ಸಿಡ್ನಿ, ಆಸ್ಟ್ರೇಲಿಯಾ: ಉತ್ತರ ಪ್ರದೇಶ ಮೂಲದ ಸ್ವಘೋಷಿತ ಯೋಗಗುರು ಸ್ವಾಮಿ ಆನಂದ್ ಗಿರಿ ಮಹಾರಾಜ್ ನನ್ನು ಆಸ್ಟ್ರೇಲಿಯಾದ ಸಿಡ್ನಿ ನಗರದ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ದೂರಿನ ಸಂಬಂಧ ಆನಂದ್ ಗಿರಿಯನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಪ್ರಸಿದ್ಧ ಬಡೇ ಹನುಮಾನ್ ದೇವಾಲಯದ ಮಹಾಂತನಾಗಿದ್ದ ಸ್ವಾಮಿ ಆನಂದ್ ಗಿರಿಯನ್ನು ಸಿಡ್ನಿಯಲ್ಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಜೂನ್ 26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಎಸ್ ಬಿ ಎಸ್ ಸುದ್ದಿ ತಾಣದಲ್ಲಿ ವರದಿಯಾಗಿದೆ.
ಸಿಡ್ನಿ ಪೊಲೀಸರ ಪ್ರಕಾರ 2016ರಲ್ಲಿ ಮಹಾನಗರದ ರೂಟಿ ಹಿಲ್ ಎಂಬ ಪ್ರದೇಶದ ಮನೆಯೊಂದರಲ್ಲಿ ಯೋಗ ಹೇಳಿಕೊಡಲು ಹೋಗಿದ್ದ ಗಿರಿ 29 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಬೆಡ್ ರೂಮಿನಲ್ಲಿ ಲೈಂಗಿಕ ಹಲ್ಲೆ ನಡೆಸಿದ್ದ” ಎಂದು ಪೊಲೀಸರು ಹೇಳಿದ್ದಾರೆ.
2018ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 34 ವರ್ಷದ ಮಹಿಳೆಯೊಬ್ಬರ ಮೇಲೆ ಈ ಯೋಗಗುರು ಲೈಂಗಿಕ ಹಲ್ಲೆ ನಡೆಸಿದ್ದನೆಂದು ಆರೋಪಿಸಲಾಗಿದೆ. “ರೂಟಿ ಹಿಲ್ ನಲ್ಲಿರುವ ಮನೆಯಲ್ಲಿ ಪ್ರಾರ್ಥನಾ ಕೊಠಡಿಯಲ್ಲಿ ಮಹಿಳೆಯ ಮೇಲೆ ಗಿರಿ ಲೈಂಗಿಕ ಹಲ್ಲೆ ನಡೆಸಿದ್ದಾಗಿ ದೂರು ಸಲ್ಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರು ಸಲ್ಲಿಸಿರುವ ದೂರಿನ ಅನ್ವಯ ಪೊಲೀಸರು ಸ್ವಾಮಿ ಆನಂದಗಿರಿಯನ್ನು ಬಂಧಿಸಿದ್ದಾರೆ.
ಸಧ್ಯ ಆಸ್ಟ್ರೇಲಿಯಾದ ಪೊಲೀಸರ ಅತಿಥಿಯಾಗಿರುವ ಯೋಗಗುರು ಆನಂದ್ ಗಿರಿ ತನ್ನ ಫೇಸ್ಬುಕ್ ಪುಟದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ವಿಕೆ ಸಿಂಗ್, ಯೋಗಗುರು ಬಾಬಾ ರಾಮದೇವ್ ಮೊದಲಾದವರೊಂದಿಗೆ ತಾನು ಪೋಸ್ ಕೊಟ್ಟಿರುವ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾನೆ.

ತನ್ನನ್ನು ತಾನು ಪರರ ಸೇವೆಗಾಗಿ ಇರುವ ವ್ಯಕ್ತಿ ಎಂದು ಬಣ್ಣಿಸಿಕೊಂಡಿರುವ ಆನಂದ್ ಗಿರಿ ಯೋಗ, ಆಧ್ಯಾತ್ಮ, ವೇದ ಇತ್ಯಾದಿ ವಿಚಾರಗಳಲ್ಲಿ ವಾಗ್ಮಿಯಾಗಿದ್ದು ಅಮೆರಿಕ, ಯೂರೋಪ್, ಸೇರಿದಂತೆ ವಿದೇಶಗಳಲ್ಲಿ ಪ್ರವನ ನಡೆಸುತ್ತಾ, ಯೋಗ ಕಲಿಸುತ್ತಿದ್ದ ಎನ್ನಲಾಗಿದೆ. ಗಂಗಾ ನದಿ ಸ್ವಚ್ಛಗೊಳಿಸುವ ಗಂಗಾ ಸೇವಾ ಅಭಿಯಾನದಲ್ಲಿ ಸಹ ಆನಂದ್ ಗಿರಿ ಪಾತ್ರ ವಹಿಸಿದ್ದ ಎಂದು ಸುದ್ದಿತಾಣವೊಂದರಲ್ಲಿ ತಿಳಿಸಲಾಗಿದೆ.

