“ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಐಎನ್ಎಸ್ ವಿರಾಟ್ ಯುದ್ಧನೌಕೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದರು” ಎಂದು ದೇಶದ ಪ್ರಧಾನಿ ಹುದ್ದೆಯಲ್ಲಿ ಕುಳಿತಿರುವ ನರೇಂದ್ರ ಮೋದಿ ಆಡಿರುವ ಮಾತನ್ನು 1987ರ ಡಿಸೆಂಬರ್ ಹೊತ್ತಿಗೆ ಐಎನ್ಎಸ್ ವಿರಾಟ್ ಯುದ್ಧನೌಕೆಯ ಕಮಾಂಡಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೈಸ್ ಅಡ್ಮಿರಲ್ ವಿನೋದ್ ಪಸ್ರೀಚಾ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ದಿವಂಗತ ರಾಜೀವ್ ಗಾಂಧಿಯವರು ಖಂಡಿತಾ ಅಂತ ಕೆಲಸ ಮಾಡಿರಲಿಲ್ಲ, 1987ರ ಡಿಸೆಂಬರ್ ನಲ್ಲಿ ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ಯುದ್ಧ ನೌಕೆಯ ಮೇಲೆ ಪಯಣಿಸಿದ್ದಾಗ ಅವರ ಮಿತ್ರರಾಗಲೀ, ಇಟಲಿಯ ಅವರ ಅತ್ತೆಯಾಗಲೀ ಅವರೊಂದಿಗೆ ಇರಲಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
“ಅಂದು ರಾಜೀವ್ ಗಾಂಧಿಯವರು ಲಕ್ಷದ್ವೀಪಕ್ಕೆ ಅಧಿಕೃತ ಭೇಟಿ ಹಮ್ಮಿಕೊಂಡಿದ್ದು – ಅದು ದ್ವೀಪ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ ಕಾರ್ಯಕ್ರಮವಾಗಿತ್ತೇ ಹೊರತು ಕೌಟುಂಬಿಕ ಪ್ರವಾಸ ಆಗಿರಲಿಲ್ಲ ಎಂದು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಅವರೊಂದಿಗೆ ತಮ್ಮ ಪತ್ನಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಮತ್ತು ಕೆಲವು ಐಎಎಸ್ ಅಧಿಕಾರಿಗಳು ಮಾತ್ರ ಜೊತೆಗಿದ್ದರು ಎಂದು ಮಾಧ್ಯಮಗಳಿಗೆ ವೈಸ್ ಅಡ್ಮಿರಲ್ ವಿನೋದ್ ತಿಳಿಸಿದ್ದಾರೆ.
ಅಮಿತಾಬ್ ಬಚ್ಚನ್ ಅಥವಾ ಸೋನಿಯಾ ಗಾಂಧಿಯ ಪೋಷಕರು ರಾಜೀವ್ ಜೊತೆ ಯುದ್ಧನೌಕೆಯ ಮೇಲೆ ಪ್ರಯಾಣ ಬೆಳೆಸಿದ್ದರು ಎಂಬ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಅಲ್ಲಗಳೆದಿರುವ ಈ ಮಾಜಿ ನೌಕಾಪಡೆ ಅಧಿಕಾರಿ, “ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಮತ್ತಿಬ್ಬರು ಐಎಎಸ್ ಅಧಿಕಾರಿಗಳನ್ನು ಹೊರತುಪಡಿಸಿದಂತೆ ಬೇರೆ ಯಾರೂ ಅಲ್ಲಿರಲಿಲ್ಲ. ಪ್ರಧಾನಿ ಮಾಡುತ್ತಿರುವ ಈ ಸಶಸ್ತ್ರ ಪಡೆಗಳ ರಾಜಕೀಯಕರಣ ತಪ್ಪು ಮತ್ತು ಒಪ್ಪಲಾಗದ್ದು” ಎಂದು ಹೇಳಿದ್ದಾರೆ.

