ನವದೆಹಲಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಭಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ.
ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಮಿಸಲಾತಿ ಆಧಾರದಲ್ಲಿ ಬಡ್ತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಹೊಸ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿ. ಕೆ ಪವಿತ್ರ ಅವರಿಗೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ ವಿಧೇಯಕಕ್ಕೆ ಸಮ್ಮತಿ ನೀಡುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.
ಬಡ್ತಿ ಮೀಸಲಾತಿ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಗೆಲುವು ಸಿಗುವ ಮೂಲಕ ಸಾವಿರಾರು ಎಸ್ಸಿ, ಎಸ್ಟಿ ನೌಕರರು ನಿರಾಳರಾಗಲಿದ್ದು, ಹಿಂಬಡ್ತಿ ಪಡೆದಿದ್ದ ಅಧಿಕಾರಿಗಳಿಗೆ ಮತ್ತೆ ಮುಂಬಡ್ತಿ ಸಿಗಲಿದೆ.
2002ರಲ್ಲಿ ರಾಜ್ಯ ಸರಕಾರ ಪರಿಶಿಷ್ಟರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ಜಾರಿಗೆ ತಂದಿದ್ದ ಕಾಯ್ದೆಯನ್ನು 2017ರ ಫೆ.9ರಂದು ರದ್ದುಪಡಿಸಿ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, 90 ದಿನಗಳಲ್ಲಿ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಕಾಯ್ದೆಯಡಿ ಭಡ್ತಿ ಮೀಸಲಾತಿ ಪಡೆದಿದ್ದ ಎಲ್ಲರಿಗೂ ಹಿಂಭಡ್ತಿ ನೀಡಲು ಗಡುವು ನೀಡಿತ್ತು.
ತದನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭಡ್ತಿ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಹಿತಾಸಕ್ತಿ ರಕ್ಷಿಸುವ ಸಲುವಾಗಿ 2017ರ ನವೆಂಬರ್ನಲ್ಲಿ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದಿದ್ದರು. ನಂತರದಲ್ಲಿ ಇದನ್ನು ರಾಜ್ಯಪಾಲರು ತಿರಸ್ಕರಿಸಿದ್ದರಿಂದ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿತ್ತು. ಅಂತಿಮವಾಗಿ ರಾಷ್ಟ್ರಪತಿಗಳು ತಮ್ಮ ಅಂಕಿತ ನೀಡಿದ್ದರು.
ಆದರೆ ಬಡ್ತಿ ಮೀಸಲಾತಿ ಕಾಯ್ದೆ ಹಾಗೂ ಬಡ್ತಿ ಮೀಸಲಾತಿ ರದ್ದು ಪಡಿಸಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಬಿ.ಕೆ. ಪವಿತ್ರ ಹಾಗೂ ಎಂ. ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರಿಂ ಕೋರ್ಟಿನ ದ್ವಿಸದ್ಯ ಪೀಠ ಕೈಗೊಂಡಿತ್ತು.
ವಿಚಾರಣೆಯ ನಂತರದಲ್ಲಿ ಸುಪ್ರೀಂ ಕೋರ್ಟ್ ಪೀಠವು ರಾಜ್ಯ ಸರ್ಕಾರದ ಕಾಯಿದೆಯನ್ನು ಎತ್ತಿಹಿಡಿದಿದೆ. ಪರಿಣಾಮ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬಿ.ಕೆ. ಪವಿತ್ರ ಮತ್ತು ಇತರರಿಗೆ ಹಿನ್ನಡೆಯಾಗಿದೆ. ಈಗ ಬಂದಿರುವ ತೀರ್ಪಿಗೆ ಮತ್ತೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬಿ.ಕೆ. ಪವಿತ್ರ ತಿಳಿಸಿದ್ದಾರೆ ಎನ್ನಲಾಗಿದೆ.
ಭಡ್ತಿ ಮೀಸಲಾತಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ನ್ಯಾಯವಾದಿ ಸಿ ಎಸ್ ದ್ವಾರಕಾನಾಥ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಇಂದು ಸುಪ್ರೀಂ ಕೋರ್ಟಿನ ತೀರ್ಪು ಎಲ್ಲರಿಗೆ ನಿರಾಳವುಂಟುಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ರಾಜ್ಯ ಸೇವೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಹೊಂದಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1978ರಲ್ಲಿ ಭಡ್ತಿಯಲ್ಲಿ ಮೀಸಲಾತಿಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. 2002ರಲ್ಲಿ ಸರ್ಕಾರಿ ನೌಕರರ ಜೇಷ್ಠತೆ ನಿರ್ಧಾರಣೆ ಅಧಿನಿಯಮ 2002ನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ್ದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.
ಭಡ್ತಿ ಮೀಸಲಾತಿ ವಿಷಯದಲ್ಲಿ ಅಹಿಂಸಾ ವರ್ಗಗಳು ಮೊದಲಿಂದಲೂ ತಮ್ಮ ಅಸಮಾಧಾನ ವ್ಯಕ್ತಪಡಿಸಿಕೊಂಡು ಬರುತ್ತಿವೆ. ಭಡ್ತಿಯಲ್ಲಿ ಮೀಸಲಾತಿ ನೀಡುವುದು 18% ಮೀಸಲಾತಿ ಪಡೆಯುವ ವರ್ಗಗಳನ್ನು ಹೊರತುಪಡಿಸಿದ 27% ಮೀಸಲಾತಿ ಪಡೆಯುವ ಒಬಿಸಿ ಮತ್ತು 50% ಮೀಸಲಾತಿಯ ಸಾಮಾನ್ಯ ವರ್ಗಗಳ ನೌಕರರಿಗೆ ಅನ್ಯಾಯವೆಸಗುತ್ತಿದೆ, ಪರಿಶಿಷ್ಟ ನೌಕರರು ಸೇವೆಯಲ್ಲಿ ಹಲವು ಮುಂಭಡ್ತಿ ಪಡೆದರೂ ಉಳಿದವರು ಯಾವುದೇ ಮುಂಭಡ್ತಿ ಪಡೆಯದೇ ನಿವೃತ್ತಿ ಹೊಂದುತ್ತಿದ್ದಾರೆ ಎಂಬುದು ಭಡ್ತಿ ಮೀಸಲಾತಿ ವಿರೋಧಿಗಳ ತಕರಾರು.
ಆದರೆ, ಸಾಮಾಜಿಕ ನ್ಯಾಯ ನೀತಿಯ ದೃಷ್ಟಿಯಿಂದ ಹಾಗೂ ಸರ್ಕಾರಿ ಸೇವೆಗಳ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಪ್ರಾತಿನಿಧ್ಯದ ದೃಷ್ಟಿಯಿಂದ ಮೀಸಲಾತಿ ಅನಿವಾರ್ಯವಾಗಿದೆ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿದೆ.