ಎಚ್.ಡಿ ಕೋಟೆ: ಅರಣ್ಯ ಹಕ್ಕು ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಮತ್ತು ಹೆಚ್. ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ಹಾಡಿ ಸಮಿತಿ ಒಕ್ಕೂಟ ಕಳೆದ ಮೂರು ದಿನದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಶಾಸಕ ಅನಿಲ್ ಚಿಕ್ಕಮಾಧು ಭೇಟಿ ನೀಡಿದ್ದಾರೆ.
ಧರಣಿನಿರತದ ಬೇಡಿಕೆಗಳನ್ನು ಆಲಿಸಿದ ಶಾಸಕರು, ನಾಳೆ ನಡೆಯಲಿರುವ ಜಿಲ್ಲಾಧಿಕಾರಿ ಸಭೆಯಲ್ಲಿ ಆದಿವಾಸಿಗಳ ಪರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಹಸೀಲ್ದಾರ್ ಕಚೇರಿ ಮುಂದೆ ಮೇ 6ರಿಂದ 179 ಹಾಡಿಯ 300ಕ್ಕೂ ಅಧಿಕ ಪ್ರತಿಭಟನಾಕಾರರು ನಡೆಸುತ್ತಿರುವ ಧರಣಿಯಲ್ಲಿ, ಗಿರಿಜನರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ, ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಬೇಡಿಕೆ ಈಡೇರುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಸಿದ್ದರು.
ಜೇನುಕುರುಬ, ಯರವ, ಕಾಡುಕುರುಬ, ಸೋಲಿಗ, ಹಕ್ಕಿಪಿಕ್ಕಿ, ಡೋಂಗ್ರಿ ಗೆರಾಸಿಯಾ ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ಹೆಚ್. ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕುಗಳಲ್ಲಿ ವಾಸಿಸುತ್ತಿದ್ದು, ನೂರಾರು ವರ್ಷದಿಂದ ಇಲ್ಲೇ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.
ಆದರೆ, ಸರ್ಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ನುಗು, ತಾರಕ, ಕಬಿನಿ ಅಣೆಕಟ್ಟುಗಳನ್ನು ಕಟ್ಟುವಾಗ ಯಾವುದೇ ಪುನರ್ವಸತಿ ನೀಡದೇ ನಮ್ಮನ್ನು ಒಕ್ಕಲೆಬ್ಬಿಸಿದೆ. ನಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಮಹೇಶ್ ಆಗಮಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರೂ, ಒಪ್ಪದ ಪ್ರತಿಭಟನಾಕಾರರು ಸಂಬಂಧ ಇಲಾಖೆ ಮುಖ್ಯಸ್ಥರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮೂರು ತಾಲೂಕುಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೇಗೌಡರು ಮಧ್ಯಪ್ರವೇಶಿಸಿ ಆಸಿವಾಸಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ಕುರಿತು ‘ಟ್ರೂಥ್ ಇಂಡಿಯಾ’ ಸುದ್ದಿತಾಣದೊಂದಿಗೆ ಮಾತನಾಡಿದ ಹೋರಾಟದ ಮುಖಂಡ ಶೈಲೇಂದ್ರ ಕುಮಾರ್, ಈವರೆಗೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನೀತಿ ಸಂಹಿತೆ ನೆಪ ಹೇಳಿ ನಡೆಯಬೇಕಿದ್ದ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಇಂದು ಶಾಸಕರು ಬಂದು ನಮ್ಮ ಬೇಡಿಕೆ ಆಲಿಸಿದ್ದಾರೆ. ನಾಳೆ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಯಲಿದ್ದು, ಅಲ್ಲಿ ಸಮುದಾಯದ ಪೂರಕವಾಗಿ ಚರ್ಚೆಯಾದರೆ ಮಾತ್ರ ಧರಣಿ ಕೈಬಿಡುತ್ತೇವೆ. ಇಲ್ಲವಾದಲ್ಲಿ ಧರಣಿ ಮುಂದುವರೆಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಸಿದ್ದರಾಜು, ಪುಟ್ಟಮ್ಮ, ಜಾನಕಮ್ಮ, ಮಾದೇವ, ಕರಿಯಪ್ಪ, ಹೊನ್ನಮ್ಮ, ಚಂದ್ರು, ಪುಟ್ಟಬಸವ, ಕಾವೇರಿ, ಶಿವಮ್ಮ, ವೀರಭದ್ರ, ಲೋಹಿತ್, ಮಾದೇವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.