ಈ ಹಿಂದೆ ಮಣಿ ಶಂಕರ್ ಅಯ್ಯರ್ ಅವರ ಹೇಳಿಕೆ ವಿಷಯದಲ್ಲಿ ಬಿಜೆಪಿ, ಹೂಡಿದ್ದ ತಂತ್ರವನ್ನೇ ಈಗ ಪಿತ್ರೊಡ ಹೇಳಿಕೆಯ ವಿಷಯದಲ್ಲಿಯೂ ಹೂಡಿದೆ. ಮೇ 12ರಂದು ಮತದಾನ ನಡೆಯಲಿರುವ, ಸಿಖ್ ಸಮುದಾಯ ಬಹುಸಂಖ್ಯಾತರಿರುವ ದೆಹಲಿ ಮತ್ತು ನಿರ್ಣಾಯಕ ಪ್ರಮಾಣದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಪಿತ್ರೊಡ ಹೇಳಿಕೆಯನ್ನೇ ಇಟ್ಟುಕೊಂಡು ಭಾವನಾತ್ಮಕ ಅಲೆ ಎಬ್ಬಿಸಲು ಯತ್ನಿಸುತ್ತಿದೆ. ಹಾಗೊಂದು ವೇಳೆ ಆ ಯತ್ನದಲ್ಲಿ ಸಫಲರಾದರೆ, ಕಾಂಗ್ರೆಸ್ಸಿಗೆ ದೆಹಲಿಯಲ್ಲಷ್ಟೇ ಅಲ್ಲದೆ, ಉ.ಪ್ರ ಮತ್ತು ಮ.ಪ್ರದಲ್ಲೂ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ ಸಮುದಾಯಕ್ಕೆ ಸೇರಿದ ಇಬ್ಬರು ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ, 1984ರಲ್ಲಿ ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ನಡೆದ ಸಿಖ್ ಹತ್ಯಾಕಾಂಡದ ಭೂತ ಇದೀಗ ಇತಿಹಾಸದ ಸಮಾಧಿಯಿಂದ ಎದ್ದು ಬಂದಿದೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಅದರ ಥಿಂಕ್ ಟ್ಯಾಂಕ್ ಪ್ರಮುಖ ಸ್ಯಾಮ್ ಪಿತ್ರೊಡ ಅವರ ಒಂದು ಹೇಳಿಕೆ, ಈ ಭೂತವನ್ನು ಬಡಿದೆಬ್ಬಿಸಿದ್ದು, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇತಿಹಾಸವನ್ನು ಕೆದಕುವ ಚಾಳಿ ಬೆಳೆಸಿಕೊಂಡಿರುವ ಪ್ರಧಾನಿ ಮತ್ತು ಬಿಜೆಪಿಗೆ ಆಯಕಟ್ಟಿನ ಹೊತ್ತಿನಲ್ಲಿ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಸಿಖ್ ಸಮುದಾಯದ ಪ್ರಮುಖವಾಗಿ ಇರುವ ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರು ಮಾಧ್ಯಮವೊಂದರಲ್ಲಿ ಮಾತನಾಡುತ್ತಾ, ಸಿಖ್ ಹತ್ಯಾಕಾಂಡದ ಕುರಿತ ‘ರಾಜೀವ್ ಗಾಂಧಿ ಸೂಚನೆಯಂತೆ ಸಿಖ್ಖರ ಹತ್ಯಾಕಾಂಡ ನಡೆಯಿತು ಎಂಬ’ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಆಡಿದ ಮಾತುಗಳು ಕಾಂಗ್ರೆಸ್ಸಿಗೆ ಭಾರೀ ಇರಿಸುಮುರಿಸು ತಂದಿದ್ದರೆ, ಬಿಜೆಪಿಗೆ ಮತದಾನದ ಹೊಸ್ತಿಲಲ್ಲಿ ಬ್ರಹ್ಮಾಸ್ತ್ರವನ್ನೇ ಕೈಗೆ ಕೊಟ್ಟಂತಾಗಿದೆ.
