ಇಷ್ಟು ದಿನ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ತಲೆಕೆಡಿಸಿಕೊಂಡಿದ್ದರು. ತಿಂಗಳಿಗೊಮ್ಮೆ ಸರ್ಕಾರ ಉರುಳಿಸುವ ಮುಹೂರ್ತ ನಿಗದಿ ಮಾಡುತ್ತಿದ್ದರು. ಲೋಕಸಭಾ ಚುನಾವಣಾ ಪ್ರಚಾರದಲ್ಲೂ ಅವರದ್ದು ಮೈತ್ರಿ ಸರ್ಕಾರ, ಮೇ 23ರ ನಂತರ ಮುಂದುವರಿಯಲ್ಲ ಎಂಬುದನ್ನೇ ಪ್ರಮುಖವಾಗಿ ಹೇಳಿದ್ದರು. ಆದರೆ, ಇದೀಗ ಮೈತ್ರಿ ಸರ್ಕಾರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಲೇ ಕುಸಿಯಬಹುದು ಎಂಬ ಪ್ರತಿಪಕ್ಷದ ನಿರೀಕ್ಷೆಯನ್ನು ಸ್ವತಃ ದೋಸ್ತಿಪಕ್ಷಗಳ ನಾಯಕರೇ ನಿಜ ಮಾಡುವ ಸಾಧ್ಯತೆ ದಟ್ಟವಾಗುತ್ತಿದೆ.
ಹೌದು, ರಾಜ್ಯ ರಾಜಕಾರಣದಲ್ಲಿ ಈ ವಾರದಲ್ಲಿ ನಡೆದಿರುವ ಬೆಳವಣಿಗೆಗಳ ದಿಕ್ಕು ಗಮನಿಸಿದರೆ, ಮೈತ್ರಿ ಸರ್ಕಾರವನ್ನು ಬೀಳಿಸಿ, ಮತ್ತೆ ಸಿಎಂ ಗದ್ದುಗೆ ಏರುವ ಯಡಿಯೂರಪ್ಪ ಕನಸು ಶೀರ್ಘವೇ, ಅವರ ಪರಿಶ್ರಮವೇ ಇಲ್ಲದೆ ನಿಜವಾಗುವ ಸಾಧ್ಯತೆ ಇದೆ. ಏಕೆಂದರೆ, ಈಗಾಗಲೇ ಒಂದು ಕಡೆ ಕಾಂಗ್ರೆಸ್ ಕೆಲವು ಶಾಸಕರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಬಂಡಾಯ ಗುಂಪಿನ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಅವರಿಗೆ ಜೈ ಎನ್ನತೊಡಗಿದ್ದಾರೆ. ಏಕಾಂಗಿಯಾಗಿ ಪಕ್ಷ ತೊರೆದು ಬಿಜೆಪಿಗೆ ಪ್ರವೇಶಿಸಿ ಅಲ್ಲೂ ಸಲ್ಲದ, ಇಲ್ಲೂ ಸಲ್ಲದ ಸಾಲಿಗೆ ಸೇರುವ ಬದಲು ಜೊತೆಗೆ ನಾಲ್ಕು ಜನರನ್ನು ಕರೆದೊಯ್ದು ಸಲ್ಲಬೇಕಾದ್ದನ್ನು ಸಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ರಮೇಶ್ ಈಗಾಗಲೇ ತೆರೆಮರೆಯ ಪ್ರಯತ್ನ ಆರಂಭಿಸಿದ್ದಾರೆ. ಇದು ಉತ್ತರ ಕರ್ನಾಟಕದ ಹಳೆಯ ಸುದ್ದಿಯೇ.
