(ನೆನ್ನೆ ಪ್ರಕಟವಾದ ಲೇಖನದ ಮುಂದುವರಿದ ಅಂತಿಮ ಭಾಗ)
ಅನಿಲ್ ಅಂಬಾನಿಯ ತಟ್ಟೆಯಲ್ಲಿ ರಫೇಲ್
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಈ ಬಿಲಿಯನೇರ್ ಪಾಪ, ಅಷ್ಟೊಂದೇನೂ ಸುಧಾರಿಸಲಿಲ್ಲ! ಕಳೆದ ಕೆಲವು ವರ್ಷಗಳಿಂದ ಕಿರಿಯ ಅಂಬಾನಿಗೆ ಅಚ್ಚೇ ದಿನಗಳು ಬಂದಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ಐದು ವರ್ಷಗಳಲ್ಲಿ ಆತನ ಒಟ್ಟು ಆಸ್ತಿಯ ಮೌಲ್ಯ 6.3 ಬಿಲಿಯನ್ ಡಾಲರ್ಗಳಿಂದ 1.8 ಬಿಲಿಯನ್ ಡಾಲರ್ಗಳಿಗೆ ಕುಸಿದಿತ್ತು. ಆದರೂ ಈ ಕಿರಿಯ ಅಂಬಾನಿ ಬಿಲಿಯನ್ಗಟ್ಟಲೆ ಕಳೆದುಕೊಂಡು ‘ಬಿಲಿಯನೇರ್ ಬಡತನ’ಕ್ಕಿಳಿದಿದ್ದಕ್ಕೆ ಬಿಜೆಪಿ ಸರ್ಕಾರವನ್ನು ಯಾರೂ ಒಂದಿಷ್ಟೂ ನಿಂದಿಸುವಂತಿಲ್ಲ! ಹಾಗೆ ನೋಡಿದರೆ, ಅನಿಲ್ ಅಂಬಾನಿ ಕಳೆದುಕೊಂಡ ಬಿಲಿಯನ್ಗಳನ್ನು ಸರಿದೂಗಿಸಿಕೊಡಲು ಪ್ರಧಾನಿ ಮೋದಿ ಬಹಳ ಶ್ರಮಪಟ್ಟಿದ್ದಾರೆ…
ಬ್ಯಾಂಕಿಂಗ್ ವ್ಯವಸ್ಥೆ ಕುಸಿತಕ್ಕೆ ಅನಿಲ್ ಅಂಬಾನಿ ಕೊಡುಗೆ, ಮೋದಿ ಇದ್ದಾರೆ ಬೆನ್ನಿಗೆ…
ಭಾರತದ ಬ್ಯಾಂಕುಗಳಿಗೆ ಅನಿಲ್ ಅಂಬಾನಿ ಸಮೂಹವು ಸಾಕಷ್ಟು ಸಾಲ ಹಿಂದಿರುಗಿಸಬೇಕಿತ್ತು ಎಂಬುದು ರಹಸ್ಯವೇನಲ್ಲ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ NPA (ಮರುಪಾವತಿಯಾಗದ ಸಾಲ) ಸಂಕಷ್ಟಕ್ಕೆ ಆತನ ಸಮೂಹವೇ ಪ್ರಮುಖ ಕೊಡುಗೆ ನೀಡಿದ್ದೂ ನಿಜ. ಅನಿಲ್ ಅಂಬಾನಿ ಸಮೂಹದ ಕಂಪನಿಗಳಲ್ಲೊಂದಾದ ರಿಲೈಯನ್ಸ್ ಕಮ್ಯುನಿಕೇಷನ್ಸ್ ಬ್ಯಾಂಕುಗಳಲ್ಲಿ ಕನಿಷ್ಟ 14,000 ಕೋಟಿ ರೂ.ಗಳ NPA ಹೊಂದಿದೆ. ಈ ಮೊತ್ತ ಇದಕ್ಕಿಂತಲೂ ಜಾಸ್ತಿ ಇರಬಹುದು, ಆದರೆ ಅದನ್ನು ಬಹಿರಂಗಪಡಿಸಿಲ್ಲ. ಇದೇ ಸಮೂಹದ ರಿಲೈಯನ್ಸ್ ನೇವಲ್ & ಇಂಜಿನಿಯರಿಂಗ್ ಕಂಪನಿ, ಬ್ಯಾಂಕುಗಳಿಗೆ 9000 ಕೋಟಿ ರೂ.ಗಳನ್ನು ಪಾವತಿಸಲಿಲ್ಲ ಹಾಗು ಅವುಗಳ ಪೈಕಿ ಬಹುಪಾಲು ಸಾರ್ವಜನಿಕ ವಲಯದ ಬ್ಯಾಂಕುಗಳೇ.
ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಷ್ಟೇ. ಕೆಟ್ಟ ಸಾಲಗಳ ಬಗ್ಗೆ ಬಹುತೇಕ ಮಾಹಿತಿಯನ್ನು ಗೌಪ್ಯವಾಗಿ ಮುಚ್ಚಿಹಾಕಲಾಗಿದೆ. ಇಡೀ ಅನಿಲ್ ಅಂಬಾನಿ ಸಮೂಹದ ನಿಜವಾದ NPA ಮೊತ್ತದ ಬಗ್ಗೆ ಮಾಹಿತಿ ಗೊತ್ತಿರುವುದು ಸರ್ಕಾರಕ್ಕೆ ಮಾತ್ರ!
ಒಂದು ಜವಾಬ್ದಾರಿಯುತ ಸರ್ಕಾರವಾಗಿದ್ದರೆ ಈ ಸಮೂಹಗಳ ಮಾಲೀಕ ಅನಿಲ್ ಅಂಬಾನಿಯ ವಿರುದ್ಧ ಕ್ರಮ ಜರುಗಿಸುತ್ತಿತ್ತು; ಆತನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳ ವಾರಸುದಾರ ಮತ್ತು ಭಾರತದ ನಾಗರಿಕರ ಪ್ರತಿನಿಧಿ ಸರ್ಕಾರವೇ ಅಲ್ಲವೇ? ಈ ನಾಗರಿಕರ ಹೂಡಿಕೆಗಳನ್ನೇ ಬ್ಯಾಂಕುಗಳು ಅಂಬಾನಿಗೆ ಸಾಲದ ರೂಪದಲ್ಲಿ ನೀಡಿರುವುದಲ್ಲವೇ!
ಸಾಲದಲ್ಲಿ ಪಾತಾಳ ಕಂಡಿದ್ದ ಅನಿಲ್ ಅಂಬಾನಿಯನ್ನ ಮೇಲೆತ್ತಿದ್ದು ರಫೇಲ್ ವಿಮಾನದಲ್ಲಿ…
ಆದರೆ ಇದರ ಬದಲಿಗೆ ಕಿರಿಯ ಅಂಬಾನಿ ತಾನು ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯಲು ಮೋದಿ ಸಹಾಯಹಸ್ತ ಚಾಚುತ್ತಿದ್ದಾರೆ. ಇದರ ಪರಿಣಾಮವೇ ರಫೇಲ್ ವ್ಯವಹಾರ ಅಥವಾ ಅದನ್ನು ಯೋಜನೆ ಎಂದು ಹೇಳೋಣವೇ? ರಫೇಲ್ ವ್ಯವಹಾರ/ ಹಗರಣ ಇತ್ತೀಚಿನದ್ದಾಗಿದ್ದು, ಅದರ ಮುಖ್ಯಾಂಶಗಳನ್ನು ಗಮನಿಸೋಣ.
2012ರಲ್ಲಿ ಯುಪಿಎ-2 ಸರ್ಕಾರವು ಭಾರತೀಯ ವಾಯುಪಡೆಗೆ (IAF) ಸೇರ್ಪಡೆ ಮಾಡಿಕೊಳ್ಳಲು 126 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಸಲುವಾಗಿ ಫ್ರಾನ್ಸ್ನ ಕಂಪನಿ ಡಸ್ಸಾಲ್ಟ್ ಜೊತೆ ಮಾತುಕತೆ ನಡೆಸಿತ್ತು. ಅಂತಿಮಗೊಳ್ಳುವ ಹಂತದಲ್ಲಿದ್ದ ಈ ಒಪ್ಪಂದದ ಪ್ರಕಾರ, ಭಾರತ ಡಸ್ಸಾಲ್ಟ್ನಿಂದ ಸಿದ್ಧಗೊಂಡ 18 ವಿಮಾನಗಳನ್ನು ನೇರವಾಗಿ ಕೊಳ್ಳುವುದಾಗಿತ್ತು. ಉಳಿದ 108 ರಫೇಲ್ ವಿಮಾನಗಳನ್ನು ಡಸ್ಸಾಲ್ಟ್ನಿಂದ ತಂತ್ರಜ್ಞಾನ ವರ್ಗಾವಣೆ ಮಾಡಿಕೊಳ್ಳುವ ಮುಖಾಂತರ ಎಚ್ಎಎಲ್ನಲ್ಲಿ ನಿರ್ಮಿಸುವುದಾಗಿತ್ತು. HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಭಾರತದ ಸಾರ್ವಜನಿಕ ವಲಯದ ನವರತ್ನ ಕಂಪನಿಗಳಲ್ಲೊಂದಾಗಿದೆ. ಯುದ್ಧ ವಿಮಾನಗಳನ್ನು ತಯಾರಿಸಿ IAF ಗೆ ಪೂರೈಸುವಲ್ಲಿ ಅರ್ಧ ಶತಮಾನಕ್ಕೂ ಮೀರಿದ ಅನುಭವ ಹೊಂದಿದೆ.
2015ರಲ್ಲಿ ಈ ಒಪ್ಪಂದವನ್ನು ರದ್ದುಪಡಿಸಿ ಹೊಸದೊಂದನ್ನು ಮಾಡಿಕೊಳ್ಳಲು ಮೋದಿ ತೀರ್ಮಾನಿಸಿದರು. ಆದರೆ ಏಕೆ? ಅನುಭವಸ್ಥ HAL ಬದಲಿಗೆ ರಕ್ಷಣಾ ಉತ್ಪಾದನೆಯಲ್ಲಿ ‘ಶೂನ್ಯ’ ಅನುಭವವುಳ್ಳ ಅಂಬಾನಿ ಕಂಪನಿಯನ್ನು ಸೇರಿಸಬಹುದೆಂದು! ಮೋದಿ ಫ್ರಾನ್ಸ್ಗೆ ಭೇಟಿಯಿತ್ತು ವ್ಯವಹಾರ ಕುದುರಿಸುವ ಕೇವಲ 12 ದಿನಗಳ ಹಿಂದಷ್ಟೇ ಅಂಬಾನಿ ಕಂಪನಿಯನ್ನು ಹುಟ್ಟುಹಾಕಲಾಗಿತ್ತು.
ಎಚ್ಎಎಲ್ ಉಸಿರುಗಟ್ಟಿಸಿ ಮೋದಿಯ ಬಿಲಿಯನೇರ್ ಬಚಾವೊ ಯೋಜನೆ!
ಎಚ್ಎಎಲ್ ಗೆ ನಷ್ಟವಾಗುವಂತೆ ಅನಿಲ್ ಅಂಬಾನಿ ಕಂಪನಿಗೆ ನೀಡಿರುವ ವಿಶೇಷ ಸವಲತ್ತು ಅವಶ್ಯವಾಗಿ ಮೋದಿಯ ‘ಬಿಲಿಯನೇರ್ ಬಚಾವೊ’ ಯೋಜನೆಯ ಭಾಗವಾಗಿದೆ. ಬೇರೆ ಸರ್ಕಾರಿ ಯೋಜನೆಯಂತೆ ಇದೂ ಕೂಡ ಸಾಕಷ್ಟು ಬೆಲೆ ತೆರಬೇಕಾಯಿತು. ಮೋದಿ ಸರ್ಕಾರವು ಕಡಿಮೆ ಸಂಖ್ಯೆಯ (36) ವಿಮಾನಗಳನ್ನು ಅತ್ಯಧಿಕ ಬೆಲೆಗೆ ಖರೀದಿಸಲು ಒಪ್ಪಿತು. ಇದರಿಂದಾಗಿ ವ್ಯವಹಾರದೊಳಗೆ ರಿಲೈಯನ್ಸ್ ಕಂಪನಿಯನ್ನು ಸೇರಿಸಿಕೊಳ್ಳಲು ಸಾಧ್ಯವಾಗಿತ್ತು. ರಫೇಲ್ ವ್ಯವಹಾರದಿಂದ ಸರ್ಕಾರಕ್ಕೆ ಸಂಭವಿಸಿದ ನಷ್ಟ 12,000-42,000 ಕೋಟಿ ರೂಪಾಯಿಗಳೆಂದು ವಿವಿಧ ಅಂದಾಜುಗಳು ಹೇಳುತ್ತವೆ.
2012ರಲ್ಲಿ ಮಾತುಕತೆಯಾದ ಒಪ್ಪಂದಕ್ಕಿಂತ ಭಿನ್ನವಾಗಿ ಹೊಸ ರಫೇಲ್ ವ್ಯವಹಾರದಲ್ಲಿ ಭಾರತಕ್ಕೆ ಯಾವುದೇ ಬಗೆಯ ತಂತ್ರಜ್ಞಾನ ವರ್ಗಾವಣೆ ಸೇರ್ಪಡೆಯಾಗಿಲ್ಲ. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲು ನಡೆಸುತ್ತಿರುವ ಯತ್ನಗಳಿಗೆ ಇದು ಭಾರೀ ಹಿನ್ನಡೆಯೆಂದೇ ಅನೇಕ ರಕ್ಷಣಾ ವಿಶ್ಲೇಷಕರು ಗಮನಿಸಿದ್ದಾರೆ.
ರಫೇಲ್ ವ್ಯವಹಾರವೊಂದು ಭಾರತ ಸರ್ಕಾರ ಮತ್ತು ಜನತೆಗೆ ಮಾಡಿರುವ ನಷ್ಟ ಸಾಲದೆಂಬಂತೆ, ಅನಿಲ್ ಅಂಬಾನಿಯ ಆಸ್ತಿಪಾಸ್ತಿ ಜಾಸ್ತಿ ಮಾಡಲು ಮೋದಿ ತನ್ನ ಪ್ರಪಂಚ ಪರ್ಯಟನೆಯ ಸಂದರ್ಭದಲ್ಲಿ ಸ್ವೀಡನ್, ರಷ್ಯಾ, ಇಸ್ರೇಲ್, ಅಮೆರಿಕ ಮತ್ತಿತರ ದೇಶಗಳಲ್ಲಿ ಕನಿಷ್ಟ ಇನ್ನೂ ಐದು ವ್ಯವಹಾರಗಳನ್ನು ಕುದುರಿಸಲು ನಿಂತರು. ಅದಾನಿಗೆ ನೀಡಿದ ಅನುಕೂಲಗಳಿಗೆ ಹೋಲಿಸಿದರೆ ಇವು ನಗಣ್ಯ ಎಂದೇ ಕೆಲವರು ಹೇಳಬಹುದಾದರೂ, ಉತ್ತರಪ್ರದೇಶದಲ್ಲಿ ಹಿಂದೆ ಬಿಜೆಪಿಯ ಕಟ್ಟಾ ವಿರೋಧಿ ಸಮಾಜವಾದಿ ಪಕ್ಷದ ಹೆಗಲ ಮೇಲೆ ಕೈ ಹಾಕಿ ಓಡಾಡುತ್ತಿದ್ದ ಅನಿಲ್ ಅಂಬಾನಿಗೆ ಇಷ್ಟೆಲ್ಲಾ ವ್ಯವಹಾರಗಳನ್ನು ಕೊಡಿಸಿರುವ ಮೋದಿ ಉದ್ಯಮಿಗಳಿಗೆ ತೋರುವ ಔದಾರ್ಯ ಗಮನಾರ್ಹವೇ! ಈ ಬಿಲಿಯನೇರ್ಗೆ ತನ್ನ ಆಸ್ತಿಪಾಸ್ತಿ ಉಳಿಸಿಕೊಳ್ಳಲು ಸಹಕರಿಸಿರುವ ಮೋದಿ, ಬಿಜೆಪಿಯ ಪ್ರಚಾರಕ್ಕೆ ಹಣ ತಂದು ಸುರಿಯುವ ಸಾಮರ್ಥ್ಯವಿರುವ ಯಾವ ಶ್ರೀಮಂತನೇ ಇರಲಿ, ತಾನು ಅಂತಹವನ ಪರ ಎಂದು ಪ್ರಧಾನಿ ಸಾಬೀತುಪಡಿಸಿದ್ದಾರೆ.
ಬಿಲಿಯನೇರ್ ‘ಬಾಬಾ’
ಇಲ್ಲಿ ಮೋದಿ ಸರ್ಕಾರದ ಒಂದು ವಿಶಿಷ್ಟ ಸಾಧನೆಯನ್ನು ಕಾಣಬಹುದು. ಅದು ‘ಬಾಬಾ’ನನ್ನು ಬಿಲಿಯನೇರ್ ಆಗಿ ಪರಿವರ್ತಿಸುವ ಕೇಸರಿ ಅಜೆಂಡಾ ಮತ್ತು ಕ್ರೋನಿ ಬಂಡವಾಳವಾದದ ಒಟ್ಟುಗೂಡುವಿಕೆ. ಬಿಜೆಪಿ ಆಡಳಿತದ ಫಲಾನುಭವಿಗಳಲ್ಲಿ ಬಾಬಾ ರಾಮದೇವ್ ಪ್ರಮುಖ ಸ್ಥಾನದಲ್ಲಿದ್ದಾನೆ. ಮೋದಿ ಅಧಿಕಾರಕ್ಕೆ ಬರುವ ಮುನ್ನವೇ ಬಿಲಿಯನೇರ್ ಆಗಿದ್ದೆನೆಂದು ಹೇಳಿಕೊಳ್ಳಲಾರದ ಬಾಬಾನನ್ನು ಬಿಲಿಯನೇರ್ ಮಾಡಿದ ಕೀರ್ತಿ ಪ್ರಧಾನಿಯೊಬ್ಬರಿಗೆ ಸಲ್ಲುತ್ತದೆ!
