ಬೆಂಗಳೂರು ಸಿಟಿ ಇರುವ ರಾಜ್ಯ ಯಾವುದು?
ಇದೆಂತಹ ಅಸಂಬದ್ಧ ಪ್ರಶ್ನೆ? ಎಲ್ ಕೆ ಜಿ, ಯುಕೆಜಿ ಮಕ್ಕಳೂ ಉತ್ತರಿಸುತ್ತಾರೆ ಎಂದು ಹುಬ್ಬೇರಿಸಬೇಡಿ. ಬೆಂಗಳೂರಿನ ವಿಜಯನಗರ ಪೊಲೀಸರಿಗೆ ಈ ವಿಷಯದಲ್ಲಿ ಅಜ್ಞಾನ ಎನ್ನಬೇಕೋ ಅಥವಾ ಅಸಡ್ಡೆ, ತಿಕ್ಕಲುತನ ಅಥವಾ ಉಂಡದ್ದು ಕರಗದ ಕೊಬ್ಬು ಎನ್ನಬೇಕೋ ಎಂದು ಈ ವರದಿ ಓದಿದ ಬಳಿಕ ನೀವೇ ತೀರ್ಮಾನಿಸಿ.
ಬೆಂಗಳೂರಿನ ನಾಗರಿಕರೊಬ್ಬರು ನೀಡಿದ ದೂರನ್ನು ದೂರು ದಾಖಲಾತಿಯಲ್ಲಿ ದಾಖಲಿಸಿಕೊಳ್ಳುವಾಗ ವಿಜಯ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಎದುರುದಾರರು ವಾಸವಾಗಿರುವ ಬೆಂಗಳೂರು ಸಿಟಿ ಅಂಡಮಾನ್ –ನಿಕೋಬಾರ್ ನಲ್ಲಿದೆ ಎಂದು ದಾಖಲಿಸಿದ್ದಾರೆ!
ಪಾಪ… ವಿಜಯನಗರ ಮಾರುಕಟ್ಟೆಯ ಮಧ್ಯದಲ್ಲಿ ಜನಜಂಗುಳಿಯ ನಡುವೆ ಸುಂದರ ಕಟ್ಟಡದಲ್ಲಿ ಕುಳಿತುಕೊಳ್ಳುವ ವಿಜಯನಗರ ಠಾಣೆಯ ಈ ಸಿಬ್ಬಂದಿಗೆ ಬೆಂಗಳೂರು ನಗರ ಇರುವುದು ಕರ್ನಾಟಕ ರಾಜ್ಯದಲ್ಲಿ ಎಂಬುದು ಸಹ ನೆನಪಿನಲ್ಲಿ ಇಲ್ಲವೇನೋ.
ಖಾಕಿ ತೊಟ್ಟ ಈ ಪೊಲೀಸರು ಬೆಂಗಳೂರಿನಲ್ಲೇ ವಾಸಿಸುತ್ತಾ ಕಾರ್ಯ ನಿರ್ವಹಿಸುತ್ತಿದ್ದರೂ, ಅವರಿಗೆ ಈ ನಗರ ಅಂಡಮಾನ್ ದ್ವೀಪದಂತೆ ಕಾಣಿಸುತ್ತದೆ ಎಂದರೆ ಏನು ಹೇಳೋಣ? ರಾಜಾಕಾಲುವೆಯನ್ನು, ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಒಂದು ಜೋರು ಮಳೆ ಬಂದರೆ ದ್ವೀಪಗಳು ರೂಪುಗೊಳ್ಳುತ್ತವೆ ಎನ್ನುವುದೇನೋ ಬೇರೆಯೇ ಮಾತು… ಶಕ್ತಿಕೇಂದ್ರವಾಗಿರುವ ಈ ಊರಿನಲ್ಲಿ ಬೇರೆ ನಗರಗಳಿಗಿಂತ ಸ್ವಲ್ಪ ಹೆಚ್ಚೆಂದೇ ಹೇಳುವಷ್ಟು ಕಾಡುಪ್ರಾಣಿಗಳಿಗಿಂತಲೂ ಕ್ರೂರವಾದ ಮನುಷ್ಯರಿದ್ದಾರೆ ಎಂಬುದೂ ನಿಜವೇ. ಆದರೂ ಸಮುದ್ರ ಬದಿಗಿರಲಿ, ನೀರಿನ ಸೆಲೆಯೇ ಕಾಣದ ಬೆಂಗಳೂರು ನಗರ ಪೊಲೀಸರ ಕಣ್ಣಿಗೆ ಅಂಡಮಾನ್ & ನಿಕೊಬಾರ್ ದ್ವೀಪದಲ್ಲಿರುವಂತೆ ಕಂಡಿದ್ದು ಹೇಗೆ ಎಂಬುದೇ ಯಕ್ಷಪ್ರಶ್ನೆ!