ಜೊತೆಗೆ, ಇದೀಗ ದಕ್ಷಿಣ ಕರ್ನಾಟಕದಲ್ಲಿ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಅದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಗಾದಿಯಲ್ಲಿ ಕಾಣುವ ಕೆಲವು ಶಾಸಕರ ಹೊಸ ಬಯಕೆಗೆ ಸಂಬಂಧಿಸಿದ್ದು. ಆದರೆ, ಈವರೆಗೆ ಎಲ್ಲೋ ಒಬ್ಬಿಬ್ಬರು ಶಾಸಕರು, ಯಾವುದೋ ಸಭೆಯಲ್ಲೋ, ಸಮಾರಂಭದಲ್ಲೋ ಹಳಹಳಿಕೆಯಂತೆ ಸ್ವಗತದಲ್ಲಿ ಆಡಿಕೊಳ್ಳುತ್ತಿದ್ದ ‘ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು’ ಎಂಬ ಮಾತು, ಈ ಬಾರಿ ಹಕ್ಕೊತ್ತಾಯದ ವರಸೆಯಾಗಿ ಬದಲಾಗಿದೆ. ಸಿದ್ದರಾಮಯ್ಯ ಆಪ್ತರು ಎನಿಸಿಕೊಂಡಿರುವ ಶಾಸಕರುಗಳು ತಮ್ಮ ನಾಯಕ “ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಲಿ” ಎನ್ನುವ ಮೂಲಕ ಹಾಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ತಮಗೆ ವಿಶ್ವಾಸವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಇದು ಹೊಸ ಬೆಳವಣಿಗೆ. ಈ ಮೊದಲು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂಬುದು ಮುಂದಾದರೂ ಒಮ್ಮೆ ಅವರು ಸಿಎಂ ಆಗಲಿ ಎಂಬ ಒಂದು ಅಭಿಮಾನದ ಆಶಯವಾಗಿ ಕಾಣುತ್ತಿತ್ತು. ಹಾಗಾಗಿ ಆ ಬಗ್ಗೆ ಯಾರೂ ಆತಂಕವನ್ನಾಗಲೀ, ಆಕ್ಷೇಪವನ್ನಾಗಲೀ ವ್ಯಕ್ತಪಡಿಸಿರಲಿಲ್ಲ. ಆದರೆ, ಇದೀಗ ಕಳೆದ ಒಂದು ವಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗರ ವರಸೆ ಬದಲಾಗಿದೆ. ಹಾಗಾಗಿ ಈಗ ಸಹಜವಾಗೇ ಸಿಎಂ ಕುರ್ಚಿ ನಿಧಾನಕ್ಕೆ ಅಲುಗಾಡುತ್ತಿರುವ ಸದ್ದು ಕೇಳತೊಡಗಿದೆ. ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಜಿ ಪರಮೇಶ್ವರ್ ಅವರನ್ನು ಕರೆಸಿಕೊಂಡು ಆ ಬಗ್ಗೆ ಮಾತನಾಡಿದ್ದಾರೆ. ಅಂತಹ ಹೇಳಿಕೆಗಳಿಂದ ತಮಗೆ ಮುಜುಗರವಾಗಿದೆ. ಅದು ಖಂಡಿತವಾಗಿಯೂ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿರುವುದಾಗಿ ವರದಿಯಾಗಿದೆ.
ಕಳೆದ ವಾರ ರಾಜ್ಯದಲ್ಲಿ ಲೋಕಸಭಾ ಮತದಾನ ಪೂರ್ಣಗೊಳ್ಳುತ್ತಲೇ ಪ್ರತಿಪಕ್ಷ ಬಿಜೆಪಿಯಲ್ಲಿ ಬಹುತೇಕ ಮೌನ ಮನೆಮಾಡಿದ್ದರೆ, ದೋಸ್ತಿ ಪಕ್ಷದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಪ್ರಮುಖವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ಹೊಂದಿರುವ ಕಾಂಗ್ರೆಸ್ಸಿನ ಶಾಸಕರ ಒಂದು ಗುಂಪು ಮೇ 23ರ ನಂತರ ಏನು ಎಂಬ ಅಜೆಂಡಾದೊಂದಿಗೆ ತೆರೆಮರೆಯಲ್ಲಿ ಗುಪ್ತ ಸಭೆಗಳನ್ನು ನಡೆಸತೊಡಗಿದ್ದಾರೆ. ಬಿಜೆಪಿಯ ವಿಶ್ವಾಸದಂತೆ ರಾಜ್ಯದಲ್ಲಿ ಅವರು ಹೆಚ್ಚಿನ ಸ್ಥಾನ ಪಡೆಯಲು ಆಗದೇ ಇರಬಹುದು. ಆದರೆ, ಕೇಂದ್ರದಲ್ಲಿ ಅವರದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಹುದು. ಆಗ ಸರ್ಕಾರವನ್ನು ಕೆಡವಲು ಬಿಜೆಪಿ ಏನೆಲ್ಲಾ ಸಾಧ್ಯವೂ ಎಲ್ಲವನ್ನೂ ಮಾಡಲಿದೆ. ಅಂತಹ ಸ್ಥಿತಿಯಲ್ಲಿ ನಮ್ಮ ನಿಲುವು ಏನು? ಎಂಬುದನ್ನು ಅವರು ಪ್ರಮುಖವಾಗಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.
ನಿಗಮ ಮಂಡಳಿ ನೇಮಕ, ಅಧಿಕಾರಿಗಳ ವರ್ಗಾವಣೆ, ಸಾಲ ಮನ್ನಾ ಗೊಂದಲ, ಸಚಿವರ ಖಾತೆಗಳಲ್ಲಿ ಗೌಡರ ಕುಟುಂಬದ ಹಸ್ತಕ್ಷೇಪ ಸೇರಿದಂತೆ ಹಲವು ವಿಷಯಗಳಲ್ಲಿ ಸಿಎಂ ಕುಮಾರಸ್ವಾಮಿ ಅವರ ಆಡಳಿತ ವೈಖರಿಯ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ತೀವ್ರ ಭಿನ್ನಾಭಿಪ್ರಾಯವಿದೆ. ಜೊತೆಗೆ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ಕಾರಣದಿಂದ ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪಕ್ಷದ ಶಾಸಕರು ಮತ್ತು ನಾಯಕರು ಕಾಂಗ್ರೆಸ್ ವಿರುದ್ಧ ಸಿಡಿದೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಕೈ ಹಾಕುತ್ತಿರುವ ಡಿ ಕೆಶಿ ಅವರ ವರಸೆಗೆ ಸ್ವತಃ ಜಾರಕಿಹೊಳಿ ಸಹೋದರರು ಮತ್ತು ಸಚಿವ ಎಂ ಬಿ ಪಾಟೀಲರು ಕೂಡ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಉತ್ತರಕರ್ನಾಟಕದ ಭಾಗದ ಬಹುತೇಕ ಶಾಸಕರಿಗೆ ಸದ್ಯದ ಸ್ಥಿತಿ ಉಸಿರುಗಟ್ಟಿಸುತ್ತಿದೆ. ಹಾಗಾಗಿ ಡಿಕೆಶಿ ಸದ್ಯ ಪಕ್ಷದ ಪಾಲಿಗೆ ಟ್ರಬಲ್ ಶೂಟರ್ ಬದಲಾಗಿ, ಟ್ರಬಲ್ ಮೇಕರ್ ಆಗಿದ್ದಾರೆ ಎಂಬ ಗೊಣಗಾಟ ಆ ಶಾಸಕರದ್ದು.
ಅಲ್ಲದೆ, ಸ್ವತಃ ಸಿದ್ದರಾಮಯ್ಯ ಕೂರ ಕುಮಾರಸ್ವಾಮಿ ಅವರ ಕಾರ್ಯವೈಖರಿಯ ಬಗ್ಗೆ ತೃಪ್ತರಾಗಿಲ್ಲ. ಒಂದು ವರ್ಷದ ಆಡಳಿತದಲ್ಲಿ ಅವರು ಪ್ರಮುಖವಾಗಿ ನಿಗಮಮಂಡಳಿ ನೇಮಕಾತಿ, ವರ್ಗಾವಣೆ ಹಾಗೂ ತಮ್ಮ ಹಿಂದಿನ ಹಲವು ಜನಪರ ಕಾರ್ಯಕ್ರಮಗಳ ಮುಂದುವರಿಕೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜೊತೆಗೆ ಹೇಳಿಕೊಳ್ಳುವಂತಹ ಒಂದೇ ಒಂದು ಹೊಸ ಕಾರ್ಯಕ್ರಮ ರೂಪಿಸಿಲ್ಲ. ಸಾಲ ಮನ್ನಾ ಘೋಷಿಸಿದ್ದರೂ, ಅದು ವಾಸ್ತವವಾಗಿ ರೈತರಿಗೆ ಸಕಾಲಕ್ಕೆ ಅನುಕೂಲವಾಗಿಲ್ಲ. ಜೊತೆಗೆ ರಾಜ್ಯದ ಹಣಕಾಸು ಸ್ಥಿತಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸುವಲ್ಲಿ ಸಿಎಂ ವಿಫಲರಾಗಿದ್ದಾರೆ ಎಂಬ ಅಸಮಾಧಾನ ಹೊಂದಿದ್ದಾರೆ ಎಂಬುದು ಅವರ ಆಪ್ತ ವಲಯದ ಮಾಹಿತಿ.
ಜೊತೆಗೆ, ಸರ್ಕಾರ ಇದೇ ರೀತಿ ಮುಂದುವರಿದರೆ, ಈ ಬಾರಿಯಷ್ಟೇ ಅಲ್ಲ, ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮತ್ತು ಆ ಮೂಲಕ ತಾವು ಮತ್ತೆ ಸಿಎಂ ಆಗುವ ಸಾಧ್ಯತೆಯೇ ಇಲ್ಲ. ಈ ರೀತಿಯ ಆಡಳಿತ, ತಾವು ಐದು ವರ್ಷ ಜನಪರ ಆಡಳಿತ ಮೂಲಕ ಕಟ್ಟಿದ ಪಕ್ಷದ ವರ್ಚಸ್ಸಿಗೂ ಹಾನಿ ತರಲಿದೆ. ಹಾಗಾಗಿ ಕಾಂಗ್ರೆಸ್ ಬಲಪಡಿಸಿ ಮತ್ತೆ ಅಧಿಕಾರಕ್ಕೆ ತರಬೇಕೆಂದರೆ, ಜೆಡಿಎಸ್ ನೊಂದಿಗಿನ ನಂಟನ್ನು ಹರಿದುಕೊಂಡು ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದೇ ಹೆಚ್ಚು ಸರಿಯಾದ ಮಾರ್ಗ. ಕನಿಷ್ಟ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅದು ಲಾಭಕರ ಎಂಬ ಅಭಿಪ್ರಾಯ ಸಿದ್ದರಾಮಯ್ಯ ಅವರ ವಲಯದಲ್ಲಿದೆ ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಅವರು ಇತ್ತೀಚೆಗೆ ತಮ್ಮ ಆಪ್ತರ ಬಳಿ, ಮೇ 23ರ ನಂತರ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬಹುದು. ಅದಕ್ಕೂ ಸಿದ್ಧರಾಗಿ ಎಂದು ಹೇಳಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಒಟ್ಟು 250ಕ್ಕೂ ಅಧಿಕ ಸ್ಥಾನ ಪಡೆದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಆಗ ಬಿಜೆಪಿಯವರು ಸುಮ್ಮನೆ ಕೂರುವುದಿಲ್ಲ. ಮೈತ್ರಿ ಸರ್ಕಾರವನ್ನು ಕೆಡವಲು ಏನೆಲ್ಲಾ ಮಾಡಬೇಕು ಮಾಡುತ್ತಾರೆ. ಆಗ ನಾವು ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಮತ್ತು ಬಿಜೆಪಿಗೆ ಆಡಳಿತ ಬಿಟ್ಟುಕೊಡುವುದು ಅನಿವಾರ್ಯ. ಆದರೆ, ನಮಗೆ ಅಧಿಕಾರ ತಪ್ಪಿದರೂ, ಬಿಜೆಪಿ ಸುಸೂತ್ರ ಆಡಳಿತ ನೀಡಲಾಗದು. ಹಾಗಾಗಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಮುಂದಿನ ವಿಧಾನಸಭೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಬುಹುದು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ.
ಆ ಹಿನ್ನೆಲೆಯಲ್ಲಿಯೇ ಅವರು “ಮತ್ತೆ ಚುನಾವಣೆ ನಡೆದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ” ಎಂದು ಇತ್ತೀಚೆಗೆ ಹೇಳಿದ್ದು. ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದೇ ಹೋದರೆ, ಆಗ ಈ ಅವಧಿಯಲ್ಲೇ ಮುಖ್ಯಮಂತ್ರಿ ಸ್ಥಾನ ಪಡೆದು ತಮ್ಮ ಹಿಂದಿನ ಜನಪರ ಯೋಜನೆಗಳಿಗೆ ಇನ್ನಷ್ಟು ಶಕ್ತಿ ತುಂಬುವುದು ಸಾಧ್ಯವೇ ಎಂಬುದನ್ನು ಕಾದುನೋಡುವುದು. ಅದು ಸಾಧ್ಯವಿಲ್ಲವೆಂದಾದರೆ, ಜೆಡಿಎಸ್ ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ ಬಲಹೀನಗೊಳ್ಳುವುದನ್ನು ತಪ್ಪಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ ಎಂಬುದು ಅವರ ಲೆಕ್ಕಾಚಾರ ಎನ್ನಲಾಗಿದೆ.
ಒಂದು ವೇಳೆ, ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಬರದೇ, ಕಾಂಗ್ರೆಸ್ ಕೂಡ ಸರ್ಕಾರ ರಚಿಸಲು ಶಕ್ತವಾಗದೇ ಹೋದಲ್ಲಿ, ಈಗಿನ ಕೆಲವು ಸಮೀಕ್ಷೆಗಳ ನಿರೀಕ್ಷೆಯಂತೆ ತೃತೀಯ ರಂಗ ಮುಂಚೂಣಿಗೆ ಬರಲಿದೆ. ಆಗ ಖಂಡಿತವಾಗಿಯೂ ದೇವೇಗೌಡರು ಪ್ರಮುಖ ಪಾತ್ರ ವಹಿಸುತ್ತಾರೆ. ಅಂತಹ ಸಂದರ್ಭದಲ್ಲಿ ರಾಜ್ಯದ ಮೈತ್ರಿ ಮುಂದುವರಿಯುವುದು ಅನಿವಾರ್ಯವಾಗಬಹುದು. ಆದರೆ ಆಗಲೂ ಸಂಘಟನೆ ಮತ್ತು ನಾಯಕತ್ವದ ವಿಷಯದಲ್ಲಿ ಲಾಭವಾಗುವುದು ಜೆಡಿಎಸ್ ಗೆ ವಿನಃ ಕಾಂಗ್ರೆಸ್ಸಿಗಲ್ಲ.
ರಾಜ್ಯದ ಮಟ್ಟಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಮಾಡಿಕೊಂಡು ಈ ಮೈತ್ರಿ, ಕಾಂಗ್ರೆಸ್ಸಿಗೆ ದುಬಾರಿಯಾಗುತ್ತಿದೆ. ಈ ಮೈತ್ರಿ ಮುಂದುವರಿದರೆ, ಕಾಂಗ್ರೆಸ್ ನೆಲಕಚ್ಚಲಿದೆ. ಹಾಗಾಗಿ ಮೈತ್ರಿ ಕಡಿದುಕೊಂಡು ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಕ್ಷೇಮ ಎಂಬ ಮಾತನ್ನು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರ ಕಿವಿಗೂ ಹಾಕಲಾಗಿದೆ. ಅವರು ಸದ್ಯ ಮೇ 23ರ ವರೆಗೆ ಕಾದುನೋಡಿ, ಮುಂದಿನ ನಿರ್ಧಾರ ಕೈಗೊಳ್ಳುವ ಎಂಬ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
ಈ ನಡುವೆ, ಮೈಸೂರು ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕೂಡ ಈ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ. ರಾಜ್ಯದಲ್ಲಿ ಮೈತ್ರಿ ಕೂಟ ಹೆಚ್ಚು ಸ್ಥಾನ ಗೆದ್ದರೂ, ಈ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡರೂ ರಾಜ್ಯ ಸರ್ಕಾರ ಅಲ್ಪಾಯುಷ್ಯಕ್ಕೆ ಬೀಳಲಿದೆ. ಅದರಲ್ಲೂ ಪ್ರಮುಖವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ, ಖಂಡಿತವಾಗಿಯೂ ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ. ಅದೇ ರೀತಿ ಒಂದು ವೇಳೆ ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸೋತರೂ ಅದೇ ಪರಿಣಾಮ ಉಂಟಾಗಲಿದೆ. ಹಾಗಾಗಿ ಮೈಸೂರು ಮತ್ತು ತುಮಕೂರಿನ ಚುನಾವಣೆಯ ಫಲಿತಾಂಶವೇ ಬಹುತೇಕ ದೋಸ್ತಿ ಸರ್ಕಾರದ ಆಯುಷ್ಯವನ್ನು ನಿರ್ಧರಿಸಲಿದೆ.
ಆಗ ಯಡಿಯೂರಪ್ಪ ಅವರ ಯಾವ ಪ್ರಯತ್ನವೂ ಇಲ್ಲದೆಯೂ ಲಡ್ಡು ಬಂದು ಅವರ ಬಾಯಿಗೆ ಬೀಳಲಿದೆ. ಈ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿಯೇ ಸದ್ಯ ಯಡಿಯೂರಪ್ಪ ಕೂಡ ಒಂದು ರೀತಿಯ ವಿಶ್ವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಗೂ ಅದೇ ಬೇಕಾಗಿದೆ. ಹಾಗಾಗಿ, ಕುಮಾರಸ್ವಾಮಿ ಅವರು ಮೇ 23ರ ನಂತರ ರಾಜಕೀಯ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ರಾಜ್ಯದಲ್ಲಿ ಯಾವ ಸರ್ಕಾರ ಇರಲಿದೆ ಅಥವಾ ಬರಲಿದೆ ಎಂಬುದು ನಿರ್ಧಾರವಾಗಲಿದೆ.