2014ರ ಸಂಸದೀಯ ಚುನಾವಣೆಗಳಲ್ಲಿ, ಮೋದಿಯ ಪರವಾಗಿ ಅತಿ ಜೋರಾಗಿ ಮಾತನಾಡುತ್ತಿದ್ದ ರಾಜಕೀಯೇತರ ಪ್ರಚಾರಕರಲ್ಲಿ ರಾಮದೇವ್ ಒಬ್ಬ. ತನ್ನ ಪ್ರದರ್ಶನಗಳ ಮೂಲಕ ಟಿವಿ ಚಾನೆಲ್ಗಳಲ್ಲಿ ಖ್ಯಾತಿ ಪಡೆದ ಈ ಯೋಗಾ ಗುರು ಮೋದಿಗೆ ಮತ ಚಲಾಯಿಸುವಂತೆ ಬಹಿರಂಗವಾಗಿ ತನ್ನ ಲಕ್ಷಾಂತರ ಅನುಯಾಯಿಗಳನ್ನು ಪುಸಲಾಯಿಸಿದ. ಬಿಜೆಪಿಯ ಗೆಲುವಿನಲ್ಲಿ ರಾಮದೇವನ ಪಾತ್ರ ನಿರ್ಣಾಯಕವಾಗಿತ್ತೆಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಹೇಳಿದ್ದು, ‘ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ರಚನಗೆ ಗಣನೀಯವಾಗಿ ಕೊಡುಗೆ ನೀಡಿರುವುದಕ್ಕಾಗಿ’ ಚುನಾವಣೆಯ ಬಳಿಕ ಬಾಬಾಗೆ ಕೃತಜ್ಞತೆ ಸಲ್ಲಿಸಿದ್ದರು.
ರಾಮದೇವನ ಆಧ್ಯಾತ್ಮಿಕ ಹಿಂದೂ ರಾಷ್ಟ್ರೀಯವಾದವು ಬಿಜೆಪಿಯ ರಾಜಕೀಯ ಹಿಂದೂ ರಾಷ್ಟ್ರೀಯವಾದದ ಜೊತೆ ಮೈತ್ರಿ ಮಾಡಿಕೊಂಡು ಇಬ್ಬರಿಗೂ ಲಾಭದಾಯಕವಾಯಿತು. ಮೋದಿ ಕೇಂದ್ರದಲ್ಲಿ ಅಧಿಕಾರದಲ್ಲಿ ಕೂತರೆ ರಾಮದೇವ್ ತನ್ನ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ವ್ಯವಹಾರದ ಮೂಲಕ ಆರ್ಥಿಕ ವಲಯಕ್ಕೆ ವಿಸ್ತರಿಸಿಕೊಂಡ. ಸರ್ಕಾರಿ ಯಂತ್ರದ ಅಧಿಕಾರವನ್ನು ಬಳಸಿ ಯೋಗಿ ಬಾಬಾನನ್ನು ‘ಪತಂಜಲಿ’ ಎಂಬ ಬಹುಬಿಲಿಯನ್ ಡಾಲರ್ FMCG (ಗೃಹ ಬಳಕೆ ವಸ್ತುಗಳು) ಸಾಮ್ರಾಜ್ಯದ ಮುಖ್ಯಸ್ಥನನ್ನಾಗಿಸಿ ಪ್ರಧಾನಿ ತನ್ನ ಋಣ ತೀರಿಸಿದ್ದಾರೆ.
ಕಣ್ಣಿಗೆ ಕಾಣದಂತಿದ್ದ ಸಂಸ್ಥೆ ಬಹುಕೋಟಿ ಕಂಪನಿಯಾಗಿದ್ದು ಹೇಗೆ?