ಬಹುಶಃ ಯಾವ ಸರ್ಕಾರವೂ ಬೆಂಗಳೂರು ನಗರವನ್ನು ಕರ್ನಾಟಕದಿಂದ ಬಿಟ್ಟುಕೊಡುವ ಇಂತಹ ಆದೇಶ ಹೊರಡಿಸುವುದಿಲ್ಲ, ಆದರೆ ವಿಜಯನಗರ ಪೊಲೀಸರ ದಾಖಲೆಯಲ್ಲಿ ಮಾತ್ರ ಈ “ಮಹತ್ವಪೂರ್ಣ” ಮಾಹಿತಿಯನ್ನು ನೀವು ಸ್ಪಷ್ಟವಾಗಿ ಪಡೆಯಬಹುದು!
ಬೆಂಗಳೂರು ಸಿಟಿ ಅಂಡಮಾನ್ & ನಿಕೊಬಾರ್ ಗೆ ಸೇರಿದ್ದು ಹೇಗೆ?
ಮನೆ ಮಾಲೀಕರಿಂದ ವಂಚನೆ ಮತ್ತು ಅಪನಿಂದನೆಗೊಳಗಾದ ಪತ್ರಕರ್ತೆಯೊಬ್ಬರು ಮೇ 9ರ ಗುರುವಾರದಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದರು. ಮನೆ ಮಾಲೀಕರೊಬ್ಬರು ತಮಗೆ ವಂಚನೆ ನಡೆಸಿದ್ದು ನ್ಯಾಯ ಕೊಡಿಸಿಕೊಡಿ ಎಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದ ಅವರು “ನನಗೆ ವಂಚಿಸಿದ ಮನೆ ಮಾಲೀಕನನ್ನು ಕರೆಯಿಸಿ ನನಗೆ ನ್ಯಾಯ ಕೊಡಿಸಿ ಹಾಗೂ ತಮ್ಮ ಕುರಿತು ಅಸಭ್ಯವಾಗಿ ನಿಂದಿಸಿದ್ದ ಮಾಲೀಕರ ಪತ್ನಿಯ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ” ದೂರು ಸಲ್ಲಿಸಿದ್ದರು. ಆದರೆ ಈ ದೂರಿಗೆ ಪೊಲೀಸರ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಕುರಿತು ಟ್ರೂಥ್ ಇಂಡಿಯಾ ಕನ್ನಡದೊಂದಿಗೆ ಮಾತಾಡಿದ ಅವರು, “ನನ್ನ ದೂರಿಗೆ ಸೂಕ್ತ ರೀತಿ ಸ್ಪಂದಿಸದೇ ಆ ಪೊಲೀಸ್ ಠಾಣಾಧಿಕಾರಿ ಅಸಡ್ಡೆಯ ವರ್ತನೆ ತೋರಿದರು. ಮಾತ್ರವಲ್ಲ ಮನೆ ಮಾಲೀಕರ ಪರವಾಗಿ ವರ್ತಿಸಿದ್ದರು” ಎಂದು ತಿಳಿಸಿದ್ದಾರೆ. ಪೊಲೀಸರು ತಮ್ಮ ಮನಸ್ಸಿಗೆ ಬಂದಂತೆ ದೂರು ದಾಖಲಿಸಿ ಎಫ್ಐಆರ್ ಮಾಡದೆ ಕೇವಲ ಎನ್ ಸಿ ಆರ್ ಮಾಡಿರುತ್ತಾರೆಂದು ಪತ್ರಕರ್ತೆ ಆರೋಪಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಅಸಡ್ಡೆಯ ಪರಮಾವಧಿ
ಪತ್ರಕರ್ತೆ ಸಲ್ಲಿಸಿದ ದೂರನ್ನು ಸ್ವೀಕರಿಸಿ ಒಲ್ಲದ ಮನಸ್ಸಿನಿಂದ ಎನ್ಸಿಆರ್ ದಾಖಲಿಸಿರುವ ವಿವರಗಳನ್ನು ಮೂಲ ದೂರಿನ ಪ್ರತಿಗೆ ಹೋಲಿಸಿ ನೋಡಿದಾಗ, ಫಿರ್ಯಾದುದಾರರ ಮಾಹಿತಿಯೊಂದನ್ನು ಹೊರತುಪಡಿಸಿ ಬರೀ ತಪ್ಪುಗಳೇ ಕಾಣುತ್ತವೆ!
