದ TRAI…
ಸೆಪ್ಟೆಂಬರ್ 2016ರಲ್ಲಿ ಜಿಯೊ ವಾಣಿಜ್ಯಾತ್ಮಕ ಪ್ರಾರಂಭ ಕಂಡ ದಿನದಿಂದ ಎರಡೇ ವರ್ಷಗಳಲ್ಲಿ ಅದರ ಚಂದಾದಾರ ನೆಲೆ ವಿಶಾಲವಾಗಿ ವಿಸ್ತರಿಸಿತು. ಭಾರತದ ಟೆಲಿಕಾಂ ಇತಿಹಾಸದಲ್ಲೇ ಹಿಂದೆಂದೂ ಇದು ಸಂಭವಿಸಿರಲಿಲ್ಲ. ರಿಲೈಯನ್ಸ್ ಜಿಯೊ ಮಿತಿಮೀರಿ ಲಾಭ ಗಳಿಸುವಂತೆ ತನ್ನ ನೀತಿಯನ್ನು ತಿರುಚಿದ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಇದಕ್ಕೆ ಹೊಣೆ. ಇದಾದ ಒಂದು ತಿಂಗಳ ಬಳಿಕ ಜಿಯೊ ಪ್ರಾರಂಭವಾಯಿತು. ಅಂತರ್ ಸಂಪರ್ಕ ಶುಲ್ಕವನ್ನು ತೀಕ್ಷ್ಣವಾಗಿ ಕಡಿತಗೊಳಿಸಿದ TRAI ಈ ಶುಲ್ಕ ಶೇ.50ಕ್ಕಿಂತಲೂ ಇಳಿಯಲು ಕಾರಣವಾಯಿತು. ಇದರಿಂದಾಗಿ ತನ್ನ ಎದುರಾಳಿಗಳ ವಿಸ್ತಾರವಾದ ಚಂದಾದಾರ ಸಮುಚ್ಚಯಕ್ಕೆ ತನ್ನ ಚಂದಾದಾರರ ಕರೆಗಳನ್ನು ಜೋಡಿಸಲು ಜಿಯೊ ಅತಿಕಡಿಮೆ ವೆಚ್ಚ ಮಾಡಬೇಕಾಯಿತು. ಹಾಲಿ ಇದ್ದ ಏರ್ಟೆಲ್ ಮತ್ತು ವೊಡಾಫೋನ್ಗಳಂತಹ ಟೆಲಿಕಾಂ ಸಂಸ್ಥೆಗಳಿಗೆ ಇದು ದೊಡ್ಡ ಪೆಟ್ಟಾಗಿ ಪರಿಣಮಿಸಿದ್ದರೆ ರಿಲೈಯನ್ಸ್ ಜಿಯೊಗೆ ವರವಾಯಿತು.
2016ರಲ್ಲಿ ರಿಲೈಯನ್ಸ್ ಜಿಯೊ ಪರೀಕ್ಷೆಯ ಹಂತದಲ್ಲಿದ್ದಾಗ, ಜಿಯೊಗೆ ಸಾಕಷ್ಟು ಅಂತರ್ಸಂಪರ್ಕ ಕೇಂದ್ರಗಳನ್ನು ಒದಗಿಸಿಲ್ಲವೆಂದು, TRAI ಇತರ ಸಂಸ್ಥೆಗಳ ಮೇಲೆ 3000 ಕೋಟಿ ರೂ.ಗಳಷ್ಟು ಯದ್ವಾತದ್ವಾ ದಂಡ ವಿಧಿಸಿತು. ಅವರ ಪರವಾನಗಿ ಕರಾರುಗಳ ಪ್ರಕಾರ ಆಯಾ ಸಂಸ್ಥೆಗಳು ಜಿಯೊಗೆ ಅಂತರ್ಸಂಪರ್ಕ ಕೇಂದ್ರಗಳನ್ನು (PoI) ಕಲ್ಪಿಸಲು 90 ದಿನಗಳ ಕಾಲಾವಕಾಶವಿದ್ದರೂ, ಅವಧಿ ಮುಗಿಯುವದರೊಳಗೆ TRAI ದಂಡ ವಿಧಿಸಿತ್ತು. ಇದರಿಂದಾಗಿ ಜಿಯೊಗೆ ಮಿತಿಮೀರಿದ ಲಾಭವಾಯಿತು.
ಸುಲಿಗೆಕೋರ ಉದ್ಯಮಿಯ ಸುಲಿಗೆಕೋರ ದರ ನೀತಿ
ಜಿಯೊಗೆ ಪೈಪೋಟಿ ಒಡ್ಡುತ್ತಿದ್ದ ಕಂಪನಿಗಳು ಅದರ ಸುಲಿಗೆಕೋರ ದರ ನೀತಿಯ ಬಗ್ಗೆ ದೂರಲು ಪ್ರಾರಂಭಿಸಿದಾಗ 2018ರಲ್ಲಿ ಪುನಃ TRAI ನಿಯಮಾವಳಿಗಳನ್ನು ತಿರುಚಿತು. ಸುಲಿಗೆಕೋರ ದರ ನೀತಿಯ ನಿಯಮಾವಳಿಗಳು ಗಣನೀಯ ಮಾರುಕಟ್ಟೆ ಶಕ್ತಿ ಹೊಂದಿರುವ ಕಂಪನಿಗೆ ಮಾತ್ರ ಅನ್ವಯವಾಗುವ ಕಾರಣ TRAI ಮಾರುಕಟ್ಟೆ ಸಾಮರ್ಥ್ಯವನ್ನು ನಿರ್ಧರಿಸುವ ನಿಯಮಗಳನ್ನು ಮತ್ತೆ ಜಿಯೊ ಪರವಾಗಿ ಬದಲಿಸಿತು. ಅಲ್ಲಿಯವರೆಗೂ ಮಾರುಕಟ್ಟೆ ಸಾಮರ್ಥ್ಯವನ್ನು ನಾಲ್ಕು ಅಂಶಗಳ ಆಧಾರದಲ್ಲಿ ಮಾಪನ ಮಾಡಲಾಗುತ್ತಿತ್ತು – ಆದಾಯದ ಮಾರುಕಟ್ಟೆ ಪಾಲು, ಚಂದಾದಾರರ ಮಾರುಕಟ್ಟೆ ಪಾಲು, ಸಂಚಾರ ದಟ್ಟಣೆ ಮತ್ತು ಸಾಮರ್ಥ್ಯ. ಆದರೆ ಜಿಯೊಗೆ ಲಾಭ ಮಾಡಿಕೊಡಲು ಮತ್ತು ಅದರ ಮಾರುಕಟ್ಟೆ ಸಾಮರ್ಥ್ಯವನ್ನು ಇರುವುದಕ್ಕಿಂತ ಕಡಿಮೆ ತೋರಿಸಲು, TRAI ಸಂಚಾರ ದಟ್ಟಣೆ ಮತ್ತು ಸಾಮರ್ಥ್ಯಗಳನ್ನು ಮಾರುಕಟ್ಟೆ ಸಾಮರ್ಥ್ಯದ ಮಾಪಕಗಳೆಂದು ತೆಗೆದುಹಾಕಿತು. ಪರಿಣಾಮವಾಗಿ, ಈಗಾಗಲೇ ಮಾರುಕಟ್ಟೆಯಲ್ಲಿ ಆಳವಾಗಿ ಬೇರೂರಿದ್ದ ಜಿಯೊ ತನ್ನ ಸುಲಿಗೆಕೋರ ದರ ನೀತಿಯನ್ನು ಮುಂದುವರಿಸಿ ಎದುರಾಳಿಗಳನ್ನು ತುಳಿಯಲು ಸಾಧ್ಯವಾಯಿತು.
ಮುಖೇಶ್ ಅಂಬಾನಿಗಾಗಿ ಸರ್ಕಾರಿ ನೀತಿ ಬದಲಿಸಿದ ಮೋದಿ
ಜಿಯೊ ಪ್ರಯತ್ನದಿಂದಾಗಿ ಮೋದಿ ಸರ್ಕಾರ ಆರ್.ಎಸ್.ಶರ್ಮಾರನ್ನು ಇನ್ನೂ ಎರಡು ವರ್ಷಗಳ ಅವಧಿಗೆ TRAI ಅಧ್ಯಕ್ಷರಾಗಿ ಮರುನೇಮಕ ಮಾಡಿತು. TRAI ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಧ್ಯಕ್ಷರನ್ನು ಮರುನೇಮಕಗೊಳಿಸಲಾಗಿರುವುದು.
ರಿಲೈಯನ್ಸ್ ಜಿಯೊದಲ್ಲಿ ಸರ್ಕಾರ ಮತ್ತು TRAI ವಹಿಸಿದ ‘ಪಿತೃ’ ಹಿತಾಸಕ್ತಿಯಿಂದಾಗಿಯೇ ಮುಖೇಶ್ ಅಂಬಾನಿಯ ಬಿಲಿಯನ್ ಡಾಲರುಗಳು ದುಪ್ಪಟ್ಟಾಗಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಮುಖೇಶ್ ಅಂಬಾನಿಯ ಒಟ್ಟು ಆಸ್ತಿ ಗಳಿಕೆಯ ಘಟನಾವಳಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. 2014ರಿಂದ 2016ರ ವರೆಗೆ, ಒಟ್ಟು ಆಸ್ತಿಯಲ್ಲಿ ಅಂತಹದ್ದೇನೂ ಬದಲಾವಣೆ ಕಂಡಿರಲಿಲ್ಲ. ಅದು 23 ಬಿಲಿಯನ್ ಡಾಲರುಗಳಷ್ಟಿತ್ತು. ರಿಲೈಯನ್ಸ್ ಜಿಯೊ ವಾಣಿಜ್ಯಾತ್ಮಕವಾಗಿ ಪ್ರಾರಂಭವಾದ ನಂತರವಷ್ಟೇ ಆತನ ಒಟ್ಟು ಆಸ್ತಿ ಮುಗಿಲುಮುಟ್ಟಿದ್ದು ಮತ್ತು 2019ರಲ್ಲಿ 55 ಬಿಲಿಯನ್ ಡಾಲರ್ ಆಗಿದ್ದು. ಇನ್ನೊಂದೈದು ವರ್ಷ ಮೋದಿ ಅಧಿಕಾರದಲ್ಲಿ ಉಳಿದುಬಿಟ್ಟರೆ ಅಂಬಾನಿಗೆ ಏನೇನು ಅದ್ಭುತಗಳು ಕಾದಿವೆಯೋ ಊಹಿಸಬಹುದು.
ಅದಾನಿ ಕಲ್ಯಾಣ ಯೋಜನೆ!
ಬಿಜೆಪಿ ಸರ್ಕಾರ ಘೋಷಿಸಿದ ಯೋಜನೆಗಳು ದೇಶದ ಜನತೆಗೆ ಎಷ್ಟು ಒಳಿತನ್ನು ಮಾಡಿವೆಯೋ ಇಲ್ಲವೋ ಒಂದು ಹಿಡಿ ಬಿಲಿಯನೇರುಗಳಿಗಂತೂ ಪ್ರಯೋಜನವಾಗಿರುವುದು ನಿಜ. ಅಂತಹ ಇನ್ನೊಬ್ಬ ವ್ಯಕ್ತಿಯ ಬಗ್ಗೆ ತಿಳಿಯೋಣ. ಆತನಿಗೋಸ್ಕರ ಬಿಜೆಪಿ ಮಾಡಿರುವ ಉಪಕಾರಗಳನ್ನು ನೋಡಿದರೆ ಒಂದು ಯೋಜನೆಗೆ ಅವನ ಹೆಸರನ್ನೇ ಇಡಬಹುದೇನೋ!
ಮೋದಿಯ ಫಲಾನುಭವಿಗಳ ಬಗ್ಗೆ ಮಾತನಾಡುವಾಗ, ಅವರ ಜೀವಮಾನದ ಆತ್ಮೀಯ ಗೆಳೆಯ ಗೌತಮ್ ಅದಾನಿಯನ್ನು ಖಂಡಿತಾ ಮರೆಯಲಾಗದು. 2001ರಲ್ಲಿ ಗುಜರಾತಿನಲ್ಲಿ ಮೋದಿ ಅಧಿಕಾರದ ಗದ್ದುಗೆ ಏರಿದ್ದೂ ವ್ಯವಹಾರ ಲೋಕದಲ್ಲಿ ಅದಾನಿ ಮೇಲೇರಿದ್ದೂ ಸಮವಾಯಿತು. ಒಬ್ಬ ‘ನಿಜ ಸ್ನೇಹಿತ’ನಂತೆ ಮೋದಿ ತನ್ನ ‘ಆತ್ಮೀಯ’ ಸ್ನೇಹಿತರ ಬದುಕನ್ನು ಉತ್ತಮಪಡಿಸಲು ನಿರಂತರ ಪರಿಶ್ರಮಪಡುತ್ತಿದ್ದಾರೆ. ಗುಜರಾತಿನಲ್ಲಿ ಮೋದಿ ಅಧಿಕಾರದಲ್ಲಿದ್ದಾಗ, ಅದಾನಿ ಎಂಟರ್ ಪ್ರೈಸಸ್ ಸ್ವತ್ತು ಶೇ.5000ದಷ್ಟು ಬೆಳೆಯಿತು. ಮೋದಿ ಸರ್ಕಾರದಲ್ಲಿ ಇನ್ನಾವುದೇ ಸಾಮಾನ್ಯ ಗುಜರಾತಿಯೂ ಈ ಪರಿ ಆದಾಯದಲ್ಲಿ ಬೆಳವಣಿಗೆ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ!
