ದೇಶದ ಆರ್ಥಿಕ ಅಭಿವೃದ್ಧಿ ಕುರಿತಂತೆ ಚೌಕಿದಾರ್ ನರೇಂದ್ರ ಮೋದಿ ಸರ್ಕಾರ ನೀಡುವ ಯಾವುದೇ ಅಂಕಿ ಅಂಶಗಳನ್ನು ಮೋದಿ ಭಕ್ತರ ಹೊರತಾಗಿ ಯಾರೊಬ್ಬರೂ ನಂಬುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಮೋದಿ ಸರ್ಕಾರ ಅಂಕಿ ಅಂಶಗಳನ್ನು ತಿರುಚುವುದರಲ್ಲಿ ನೈಪುಣ್ಯತೆ ಪಡೆದಿದೆ. ಆಗದ ಅಭಿವೃದ್ಧಿಯನ್ನು ಆಗಿದೆ ಎಂದೂ, ಆಗಿರುವ ನಷ್ಟವನ್ನು ಆಗಿಲ್ಲವೆಂದು ಸಾಬೀತು ಮಾಡುವುದರಲ್ಲಿ ತನ್ನ ಬಹುಪಾಲು ಸಮಯ ವಿನಿಯೋಗಿಸುತ್ತಿದೆ.
ಎನ್ಎಸ್ಎಸ್ಒ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳು ಇದನ್ನು ಸಾಬೀತು ಪಡಿಸಿವೆ. ಮೋದಿ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ಬದಲಾಯಿಸಲಾಯಿತು. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಲೆಕ್ಕಾಚಾರಗಳನ್ನು ಬದಲಾಯಿಸಿತು. ಹೊಸ ಸರಣಿಯ ಜಿಡಿಪಿ ಲೆಕ್ಕಾಚಾರಗಳ ಪ್ರಕಾರ, ಮೋದಿ ಸರ್ಕಾರಕ್ಕಿಂತ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ಹೆಚ್ಚಿತ್ತು ಎಂಬ ಅಂಶವನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗ ನಿಯೋಜಿಸಿದ್ದ ಸುದಿಪ್ತೊ ಮಂಡಲ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ನಂತರ ಮೋದಿ ಸರ್ಕಾರ ಸುದಿಪ್ತೊ ಮಂಡಲ್ ವರದಿಯನ್ನು ಹಿಂಪಡೆದು ಅಂಕಿಅಂಶಗಳನ್ನು ತಿರುಚಿ, ತನ್ನದೇ ಅವಧಿಯಲ್ಲೇ ಹೆಚ್ಚಿನ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುವ ಹತಾಶ ಪ್ರಯತ್ನ ಮಾಡಿತ್ತು.
2015 ಜನವರಿಯಿಂದ ಜಿಡಿಪಿ ಲೆಕ್ಕಚಾರವನ್ನು 2011-12ನೇ ವಿತ್ತೀಯವರ್ಷವನ್ನು ಮೂಲಾಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಗುತ್ತಿದೆ. ಅದಕ್ಕೂ ಹಿಂದೆ 2004-05ನೇ ವಿತ್ತೀಯ ವರ್ಷವನ್ನು ಮೂಲಾಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಗುತ್ತಿತ್ತು. ಹೊಸ ಸರಣಿ ಲೆಕ್ಕಾಚಾರವೇ ಹೆಚ್ಚು ವೈಜ್ಞಾನಿಕವಾಗಿದೆ ಮತ್ತು ಹೆಚ್ಚು ವಿಸ್ತೃತವಾಗಿದೆ ಎಂದು ಮೋದಿ ಸರ್ಕಾರ ಹೇಳಿಕೊಂಡಿತ್ತು.
ಆದರೆ, ಮೋದಿ ಸರ್ಕಾರದ ಹೊಸ ಸರಣಿಯ ಜಿಡಿಪಿ ಲೆಕ್ಕಾಚಾರವೇ ತಪ್ಪಾಗಿದೆ ಎಂಬ ಆಘಾತಕಾರಿ ಅಂಶವನ್ನು ಎನ್ಎಸ್ಎಸ್ಒ ತನ್ನ ವರದಿಯಲ್ಲಿ ತಿಳಿಸಿರುವುದನ್ನು ‘ದಿ ಮಿಂಟ್’ ಪತ್ರಿಕೆ ವರದಿ ಮಾಡಿದೆ. ವರದಿ ಪ್ರಕಾರ, ಹೊಸ ಸರಣಿ ಜಿಡಿಪಿ ಲೆಕ್ಕಾಚಾರದಲ್ಲಿ ಒಳಗೊಂಡಿರುವ ಕಂಪನಿಗಳ ಪೈಕಿ ಶೇ.37ರಷ್ಟು ಅಸ್ತಿತ್ವದಲ್ಲೇ ಇಲ್ಲ ಅಥವಾ ತಪ್ಪಾಗಿ ವರ್ಗೀಕರಿಸಲಾಗಿದೆ.