ಎದುರುದಾರರ ವಿವರಗಳು ಎಂಬ ಕಲಂನಲ್ಲಿ ಎದುರುದಾರರ ಹೆಸರೇ ತಪ್ಪಾಗಿ ಬರೆಯಲಾಗಿದೆ. ಪ್ರಕಾಶ್ ಎಂಬ ಹೆಸರನ್ನು ಪ್ರಸಾದ್ ಎಂದು ದಾಖಲಿಸಿದ್ದಾರೆ. ಇಡೀ ಪ್ಯಾರಾ ತುಂಬಾ ಎಲ್ಲೆಡೆ ಇದೇ ಅನ್ಯ ಹೆಸರನ್ನೇ ನಮೂದಿಸಲಾಗಿದೆ. ದೂರಿನಲ್ಲಿ ಎದುರುದಾರರ ಹೆಸರು, ವಿಳಾಸ ಪ್ರತಿಯೊಂದನ್ನೂ ಸ್ಪಷ್ಟವಾಗಿ ನಮೂದಿಸಿದ್ದರೂ ಸಹ ದೂರನ್ನು ದಾಖಲಿಸುವ ಪುಲೀಸ್ ಸಿಬ್ಬಂದಿ ಮಾತ್ರ ಹೆಸರು, ವಿಳಾಸಗಳನ್ನು ತಪ್ಪು ತಪ್ಪಾಗಿ ಅಪೂರ್ಣವಾಗಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ಎರಡನೇ ಎದುರುದಾರರಾದ ಮನೆ ಮಾಲೀಕನ ಗಂಡನ ಹೆಸರಿನ ಮುಂದೆ, “S/o …ಪ್ರಸಾದ್” ಎಂದು ನಮೂದಿಸಿ ಗಂಡನನ್ನು ಮಗನನ್ನಾಗಿ, ಹೆಂಡತಿಯನ್ನು ತಾಯಿಯಾಗಿ ಮಾಡಿರುವ ಈ ಪೊಲೀಸಪ್ಪನ ಬುದ್ಧಿಗೆ ಭೇಷ್ ಹೇಳಬೇಕು.
ಎದುರುದಾರರ ವಿಳಾಸವನ್ನು ವಿಜಯನಗರ, ಬೆಂಗಳೂರು ನಗರ (City), ಅಂಡಮಾನ್ & ನಿಕೊಬಾರ್ (ದ್ವೀಪಗಳು) ಎಂದು ಸ್ಫುಟವಾಗಿ ಟೈಪ್ ಮಾಡಲಾಗಿದೆ.

ವಿಜನಯನಗರ ಪೊಲೀಸ್ ಠಾಣೆಯಲ್ಲಿ ಕುಳಿತ ಸಿಬ್ಬಂದಿಗಳಿಗೆ ವಿಶೇಷ ಭೂಪಟವನ್ನೇನಾದರೂ ನೀಡಲಾಗಿದೆಯೇ? ನೀಡಲಾಗಿದ್ದರೆ ದೇಶದ ಯಾವ ಯಾವ ನಗರಗಳು ಯಾವ ಯಾವ ದ್ವೀಪದಲ್ಲಿ, ಯಾವ ಯಾವ ಧ್ರುವ ಪ್ರದೇಶಗಳಲ್ಲಿ ಬರುತ್ತವೆ ಒಂದು ಪ್ರಕಟಣೆ ಹೊಡೆಸಿದ್ದರೆ ಚೆನ್ನಾಗಿತ್ತು! ಅಥವಾ ಇವರೇ ಎಲ್ಲಾದರೂ ಹೊಸ ಸಂಶೋಧನೆ ಮಾಡಿ ಬೆಂಗಳೂರು ಅಂಡಮಾನ್ ನಿಕೋಬಾರ್ ನಲ್ಲಿದೆ ಎಂದು ಕಂಡುಹಿಡಿದುಬಿಟ್ಟಿದ್ದಾರೋ ಏನೋ?