ವಾಸ್ತವವಾಗಿ ಪಿತ್ರೊಡ ಅವರು, “ನೀವು(ಮೋದಿ) ನಿಮ್ಮ ಐದು ವರ್ಷಗಳ ಸಾಧನೆಯನ್ನು ಹೇಳಿ ಮತ ಕೇಳಿ. ಆದರೆ, ನಿಮಗೆ ಹೇಳಿಕೊಳ್ಳುವಂತಹ ಸಾಧನೆಗಳ ಬದಲು, ವೈಫಲ್ಯಗಳೇ ಹೆಚ್ಚಿವೆ. ಹಾಗಾಗಿ ನೀವು ಇತಿಹಾಸವನ್ನು ಕೆದಕುತ್ತಿದ್ದೀರಿ. 1984ರ ಸಿಖ್ ಹತ್ಯಾಕಾಂಡದ ಬಗ್ಗೆ ಈಗೇಕೆ ಮಾತನಾಡುತ್ತಿದ್ದೀರಿ? ಅದು ಆಗಿ ಹೋದ ಸಂಗತಿ. ಈಗ ನೀವೇನು ಮಾಡಿದ್ದೀರಿ ಮತ್ತು ಮುಂದೆ ಏನು ಮಾಡುತ್ತೀರಿ ಎಂಬ ಬಗ್ಗೆ ಹೇಳಿ. ಇತಿಹಾಸದಲ್ಲಿ ಆಗಿಹೋದದ್ದರ ಬಗ್ಗೆ ಮತ್ತೆಮತ್ತೆ ಯಾಕೆ ಮಾತು? ಹೌದು, ಆಗ ಆಯ್ತು, ಹೋಯ್ತು? ಏನೀಗ?” ಎಂದು ಹೇಳಿದ್ದರು.
ಇಷ್ಟು ಹೇಳುತ್ತಲೇ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಪಿತ್ರೊಡ ಅವರ ಉಳಿದ ಮಾತುಗಳನ್ನೆಲ್ಲಾ ಬಿಟ್ಟು, ‘ಆಗ ಆಯ್ತು, ಹೋಯ್ತು’ ಎಂಬ ಮೂರು ಪದಗಳನ್ನೇ ಹಿಡಿದುಕೊಂಡು, “ಇದು ನೋಡಿ ಕಾಂಗ್ರೆಸ್ಸಿನ ಮನಸ್ಥಿತಿ. ಅದರ ದುರಹಂಕಾರ ಮತ್ತು ಸೊಕ್ಕಿನ ಪರಂಪರೆಗೆ ಈ ಮಾತೇ ಸಾಕ್ಷಿ. ಇದು ಒಬ್ಬ ವ್ಯಕ್ತಿಯ ಮಾತಲ್ಲ. ಅವರು ರಾಜೀವ್ ಗಾಂಧಿಯ ಆಪ್ತಮಿತ್ರ ಹಾಗೂ ರಾಹುಲ್ ಗಾಂಧಿಯ ಗುರು ಕೂಡ. ಅವರು ಕಾಂಗ್ರೆಸ್ಸಿನ ಮನಸ್ಸಿನಲ್ಲಿರುವುದನ್ನೇ ಮಾತನಾಡಿದ್ದಾರೆ. ಇಂತಹ ದುರಹಂಕಾರಕ್ಕಾಗಿಯೇ ಜನ ಕಳೆದ ಬಾರಿ ಕಾಂಗ್ರೆಸ್ಸನ್ನು 40 ಸ್ಥಾನಕ್ಕೆ ಇಳಿಸಿದ್ದರು. ಈ ಬಾರಿ ಇನ್ನಷ್ಟು ಪಾತಾಳಕ್ಕೆ ತಳ್ಳುತ್ತಾರೆ” ಎಂದು ಟೀಕಿಸಿದ್ದಾರೆ.
ಬಿಜೆಪಿಯ ಅರುಣ್ ಜೇಟ್ಲಿ, ಪ್ರಕಾಶ್ ಜಾವ್ದೇಕರ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪಿತ್ರೊಡ ಮಾತುಗಳನ್ನೇ ಬಾಣವಾಗಿಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧವೇ ಪ್ರಯೋಗಿಸಿದ್ದಾರೆ. “ಇಡೀ ಸಿಖ್ ಸಮುದಾಯದ ನೋವು, ದುರಂತಗಳಿಗೆ, ಕಾಂಗ್ರೆಸ್ ನಾಯಕರು ನಡೆಸಿದ ಹತ್ಯಾಕಾಂಡದಲ್ಲಿ ಬೆಂದವರ ಹತಾಶೆಗೆ ಮತ್ತು ದೆಹಲಿಯ ಜಾತ್ಯತೀತ ಪರಂಪರೆಗೆ ಬಿದ್ದ ಏಟು, ಎಲ್ಲವನ್ನೂ ಈ ಮೂರು ಶಬ್ದಗಳು ಸಾರಗಟ್ಟಿ ಹೇಳಿವೆ” ಎಂದು ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
ಈ ಹೇಳಿಕೆ ಅನಿರೀಕ್ಷಿತ ರೀತಿಯಲ್ಲಿ ದೊಡ್ಡ ವಿವಾದಕ್ಕೆ ಎಡೆಮಾಡುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಪ್ರತಿಯಿಸಿ, ಪಿತ್ರೊಡ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. “ವ್ಯಕ್ತಿಯೊಬ್ಬರ ವೈಯಕ್ತಿಕ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಪಕ್ಷದ ನಾಯಕರು ಇಂತಹ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು” ಎಂದು ಕಾಂಗ್ರೆಸ್ ತನ್ನ ನಾಯಕರಿಗೆ ಎಚ್ಚರಿಕೆಯನ್ನೂ ನೀಡಿದೆ. “ಅದೇ ವೇಳೆ, ಸಿಖ್ ಹತ್ಯಾಕಾಂಡವಷ್ಟೇ ಅಲ್ಲ; ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೂ ನ್ಯಾಯ ಸಿಗಬೇಕು. ಅವರ ನೋವಿಗೆ ಸಾಂತ್ವನ ಬೇಕು ಎಂದು ಕಾಂಗ್ರೆಸ್ ಆಶಿಸುತ್ತದೆ” ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಮತ್ತು ಮೋದಿ ಹೆಗಲ ಮೇಲಿನ ಹತ್ಯಾಕಾಂಡದ ಆರೋಪದತ್ತ ಬೆಟ್ಟು ಮಾಡಿದೆ.
ಈ ನಡುವೆ, ತಮ್ಮ ಹೇಳಿಕೆ ಬಿಜೆಪಿಯಷ್ಟೇ ಅಲ್ಲದೆ, ಇತರ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೆ ಈಡಾಗುತ್ತಲೇ ಸ್ಯಾಮ್ ಪಿತ್ರೊಡ ಕೂಡ ಸ್ಪಷ್ಟನೆ ನೀಡಿದ್ದು, “ಸಿಖ್ಖರ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯ ಉಳಿದ ಅಂಶಗಳನ್ನು ಬಿಟ್ಟು ಕೇವಲ ಮೂರು ಪದಗಳನ್ನೇ ಇಟ್ಟುಕೊಂಡು ಅದಕ್ಕೆ ವಿಪರೀತದ ಅರ್ಥ ಕಲ್ಪಿಸಿ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿದೆ. ಬಿಜೆಪಿಗೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈಗ ಇಂತಹ ಸುಳ್ಳು ಮತ್ತು ಊಹಾಪೋಹಗಳೇ ಆಧಾರವಾಗಿದ್ದು, ಪ್ರಧಾನಿ ಮೋದಿಯವರು ಸುಳ್ಳುಗಳ ಮೂಲಕವೇ ದೇಶವನ್ನು ಒಡೆಯುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
“ನನ್ನ ಸಿಖ್ ಸಹೋದರ ಸಹೋದರಿಯರು 1984ರ ಆ ದುರಂತದ ಹೊತ್ತಲ್ಲಿ ಅನುಭವಿಸಿದ ಸಾವು-ನೋವುಗಳ ಬಗ್ಗೆ ನನಗೆ ಅಪಾರ ನೋವಿದೆ. ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಅದು ಇತಿಹಾಸ. ಈಗ ಆ ಇತಿಹಾಸವನ್ನೆ ಕೆದಕುವುದಕ್ಕೂ ಈಗಿನ ಚುನಾವಣೆಗೂ ಸಂಬಂಧವಿಲ್ಲ. ಈಗ ಮೋದಿ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ಮೇಲೆ ಈ ಚುನಾವಣೆ ನಡೆಯಬೇಕಿದೆ. ಆದರೆ, ಜನರ ಮುಂದೆ ಇಡಲು ತನ್ನ ಯಾವ ಸಕಾರಾತ್ಮಕ ಸಾಧನೆಗಳೂ ಇಲ್ಲದ ಬಿಜೆಪಿ, ಹೀಗೆ ಅನಾಪೇಕ್ಷಿತ ವಿಷಯಗಳನ್ನು ಕೆದಕುತ್ತಿರುವುದು ಹೇಯ” ಎಂದು ಪಿತ್ರೊಡ ಹೇಳಿದ್ದಾರೆ.
“ನೀವು ಮೊದಲು ನೆಹರೂ ವಿರುದ್ಧ ಮಾತನಾಡಿದಿರಿ. ಆದರೆ, ಜನರಿಗೆ ವಾಸ್ತವಾಂಶ ತಿಳಿಯಿತು, ಆಗ ನೀವು ಇಂದಿರಾಗಾಂಧಿ ವಿರುದ್ಧ ಮಾತನಾಡಿದಿರಿ, ಆಗಲೂ ಜನರಿಗೆ ವಾಸ್ತವಾಂಶ ಗೊತ್ತಾಯಿತು. ಹಾಗಾಗಿ ಈಗ ರಾಜೀವ್ ವಿರುದ್ಧ ಮಾತನಾಡುತ್ತಿದ್ದೀರಿ, ನಿಮ್ಮ ಹಸಿ ಸುಳ್ಳುಗಳನ್ನು ಅರ್ಥಮಾಡಿಕೊಳ್ಳಲು ದೇಶದ ಜನತೆಗೆ ಹೆಚ್ಚು ಸಮಯ ಬೇಕಿಲ್ಲ. ನಾಳೆ ಮತದಾನಕ್ಕೆ ಹೋಗುವ ನನ್ನ ಸಹೋದರ ಸಹೋದರಿಯರು, ಒಂದನ್ನು ಅರ್ಥಮಾಡಿಕೊಳ್ಳಲಿ. ರಾಜೀವ್ ಆಗಲೀ, ರಾಹುಲ್ ಆಗಲೀ ಎಂದೂ ಸೇಡಿನಲ್ಲಿ, ಹಿಂಸೆಯಲ್ಲಿ ನಂಬಿಕೆ ಇಟ್ಟವರಲ್ಲ” ಎನ್ನುವ ಮೂಲಕ ಪಿತ್ರೊಡ ತಮ್ಮ ಮಾತನ್ನು ತಿರುಚುವ ಮೂಲಕ ಬಿಜೆಪಿ, ತಮ್ಮ ಪಕ್ಷಕ್ಕೆ ಮಾಡಿದ ಹಾನಿಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ, ಈಗಾಗಲೇ ಪಿತ್ರೊಡ ಹೇಳಿಕೆಯನ್ನು, 2017ರ ಗುಜರಾತ್ ವಿಧಾನಸಭಾ ಚುನಾವಣೆ ಹೊತ್ತಿನ ಮಣಿ ಶಂಕರ್ ಅಯ್ಯರ್ ಅವರ ‘ನೀಚ್ ಆದ್ಮಿ’ ಹೇಳಿಕೆಗೆ ಹೋಲಿಸಿ ವಿಶ್ಲೇಷಣೆ ಮಾಡಲಾಗುತ್ತಿದ್ದು, ದೆಹಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಈ ಹೇಳಿಕೆ ದೊಡ್ಡ ಪೆಟ್ಟು ನೀಡಬಹುದು ಎನ್ನಲಾಗುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಅಯ್ಯರ್ ಹೇಳಿಕೆ ಕಾಂಗ್ರೆಸ್ಸಿನ ಗೆಲುವಿನ ಸಾಧ್ಯತೆಯನ್ನೇ ಬಗ್ಗುಬಡಿದಿತ್ತು. ಮೋದಿಯವರನ್ನು ‘ನೀಚ್ ಆದ್ಮಿ’ ಎಂದು ಕರೆದ ಅವರ ಆ ಒಂದು ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಮೋದಿಯವರು, ಆ ನಿಂದನೆಯ ಮೂಲಕ ಕಾಂಗ್ರೆಸ್ ಕೇವಲ ಮೋದಿಯವರನ್ನು ಜರಿದಿಲ್ಲ. ಬದಲಾಗಿ, ಇಡೀ ಗುಜರಾತಿಗಳನ್ನೇ ಜರಿದಿದ್ದಾರೆ ಮತ್ತು ಗುಜರಾತಿನ ಅಸ್ಮಿತೆಯನ್ನೇ ನಿಂದಿಸಿದ್ದಾರೆ ಎಂದು ಬಿಂಬಿಸುವಲ್ಲಿ ಸಫಲರಾಗಿದ್ದರು. ಹಾಗಾಗಿ, ಗೆಲುವಿನ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಮತದಾನಕ್ಕೆ ಕ್ಷಣಗಣನೆ ಆರಂಭವಾದಾಗ ಹೊರಬಿದ್ದ ಅಯ್ಯರ್ ಹೇಳಿಕೆಯಿಂದ ಭಾರೀ ಹಿನ್ನಡೆ ಅನುಭವಿಸಿತ್ತು.