“ನಾವು ತ್ರಿವೇಂದ್ರಂನಲ್ಲಿ ಪ್ರಯಾಣ ಆರಂಭಿಸಿದ್ದೆವು. ಅಲ್ಲಿಂದ ಅವರನ್ನು ಹೆಲಿಕಾಪ್ಟರಿನಲ್ಲಿ ಕರೆದೊಯ್ಯಲಾಗಿತ್ತು. ಯಾಕೆಂದರೆ ತ್ರಿವೇಂದ್ರಂನಲ್ಲಿ ಐಎನ್ ಎಸ್ ವಿರಾಟ್ ನಿಲುಗಡೆಗೆ ತಂಗುದಾಣ (ಜೆಟ್ಟಿ) ಇರಲಿಲ್ಲ. ಲಕ್ಷ ದ್ವೀಪಗಳಲ್ಲಿ ಅವರು (ರಾಜೀವ್ ಗಾಂಧಿ) ಅನೇಕ ಸಭೆಗಳಿಗೆ ಹಾಜರಾಗುವುದಿತ್ತು. ಅವರು ಹೆಲಿಕಾಪ್ಟರ್ ಮೇಲೆ ಮೂರು ದ್ವೀಪಗಳಿಗೆ ಭೇಟಿ ನೀಡಿದ್ದರಲ್ಲದೇ ಮಾರನೇ ದಿನವೂ ಹೆಲಿಕಾಪ್ಟರಿನಲ್ಲೇ ಎರಡೋ ಮೂರೋ ದ್ವೀಪಗಳಿಗೆ ಭೇಟಿ ನೀಡಿ ಅಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು” ಎಂದು ವೈಸ್ ಅಡ್ಮಿರಲ್ ಪಸ್ರಿಚಾ ಹೇಳಿದರು.
ವಶ್ಚಿಮ ನೌಕಾಪಡೆಯ ಆಗಿನ ಕಮಾಂಡ್ –ಇನ್-ಚೀಫ್ ಆಗಿದ್ದ ಅಡ್ಮಿರಲ್ ರಾಮದಾಸ್ ಅವರು ಸಹ ರಾಜೀವ್ ಗಾಂಧಿಯವರ ಅಂದಿನ ದ್ವೀಪ ಭೇಟಿಯ ಕುರಿತು ಇದೇ ರೀತಿಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇಂಡಿಯಾ ಟುಡೆ ಪತ್ರಿಕೆಯಲ್ಲಿ ಅನಿತಾ ಪ್ರತಾಪ್ ಎಂಬುವವರು ಮಾಡಿದ್ದ ವರದಿಯನ್ನು ಆಧರಿಸಿ ಪ್ರಧಾನಿ ಮೋದಿ ಹೀಗೆ ಹೇಳಿರಬಹುದು ಎಂದಿರುವ ನಿವೃತ್ತ ಅಡ್ಮಿರಲ್ ರಾಮದಾಸ್, “ನಾನು ಬಹಳ ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ ಪ್ರಧಾನಿ ಮೋದಿ ಹೇಳಿದಂತೆ ಅಂದು ಏನೂ ನಡೆದಿರಲಿಲ್ಲ” ಎಂದು ಹೇಳಿದ್ದಾರೆ.