ಮಾಧ್ಯಮ ವರದಿಗಳು ಹೇಳುವಂತೆ, ರಾಮದೇವ್ ಸ್ಥಾಪಿಸಿದ ‘ಪತಂಜಲಿ’ಯ ಅಧಿಕೃತ ಮಾಲೀಕತ್ವ ತನ್ನ ಉತ್ತರಾಧಿಕಾರಿಯಾಗುವ ಶಿಷ್ಯ ‘ಆಚಾರ್ಯ ಬಾಲಕೃಷ್ಣ’ನ ಹೆಸರಿನಲ್ಲಿದೆ. ‘ಪತಂಜಲಿ’ ಬ್ರ್ಯಾಂಡನ್ನು 34 ಕಂಪನಿಗಳು ಮತ್ತು 3 ಟ್ರಸ್ಟ್ ಗಳು ನಿಯಂತ್ರಿಸುತ್ತ, ಅತ್ಯಧಿಕ ಲಾಭಾಂಶವು (ಶೇ.60ರಷ್ಟು ಲಾಭ) ರಾಮದೇವನ ಸಹೋದರ ಮತ್ತು ಆತ್ಮೀಯ ಬಾಲಕೃಷ್ಣರಿಗೆ ಹೋಗುತ್ತಿದೆ. ಹೀಗಾಗಿ ನಿಜವಾದ ಮಾಲೀಕತ್ವ ಸ್ವಲ್ಪ ಮಸುಕಾಗಿದೆ. ಸೂಕ್ಷ್ಮ ವಿವರಗಳು ಏನೇ ಇರಲಿ, ಪಟಂಜಲಿಯ Super boss ರಾಮದೇವನೇ ಆಗಿದ್ದಾನೆ ಎಂಬುದಂತೂ ಸ್ಪಷ್ಟ.
ಒಂದು ಅತಿಸಣ್ಣ ಕಂಪನಿಯಾಗಿದ್ದ ಪತಂಜಲಿ, 2014 ಮತ್ತು 2018ರ ನಡುವೆ ಬಿಲಿಯನ್ ಡಾಲರ್ ಕಂಪನಿಯಾಗಿ ಪರಿವರ್ತನೆಯಾಯಿತು. ಅಲ್ಲದೆ ಅದರ ಮಾಲೀಕನ ಒಟ್ಟು ಆಸ್ತಿಯ ಮೌಲ್ಯ 6 ಬಿಲಿಯನ್ ಡಾಲರ್ ಇದ್ದು, ಆತ ಭಾರತದ 20 ಅತಿ ಶ್ರೀಮಂತ ಜನರ ಪೈಕಿ ಒಬ್ಬನಾದ. ಅಸ್ಪಷ್ಟವಾಗಿರುವ ಗಿಡಮೂಲಕೆ ಪುಡಿಗಳು ಮತ್ತು ಜೆಲ್ಲಿಗಳಿಂದ ಹಿಡಿದು ಕಂಪನಿಯು ಸಾಬೂನು, ಡಿಟರ್ಜೆಂಟ್, ಟೂತ್ಪೇಸ್ಟ್, ಅಡುಗೆಮನೆ ಅಗತ್ಯಗಳು, ಬೇಬಿ ಪೌಡರ್, ಬಿಸ್ಕತ್ತು, ಶ್ಯಾವಿಗೆ, ಇತ್ಯಾದಿ, ಗೃಹಬಳಕೆ ವಸ್ತುಗಳನ್ನು ಉತ್ಪಾದಿಸಲು ಕೈಹಾಕಿತು. ನೀವೇನಾದರೂ ಹೆಸರಿಸಿ, ಅದು ಪಟಂಜಲಿ ಪಟ್ಟಿಯಲ್ಲಿರುತ್ತದೆ. ‘ಭಾರತೀಯ ಸಂಸ್ಕಾರ’ ವನ್ನು ಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿರುವ ರಾಮದೇವ್ ಬ್ರ್ಯಾಂಡ್ ಜೀನ್ಸ್ ಈಗಾಗಲೇ ಬಂದಿದೆ!
ಇದರ ಪರಿಣಾಮವಾಗಿ ನಾಲ್ಕು ವರ್ಷಗಳೊಳಗೆ, ‘ಪತಂಜಲಿ’ ದಶಕಗಳಿಂದ ಪೈಪೋಟಿ ನಡೆಸುತ್ತಿದ್ದ ಹಿಂದೂಸ್ತಾನ್ ಯೂನಿಲೀವರ್, ಡಾಬರ್ ಮತ್ತಿತರ ಸ್ಥಾಪಿತ FMCG ದೈತ್ಯಗಳ ಮಾರುಕಟ್ಟೆ ಪಾಲನ್ನು ತಿಂದುಹಾಕಿತು.