ಇದೀಗ, ಪಿತ್ರೊಡ ಹೇಳಿಕೆಯ ವಿಷಯದಲ್ಲಿಯೂ ಬಿಜೆಪಿ ಅದೇ ತಂತ್ರವನ್ನು ಹೂಡಿದ್ದು, ಮೇ 12ರಂದು ಮತದಾನ ನಡೆಯಲಿರುವ, ಸಿಖ್ ಸಮುದಾಯ ಬಹುಸಂಖ್ಯಾತರಿರುವ ದೆಹಲಿ ಮತ್ತು ನಿರ್ಣಾಯಕ ಪ್ರಮಾಣದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಭಾವನಾತ್ಮಕ ಅಲೆ ಎಬ್ಬಿಸಲು ಯತ್ನಿಸುತ್ತಿದೆ. ಹಾಗೊಂದು ವೇಳೆ ಆ ಯತ್ನದಲ್ಲಿ ಸಫಲರಾದರೆ, ಕಾಂಗ್ರೆಸ್ಸಿಗೆ ದೆಹಲಿಯಲ್ಲಷ್ಟೇ ಅಲ್ಲದೆ, ಉ.ಪ್ರ ಮತ್ತು ಮ.ಪ್ರದಲ್ಲೂ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ.
ಒಟ್ಟಾರೆ, ಮಾಧ್ಯಮಗಳನ್ನು ಬಳಸಿಕೊಂಡು ಒಂದು ಮಾತನ್ನು ತಮಗೆ ಬೇಕಾದಂತೆ ತಿರುಚಿ, ಅರ್ಥೈಸಿ ಅದನ್ನು ಸಮೂಹ ಸನ್ನಿಯೋಪಾದಿಯಲ್ಲಿ ಹಬ್ಬಿಸುವ ತಂತ್ರಗಾರಿಕೆಯಲ್ಲಿ ಬಿಜೆಪಿ ಮತ್ತು ಅದರ ಟ್ರೋಲ್ ಆರ್ಮಿ ಎಷ್ಟು ಪಳಗಿದೆ ಮತ್ತು ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕಾದ ಕಾಂಗ್ರೆಸ್ ನಾಯಕರು ಹೇಗೆ ಅನಾಯಾಸವಾಗಿ ಎದುರಾಳಿಗಳ ಕೈಗೆ ಪ್ರಬಲ ಕೈದುವಾಗಿ ಪರಿಣಮಿಸುತ್ತಿದ್ದಾರೆ ಎಂಬುದಕ್ಕೂ ಈ ಹೇಳಿಕೆಯ ಪ್ರಕರಣದ ಸಾಕ್ಷಿಯಾಗಿದೆ. ಸತ್ಯ ಮತ್ತು ಸುಳ್ಳಿನ ನಡುವಿನ ತೆಳು ಗೆರೆಯನ್ನು ಯಾರು ಹೇಗೆ ಮತ್ತು ಯಾವಾಗ ಬೇಕಾದರೂ ಅಳಿಸಿಹಾಕಿಬಿಡಬಹುದು ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರ ಮೈಮರೆಯುವಿಕೆಗೆ ಆ ಪಕ್ಷ ಹೇಗೆ ಬೆಲೆ ತೆರುತ್ತಿದೆ ಎಂಬುದಕ್ಕೆ ಕೂಡ ಇದು ತಾಜಾ ನಿದರ್ಶನ.
—