ಮೊನ್ನೆ, ಮೇ 6ರ ಸೋಮವಾರದಂದು ನವದೆಹಲಿಯ ಭಾರತೀಯ ಪ್ರೆಸ್ ಕ್ಲಬ್ ಆವರಣ ಪೋಸ್ಟರುಗಳಿಂದ ಕಂಗೊಳಿಸುತ್ತಿತ್ತು. ಅವು “ಮಾವು ಪ್ರೀತಿಸುವ” ಹಾಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿ ಗೇಲಿ ಮಾಡುತ್ತಾ ತೂಗಾಡುತ್ತಿದ್ದವು. ಇವುಗಳ ಜೊತೆಗೆ ರಸ ಹಿಂಡಿ ಒಣಗಿಸಿಟ್ಟ ಹತ್ತಾರು ಮಾವಿನ ಓಟೆಗಳನ್ನೂ ಸಹ ಪ್ರದರ್ಶಿಸಲಾಗಿತ್ತು. ಸಂಘಟಕರ ಪ್ರಕಾರ ಅವು 2014ರಿಂದೀಚೆಗೆ ದೇಶದ ಪರಿಸ್ಥಿತಿಯನ್ನು ಪ್ರತಿಬಿಂಬಿಸಿದ್ದವು.
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೋದಿಯವರ ಜೊತೆ ನಡೆಸಿದ್ದ ‘ರಾಜಕೀಯವಲ್ಲದ’ ಸಂದರ್ಶನ ಅಪಹಾಸ್ಯಕ್ಕೆ ಗುರಿಯಾಗಿತ್ತು. ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಂಡಿದ್ದ ಸಂಘಟಕರು ಈ ಸಂದರ್ಶನವನ್ನು ನೆನಪಿಸಿಕೊಂಡರು. ಏಪ್ರಿಲ್ 4ರಂದು ದೇಶದಾದ್ಯಂತ ಜರುಗಿದ್ದ Women March for Change ಕಾರ್ಯಕ್ರಮದ ಭಾಗವಾಗಿದ್ದ ಅಂಜಲಿ ಭಾರದ್ವಾಜ್, ಶಬ್ನಂ ಹಶ್ಮಿ, ದಿಪ್ತಾ ಭೋಗ್, ಪೂರ್ಣಿಮಾ ಗುಪ್ತಾ ಮತ್ತು ಅಮೃತಾ ಜೋಹ್ರಿ ಜಂಟಿಯಾಗಿ ಈ ಸಭೆಯನ್ನು ಸಂಘಟಿಸಿದ್ದರು.
56 ಇಂಚಿನ ಎದೆಯವನಿಗೆ ಮಹಿಳೆಯರು ಎಸೆದ 56 ಪ್ರಶ್ನೆಗಳು!
ಈ ಸುದ್ದಿಗೋಷ್ಠಿ ಮತ್ತು ಚರ್ಚೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಕಾಣೆಯಾಗಿದ್ದವು ಹಾಗೂ ಅವು ಎತ್ತದಿರುವಂತಹ ಪ್ರಶ್ನೆಗಳನ್ನು ಮತ್ತು ದೇಶವನ್ನು ಕಾಡುತ್ತಿರುವ ತವಕ ತಲ್ಲಣಗಳನ್ನು ಇಲ್ಲಿ ಅಭಿವ್ಯಕ್ತಿಗೊಳಿಸಲಾಗಿತ್ತು. ಇಲ್ಲಿ ಕೇಳಲಾಗಿದ್ದ 56 ಪ್ರಶ್ನೆಗಳ ಪಟ್ಟಿ ಮಾನ್ಯ ಪ್ರಧಾನಮಂತ್ರಿಗಳ 56 ಇಂಚಿನ ಎದೆಯಳತೆಯನ್ನು ಸೂಚಿಸುತ್ತಿತ್ತು!