ಅಂಕಿ ಅಂಶಗಳನ್ನು ತಿರುಚುವ ಕೆಲಸವನ್ನು ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯವೇ ಮಾಡಿದೆಯೇ ಎಂಬ ಅನುಮಾನ ಮಾಡಿದೆ. ಏಕೆಂದರೆ ಎನ್ಎಸ್ಎಸ್ಒ ವರದಿ ಪ್ರಕಾರ, ಎಂಸಿಎ-21 ವರ್ಗೀಕರಣದಲ್ಲಿರುವ ಶೇ.37ರಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ, ಅಸ್ವಿತ್ತದಲ್ಲೇ ಇಲ್ಲಾ ಅಥವಾ ತಪ್ಪಾಗಿ ವರ್ಗೀಕರಿಸಲಾಗಿದೆ. ಅಷ್ಟಕ್ಕೂ ಕಾರ್ಪೊರೆಟ್ ವ್ಯವಹಾರಗಳ ಸಚಿವರು ಮೋದಿ ಸರ್ಕಾರದ ತಪ್ಪುಗಳೆಲ್ಲವನ್ನು ತಮ್ಮ ವಾಕ್ಚಾತುರ್ಯದಿಂದ ಸಮರ್ಥಿಸಿಕೊಳ್ಳುತ್ತಿರುವ ‘ಖ್ಯಾತ ನ್ಯಾಯವಾದಿ’ ಅರುಣ್ ಜೇಟ್ಲಿ ಎಂಬುದು ಮತ್ತೊಂದು ವಿಶೇಷ. ವಿತ್ತ ಖಾತೆಯ ಜತೆಗೆ ಕಾರ್ಪೊರೆಟ್ ವ್ಯವಹಾರ ಖಾತೆಯನ್ನು ನಿರ್ವಹಿಸುತ್ತಿರುವ ಅರುಣ್ ಜೇಟ್ಲಿ ‘ಎಲೆಕ್ಟ್ರೋಲ್ ಬಾಂಡ್’ ಯೋಜನೆಯ ಮೂಲಕ ಬಿಜೆಪಿಗೆ ಕಾರ್ಪೊರೆಟ್ ವಲಯದಿಂದ ನಿರಾಯಾಸವಾಗಿ ಸುಮಾರು 2000 ಕೋಟಿ ರುಪಾಯಿ ದೇಣಿಗೆ ಬರುವಂತೆ ನೋಡಿಕೊಂಡಿದ್ದಾರೆ.
ಜಿಡಿಪಿ ಹೊಸ ಸರಣಿಯಡಿ ಯುಪಿಎ ಸರ್ಕಾರದಲ್ಲಿ ಅವಧಿಯಲ್ಲೇ ಅಭಿವೃದ್ಧಿ ಹೆಚ್ಚಿತ್ತು. 2011ರಲ್ಲಿ ಜಿಡಿಪಿ ಶೇ.10.3ರಷ್ಟಾಗಿತ್ತು ಎಂಬ ಸುದಿಪ್ತೊ ಮಂಡಲ್ ನೇತೃತ್ವದ ವರದಿಯಲ್ಲಿನ ಅಂಶವನ್ನು ಶತಾಯಗತಾಯ ವಿರೋಧಿಸಿದ್ದ ಜೇಟ್ಲಿ, ನಂತರ ಹೊಸ ಸರಣಿಯ ಅಂಕಿ ಅಂಶಗಳನ್ನೇ ತಿರುಚಿ 2011ರಲ್ಲಿ ಜಿಡಿಪಿ ಅಭಿವೃದ್ಧಿ ದರವನ್ನು 8.5ಕ್ಕೆ ತಗ್ಗಿಸಿದ್ದರು. ಅಲ್ಲದೇ ಯುಪಿಎ ಅವಧಿಯಲ್ಲಿನ ಅಂದರೆ 2006-2012ರ ನಡುವಿನ ಆರ್ಥಿಕ ಅಭಿವೃದ್ಧಿ ದರ ಶೇ.7.75 ಇದ್ದದ್ದನ್ನು ಶೇ.6.82ಕ್ಕೆ ಇಳಿಸಿದ್ದರು. ಜತೆಗೆ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅಭಿವೃದ್ಧಿ ದರವನ್ನು ಶೇ.7.35ಕ್ಕೆ ಹಿಗ್ಗಿಸಿದ್ದರು.
ಈಗ ಎನ್ಎಸ್ಎಸ್ಒ ಜೂನ್ 2017ಕ್ಕೆ ಅಂತ್ಯಗೊಂಡ 12 ತಿಂಗಳ ಅಂಕಿಅಂಶಗಳನ್ನಾಧರಿಸಿ ಸಿದ್ದಪಡಿಸಿರುವ ವರದಿಯಲ್ಲಿ ಜಿಡಿಪಿ ಲೆಕ್ಕಾಚಾರದಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ. ಅಂದರೆ, ಮೋದಿ ಸರ್ಕಾರ ಆರಂಭದಿಂದಲೇ ಅಂಕಿ ಅಂಶಗಳನ್ನು ತಿರುಚುವುದರಲ್ಲಿ ತೊಡಗಿತ್ತೆ ಎಂಬ ಪ್ರಶ್ನೆಯನ್ನು ಎನ್ಎಸ್ಎಸ್ಒ ವರದಿಯು ಹುಟ್ಟು ಹಾಕಿದೆ. ಹಾಗಾದರೆ ವಾಸ್ತವಿಕವಾಗಿ ದೇಶದ ಆರ್ಥಿಕ ಅಭಿವೃದ್ಧಿ ದರ ಎಷ್ಟು? ಅಪನಗದೀಕರಣದ ನಂತರ ಇಡೀ ದೇಶದ ಆರ್ಥಿಕತೆಗೆ ಪಾರ್ಶ್ವವಾಯು ಬಡಿದಂತಾಗಿದ್ದರೂ ದೇಶದ ಆರ್ಥಿಕತೆ ಶೇ.7ರಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದ್ದು ಹೇಗೆ? ನಿರುದ್ಯೋಗ ಪ್ರಮಾಣ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವ ಹೊತ್ತಿನಲ್ಲೂ ದೇಶದ ಅಭಿವೃದ್ಧಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಹೇಗೆ? ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ತಂದ ನಂತರ ದೇಶವ್ಯಾಪಿ ವ್ಯಾಪಾರ ವಹಿವಾಟು ತೀವ್ರವಾಗಿ ಕುಸಿದು ಕೆಲವು ತಿಂಗಳ ಕಾಲ ವಹಿವಾಟು ಸ್ಥಿರಗೊಂಡರೂ ಜಿಡಿಪಿ ಶೇ.7ರಷ್ಟು ಬೆಳವಣಿಗೆ ಹೇಗೆ ಸಾಧಿಸಿತು?
ಈ ಎಲ್ಲಾ ಪ್ರಶ್ನೆಗಳಿಗೆ ಮೇ 23ರ ನಂತರ ಬರುವ ಹೊಸ ಸರ್ಕಾರ ಉತ್ತರಿಸಬೇಕಾಗುತ್ತದೆ. ಜತೆಗೆ ಮೋದಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕುರಿತು ಪ್ರಕಟಿಸಿರುವ ಎಲ್ಲಾ ಅಂಕಿ-ಅಂಶಗಳ ಮರುಮೌಲ್ಯಮಾಪನ ಮಾಡಬೇಕಾಗುತ್ತದೆ.
ಯಾಕೆಂದರೆ- ಮೋದಿ ಸರ್ಕಾರ ಅಂಕಿ ಅಂಶಗಳನ್ನು ತಿರುಚುತ್ತದೆ ಎಂಬುದನ್ನು ನಾವು ಮಾತ್ರ ಹೇಳುತ್ತಿಲ್ಲ. ಬಿಜೆಪಿ ರಾಜ್ಯ ಸಭಾಸದಸ್ಯ ಸುಬ್ರಮಣಿಯನ್ ಸ್ವಾಮಿ, ಆರ್ಬಿಐ ಮಾಜಿ ಗವರ್ನರ್ ರಂಗರಾಜನ್, ಎನ್ಡಿಎ ಸರ್ಕಾರದಲ್ಲೇ ವಿತ್ತ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಸೇರಿದಂತೆ ಹಲವು ಮಂದಿ ನುರಿದ ಆರ್ಥಿಕ ತಜ್ಞರೇ ಹೇಳಿದ್ದಾರೆ!