ಮೋದಿ ಆಡಳಿತ ಕೊನೆಗೊಳ್ಳುವ ಹೊತ್ತಿಗೆ ಅದಾನಿ ಒಟ್ಟು 2.6 ಬಿಲಿಯನ್ ಡಾಲರ್ ಮೌಲ್ಯದ ಬಿಲಿಯನೇರ್ ಆಗಿ ರೂಪುಗೊಂಡಿದ್ದ. ಮೋದಿ ದೆಹಲಿಗೆ ಹೋದ ಬಳಿಕ ಇವರಿಬ್ಬರ ಸ್ನೇಹದ ಪ್ರತಿಫಲವೂ ಅಲ್ಲಿಗೆ ವರ್ಗಾವಣೆಗೊಂಡಿತು. ಮೋದಿ ಆಡಳಿತದ ಮೊದಲ ನಾಲ್ಕು ವರ್ಷಗಳಲ್ಲಿ ಅದಾನಿಯ ಆಸ್ತಿಯ ಒಟ್ಟು ಮೌಲ್ಯ ನಾಲ್ಕು ಪಟ್ಟು ಅಧಿಕಗೊಂಡಿತು.
ಇಷ್ಟೆಲ್ಲಾ ಆದದ್ದು ಹೇಗೆ?
ಜಾಗತಿಕ ರಂಗದಲ್ಲಿ ಭಾರತದ ಘನತೆಯನ್ನು ಹೆಚ್ಚಿಸುತ್ತೇನೆಂದು ಹೇಳಿ ಪ್ರಧಾನಿ ಕಳೆದ ಐದು ವರ್ಷಗಳಲ್ಲಿ ವಿದೇಶಗಳನ್ನು ಸುತ್ತಿದ್ದು ನೆನಪಿರಬಹುದು. ಹೀಗೆ ವಿದೇಶ ಸುತ್ತುವಾಗಲೇ ಪ್ರಧಾನಿಯವರು ತಮ್ಮ ಸ್ನೇಹಿತನಿಗೋಸ್ಕರ ವ್ಯವಹಾರವನ್ನೂ ಕುದುರಿಸಿಕೊಡುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ರಕ್ಷಣೆ, ಸಾಗಣೆ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೋದಿ ಭೇಟಿಯಿತ್ತ ದೇಶಗಳ ಜೊತೆ 15 ವ್ಯವಹಾರ ಒಪ್ಪಂದಗಳನ್ನು ಅದಾನಿ ಸಹಿ ಮಾಡಿದರು.
ಹಣಕಾಸು ಅವ್ಯವಹಾರಗಳು ಮತ್ತು ತೆರಿಗೆ ಕಳ್ಳತನದ ಕಾರಣದಿಂದ ಪ್ರಾರಂಭದಿಂದಲೂ ಪ್ರತಿಭಟನೆಗಳನ್ನು ಎದುರಿಸುತ್ತಿದ್ದ ಆಸ್ಟ್ರೇಲಿಯಾದ ಕುಖ್ಯಾತ ಕಾರ್ಮಿಚೇಲ್ ಕಲ್ಲಿದ್ದಲು ಗಣಿ ಯೋಜನೆಯನ್ನು, ಅಲ್ಲಿಗೆ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅದಾನಿಯ ಮಡಿಲಿಗೆ ಸೇರಿಸಿಕೊಳ್ಳಲಾಯಿತು. ಕೆಲವು ತಿಂಗಳುಗಳ ಹಿಂದಷ್ಟೇ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದೇ ಭೇಟಿಯಲ್ಲಿ ಈ ಯೋಜನೆಗೆ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿತು.