ಈ 56 ಪ್ರಶ್ನೆಗಳಲ್ಲಿ ಕೆಲವು ಹೀಗಿವೆ:
- 2015ರಿಂದೀಚೆಗೆ ರೈತರ ಆತ್ಮಹತ್ಯೆಯ ಬಗ್ಗೆ ಸರ್ಕಾರ ಅಂಕಿಅಂಶ ಪ್ರಕಟಿಸುವುದನ್ನು ನಿಲ್ಲಿಸಿರುವುದೇಕೆ? ಈ ವಿಚಾರದ ಕಡೆ ಸರ್ಕಾರ ಗಮನ ಹರಿಸಿಲ್ಲವೇಕೆ?
- ಬಿಜೆಪಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು? ರಾಜಕೀಯ ಪಕ್ಷಗಳಿಗೆ ಬೇನಾಮಿ ದೇಣಿಗೆ ನೀಡಲು ಅನುಮತಿಸುವ ಎಲೆಕ್ಟೊರಲ್ ಬಾಂಡ್ ಗಳನ್ನು ಬಿಜೆಪಿ ಪ್ರಾರಂಭಿಸಿದ್ದೇಕೆ?
- ಕಳೆದ 5 ವರ್ಷಗಳಲ್ಲಿ ಪ್ರಶ್ನೆಗಳನ್ನು ಮೊದಲೇ ಶೋಧನೆಗೊಳಪಡಿಸಿಲ್ಲದ ಒಂದೇ ಒಂದು ಪತ್ರಿಕಾಗೋಷ್ಠಿ/ ಸಂದರ್ಶನವನ್ನೂ ಪ್ರಧಾನಮಂತ್ರಿಗಳು ಉದ್ದೇಶಿಸಿಲ್ಲವೇಕೆ?
- ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಅಪರಾಧಗಳು ಹೆಚ್ಚುತ್ತಿದ್ದರೂ ಸರ್ಕಾರ ದಿವ್ಯ ಮೌನ ವಹಿಸಿರುವುದೇಕೆ?
- ಪತ್ರಕರ್ತೆ-ಹೋರಾಟಗಾರ್ತಿ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ.ಕಲಬುರ್ಗಿಯವರ ಹತ್ಯೆಗಳ ಬಗ್ಗೆ ಬಿಜೆಪಿ ಏಕೆ ಮೌನ ತಾಳಿದೆ?
- ಮಲ್ಯ, ನೀರವ್ ಮೋದಿ, ಮೇಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದು ಹೇಗೆ?
ಸಭೆಯಲ್ಲಿ ಎತ್ತಲಾದ 56 ಪ್ರಶ್ನೆಗಳಲ್ಲಿ ಶಿಕ್ಷಣಕ್ಕೆ ಕಡಿತಗೊಳ್ಳುತ್ತಿರುವ ವೆಚ್ಚದ ಬಗ್ಗೆಯೂ ಉಲ್ಲೇಖ ಮಾಡಲಾಗಿತ್ತು. 2014-15ರಲ್ಲಿ ಶಿಕ್ಷಣಕ್ಕೆ ಒದಗಿಸಲಾದ ಅನುದಾನ ಒಟ್ಟು ಬಜೆಟ್ಟಿನ ಶೇ.4.5 ರಷ್ಟಿದ್ದರೆ 2018-19 ಸಾಲಿನಲ್ಲಿ ಈ ಪ್ರಮಾಣವು ಶೇ.3.5ರಷ್ಟಿತ್ತು. ಬೇಟಿ ಬಚಾವೊ ಬೇಟಿ ಪಡಾವೊ, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ ಅಭಿಯಾನ್, ನೋಟ್ ಅಮಾನ್ಯೀಕರಣ, ಸ್ಕಿಲ್ ಇಂಡಿಯಾ, ಮನರೇಗಾ, ಮುಂತಾದ ಸರ್ಕಾರದ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಹಾಗೂ ನಿರುದ್ಯೋಗದ ಕುರಿತು ಸಂಘಟಕರು ಮೋದಿ ಸರ್ಕಾರಕ್ಕೆ ಸವಾಲೆಸೆದರು.