ಪ್ರಧಾನಿ ಮೋದಿ ಮತ್ತು ಶಾ ಇವರ ಕೃಪಾಕಟಾಕ್ಷದಲ್ಲೇ ಪತಂಜಲಿ ಯದ್ವಾತದ್ವಾ ಪ್ರಗತಿ ಹೊಂದಿದ್ದು. ಸರ್ಕಾರಿ ಯಂತ್ರದ ಸಮೇತ ಅವರು ರಾಮದೇವನ ಕಡೆ ವಾಲಿದ್ದಾರೆ ಮತ್ತು ರಾಮದೇವನ ವಾಣಿಜ್ಯ ಸಾಹಸದಲ್ಲಿ ಸಂಪೂರ್ಣವಾಗಿ ಕೈಜೋಡಿಸಿದ್ದಾರೆ.
ಪ್ರಚಾರಕ್ಕೆ ಸರ್ಕಾರಿ ಯಂತ್ರದ ಬಳಕೆ – ಮೋದಿ ಋಣ ತೀರಿಕೆ
ಕೃತಜ್ಞತಾ ಭಾವವೆಂದು ಕಾವ್ಯಾತ್ಮಕವಾಗಿ ಹೇಳಿಬಿಡಬಹುದಾದರೂ, ಬಿಜೆಪಿ ಸರ್ಕಾರವು ಸಂಸತ್ತಿನ ಊಟದ ಟೇಬಲ್ಗಳ ಮೇಲೆ ಪತಂಜಲಿ ಉತ್ಪನ್ನಗಳನ್ನು ಬಡಿಸಿತ್ತು. ಸರ್ಕಾರದ ಕೇಂದ್ರೀಯ ಭಂಡಾರಗಳು (ಮಳಿಗೆ), ಆರ್ಮಿ ಕ್ಯಾಂಟೀನ್ ಮತ್ತು ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಪಡಿತರ ಅಂಗಡಿಗಳಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟಕ್ಕೆ ದಾರಿ ಮಾಡಿಕೊಟ್ಟಿತು. 2014ರಿಂದೀಚೆಗೆ ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತಿತರ ಸೌಲಭ್ಯಗಳಿಗೆಂದು ಪತಂಜಲಿ 2000 ಎಕರೆಗಳಷ್ಟು ಜಮೀನನ್ನು ಅತಿಕಡಿಮೆ ಬೆಲೆಗೆ ಪಡೆದುಕೊಂಡಿದೆ. ಅದರ ಕಾರ್ಖಾನೆಗಳಿಗೆ ಭದ್ರತೆ ಕಲ್ಪಿಸಲು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಯಿತು. ಸಾಮಾನ್ಯವಾಗಿ ಖಾಸಗಿ ಕ್ಷೇತ್ರಕ್ಕೆ ಒದಗಿಸದ CISF (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಭದ್ರತೆಯನ್ನು ಹರಿದ್ವಾರದಲ್ಲಿ ಪತಂಜಲಿ ಫುಡ್ ಪಾರ್ಕಿಗೆ ಕಲ್ಪಿಸಲಾಯಿತು. ಪತಂಜಲಿಗೆ ಅತ್ಯಾಕರ್ಷಕ ಸರ್ಕಾರಿ ಗುತ್ತಿಗೆಗಳನ್ನು ನೀಡಲಾಯಿತು. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಪತಂಜಲಿಗೆ ತೋರುತ್ತಿರುವ ಅತಿಯಾದ ಒಲವಿಗೆ ಸರ್ಕಾರ ಕೊಡುವ ಕಾರಣ, ಪತಂಜಲಿ ಭಾರತದಲ್ಲಿ ‘ಸ್ವದೇಶಿ’ ಉತ್ಪನ್ನಗಳನ್ನು ಉತ್ತೇಜಿಸಲು ಯತ್ನಿಸುತ್ತಿದೆ ಎಂದು. ಆದರೆ ಇದೇ ಒಲವನ್ನು ಇತರ ಸ್ವದೇಶಿ ಕಂಪನಿಗಳಾದ ಡಾಬರ್, ಇಮಾಮಿ, ಇತ್ಯಾದಿಗಳಿಗೆ ತೋರಿಸಿಲ್ಲ. ಹಾಗೆ ನೋಡಿದರೆ ಲಕ್ಷಾಂತರ ‘ಅಪ್ಪಟ ಸ್ವದೇಶಿ’ ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಹಾಗೂ ಕೈಮಗ್ಗ ಮತ್ತು ಕರಕುಶಲ ಉದ್ಯಮಗಳು ಸಾವಿನಂಚಿನಲ್ಲಿವೆ. ಇವುಗಳ ಬಗ್ಗೆ ಮೋದಿ ಸರ್ಕಾರ ಯಾವುದೇ ಔದಾರ್ಯ ತೋರಿಲ್ಲ.