ಅದಾನಿಗೆ ಈಗ 15.5 ಬಿಲಿಯನ್ ಡಾಲರ್ ಯೋಜನೆಯ ಜೊತೆಗೆ ಅದನ್ನು ಅನುಷ್ಠಾನಗೊಳಿಸಲು ಸುಲಭ ಸಾಲವೂ ಸಿಕ್ಕಿತ್ತು! ಒಬ್ಬ ಮಿತ್ರ ಇದಕ್ಕಿಂತ ಹೆಚ್ಚಿಗೆ ಇನ್ನೇನು ಕೇಳಲು ಸಾಧ್ಯ? ಆದರೂ ಅದಾನಿಗೆ ಇನ್ನೂ ಅನೇಕ ಉಡುಗೊರೆಗಳು ಕಾಯುತ್ತಲಿದ್ದವು.
ಸಾಲಗಾರ ಸಂಸ್ಥೆಯಾದರೂ ಸಾಲಗಾರನಲ್ಲದ ಅದಾನಿ! ಇದೇನು ವಿಚಿತ್ರ…
ಕಳೆದ ದಶಕದಲ್ಲಿ ಅದಾನಿ ಸಮೂಹವು, ಬ್ಯಾಂಕಿಂಗ್ ವ್ಯವಸ್ಥೆಯಿಂದ ಗೌತಮ್ ಅದಾನಿ ಪಡೆದ ಬೃಹತ್ ಸಾಲಗಳನ್ನು ಆಧರಿಸಿ ವೇಗವಾಗಿ ಬೆಳೆದಿತ್ತು. 2015ರಲ್ಲಿ ಅದಾನಿ ಸಮೂಹವು 92,000 ರೂ.ಗಳ ಸಾಲ ಹೊಂದಿದ್ದು, Credit Suisse ಸಂಸ್ಥೆ ಸಿದ್ಧಪಡಿಸಿದ ‘ಸಾಲಗಾರ ಸಂಸ್ಥೆಗಳ’ ಪಟ್ಟಿಯಲ್ಲಿ ಹೆಸರು ಪಡೆದಿತ್ತು. ಅದು ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, “ದುಃಸ್ಥಿತಿಯಲ್ಲಿರುವ” ಸಾಲಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿದ ಮೊದಲ ನಾಲ್ಕು ಭಾರತೀಯ ಕಾರ್ಪೊರೇಟ್ ಸಮೂಹಗಳ ಪೈಕಿ ಅನಿಲ್ ಅಂಬಾನಿ ಒಡಗೂಡಿದ ಅದಾನಿ ಸಮೂಹವೂ ಒಂದು. ಅದಾನಿ ಸಮೂಹದ ಸಾಲಗಳ 1/3 ಭಾಗವನ್ನು ‘highly stressed’ ಎಂದು ಕ್ರೆಡಿಟ್ ಸೂಸೆ ವರ್ಗೀಕರಿಸಿದೆ. ಇದರರ್ಥ ಅದಾನಿ ಸಮೂಹವು ಸಾಲ ಮರುಪಾವತಿ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು.
2017ರಲ್ಲಿ ಅದಾನಿ ಪವರ್ ಸಂಸ್ಥೆಯೇ ಶೇ.0.7ರ ಬಡ್ಡಿಯಲ್ಲಿ 53,000 ಕೋಟಿ ರೂ.ಗಳಷ್ಟು ಒಟ್ಟು ಸಾಲ ಹೊಂದಿತ್ತು. ಅದಾನಿ ಪವರ್ ಗಳಿಸುತ್ತಿದ್ದ ಪ್ರತಿ 70 ರೂ.ಗೆ ಅದು ರೂ.100 ರಷ್ಟು ಬಡ್ಡಿ ಪಾವತಿಸಬೇಕಿತ್ತು. ಅಂದರೆ ಸಾಲದ ಅಸಲನ್ನೂ ಕಟ್ಟದೆ ಉಪೇಕ್ಷೆ ಮಾಡಿತ್ತು.