ಅಭಿವ್ಯಕ್ತಿ ಸ್ವಾತಂತ್ರ್ಯ, ಕೋಮು ಸೌಹಾರ್ದತೆ, ಸಾಂವಿಧಾನಿಕ ಮೌಲ್ಯಗಳು, 40ಕ್ಕಿಂತಲೂ ಹೆಚ್ಚು ವಿಚಾರವಂತರು ಮತ್ತು ಪತ್ರಕರ್ತರ ಹತ್ಯೆ, ದಲಿತರು – ಅಲ್ಪಸಂಖ್ಯಾತರು – ಆದಿವಾಸಿಗಳು – ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ವ್ಯವಸ್ಥಿತ ದಾಳಿಗಳ ಕುರಿತೂ ಸರ್ಕಾರವನ್ನು ಪ್ರಶ್ನಿಸಲಾಗಿತ್ತು.
ಸಭೆ ಪಟ್ಟಿ ಮಾಡಿದ್ದ 56 ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗಾದರೂ ಉತ್ತರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಂಜಲಿ ಭಾರದ್ವಾಜ್ ಸವಾಲೆಸಿದಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಬ್ನಂ ಹಶ್ಮಿ, ಮೋದಿ ಮತ್ತು ಅಕ್ಷಯ್ ಕುಮಾರ್ ಅವರ “ರಾಜಕೀಯವಲ್ಲದ” ಸಂದರ್ಶನವನ್ನು ತರಾಟೆಗೆ ತೆಗೆದುಕೊಂಡು, “ಭಾರತದಲ್ಲಿ ವಿವಿಧ ಬಗೆಗಳ ಮಾವುಗಳು ದೊರೆಯುತ್ತವೆಂದು ಮೋದಿಜಿಗೆ ತಿಳಿದಿಲ್ಲದಿರುವುದು ದುರದೃಷ್ಟಕರ. ಮಾವಿನ ತಳಿಗಳಲ್ಲೂ ವೈವಿಧ್ಯತೆ ಇದೆ” ಎಂದು ನುಡಿದರು. ನೈಜ ವಿಚಾರಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಮೋದಿಯವರು ಪ್ರಯತ್ನಿಸುತ್ತಿರುವಾಗಲೇ ಹಲವು ಮಹಿಳಾ ಸಂಘಟನೆಗಳು ಹಮ್ಮಿಕೊಂಡಿರುವ ಈ ಗೋಷ್ಠಿ ದೇಶದ ನೈಜ ಸಮಸ್ಯೆಗಳಿಗೆ ಒತ್ತು ನೀಡಲಿದೆ ಎಂದೂ ಅವರು ಹೇಳಿದರು.
ಬದುಕಿನ ಹೋರಾಟ ಮೆಲುಕು ಹಾಕಿದ ಮಹಿಳೆಯರು
ಸರ್ಕಾರದ ಸಬ್ಸಿಡಿಗಳನ್ನು ಅವಲಂಬಿಸಿರುವ ಕನಿಷ್ಟ ಏಳು ಮಹಿಳೆಯರು ತಮ್ಮ ನಿತ್ಯಜೀವನದ ಹೋರಾಟವನ್ನು ಹಂಚಿಕೊಂಡರು. ನೌಕರರ ಪಿಂಚಣಿ, ಸರ್ಕಾರ ಮಂಜೂರು ಮಾಡಿರುವ ರೇಷನ್ ಮತ್ತು ಆರೋಗ್ಯಸೇವೆ, ಇತ್ಯಾದಿಗಳ ಬಗೆಗಿನ ಇವರ ಅನುಭವಗಳು ಇದರಲ್ಲಿ ಸೇರಿದ್ದವು.