ಬಿಲಿಯನೇರ್ ಬಡಾವೊ-ಬಚಾವೊ-ಬನಾವೊ ವ್ಯರ್ಥವಾಗಿಲ್ಲ!
ಬಿಲಿಯನೇರ್ಗಳಿಗೆ ಮೋದಿ ತೋರಿರುವ ಔದಾರ್ಯ, ಪ್ರೀತಿ ವ್ಯರ್ಥವಾಗಿಲ್ಲ. ಅವರು ಹಣ ಪೂರೈಸಿದ್ದಾರೆ. ಮೋದಿ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೀಡಲಾದ ಕಾರ್ಪೊರೇಟ್ ದೇಣಿಗೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಬಿಜೆಪಿಗೆ ಸಂದಾಯವಾಗಿದೆ. ಕಾರ್ಪೊರೇಟ್ ಮಾಲೀಕತ್ವದ ಮಾಧ್ಯಮದಲ್ಲಿ ಮೋದಿ ಆವರಿಸಿಕೊಂಡಿದ್ದಾರೆ. ಪ್ರಸಾರ ಸಮಯ ಸಂಪೂರ್ಣವಾಗಿ ಮುಕ್ತವಾಗಿ ಮತ್ತು ಹೇರಳವಾಗಿತ್ತೆಂಬುದನ್ನು ಮರೆಯುವಂತಿಲ್ಲ.
ಭಾರತದ ಸಾಮಾನ್ಯ ಪ್ರಜೆಗಳು ಮೋದಿ ಆಡಳಿತದಲ್ಲಿ ಉದ್ಯೋಗ, ಕನಿಷ್ಟ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ, ಕೈಗೆಟುಕುವ ಆರೋಗ್ಯ ಮತ್ತು ಶಿಕ್ಷಣ, ಅಗ್ಗದ ವಿದ್ಯುಚ್ಛಕ್ತಿ, ಅಡುಗೆ ಅನಿಲಗಳಂತಹ “ಕ್ಷುಲ್ಲಕ” ಸವಲತ್ತುಗಳಿಗಾಗಿ ಹಂಬಲಿಸುವುದನ್ನು ಬಿಟ್ಟುಬಿಟ್ಟರೆ, ಅವರೆಲ್ಲರೂ ಒಬ್ಬರ ನಂತರ ಒಬ್ಬರು ಬಿಲಿಯನೇರ್ಗಳಾಗಿಬಿಡಬಹುದು, ಒಂದು ವೇಳೆ ಅವರು ಬದುಕಿದ್ದರೆ ಮಾತ್ರ…
ಮೋದಿಯ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆ ಬಿಲಿಯನೇರ್ ಉದ್ಯಮಿಗಳಿಗೆ ಸೀಮಿತವಾಗಿದೆಯೇ ಹೊರತು ಜನಸಾಮಾನ್ಯರಿಗಲ್ಲ ಎಂದು ಈ ಐದು ವರ್ಷದ ಬಿಜೆಪಿ ಆಡಳಿತ ಸಾಬೀತು ಮಾಡಿದೆ. ಅಘೋಷಿತ “ಪ್ರಧಾನಮಂತ್ರಿ ಬಿಲಿಯನೇರ್ ಬಡಾವೊ- ಬಿಲಿಯನೇರ್ ಬಚಾವೊ – ಬಿಲಿಯನೇರ್ ಬನಾವೊ” ಯೋಜನೆ ಮಾತ್ರ ಬಿಜೆಪಿ ಮತ್ತು ಕಾರ್ಪೊರೇಟ್ ಉದ್ಯಮಿಗಳಿಗೆ ಲಾಭದಾಯಕ ಯೋಜನೆಯಾಗಿದೆ, ದೇಶವನ್ನು ನಾಶ ಮಾಡುತ್ತಲೇ….
ಲೇಖನದ ಮೊದಲ ಭಾಗ ಓದಲು ಕೆಳಗೆ ಕ್ಲಿಕ್ ಮಾಡಿ