ಈ ದುಸ್ತರ ಪರಿಸ್ಥಿತಿಯಲ್ಲೂ ಅದಾನಿ ಸಮೂಹ ಬ್ಯಾಂಕುಗಳಲ್ಲಿ ಯಾವುದೇ NPA (ಕೆಟ್ಟ ಸಾಲ ಅಥವಾ ತೀರುವಳಿಯಾಗದ ಸಾಲ) ಹೊಂದಿಲ್ಲವೆಂದರೆ, ಇಂತಹ ಅಸಾಧಾರಣ ಸಾಧನೆಯ ಹಿಂದಿನ ಗುಟ್ಟೇನು?
ಸಾಲವಿದ್ದರೂ ಮಾರುಕಟ್ಟೆ ಮೌಲ್ಯ ಬೆಳೆಯುತ್ತಿದೆ!
ಮೋದಿ ಅಧಿಕಾರ ವಹಿಸಿಕೊಂಡ ಎರಡೇ ತಿಂಗಳುಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕಿನ 5/25 ಮರುಸಾಲ ಯೋಜನೆ ಅಡಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಹಲವು ಕಾರ್ಪೊರೇಟ್ ಗಳ ಸಾಲಗಳನ್ನು ಪುನರ್ರಚಿಸಿ ಪುನಃ ಸಾಲ ಒದಗಿಸಿವೆ – ಸಾಲ ಮರುಪಾವತಿ ಅವಧಿಯನ್ನು 10ರಿಂದ 25 ವರ್ಷಗಳ ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಪ್ರಮುಖ ಫಲಾನುಭವಿಗಳ ಪೈಕಿ ಅದಾನಿ ಸಮೂಹವೂ ಒಂದು. ವಿತ್ತೀಯ ಪತ್ರಿಕೆಗಳು ಹೇಳುವಂತೆ, ಕನಿಷ್ಠ 15,000 ಕೋಟಿ ರೂ.ಗಳಷ್ಟು ಅದಾನಿ ಪವರ್ ಸಂಸ್ಥೆಯ ಸಾಲಗಳನ್ನು ಪುನರ್ರಚಿಸಲಾಗಿದೆ. ಸಾಲ ಮರುಪಾವತಿ ಅವಧಿಯನ್ನು 10ರಿಂದ 25 ವರ್ಷಗಳಿಗೆ ವಿಸ್ತರಿಸಿ ಬಡ್ಡಿ ಪಾವತಿಯನ್ನು 15 ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಸಮೂಹದ ಇಂತಹ ಇನ್ನೂ ಬೇಕಾದಷ್ಟು ಸಾಲಗಳನ್ನು ಇದೇ ಹಿತವಾದ ಷರತ್ತಿನ ಅನ್ವಯ ಪುನರ್ರಚಿಸಲಾಗಿದೆ. ಈ ಕಾರಣದಿಂದಲೇ ಮಿತಿಮೀರಿದ ತೀರಿಸಲಾಗದಂತಹ ಸಾಲಗಳಿದ್ದರೂ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ ಬೆಳೆಯುತ್ತಲೇ ಇದೆ.
ಬಯಲಾಗಿ ಬಯಲಲ್ಲೇ ಸಮಾಧಿಯಾದ ಅದಾನಿಯ ಹಗರಣ
ಬಿಜೆಪಿ ಸರ್ಕಾರ ಅದಾನಿಗೆ ಮಾಡಿಕೊಟ್ಟಿರುವ ಅನುಕೂಲಗಳ ಪಟ್ಟಿಗೆ ಕೊನೆಯೇ ಇಲ್ಲದಂತಿದ್ದರೂ ಅವುಗಳ ಪೈಕಿ ಒಂದಂತೂ ಎದ್ದು ಕಾಣುತ್ತದೆ. ಏಕೆಂದರೆ ಅದು ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸುವಂತಹದ್ದು.
2014 ಮತ್ತು 2015ರಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯವು (DRI) ಅದಾನಿಯ ಇಂಧನ ಕ್ಷೇತ್ರದ ಮೂರು ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತು. ಇಂಧನ ಉಪಕರಣಗಳನ್ನು ಖರೀದಿಸುವಾಗ ಅಧಿಕ ಬೆಲೆ ನಮೂದಿಸಿ 5000 ಕೋಟಿ ರೂ.ಗಳನ್ನು ತೆರಿಗೆ ಧಾಮಗಳಿಗೆ (ತೆರಿಗೆ ಕಳ್ಳತನ ಮಾಡಲು ಬಳಸುವ ತಾಣಗಳು) ವರ್ಗಾಯಿಸಿರುವುದಾಗಿ DRI ಆರೋಪಿಸಿತ್ತು.