“ನಮಗೆ 5 ಕೆಜಿ ಅಕ್ಕಿ ದೊರೆಯುತ್ತದೆ. ಇದು 15 ದಿನಗಳಿಗೂ ಸಾಕಾಗದು” ಎಂದ ಐವತ್ತು ವರ್ಷದ ಮಹಿಳೆ ಶೀಲಾ, ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಪಡಿತರ ಸಿಗುತ್ತಿಲ್ಲ ಎಂದು ನೊಂದುಕೊಂಡರು. ಈಕೆಯ ಕುಟುಂಬ ನವದೆಹಲಿಯ ಜಗದಾಂಬ ಕ್ಯಾಂಪ್ ನಲ್ಲಿ ವಾಸವಾಗಿರುತ್ತದೆ. ದೆಹಲಿಯ ಸ್ವಾಮಿನಗರದಲ್ಲಿ ಜೀವನ ಸಾಗಿಸುತ್ತಿರುವ ಲಕ್ಷ್ಮಿ 14 ವರ್ಷಗಳ ಸೆಣೆಸಾಟದ ನಂತರವೂ ಪಿಂಚಣಿ ಪಡೆಯಲು ಯಶಸ್ವಿಯಾಗಿಲ್ಲ. ಕುಸುಮಪುರ ಪಹರಿಯ ಸುಧಾ ತನ್ನ ಪದವೀಧರ ಮಕ್ಕಳು ಉದ್ಯೋಗಕ್ಕಾಗಿ ಅಲೆದಾಡುತ್ತಿರುವುದನ್ನು ಕಂಡು ಬೇಸತ್ತಿದ್ದಾರೆ.
ದೇಶದಲ್ಲಿ ಕುಸಿದಿರುವ ವಿತರಣಾ ವ್ಯವಸ್ಥೆ
ಈ ವ್ಯವಸ್ಥೆ ಹೀಗಿರುವುದರಿಂದಲೇ ನಾವು ಹೋರಾಟಕ್ಕೆ ಧುಮುಕಬೇಕಿದೆ ಎಂದು ಹೇಳಿದ ಸಂಘಟಕಿ ಅಮೃತಾ ಜೋಹ್ರಿ, “ಸಾರ್ವಜನಿಕ ವ್ಯವಸ್ಥೆಯನ್ನು ಎಷ್ಟು ಕೆಟ್ಟ ಸ್ಥಿತಿಗೆ ತಳ್ಳುತ್ತಾರೆಂದರೆ ಜನ ಈ ವ್ಯವಸ್ಥೆಯತ್ತ ಮುಖಮಾಡುವುದನ್ನೇ ನಿಲ್ಲಿಸಿಬಿಡಬೇಕು. ಅವರ ಹುನ್ನಾರವೇ ಅದು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಅವ್ಯವಸ್ಥೆಯಿಂದಾಗಿ ಜನ ಬೇರೆ ದಾರಿಯಿಲ್ಲದೆ ಅಧಿಕ ಬೆಲೆ ತೆತ್ತು ಪಡಿತರವನ್ನು ಪರ್ಯಾಯ ಮೂಲಗಳಿಂದ ಕೊಳ್ಳುತ್ತಾರೆ ಎಂದು ವಿವರಿಸಿದ ಅಮೃತಾ, ದೇಶದಲ್ಲಿ ವಿತರಣಾ ವ್ಯವಸ್ಥೆ ಕುಸಿದಿರುವ ಬಗ್ಗೆ ಗಮನ ಸೆಳೆದರು.
