ನವದೆಹಲಿ: ಅಂಚೆ ಮೂಲಕ ಸೈನಿಕರು ಮತದಾನ ನಡೆಸುವ ಸಂದರ್ಭದಲ್ಲಿ ರಿಗ್ಗಿಂಗ್ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೇಹ್ ಜಿಲ್ಲಾಧಿಕಾರಿ ಭಾರತೀಯ ಸೇನೆಗೆ ಪತ್ರ ಬರೆದ ನಂತರದಲ್ಲಿ ಭಾರತೀಯ ಸೈನ್ಯವು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಪ್ರಕರಣದ ತನಿಖೆಗೆ ವಹಿಸಿದೆ.
ಲೇಹ್ ಡೀಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅವನಿ ಲಾವಾಸಾ ಅವರು ತಮಗೆ ಬಂದಿರುವ ದೂರಿನಲ್ಲಿ ಕೆಲವು ಕಮಾಂಡಿಂಗ್ ಆಫೀಸರುಗಳು ಚುನಾವಣಾ ಭ್ರಷ್ಟಾಚಾರದಲ್ಲಿ ತೊಡಗಿದ್ದು ತಮ್ಮ ಕೈಕೆಳಗಿನ ಜವಾನರಿಗೆ ನೇರವಾಗಿ ಮತಚಲಾವಣೆಗೆ ಅವಕಾಶ ಕಲ್ಪಿಸದೇ ಅವರ ಮತದ ಆದ್ಯತೆಯ ಕುರಿತು ವಿಚಾರಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಎಂದು ಪತ್ರ ಬರೆದಿದ್ದರು.
ಈ ಕುರಿತು ತನಿಖೆಗೆ ಸೇನಾ ಅಧಿಕಾರಿಗಳನ್ನು ನೇಮಕಗೊಳಿಸಿದ ನಂತರ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಅಂತಹ ಯಾವುದೇ ಸಂಗತಿ ಕಂಡು ಬಂದಿಲ್ಲ ಮತ್ತು ಇದು ಸೇನೆಯ ಹೆಸರಿಗೆ ಮಸಿ ಬಳಿಯುವ ಕೆಲಸ ಎಂದು ಸೇನಾ ಹೇಳಿಕೆ ತಿಳಿಸಿದೆ.
ಜಿಲ್ಲಾಧಿಕಾರಿ ಪತ್ರ,
ಜಿಲ್ಲಾಧಿಕಾರಿ ಅವನಿ ಲಾವಾಸಾ ಅವರು ಜನರಲ್ ಆಫೀಸರ್ ಕಮಾಂಡಿಂಗ್ 14 ಕಾಪ್ಸ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ತಮಗೆ ಬಂದಿರುವ ದೂರಿನ ವಿಷಯವು ಮತದಾನದ ಗೌಪ್ಯತೆಯ ಉಲ್ಲಂಘನೆಗೆ ಸಂಬಂಧಿಸಿದೆಯಲ್ಲದೆ ಕಾನೂನು ಕ್ರಮವನ್ನೂ ಜರುಗಿಸಬಹುದಾಗಿದೆ ಎಂದಿದ್ದಾರೆ.
ಪತ್ರವು ಸೋರಿಕೆಯಾದ ನಂತರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೀಡಿರುವ ಹೇಳಿಕೆಯಲ್ಲಿ ದೂರುದಾರರು ಯಾವುದೇ ನಿರ್ದಿಷ್ಟ ಉದಾಹರಣೆಯನ್ನು ತಿಳಿಸಿಲ್ಲ, ಇಂತಹ ವಿಷಯದಲ್ಲಿ ಸೇನೆಯು ಪ್ರತಿಯೊಬ್ಬರನ್ನೂ ಎಚ್ಚರದಿಂದಿರಲು ಹೇಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ಲಾವಾಸಾ ಅವರು ಚುನಾವಣಾ ಆಯುಕ್ತರಾಗಿ ಸ್ವತಃ ಐಎಎಸ್ ಅಧಿಕಾರಿಯಾಗಿರುವ ಅಶೋಕ್ ಲಾವಾಸಾ ಅವರ ಮಗಳು. ಇತ್ತೀಚೆಗೆ ಬಿಜೆಪಿ ಮುಖಂಡ ವಿಕ್ರಂ ಸಿಂಗ್ ರಾಂಧವಾ ಎಂಬಾತ ಪತ್ರಕರ್ತರಿಗೆ ನಗದು ಹಣ ಹಂಚಿದ್ದ ಆರೋಪದಲ್ಲಿ ಆತನ ಮೇಲೆ ಎಫ್ ಐ ಆರ್ ದಾಖಲಿಸಿ ಲಾವಾಸಾ ಸುದ್ದಿಯಲ್ಲಿದ್ದರು.

ಸೇನೆಯ ಹೇಳಿಕೆ
ಪ್ರಕರಣದ ಕುರಿತು ಬಂದಿರುವ ದೂರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಸೇನಾ ಹೇಳಿಕೆ ನೀಡಿದೆ. “ಕೆಲವು ರಾಜಕೀಯ ಅಭ್ಯರ್ಥಿಗಳು ಸೇನಾ ಸಿಬ್ಬಂದಿಗಳು ಅಂಚೆ ಮತಪತ್ರದ ಮೂಲಕ ಮತದಾನ ಮಾಡುವ ವಿಷಯದಲ್ಲಿ ದೂರು ಸಲ್ಲಿಸಿದ್ದು, ಅದರಲ್ಲಿ ಅಂತಹ ಯಾವುದೇ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿದಲ್ಲ” ಎಂದು ಶ್ರೀನಗರದಲ್ಲಿರುವ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯನ್ನು ಈಗ ನಡೆಸಿದ್ದು ದೂರಿನಲ್ಲಿ ತಿಳಿಸಿರುವ ಸಂಗತಿಗಳು ಕಂಡುಬಂದಿಲ್ಲ. ಸೇನೆಯ ಹೆಸರಿಗೆ ಮಸಿ ಬಳಿಯಲು ಯಾರೋ ಹೀಗೆ ಮಾಡಿರಬಹುದು. ದೂರಿನಲ್ಲಿ ತಿಳಿಸಿರುವ ಸಂಗತಿಗಳ ಕುರಿತು ಅತ್ಯಂತ ನಿಷ್ಪಕ್ಷಪಾತವಾಗಿ ತೀರ್ಮಾನಿಸಲು ಆಳವಾದ ತನಿಖೆಯನ್ನು ನಡೆಸಲಾಗುತ್ತಿದೆ. ಸೇನೆಯು ಯಾವತ್ತಿಗೂ ರಾಜಕೀಯ ತಟಸ್ಥತೆ ಕಾಪಾಡುತ್ತದೆ. ಈ ಮೂಲ ತತ್ವವನ್ನು ನಾವು ಕಾಯಾ ವಾಚಾ ಮನಸಾ ಪಾಲಿಸುತ್ತೇವೆ” ಎಂದು ಸೈನ್ಯ ತಿಳಿಸಿದೆ.
ಮೂಲ: ದ ಪ್ರಿಂಟ್
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