ಅದಾನಿಯ ಇಂಧನ ಕಂಪನಿಗಳು ವಿದೇಶಗಳಿಂದ ಇಂಧನ ಉಪಕರಣಗಳನ್ನು ಖರೀದಿಸಿದ್ದು, ಮಧ್ಯದಲ್ಲಿ ಯಾವುದೇ ಮಾರ್ಗ ಬದಲಾವಣೆಯಿಲ್ಲದೆ ಅವುಗಳನ್ನು ಚೀನಿ ಮತ್ತು ದಕ್ಷಿಣ ಕೊರಿಯಾದ ಮಾರಾಟಗಾರರು ನೇರವಾಗಿ ತಮ್ಮ ಬಂದರುಗಳಿಂದ ಭಾರತೀಯ ಬಂದರುಗಳಿಗೆ ಸಾಗಿಸಿದ್ದರೆಂದು DRI ಒದಗಿಸಿದ್ದ ಸಾಕ್ಷ್ಯಾಧಾರಗಳು ತೋರಿಸಿದ್ದವು. ಆದರೆ ದಾಖಲೆಯಲ್ಲಿ ಮಾತ್ರ, ಉಪಕರಣವನ್ನು ಮೊದಲು ಅದಾನಿಯ ಅಣ್ಣ ವಿನೋದ್ ಅದಾನಿ ಮಾಲೀಕತ್ವದ ದುಬೈ ಮೂಲದ ಎಲೆಕ್ಟ್ರೋಜೆನ್ ಇನ್ಫ್ರಾ ಎಂಬ ಕಂಪನಿ ಖರೀದಿಸಿದ್ದಂತೆ ತೋರಿಸಲಾಗಿತ್ತು. ಅದೇ ಎಲೆಕ್ಟ್ರೋಜೆನ್ ಇನ್ಫ್ರಾ ಕಂಪನಿಯು ಮೂಲ ದರದ ಶೇ.800ರಷ್ಟು ಹೆಚ್ಚು ಬೆಲೆಗೆ ಅದಾನಿಯ ಇಂಧನ ಕಂಪನಿಗಳಿಗೆ ಮಾರಾಟ ಮಾಡಿದಂತೆಯೂ ನಮೂದಿಸಲಾಗಿತ್ತು. ಈ ಹಗರಣದ ಮೂಲಕ ಅದಾನಿ 5000 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವಿದೇಶಗಳಲ್ಲಿನ ತೆರಿಗೆ ಧಾಮಗಳಿಗೆ ಕಾನೂನುಬಾಹಿರವಾಗಿ ವರ್ಗಾಯಿಸಿದ್ದಾಗಿ DRI ವರದಿ ಮಾಡಿತ್ತು.
ಇದು ಬಯಲುಗೊಳಿಸಿ ಹಾಗೇ ಮುಚ್ಚಿಹಾಕಲಾದ ಹಗರಣವಾಗಿದೆ. 2017 ರ ಆಗಸ್ಟ್ 21ರಂದು DRI ನ ನ್ಯಾಯಾಧಿಕರಣವು ಅದಾನಿಯ ವಿರುದ್ಧದ ಎಲ್ಲಾ ವಿಚಾರಣೆಗಳನ್ನೂ ಒಟ್ಟಾಗಿ ಕೈಬಿಟ್ಟಿದ್ದು ಸ್ಪಷ್ಟವಾಗಿದೆ. ನಾಲ್ಕು ದಿನಗಳ ಬಳಿಕ ಗೌತಮ್ ಅದಾನಿ ಮೋದಿಯವರ ರೆವಿನ್ಯು ಕಾರ್ಯದರ್ಶಿ ಹಸಮುಖ್ ಆದಿಯ ಅವರನ್ನು ಭೇಟಿ ಮಾಡಿದ್ದರೆಂದು ಹೇಳಲಾಗಿತ್ತು. ಅದೇನು ಅವರಿಗೆ ಧನ್ಯವಾದ ಅರ್ಪಿಸಲೆಂದೋ?
ನಾಳೆಗೆ- ಬಾಬಾ ರಾಮದೇವ್ ಕುರಿತು
(ಮೂಲ ಲೇಖನ: Newsclick)