ಅಡುಗೆಕೋಣೆಯೇ ಹೆಣ್ಣಿನ ಸರ್ವಸ್ವ ಅಲ್ಲ
ಉಜ್ವಲಾ ಯೋಜನೆಯ ಪ್ರಚಾರದಲ್ಲಿ ಮೋದಿ ಸರ್ಕಾರ ಮಹಿಳೆಯರನ್ನು ಚಿತ್ರಿಸಿರುವ ಕುರಿತು ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿ ಪೂರ್ಣಿಮಾ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಬೇಟಿ ಬಚಾವೊ ಬೇಟಿ ಪಡಾವೊ ಮತ್ತು ಉಜ್ವಲಾ ಯೋಜನೆಗಳನ್ನು ಹೋಲಿಸಿದ ಅವರು, ಮೊದಲ ಯೋಜನೆಯ ಜಾಹೀರಾತು ಹೆಣ್ಣು ಮಗುವಿನ ಶಿಕ್ಷಣವನ್ನು ಪ್ರೋತ್ಸಾಹಿಸಿದರೆ ಉಜ್ವಲಾ ಯೋಜನೆಗೆ ನೀಡಿರುವ ಜಾಹೀರಾತು ಮಹಿಳೆಯರನ್ನು ಅಡುಗೆಕೋಣೆಗೆ ತಳ್ಳುತ್ತದೆ ಎಂದು ಸಿಡಿಮಿಡಿಗೊಂಡರು. ಇಡೀ ಪ್ರಚಾರಾಂದೋಲನವು “ಮಹಿಳೆಯರಿಗೆ ಮರ್ಯಾದೆ” ನೀಡುವುದಾಗಿ ಹೇಳಿಕೊಂಡರೂ ಮಹಿಳೆಯರ ಬಗೆಗಿನ ಸರ್ಕಾರದ ಚಿಂತನೆಯನ್ನು ಅದು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ತನ್ನ ಕುಟುಂಬಕ್ಕೆ ಅಡುಗೆ ಬೇಯಿಸುವುದು ಅವಳಿಗೆ “ಘನತೆ”ಯ ವಿಚಾರ ಮತ್ತು “ತಕ್ಕ ಮರ್ಯಾದೆ” ಗಳಿಸಲು ಇದೊಂದೇ ಅವಕಾಶ ಎಂಬುದು ಕೇಂದ್ರ ಸರ್ಕಾರದ ಆಲೋಚನೆಯಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಮಹಿಳಾಪರ ಎಂಬುದು ಬರೀ ತೋರಿಕೆಯಷ್ಟೇ….
“ಕೇಂದ್ರ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ಈ ಚುನಾವಣೆಯಲ್ಲಿ ಕೆಲವು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಾನು ಮಹಿಳಾಪರ ಎಂಬಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅವರ ಪೈಕಿ 2008ರ ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಯಾ ಸಿಂಗ್ ಠಾಕೂರ್ ಸಹ ಒಬ್ಬಳು. ಆದರೆ ಅವರು ಹಾಲಿ ಇರುವ ಸಂಸದರನ್ನು ಕಣಕ್ಕಿಳಿಸುವ ಧೈರ್ಯ ತೋರಲಿಲ್ಲ ಏಕೆಂದರೆ ಅದು ಆ ಸಂಸದರ ವೈಫಲ್ಯಗಳು ಮತ್ತು ಮಾಡದಿರುವ ಕೆಲಸಗಳನ್ನು ಎತ್ತಿ ತೋರಿಸಲಿದೆ” ಎಂದು ಪೂರ್ಣಿಮಾ ಹೇಳುತ್ತಾರೆ. ಮಹಿಳೆಯನ್ನು ಅಭ್ಯರ್ಥಿಯನ್ನಾಗಿಸಿ ಅವಳನ್ನು ಬಲಿಪಶು ಮಾಡಿ, ಜನ ಅವುಗಳನ್ನು ನಿಜ ಎಂದು ನಂಬುವ ತನಕ ಸುಳ್ಳುಗಳನ್ನು ಪದೇಪದೇ ಹೇಳುವುದರಿಂದ ಅವರು ಏನೋ ಸಾಧಿಸಿಬಿಟ್ಟಂತೆ ಎಂದು ಹೇಳುವ ಅವರು ಜನರಿಗೆ ಸರಿಯಾದ ತಿಳಿವಳಿಕೆ ನೀಡಿ ಎಚ್ಚರಿಸುವುದರಿಂದ ಮಾತ್ರ ದೇಶವನ್ನು ಉಳಿಸಬಹುದೆಂಬ ಅನಿಸಿಕೆ ವ್ಯಕ್ತಪಡಿಸುತ್ತಾರೆ.
ಸ್ವತಂತ್ರ ಚಿಂತನೆಯ ಪತ್ರಕರ್ತರೂ ಈ ವ್ಯವಸ್ಥೆಯಲ್ಲಿ ದಮನಿತರೇ….
ಮಾಧ್ಯಮಗಳ ಪಾತ್ರದ ಬಗ್ಗೆ ಮಾತನಾಡಿದ ಶಬನಮ್ ಹಶ್ಮಿ, “ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಎಲ್ಲರೂ ಬಿಕರಿಯಾಗಿಲ್ಲ, ಅದರಲ್ಲಿರುವ ಬಹಳ ಮಂದಿ ಪತ್ರಕರ್ತರಿಗೆ ನನ್ನ ಸಹಾನುಭೂತಿ ಇದೆ. ಪ್ರತಿಯೊಂದು ಮಾಧ್ಯಮ ವಾಹಿನಿಯಲ್ಲೂ, ವೃತ್ತಪತ್ರಿಕೆಯಲ್ಲೂ ಯಾರಾದರೂ ಬಂದು ಸುದ್ದಿ ಮಾಡುವವರು ಇದ್ದೇ ಇದ್ದಾರೆ. ಅವರು ಯಾರ ಹಿಂದೆಯೂ ಹೋಗಿಲ್ಲ, ಅವರೂ ದಮನಕ್ಕೊಳಗಾಗಿದ್ದಾರೆ ಇಲ್ಲವೇ ಅವರು ಪ್ರಶ್ನೆ ಮಾಡಿದರೆ ಅವರನ್ನೂ ಕಿತ್ತೆಸೆಯಲಾಗುತ್ತದೆ. ರಾಷ್ಟ್ರೀಯ ಸುದ್ದಿಸಂಸ್ಥೆಗಳಿಗೆ ಬೆನ್ನುಹುರಿ ಇರಬೇಕೆಂದು ಯಾರಾದರೂ ಅಪೇಕ್ಷಿಸಿದ್ದೆವು. ದುರಾದೃಷ್ಟವಶಾತ್ ಅವುಗಳಿಗೆ ಬೆನ್ನುಹುರಿ ಇಲ್ಲ. ಸ್ವತಂತ್ರ ಆಲೋಚನೆ ಹೊಂದಿರುವ ಪತ್ರಕರ್ತರ ಧ್ವನಿ ಚಾನೆಲ್ ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ಕೇಳಿಸುವುದೇ ಇಲ್ಲ. ಇಲ್ಲವೇ ಅವರನ್ನು ಹೊರ ದಬ್ಬಲಾಗುತ್ತದೆ. ಹೀಗಾಗಿ ನಮ್ಮ ಅನೇಕ ಒಳ್ಳೆಯ ಸ್ನೇಹಿತರೂ ಸಹ ಇದಕ್ಕೆ ಬಲಿಯಾಗಿದ್ದಾರೆ” ಎಂದು ಹೇಳಿದರು.
“ರಾಜಕೀಯವಲ್ಲದ” ಮೋದಿ ತಮ್ಮ ನಿವೃತ್ತಿ ಯೋಜನೆಗಳ ಬಗ್ಗೆ ಚಿಂತಿಸುವಂತೆ ಹಾಸ್ಯಗಾರ್ತಿ ಮತ್ತು ರಂಗಭೂಮಿ ಕಲಾವಿದೆ ಮಾಯಾ ಕೃಷ್ಣ ರಾವ್ ರೂಪಕವೊಂದನ್ನು ಪ್ರದರ್ಶಿಸಿದರು. “ಚಾಯ್ ಜೊತೆ ಚರ್ಚೆ” ಕೊನೆಗೊಂಡಿತು!
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