ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ಆಕೆಯ ಗೆಳೆಯನೆದುರಿಗೇ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಹೊರ ವಲಯದಲ್ಲಿರುವ ಲಿಂಗಾಂಬುಧಿ ಪಾಳ್ಯದ ರಿಂಗ್ ರಸ್ತೆ ಬಳಿಯ ಖಾಸಗಿ ಬಡಾವಣೆಯಲ್ಲಿ ಬುಧವಾರ ರಾತ್ರಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಯುವತಿ ಹಾಗೂ ಆತನ ಗೆಳೆಯನ ಮೇಲೆ ಮನಬಂದತೆ ಹಲ್ಲೆ ನಡೆಸಿದ ಗುಂಪು ಪರಾರಿಯಾಗಿದೆ.
ಘಟನೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವಕನ ಕಾಲು ಮುರಿದಿದೆ ಎನ್ನಲಾಗಿದೆ.
ಘಟನೆಯ ಹಿನ್ನೆಲೆ:
ಮೈಸೂರಿನ ಖಾಸಗಿ ಹೊಟೇಲೊಂದರಲ್ಲಿ ನೌಕರರಾಗಿರುವ ಸಂತ್ರಸ್ತ ಯುವಕ ಹಾಗೂ ಹೆಚ್.ಡಿ ಕೋಟೆ ಮೂಲದ ಯುವತಿ ಕಳೆದ ಕೆಲವು ತಿಂಗಳಿನಿಂದ ಸ್ನೇಹಿತರಾಗಿದ್ದರು. ಬುಧವಾರ ಕೆಲಸ ಮುಗಿಸಿ ತೆರಳಿದ್ದ ಇಬ್ಬರೂ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಲಿಂಗಾಂಬುಧಿ ಪಾಳ್ಯದ ಬಳಿಯ ರಿಂಗ್ ರಸ್ತೆ ಸಮೀಪ ಬೈಕ್ ನಿಲ್ಲಿಸಿಕೊಂಡಿದ್ದರು.

ರಾತ್ರಿ 10 ಗಂಟೆ ಸಮಯದಲ್ಲಿ ಅದೇ ಮಾರ್ಗದಲ್ಲಿ ಬಂದ ಕಾರು ಮತ್ತು ಬೈಕ್ನಲ್ಲಿ ಬಂದ ಮೂರ್ನಾಲ್ಕು ಮಂದಿ ಕುಡಿದ ಮತ್ತಿನಲ್ಲಿದ್ದ ಯುವಕರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದಾಗ ಸ್ನೇಹಿತ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಆತನ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.
ಗುಂಪಿನಲ್ಲಿದ್ದ ಇಬ್ಬರು ಯುವಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ವಾಹನಗಳು ಬರುವುದನ್ನು ಕಂಡು ಕಾರು ಮತ್ತು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ನಿತ್ರಾಣಗೊಂಡ ಸ್ಥಿತಿಯಲ್ಲಿದ್ದ ಯುವತಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ರಿಂಗ್ ರಸ್ತೆಯವರೆಗೂ ಹೋಗಿ ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರ ನೆರವಿನಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಯಪುರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರ ಹಾಗೂ ಯುವತಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ನೇಹಿತರೊಬ್ಬರಿಗೆ ಹಣ ನೀಡಲು ಲಿಂಗಾಂಬುಧಿ ಪಾಳ್ಯದ ಕಡೆ ತೆರಳುತ್ತಿದ್ದು, ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿದಾಗ, ಕಾರು ಮತ್ತು ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿ, ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
“ಜಯಪುರ ಪೊಲೀಸ್ ಠಾಣೆಗೆ 11 ಗಂಟೆ ವೇಳೆಗೆ ಘಟನೆ ಬಗ್ಗೆ ಮಾಹಿತಿ ಲಭ್ಯವಾಯಿತು. ಸ್ಥಳಕ್ಕೆ ಭೇಟಿ ನೀಡಿದ ವೇಳೆ ಯುವತಿಯ ಮೇಲೆ ಅತ್ಯಾಚಾರವಾಗಿರುವುದು ಮತ್ತು ಯುವಕನ ಮೇಲೆ ಭೀಕರ ಹಲ್ಲೆ ನಡೆಸಿರುವುದು ಕಂಡುಬಂದಿದೆ” ಎಂದು ಮೈಸೂರು ಎಸ್ ಪಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಸದ್ಯ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಯುವಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಲು ಮೂರು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಮಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
More Articles
By the same author