ಹೀಗೆ ಬೇಕಾಬಿಟ್ಟಿ ಗೀಚಿರುವ ಎನ್ ಸಿ ಆರ್ ಪ್ರತಿಗೆ ವಿಜಯನಗರ ಪೊಲೀಸ್ ಠಾಣೆಯ ಎಎಸ್ಐ ಸಹಿ ಮಾಡಿ ಠಾಣೆಯ ಅಧಿಕೃತ ಮೊಹರು ಒತ್ತಿರುತ್ತಾರೆ.
ಇವೆಲ್ಲವೂ ಪೊಲೀಸರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಲ್ಲದೆ ಮತ್ತೇನು? ಸರ್ಕಾರಿ ಕೆಲಸ ದೇವರ ಕೆಲಸ ಎಂದು ಫಲಕ ಹಾಕಿಕೊಂಡು ಇಂತಹ ಅಚಾತುರ್ಯಗಳನ್ನು ಮಾಡುವ ಸಿಬ್ಬಂದಿ ಮತ್ತು ಠಾಣೆಯ ಮೇಲಧಿಕಾರಿಗಳಿಗೆ ಹೊಣೆಗಾರಿಕೆ ಕಲಿಸುವವರು ಯಾರು?
ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡ ಪೊಲೀಸ್ ಠಾಣಾಧಿಕಾರಿ ಒಂದೇ ಅತ್ಯಂತ ಬೇಜವಾಬ್ದಾರಿ ಮನುಷ್ಯನಿರಬೇಕು ಇಲ್ಲವೇ ಉದ್ದೇಶಪೂರ್ವಕವಾಗಿ ಇಂತಹ ಅವಿವೇಕತನ ತೋರಿಸಿರಬೇಕು.
ಎದುರುದಾರರ ಹೆಸರು ಮತ್ತು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ದಾಖಲಿಸಿ ದೂರುದಾರರಿಗೆ ಕಾನೂನು ಹೋರಾಟದಲ್ಲಿ ನ್ಯಾಯ ಸಿಗದಂತೆ ಮಾಡುವುದೂ ಪೊಲೀಸರು ರೂಪಿಸುವ ಸಂಚಿನ ಭಾಗವಾಗಿಯೂ ಈ ಪೊಲೀಸ್ ಹೀಗೆ ಮಾಡಿರಬಹುದು. ಇಂತಹ ತಾಂತ್ರಿಕ ಕಾರಣಗಳಿಂದಲೇ ಎಷ್ಟೋ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳನ್ನು ದೋಷಮುಕ್ತರೆಂದು ನ್ಯಾಯಾಲಯಗಳು ಬಿಡುಗಡೆ ಮಾಡಲು ಅವಕಾಶವಾಗುತ್ತಿರುವುದು.
“ಆರೋಪಿಯ ಅಥವಾ ಎದುರುದಾರರ ಹೆಸರನ್ನು ಪೊಲೀಸರು ಹೀಗೆ ತಪ್ಪಾಗಿ ದಾಖಲಿಸುವುದರಿಂದ ನ್ಯಾಯಾಂಗ ಹೋರಾಟ ನಡೆಸುವ ದೂರುದಾರರಿಗೆ ಖಂಡಿತಾ ನ್ಯಾಯ ಸಿಗುವುದಿಲ್ಲ. ಏಕೆಂದರೆ ದಾಖಲೆಯಲ್ಲಿ ಆರೋಪಿಯ ಹೆಸರೇ ತಪ್ಪಾಗಿದ್ದು, ದೂರುದಾರರು ಯಾರ ಮೇಲೆ ಆಪಾದನೆ ಮಾಡಿರುತ್ತಾರೋ ಅಂತಹವರ ಹೆಸರೇ ದಾಖಲಾಗಿಲ್ಲದ ಕಾರಣ ಮೊದಲ ಹಂತದಲ್ಲೇ ಪ್ರಕರಣ ಮಗುಚಿಬೀಳುತ್ತದೆ. ಇದು ಪೊಲೀಸರು ನ್ಯಾಯ ವಿತರಣಾ ವ್ಯವಸ್ಥೆ ಮತ್ತು ಅನ್ಯಾಯಕ್ಕೊಳಗಾದವರಿಗೆ ಮಾಡುವ ಮಹಾಮೋಸಗಳಲ್ಲೊಂದು” ಎಂದು ವಕೀಲೆ ಅಖಿಲಾ ಅಭಿಪ್ರಾಯ ಪಡುತ್ತಾರೆ.