ಅಂದು ಪಶ್ಚಿಮ ನೌಕಾಪಡೆಯ ಇನ್ನಿತರ ತಮ್ಮ ಸಹೋದ್ಯೋಗಿಗಳಾಗಿದ್ದ ನಿವೃತ್ತ ಅಡ್ಮಿರಲ್ ಅರುಣ್ ಪ್ರಕಾಶ್, ವೈಸ್ ಅಡ್ಮಿರಲ್ ಮದನ್ಜೀತ್ ಸಿಂಗ್ ಎಲ್ಲರಿಂದ ಇ ಮೇಲ್ ಮೂಲಕ ಪ್ರಧಾನಿ ಮಾತಿಗೆ ಪ್ರತಿಕ್ರಿಯೆ ತರಿಸಿಕೊಂಡು ಮಾಹಿತಿ ನೀಡಿರುವ ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಲ್ ರಾಮದಾಸ್, “ಅಂದು ಮುಂಚಿತವಾಗಿಯೇ ಯೋಜನೆಯಾಗಿದ್ದಂತೆ ನೌಕಾಪಡೆಯು ನೌಕಾ ಸಮರಾಭ್ಯಾಸದ ಭಾಗವಾಗಿ ಯುದ್ಧನೌಕೆಯನ್ನು ಸಂಧಿಸುವುದಿತ್ತು. ನೌಕಾಪಡೆಯ ಸದಸ್ಯರು ನೌಕೆಯೇರಿದ್ದ ಪ್ರಧಾನ ಮಂತ್ರಿಗಳನ್ನು ಭೇಟಿಯಾಗುವ ಸದವಕಾಶ ಲಭ್ಯವಾಗಿತ್ತು”, “ಗಾಂಧಿ ಕುಟುಂಬದ ಬಳಕೆಗಾಗಿ ಯಾವುದೇ ನೌಕೆಯನ್ನು ಬಿಟ್ಟುಕೊಡಲಾಗಿರಲಿಲ್ಲ. ಪ್ರಧಾನಿ ಮತ್ತವರ ಪತ್ನಿಯ ತುರ್ತು ವೈದ್ಯಕೀಯ ಅಗತ್ಯಗಳಿಗಾಗಿ ಕರಾವತ್ತಿಯಲ್ಲಿ ಒಂದೇ ಸಣ್ಣ ಹೆಲಿಕಾಪ್ಟರನ್ನು ಬಿಡಲಾಗಿತ್ತು” ಎಂದವರು ಹೇಳಿದ್ದಾರೆ.
ಹೆಲಿಕಾಪ್ಟರ್ ಗಳ ಮೂಲಕವೇ ದ್ವೀಪಗಳಿಗೆ ಪ್ರಧಾನಿಗಳು ಭೇಟಿಯಾಗಿದ್ದರು ಎಂದಿರುವ ಅಡ್ಮಿರಲ್ ರಾಮದಾಸ್ ಯಾವುದೇ ಪ್ರಧಾನ ಮಂತ್ರಿ ತಮ್ಮ ಸರ್ಕಾರಿ ಕೆಲಸದ ನಿಮಿತ್ತ ಸೇವಾ ಹೆಲಿಕಾಪ್ಟರುಗಳ ಮೇಲೆ ಪ್ರಯಾಣಿಸುವಾಗ ತಮ್ಮ ಸಂಗಾತಿಯನ್ನು ಜೊತೆಯಲ್ಲಿ ಕರೆದೊಯ್ಯಲು ಅಧಿಕಾರ ಹೊಂದಿದ್ದಾರೆ ಎಂದು ಸಹ ತಿಳಿಸಿದ್ದಾರೆ.
ತಮ್ಮ ಐದು ವರ್ಷಗಳ ಆಡಳಿತದ ಲೋಪಗಳನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆಯ ಭಾಗವಾಗಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರ ಮೇಲೆ ಸುಳ್ಳು ಆರೋಪಗಳನ್ನು ನಡೆಸುತ್ತಿರುವ ಚೌಕಿದಾರ್ ನರೇಂದ್ರ ಮೋದಿ ವಾರದ ಹಿಂದಷ್ಟೇ “ರಾಜೀವ್ ಗಾಂಧಿ ನಂ1 ಭ್ರಷ್ಟಾಚಾರಿಯಾಗಿ ಸತ್ತ” ಎಂಬ ಕೀಳುಮಟ್ಟದ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗುತ್ತಿದ್ದಂತೆ, ಮತ್ತೆ ಈಗ “ಐ ಎನ್ ಎಸ್ ಯುದ್ಧ ನೌಕೆಯನ್ನು ರಾಜೀವ್ ಗಾಂಧಿ ಖಾಗಿ ಟ್ಯಾಕ್ಸಿಯಂತೆ ಕುಟುಂಬ ಪ್ರವಾಸಕ್ಕೆ ಬಳಸಿಕೊಂಡಿದ್ದರು, ತಮ್ಮ ಮಿತ್ರರನ್ನು, ಇಟಲಿಯ ಅತ್ತೆಯನ್ನು ಜೊತೆಯಲ್ಲಿ ಕೊಂಡೊಯ್ದಿದ್ದರು” ಎಂದು ಹೇಳಿ ಈಗ ಮಾಜಿ ಸೇನಾಧಿಕಾರಿಗಳಿಂದಲೂ ಟೀಕೆಗೆ ಒಳಗಾಗಿದ್ದಾರೆ.