ನ್ಯಾಯವಂಚಿತರಿಗೆ ನಿಲುಕದ ವಿಜಯನಗರ ಪೊಲೀಸ್ ಠಾಣೆ?
ಬೆಂಗಳೂರಿನ ವಿಜಯನಗರ ಠಾಣೆಯ ಪೊಲೀಸರು ಹೇಳಿಕೊಂಡಿರುವುದು ಸ್ವಲ್ಪಮಟ್ಟಿಗೇನೋ ಒಪ್ಪುವಂತಹದ್ದೇ. ಬೆಂಗಳೂರು ಅಂಡಮಾನ್ ದ್ವೀಪದಲ್ಲಿರದಿದ್ದರೂ ನ್ಯಾಯ ಬಯಸಿ ಪೊಲೀಸರ ಬಳಿ ಬರುವ ನಾಗರಿಕತ ಪಾಲಿಗೆ ಇದು ಅಂಡಮಾನ್ ನಿಕೋಬಾರ್ ದ್ವೀಪವೇ ಆಗಿಬಿಟ್ಟಿದೆ. ನಗರದ ಹೃದಯ ಭಾಗದಲ್ಲಿದ್ದರೂ ವಿಜಯನಗರ ಪೊಲೀಸ್ ಠಾಣೆ ನ್ಯಾಯ ದೊರಕಿಸಿಕೊಡುವ ತಾಣವಾಗದೆ ಅನ್ಯಾಯವೇ ತುಂಬಿ ತುಳುಕುವ ತಾಣವಾಗಿದೆ ಎಂಬುದು ಸ್ಥಳೀಯರ ಅಭಿಮತವಾಗಿದೆ.
ಸಂವಿಧಾನದ ಆಶಯಗಳನ್ನು ಬದಿಗೊತ್ತಿ, ಕರ್ತವ್ಯ ಪ್ರಜ್ಞೆ ಮರೆತು, ನ್ಯಾಯ ಕೇಳಿಕೊಂಡು ಬರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗದ ಇಂತಹ ಹೊಟ್ಟೆ ತುಂಬಿದ ಪೊಲೀಸರಿಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರಂತಹ ಅಧಿಕಾರಿಗಳ ದಕ್ಷತೆ, ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಮಾದರಿ ಆಗುತ್ತಿಲ್ಲ ಎಂಬುದು ದುರಂತ…
2 Comments
ನಿಮ್ಮ ಪತ್ರಿಕೆಯಲ್ಲಿ ಕೆಲವೊಂದು ಬಾರಿ ತಪ್ಪಾಗಿ ಪದಬಳಕೆ ಮಾಡಿರುವುದು ನಾವು ಕೂಡ ಕಂಡಿದ್ದೇವೆ, ಹಾಗಂದ ಮಾತ್ರಕ್ಕೆ ಇಢೀ ಪತ್ರಿಕೋಧ್ಯಮವನ್ನು ನಾವು ನಿಂದಿಸುವುದಕ್ಕೆ ಹಾಗುವುದಿಲ್ಲ, ಹಾಗೇಯೇ ಪೊಲೀಸ್ ಇಲಾಖೆಯಲ್ಲಿ ಕಂಪ್ಯೂಟರ್ ಮಾದ್ಯಮ ಬಳಿಸಿ ಬರೆಯಬೇಕಾದರೆ ಕೆಲವೊಂಡು ಸಣ್ಣಪುಟ್ಟ ತಪ್ಪುಗಳು ಹಾಗುವುದು ಸಹಜ ಹಾಗಂದ ಮಾತ್ರಕ್ಕೆ ಇಡೀ ಪೊಲೀಸ್ ಇಲಾಕೆಯ ಬಗ್ಗೆ ಹಗುರವಾಗಿ ಪತ್ರಿಕೆಯಲ್ಲಿ ಬಿತ್ತರಿಸುವು ಎಷ್ಟು ಸರಿ ?
In this case it is not typing mistake.. but it is obviously willful wrong on the part of SI. we have reported after proper confirmation. Let the senior police officers look in to it. If any spelling mistakes in our reports please bring to our notice..we are always ready to correct. Thank u